Skip to content
Opens in a new window
Listen to this chapter • 4:36

[1] ಹೀಗೆ ಭೂಮ್ಯಾಕಾಶಗಳೂ ಅವುಗಳಲ್ಲಿರುವ ಸಮಸ್ತವೂ ಸಂಪೂರ್ಣವಾಗಿ ನಿರ್ಮಿತವಾದವು.

[2] ದೇವರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.

[3] ಅನಂತರ ದೇವರು ಏಳನೆಯ ದಿನವನ್ನು ಆಶೀರ್ವದಿಸಿ, ಅದನ್ನು ಪವಿತ್ರ ದಿನವನ್ನಾಗಿ ಮಾಡಿದರು. ಏಕೆಂದರೆ ಆ ದಿನದಲ್ಲಿ ದೇವರು ಸೃಷ್ಟಿಸಿದ ತಮ್ಮ ಎಲ್ಲಾ ಕೆಲಸಗಳಿಂದ ವಿಶ್ರಮಿಸಿಕೊಂಡರು.

[4] ಯೆಹೋವ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದರು. ಇದೇ ಭೂಮ್ಯಾಕಾಶಗಳ ನಿರ್ಮಾಣ ಚರಿತ್ರೆ.

[5] ಭೂಮಿಯಲ್ಲಿ ಯಾವ ಗಿಡವೂ ಇನ್ನೂ ಬೆಳೆದಿರಲಿಲ್ಲ, ಯಾವ ಪಲ್ಯವೂ ಇನ್ನೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ. ಆಗ ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ.

[6] ಆದರೆ ಭೂಮಿಯಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸಿತು.

[7] ಹೀಗಿರಲು ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ, ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು ಆಗ ಅವನು ಜೀವಿಸುವ ವ್ಯಕ್ತಿಯಾದನು.

[8] ಯೆಹೋವ ದೇವರು ಪೂರ್ವದಿಕ್ಕಿಗಿರುವ ಏದೆನ್ ಸೀಮೆಯಲ್ಲಿ ತೋಟವನ್ನು ಮಾಡಿ, ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು.

[9] ಯೆಹೋವ ದೇವರು ನೋಟಕ್ಕೆ ರಮ್ಯವೂ ಊಟಕ್ಕೆ ಒಳ್ಳೆಯವೂ ಆದ ಎಲ್ಲಾ ಮರಗಳನ್ನೂ ಭೂಮಿಯಲ್ಲಿ ಬೆಳೆಯುವಂತೆ ಮಾಡಿದರು. ತೋಟದ ಮಧ್ಯದಲ್ಲಿ ಜೀವದ ಮರವನ್ನೂ ಒಳ್ಳೆಯದರ ಮತ್ತು ಕೆಟ್ಟದ್ದರ ತಿಳುವಳಿಕೆಯ ಮರವನ್ನೂ ಬೆಳೆಯುವಂತೆ ಮಾಡಿದರು.

[10] ಏದೆನ್ ಸೀಮೆಯಿಂದ ಒಂದು ನದಿ ಹರಿದು, ತೋಟವನ್ನು ತೋಯಿಸುತ್ತಿತ್ತು. ಅದು ಅಲ್ಲಿಂದ ಹರಿದು ವಿಭಾಗವಾಗಿ, ನಾಲ್ಕು ಉಪನದಿಗಳಾದವು.

[11] ಮೊದಲನೆಯದರ ಹೆಸರು ಪೀಶೋನ್; ಅದು ಬಂಗಾರವಿರುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು.

[12] ಆ ದೇಶದ ಬಂಗಾರವು ಉತ್ತಮವಾಗಿತ್ತು. ಅಲ್ಲಿ ಬದೋಲಖ ಧೂಪ ಮತ್ತು ಗೋಮೇಧಿಕ ರತ್ನ ಇದ್ದವು.

[13] ಎರಡನೆಯ ನದಿಯ ಹೆಸರು ಗೀಹೋನ್; ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತಿತ್ತು.

[14] ಮೂರನೆಯ ನದಿಯ ಹೆಸರು ಟೈಗ್ರಿಸ್; ಅದು ಅಸ್ಸೀರಿಯಾ ದೇಶದ ಪೂರ್ವಕ್ಕೆ ಹರಿಯುತ್ತಿತ್ತು. ನಾಲ್ಕನೆಯ ನದಿಯು ಯೂಫ್ರೇಟೀಸ್.

[15] ಯೆಹೋವ ದೇವರು ಮನುಷ್ಯನನ್ನು ಕರೆದುಕೊಂಡು ಹೋಗಿ, ಏದೆನ್ ತೋಟದಲ್ಲಿ ಕೆಲಸ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇಟ್ಟರು.

[16] ಇದಲ್ಲದೆ ಯೆಹೋವ ದೇವರು ಮನುಷ್ಯನಿಗೆ, “ನೀನು ತೋಟದ ಎಲ್ಲಾ ಮರಗಳ ಹಣ್ಣುಗಳನ್ನು ನಿನ್ನ ಇಷ್ಟಾನುಸಾರವಾಗಿ ತಿನ್ನಬಹುದು.

[17] ಆದರೆ ಒಳ್ಳೆಯದರ, ಕೆಟ್ಟದ್ದರ ತಿಳುವಳಿಕೆಯ ಮರದ ಹಣ್ಣನ್ನು ನೀನು ತಿನ್ನಬಾರದು. ಏಕೆಂದರೆ, ನೀನು ಅದನ್ನು ತಿಂದ ದಿನವೇ ಸಾಯುವಿ,” ಎಂದು ಹೇಳಿದರು.

[18] ಅನಂತರ ಯೆಹೋವ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಬೀಳುವ ಸಹಕಾರಿಣಿಯನ್ನು ಉಂಟುಮಾಡುವೆನು,” ಎಂದರು.

[19] ಯೆಹೋವ ದೇವರು ಭೂಮಿಯಲ್ಲಿರುವ ಎಲ್ಲಾ ಕಾಡುಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿದ ಮೇಲೆ, ಅವುಗಳಿಗೆ ಮನುಷ್ಯನು ಏನು ಹೆಸರಿಡುವನೋ ಎಂದು ನೋಡುವುದಕ್ಕೆ, ಅವುಗಳನ್ನು ಅವನ ಬಳಿಗೆ ತಂದರು. ಒಂದೊಂದು ಜೀವಿಗೂ ಮನುಷ್ಯನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು.

[20] ಹೀಗೆ ಮನುಷ್ಯನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆದಾಮನಿಗೆ ಸರಿಬೀಳುವ ಸಹಕಾರಿಣಿಯು ಕಾಣಿಸಲಿಲ್ಲ.

[21] ಆದಕಾರಣ ಯೆಹೋವ ದೇವರು ಮನುಷ್ಯನಿಗೆ ಗಾಢನಿದ್ರೆ ಬರಮಾಡಿದರು. ಅವನು ನಿದ್ರಿಸುತ್ತಿರುವಾಗ, ಅವರು ಅವನ ಪಕ್ಕೆಯನ್ನು ತೆಗೆದುಕೊಂಡು, ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು.

[22] ಬಳಿಕ ಯೆಹೋವ ದೇವರು ಮನುಷ್ಯನಿಂದ ತೆಗೆದಿದ್ದ ಪಕ್ಕೆಯಿಂದ ಒಬ್ಬ ಸ್ತ್ರೀಯನ್ನು ಉಂಟುಮಾಡಿ, ಆಕೆಯನ್ನು ಆ ಮನುಷ್ಯನ ಬಳಿಗೆ ತಂದರು.

[23] ಆಗ ಮನುಷ್ಯನು ಹೀಗೆ ಹೇಳಿದನು: “ಇದು ನನ್ನ ಎಲುಬಿನಿಂದಾದ ಎಲುಬು ಮತ್ತು ನನ್ನ ಮಾಂಸದಿಂದಾದ ಮಾಂಸವಾಗಿದೆ. ಈಕೆ ನರನಿಂದ ತೆಗೆದಿರುವುದರಿಂದ, ಈಕೆ, ‘ನಾರಿ’ ಎಂದು ಎನಿಸಿಕೊಳ್ಳುವಳು.”

[24] ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು, ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರೂ ಒಂದೇ ಶರೀರವಾಗಿರುವರು.

[25] ಆದಾಮನೂ ಅವನ ಹೆಂಡತಿಯೂ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ಆದಿಕಾಂಡ — Chapters