[1] ಯೆಹೋವ ದೇವರು ಸೃಷ್ಟಿಸಿದ ಅಡವಿಯ ಎಲ್ಲಾ ಕಾಡುಮೃಗಗಳಿಗಿಂತ ಸರ್ಪವು ಬಹು ಯುಕ್ತಿಯುಳ್ಳದ್ದಾಗಿತ್ತು. ಅದು ಸ್ತ್ರೀಗೆ, “ನೀವು ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ?” ಎಂದು ಕೇಳಿತು.
[2] ಆಗ ಸ್ತ್ರೀಯು ಸರ್ಪಕ್ಕೆ, “ತೋಟದ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು.
[3] ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಹಣ್ಣಿನ ವಿಷಯವಾಗಿ, ‘ನೀವು ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸತ್ತು ಹೋಗುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದಳು.
[4] ಸರ್ಪವು ಸ್ತ್ರೀಗೆ, “ನೀವು ನಿಶ್ಚಯವಾಗಿ ಸಾಯುವುದಿಲ್ಲ.
[5] ನೀವು ಇದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯುವುವು, ನೀವು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಅರಿತವರಾಗಿ ದೇವರ ಹಾಗೆ ಇರುವಿರಿ. ಇದು ದೇವರಿಗೆ ತಿಳಿದಿದೆ,” ಎಂದು ಹೇಳಿತು.
[6] ಆಗ ಸ್ತ್ರೀಯು, ಆ ಮರದ ಹಣ್ಣು ಆಹಾರಕ್ಕೆ ಒಳ್ಳೆಯದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಇದೆ ಎಂದು ತಿಳಿದು, ಆ ಹಣ್ಣನ್ನು ತೆಗೆದುಕೊಂಡು ತಿಂದಳು. ತನ್ನ ಸಂಗಡ ಇದ್ದ ಗಂಡನಿಗೂ ಕೊಟ್ಟಳು, ಅವನೂ ತಿಂದನು.
[7] ಆಗ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು, ಅವರು ಅಂಜೂರದ ಎಲೆಗಳನ್ನು ತೆಗೆದುಕೊಂಡು ತಮಗೆ ತಾವೇ ಉಡುಪುಗಳನ್ನು ಮಾಡಿಕೊಂಡರು.
[8] ತರುವಾಯ ಯೆಹೋವ ದೇವರು, ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ, ಆ ಸ್ತ್ರೀ ಪುರುಷರು ಅವರ ಸಪ್ಪಳವನ್ನು ಕೇಳಿ, ಅವರಿಗೆ ಕಾಣಿಸಿಕೊಳ್ಳಬಾರದೆಂದು ತೋಟದ ಮರಗಳ ಮಧ್ಯದಲ್ಲಿ ಅಡಗಿಕೊಂಡರು.
[9] ಆಗ ಯೆಹೋವ ದೇವರು ಮನುಷ್ಯನನ್ನು ಕರೆದು ಅವನಿಗೆ, “ನೀನು ಎಲ್ಲಿದ್ದೀ?” ಎಂದರು.
[10] ಅದಕ್ಕೆ ಅವನು, “ನಿನ್ನ ಶಬ್ದವನ್ನು ನಾನು ತೋಟದಲ್ಲಿ ಕೇಳಿದೆ. ನಾನು ಬೆತ್ತಲೆಯಾಗಿರುವುದರಿಂದ ಭಯಪಟ್ಟು ಅಡಗಿಕೊಂಡೆನು,” ಎಂದನು.
[11] ಅದಕ್ಕೆ ದೇವರು, “ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದೀಯೋ?” ಎಂದು ಕೇಳಿದರು.
[12] ಅದಕ್ಕೆ ಮನುಷ್ಯನು, “ನೀನು ನನ್ನ ಸಂಗಡ ಇರಿಸಿದ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು. ನಾನು ತಿಂದೆನು,” ಎಂದು ಹೇಳಿದನು.
[13] ಯೆಹೋವ ದೇವರು ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಅದಕ್ಕೆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು. ನಾನು ತಿಂದೆನು,” ಎಂದು ಉತ್ತರಕೊಟ್ಟಳು.
[14] ಆಗ ಯೆಹೋವ ದೇವರು ಸರ್ಪಕ್ಕೆ ಹೀಗೆ ಹೇಳಿದರು, “ನೀನು ಇದನ್ನು ಮಾಡಿದ ಕಾರಣ, “ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಕಾಡುಮೃಗಗಳಲ್ಲಿಯೂ ನೀನು ಬಹು ಶಾಪಗ್ರಸ್ತನಾದೆ. ಇಂದಿನಿಂದ ನಿನ್ನ ಜೀವನ ಪೂರ್ತಿ ಹೊಟ್ಟೆಯಿಂದ ಹರಿದಾಡಿ, ಮಣ್ಣನ್ನು ತಿನ್ನುವೆ.
[15] ನಾನು ನಿನಗೂ ಸ್ತ್ರೀಗೂ ನಿಮ್ಮ ಸಂತಾನಕ್ಕೂ ಆಕೆಯ ಸಂತಾನಕ್ಕೂ ವೈರತ್ವವನ್ನು ಇಡುವೆನು. ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು ಕಚ್ಚುವಿ.”
[16] ಬಳಿಕ ದೇವರು ಸ್ತ್ರೀಗೆ ಹೀಗೆ ಹೇಳಿದರು, “ನಾನು ನಿನ್ನ ಗರ್ಭ ವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು. ನೀನು ನೋವಿನಿಂದ ಮಕ್ಕಳನ್ನು ಹೆರುವಿ. ನಿನ್ನ ಗಂಡನ ಮೇಲೆ ನಿನ್ನ ಬಯಕೆ ಇರುವುದು. ಅವನು ನಿನ್ನನ್ನು ಆಳುವನು.”
[17] ಅನಂತರ ದೇವರು ಆದಾಮನಿಗೆ ಹೀಗೆ ಹೇಳಿದರು, “ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ನಿನ್ನ ಹೆಂಡತಿಯ ಮಾತು ಕೇಳಿ ತಿಂದ ಕಾರಣ, “ನಿನ್ನ ನಿಮಿತ್ತ ಭೂಮಿಗೆ ಶಾಪ ಬಂತು. ನಿನ್ನ ಜೀವಮಾನವೆಲ್ಲಾ ಕಷ್ಟಪಟ್ಟು ದುಡಿದು, ಅದರ ಹುಟ್ಟುವಳಿಯನ್ನು ಉಣ್ಣುವೆ.
[18] ಭೂಮಿಯಲ್ಲಿ ಮುಳ್ಳುಗಿಡಗಳೂ ಕಳ್ಳಿಗಳೂ ಬೆಳೆಯುವುವು. ನೀನು ಹೊಲದ ಬೆಳೆಯನ್ನು ಉಣ್ಣುವೆ.
[19] ನೀನು ಪುನಃ ಮಣ್ಣಿಗೆ ಸೇರುವ ತನಕ, ಬೆವರಿಡುತ್ತಾ ಆಹಾರವನ್ನು ಉಣ್ಣುವೆ. ನೀನು ಮಣ್ಣಿನಿಂದ ತೆಗೆದವನಾಗಿರುವುದರಿಂದ ನೀನು ಮಣ್ಣೇ. ನೀನು ಪುನಃ ಮಣ್ಣಿಗೆ ಸೇರತಕ್ಕವನು.”
[20] ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು. ಏಕೆಂದರೆ ಆಕೆಯೇ ಬದುಕಿದವರಿಗೆಲ್ಲಾ ತಾಯಿಯಾಗಿದ್ದಾಳೆ.
[21] ಯೆಹೋವ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದರು.
[22] ಯೆಹೋವ ದೇವರು, “ಇಗೋ, ಮನುಷ್ಯನು ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ತಿಳಿದು, ನಮ್ಮಲ್ಲಿ ಒಬ್ಬನಂತಾದನಲ್ಲಾ. ಈಗ ಅವನು ಕೈಚಾಚಿ, ಜೀವವೃಕ್ಷದ ಹಣ್ಣನ್ನು ಸಹ ತಿಂದು, ಶಾಶ್ವತವಾಗಿ ಬದುಕುವವನಾಗಬಾರದು,” ಎಂದರು.
[23] ಆದ್ದರಿಂದ ಅವನು ಉತ್ಪತ್ತಿಯಾದ ಭೂಮಿಯನ್ನೇ ವ್ಯವಸಾಯ ಮಾಡುವುದಕ್ಕೆ ಯೆಹೋವ ದೇವರು ಏದೆನ್ ತೋಟದೊಳಗಿಂದ ಅವನನ್ನು ಹೊರಗೆ ಕಳುಹಿಸಿಬಿಟ್ಟರು.
[24] ಹೀಗೆ ಅವರು ಮನುಷ್ಯನನ್ನು ಹೊರಗೆ ಹಾಕಿ, ಜೀವವೃಕ್ಷದ ದಾರಿಯನ್ನು ಕಾಯುವುದಕ್ಕೆ ಏದೆನ್ ತೋಟದ ಪೂರ್ವದಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಖಡ್ಗವನ್ನೂ ಇರಿಸಿದರು.