Skip to content
Opens in a new window
Listen to this chapter • 5:45

[1] ಆಗ ಯೋಸೇಫನು ತನ್ನ ತಂದೆಯ ಶವದ ಮೇಲೆ ಬಿದ್ದು, ಅವನಿಗಾಗಿ ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು.

[2] ಯೋಸೇಫನು ತನ್ನ ತಂದೆ ಇಸ್ರಾಯೇಲನಿಗೆ ಸುಗಂಧದ್ರವ್ಯವನ್ನು ಹಾಕಬೇಕೆಂದು ತನ್ನ ದಾಸರಾದ ವೈದ್ಯರಿಗೆ ಅಪ್ಪಣೆಕೊಟ್ಟನು.

[3] ವೈದ್ಯರು ಇಸ್ರಾಯೇಲನಿಗೆ ನಲವತ್ತು ದಿನಗಳವರೆಗೆ ಸುಗಂಧದ್ರವ್ಯಗಳ ಲೇಪನ ಮಾಡಿದರು. ಅದಕ್ಕಾಗಿ ಅಷ್ಟು ಸಮಯ ಬೇಕಾಗಿತ್ತು. ಇದಲ್ಲದೆ ಈಜಿಪ್ಟಿನವರು ಅವನಿಗಾಗಿ ಎಪ್ಪತ್ತು ದಿವಸ ದುಃಖಪಟ್ಟರು.

[4] ಅವನಿಗಾಗಿ ದುಃಖಿಸುವ ದಿನಗಳು ಮುಗಿದ ಮೇಲೆ ಯೋಸೇಫನು ಫರೋಹನ ಆಸ್ಥಾನದವರಿಗೆ, “ನಾನು ನಿಮ್ಮ ಕಣ್ಣುಗಳ ಮುಂದೆ ದಯೆ ಹೊಂದಿದ್ದೇಯಾದರೆ, ಫರೋಹನ ಕಿವಿಗಳಲ್ಲಿ ಈ ಮಾತು ಹೇಳಬೇಕು.

[5] ‘ನನಗೆ ನನ್ನ ತಂದೆ, “ನಾನು ಸಾಯುತ್ತೇನೆ, ನಾನು ಕಾನಾನ್ ದೇಶದಲ್ಲಿ ನನಗೋಸ್ಕರ ಅಗೆದ ನನ್ನ ಸಮಾಧಿಯಲ್ಲಿಯೇ ನನ್ನನ್ನು ಸಮಾಧಿಮಾಡಬೇಕು,” ಎಂದು ನನ್ನಿಂದ ಪ್ರಮಾಣ ಮಾಡಿಸಿದ್ದಾನೆ.’ ಹೀಗಿರುವುದರಿಂದ ನಾನು ಹೋಗಿ ನನ್ನ ತಂದೆಯನ್ನು ಹೂಳಿ, ತಿರುಗಿ ಬರುವ ಹಾಗೆ ಅಪ್ಪಣೆಯಾಗಬೇಕು,” ಎಂದನು.

[6] ಆಗ ಫರೋಹನು, “ನಿನ್ನ ತಂದೆಯು ನಿನ್ನಿಂದ ಪ್ರಮಾಣ ಮಾಡಿಸಿದಂತೆ, ನೀನು ಹೋಗಿ ನಿನ್ನ ತಂದೆಯನ್ನು ಹೂಳಿಡು,” ಎಂದನು.

[7] ಹೀಗೆ ಯೋಸೇಫನು ತನ್ನ ತಂದೆಯನ್ನು ಸಮಾಧಿಮಾಡುವದಕ್ಕೆ ಹೊರಟುಹೋದನು. ಅವನ ಸಂಗಡ ಫರೋಹನ ದಾಸರೆಲ್ಲರೂ ಅರಮನೆಯ ಹಿರಿಯರೆಲ್ಲರೂ ಈಜಿಪ್ಟ್ ದೇಶದ ಮುಖ್ಯಸ್ಥರೆಲ್ಲರೂ,

[8] ಯೋಸೇಫನ ಮನೆಯವರೆಲ್ಲರೂ ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋದರು. ಅವರ ಮಕ್ಕಳನ್ನೂ, ಕುರಿದನಗಳನ್ನೂ ಮಾತ್ರ ಗೋಷೆನ್ ಪ್ರಾಂತದಲ್ಲಿ ಬಿಟ್ಟರು.

[9] ರಥಗಳೂ, ರಾಹುತರೂ ಅವನ ಸಂಗಡ ಹೊರಟು ಹೋದರು. ಸಮೂಹವು ಬಹಳ ದೊಡ್ಡದಾಗಿತ್ತು.

[10] ಅವರು ಯೊರ್ದನಿನ ಆಚೆ ಇರುವ ಆಟಾದ್ ಕಣಕ್ಕೆ ಬಂದಾಗ, ಅಲ್ಲಿ ಅಧಿಕವಾದ ಮತ್ತು ಮಹಾ ಘೋರವಾದ ಗೋಳಾಟದಿಂದ ದುಃಖಪಟ್ಟರು.

[11] ದೇಶದ ನಿವಾಸಿಗಳಾದ ಕಾನಾನ್ಯರು ಆಟಾದ್ ಕಣದಲ್ಲಿ ಆಗುತ್ತಿದ್ದ ದುಃಖವನ್ನು ಕಂಡಾಗ, “ಇದು ಈಜಿಪ್ಟಿನವರಿಗೆ ಘೋರವಾದ ದುಃಖ,” ಎಂದು ಹೇಳಿದರು. ಆದ್ದರಿಂದ ಅದಕ್ಕೆ ಆಬೇಲ್ ಮಿಚ್ರಯೀಮ್ ಎಂದು ಹೆಸರಾಯಿತು. ಅದು ಯೊರ್ದನಿನ ಆಚೆ ಇದೆ.

[12] ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ಪ್ರಕಾರ ಅವನಿಗೆ ಮಾಡಿದರು.

[13] ಅವನ ಪುತ್ರರು ಅವನನ್ನು ಕಾನಾನ್ ದೇಶಕ್ಕೆ ತೆಗೆದುಕೊಂಡುಹೋಗಿ, ಅಬ್ರಹಾಮನು ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನಿನಿಂದ ಕೊಂಡುಕೊಂಡಿದ್ದ ಮಮ್ರೆಗೆ ಎದುರಾಗಿರುವಂಥ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿದರು.

[14] ಯೋಸೇಫನು ತನ್ನ ತಂದೆಯನ್ನು ಹೂಳಿದ ಮೇಲೆ, ತನ್ನ ಸಹೋದರರ ಸಂಗಡವೂ, ತನ್ನ ತಂದೆಯನ್ನು ಹೂಳುವುದಕ್ಕಾಗಿ ಅವನ ಸಂಗಡ ಹೋದವರೆಲ್ಲರೂ ಈಜಿಪ್ಟಿಗೆ ತಿರುಗಿ ಬಂದರು.

[15] ತಮ್ಮ ತಂದೆ ಸತ್ತು ಹೋದ ಮೇಲೆ ಯೋಸೇಫನ ಸಹೋದರರು, “ಒಂದು ವೇಳೆ ಯೋಸೇಫನು ನಮ್ಮನ್ನು ಹಗೆಮಾಡಿ, ನಾವು ಅವನಿಗೆ ಮಾಡಿದ್ದ ಎಲ್ಲಾ ಕೇಡಿಗಾಗಿ ನಿಶ್ಚಯವಾಗಿ ಪ್ರತೀಕಾರಮಾಡಬಹುದು,” ಎಂದುಕೊಂಡು,

[16] ಅವರು ಒಬ್ಬ ಸೇವಕನನ್ನು ಕಳುಹಿಸಿ ಯೋಸೇಫನಿಗೆ, “ನಿನ್ನ ತಂದೆಯು ಮರಣ ಹೊಂದುವುದಕ್ಕಿಂತ ಮುಂಚೆ,

[17] ‘ನಿನ್ನ ಸಹೋದರರ ಅಪರಾಧವನ್ನೂ ಅವರ ಪಾಪವನ್ನೂ ಮನ್ನಿಸು,’ ಎಂಬುದಾಗಿ ಯೋಸೇಫನಿಗೆ ಹೇಳಿರಿ, ಎಂದು ತಿಳಿಸಿದ್ದಾನೆ. ಹೀಗಿರುವುದರಿಂದ ನಿನ್ನ ತಂದೆಯ ದೇವರ ದಾಸರಾದ ನಾವು ಮಾಡಿದ ಅಪರಾಧವನ್ನು ದಯಮಾಡಿ ಕ್ಷಮಿಸು,” ಎಂದು ತಿಳಿಸಿದರು. ಈ ಸಂದೇಶ ಅವನಿಗೆ ಬಂದಾಗ, ಅವನು ಅತ್ತನು.

[18] ಆಮೇಲೆ ಅವನ ಸಹೋದರರು ಬಂದು ಅವನ ಮುಂದೆ ಅಡ್ಡಬಿದ್ದು, “ನಿನ್ನ ದಾಸರಾಗಿದ್ದೇವೆ,” ಎಂದರು.

[19] ಯೋಸೇಫನು ಅವರಿಗೆ, “ಭಯಪಡಬೇಡಿರಿ, ನಾನು ದೇವರ ಸ್ಥಾನದಲ್ಲಿ ಇದ್ದೇನೋ?

[20] ನೀವು ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸಿದ್ದೀರಿ, ಆದರೆ ದೇವರು ಒಳ್ಳೆಯದಕ್ಕಾಗಿಯೇ ಸಂಕಲ್ಪಿಸಿದರು. ಈಗ ಬಹುಜನರ ಪ್ರಾಣ ಉಳಿಯುವಂತೆ ನಡೆಯುತ್ತಿದೆ.

[21] ಹೀಗಿರುವುದರಿಂದ ನೀವು ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮ್ಮ ಮಕ್ಕಳನ್ನೂ ಸಂರಕ್ಷಿಸುತ್ತೇನೆ,” ಎಂದು ಹೇಳಿ, ಅವರನ್ನು ಸಂತೈಸಿ, ದಯೆಯಿಂದ ಮಾತನಾಡಿದನು.

[22] ಹೀಗೆ ಯೋಸೇಫನೂ, ಅವನ ತಂದೆಯ ಮನೆಯವರೂ ಸಹಿತವಾಗಿ ಈಜಿಪ್ಟಿನಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು.

[23] ಯೋಸೇಫನು ಎಫ್ರಾಯೀಮನ ಮರಿಮೊಮ್ಮಕ್ಕಳನ್ನೂ ಕಂಡನು. ಮನಸ್ಸೆಯ ಮಗ ಮಾಕೀರನ ಮಕ್ಕಳೂ ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು.

[24] ಇದಲ್ಲದೆ ಯೋಸೇಫನು ತನ್ನ ಸಹೋದರರಿಗೆ, “ನಾನು ಸತ್ತಮೇಲೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಿ, ಈ ದೇಶದೊಳಗಿಂದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶಕ್ಕೆ ಸೇರುವಂತೆ ಮಾಡುವರು,” ಎಂದನು.

[25] ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಶ್ಚಯವಾಗಿ ನಿಮಗೆ ಸಹಾಯ ಮಾಡುವರು. ಆಗ ನನ್ನ ಎಲುಬುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಬೇಕು,” ಎಂದು ಪ್ರಮಾಣ ಮಾಡಿಸಿದನು.

[26] ಯೋಸೇಫನು ನೂರಹತ್ತು ವರ್ಷದವನಾಗಿ ಈಜಿಪ್ಟ್ ದೇಶದಲ್ಲಿ ಸತ್ತನು. ಅವರು ಅವನಿಗೆ ಸುಗಂಧದ್ರವ್ಯವನ್ನು ಹಾಕಿ, ಈಜಿಪ್ಟಿನಲ್ಲಿ ಪೆಟ್ಟಿಗೆಯೊಳಗೆ ಇಟ್ಟರು.

ಆದಿಕಾಂಡ — Chapters