Skip to content
Opens in a new window
Listen to this chapter • 6:18

[1] ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಬೇರ್ಷೆಬಕ್ಕೆ ಬಂದು, ತನ್ನ ತಂದೆ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿದನು.

[2] ದೇವರು ಇಸ್ರಾಯೇಲನಿಗೆ ರಾತ್ರಿಯ ದರ್ಶನದಲ್ಲಿ ಮಾತನಾಡಿ, “ಯಾಕೋಬನೇ, ಯಾಕೋಬನೇ,” ಎಂದರು. ಅದಕ್ಕವನು, “ಇಗೋ, ಇದ್ದೇನೆ,” ಎಂದನು.

[3] ದೇವರು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗುವುದಕ್ಕೆ ಭಯಪಡಬೇಡ. ಏಕೆಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡ ಜನಾಂಗವಾಗಮಾಡುವೆನು.

[4] ನಾನೇ ನಿನ್ನ ಸಂಗಡ ಈಜಿಪ್ಟಿಗೆ ಹೋಗುವೆನು. ನಾನು ನಿಶ್ಚಯವಾಗಿ ನಿನ್ನನ್ನು ಕಾನಾನಿಗೆ ತಿರುಗಿ ಬರಮಾಡುವೆನು. ಯೋಸೇಫನು ನಿನ್ನ ಅಂತಿಮ ಕಾಲದಲ್ಲಿ ನೀನು ಕಣ್ಣುಮುಚ್ಚುವಾಗ ಇರುವನು,” ಎಂದನು.

[5] ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಆಗ ಇಸ್ರಾಯೇಲರು ತಮ್ಮ ತಂದೆ ಯಾಕೋಬನನ್ನೂ, ತಮ್ಮ ಮಕ್ಕಳನ್ನೂ, ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ರಥಗಳಲ್ಲಿ ಕೂರಿಸಿಕೊಂಡು ಹೋದರು.

[6] ಅವರು ತಮ್ಮ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತೆಗೆದುಕೊಂಡು ಈಜಿಪ್ಟಿಗೆ ಬಂದರು. ಯಾಕೋಬನು ತನ್ನ ಕುಟುಂಬ ಸಮೇತವಾಗಿ ಬಂದನು.

[7] ಅವನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮೊಕ್ಕಳನ್ನೂ, ಅಂತೂ ತನ್ನ ಇಡೀ ಕುಟುಂಬದವರೆಲ್ಲರನ್ನೂ ತನ್ನೊಂದಿಗೆ ಈಜಿಪ್ಟಿಗೆ ಕರೆದುಕೊಂಡು ಹೋದನು.

[8] ಈಜಿಪ್ಟಿಗೆ ಬಂದ ಇಸ್ರಾಯೇಲರ ಮಕ್ಕಳು ಎಂದರೆ, ಯಾಕೋಬನ ಹಾಗೂ ಅವನ ಸಂತತಿಯರ ಹೆಸರುಗಳು: ಯಾಕೋಬನ ಚೊಚ್ಚಲ ಮಗ ರೂಬೇನನು.

[9] ರೂಬೇನನ ಪುತ್ರರು: ಹನೋಕ್, ಪಲ್ಲೂ, ಹೆಚ್ರೋನ್ ಮತ್ತು ಕರ್ಮೀ ಎಂಬುವರು.

[10] ಸಿಮೆಯೋನನ ಮಕ್ಕಳು: ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ ಎಂಬುವರು.

[11] ಲೇವಿಯ ಪುತ್ರರು: ಗೇರ್ಷೋನ್, ಕೊಹಾತ್, ಮೆರಾರೀ ಎಂಬುವರು.

[12] ಯೆಹೂದನ ಮಕ್ಕಳು: ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು. ಪೆರೆಚನ ಮಕ್ಕಳು: ಹೆಚ್ರೋನ್ ಮತ್ತು ಹಾಮೂಲ್ ಎಂಬುವರು.

[13] ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್ ಎಂಬುವರು.

[14] ಜೆಬುಲೂನನ ಮಕ್ಕಳು: ಸೆರೆದ್, ಏಲೋನ್, ಯಹಲೇಲ್ ಎಂಬುವರು.

[15] ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ, ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಪುತ್ರಪುತ್ರಿಯರೆಲ್ಲಾ ಸೇರಿ ಒಟ್ಟು ಮೂವತ್ತು ಮೂರು ಮಂದಿ.

[16] ಗಾದನ ಮಕ್ಕಳು: ಚಿಫ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ ಎಂಬುವರು.

[17] ಆಶೇರನ ಮಕ್ಕಳು: ಇಮ್ನಾ, ಇಷ್ವಾ, ಇಷ್ವೀ, ಬೆರೀಯ ಮತ್ತು ಅವರ ಸಹೋದರಿಯಾದ ಸೆರಹ. ಬೆರೀಗನ ಪುತ್ರರು: ಹೆಬೆರ, ಮಲ್ಕೀಯೇಲ್ ಎಂಬುವರು.

[18] ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಈಕೆಯಿಂದ ಯಾಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ.

[19] ಯಾಕೋಬನ ಹೆಂಡತಿಯಾದ ರಾಹೇಲಳ ಪುತ್ರರು: ಯೋಸೇಫ್, ಬೆನ್ಯಾಮೀನ್ ಎಂಬುವರು.

[20] ಯೋಸೇಫನಿಗೆ ಈಜಿಪ್ಟ್ ದೇಶದಲ್ಲಿ ಮಕ್ಕಳು ಹುಟ್ಟಿದರು. ಓನ್ ಪಟ್ಟಣದ ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತ್ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಅವನಿಗೆ ಹೆತ್ತಳು.

[21] ಬೆನ್ಯಾಮೀನನ ಪುತ್ರರು: ಬೆಳ, ಬೆಕೆರ್, ಅಷ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್ ಎಂಬುವರು.

[22] ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಪುತ್ರರು. ಎಲ್ಲರೂ ಕೂಡಿ ಹದಿನಾಲ್ಕು ಮಂದಿ.

[23] ದಾನನ ಮಗನು: ಹುಶೀಮನು.

[24] ನಫ್ತಾಲಿಯ ಪುತ್ರರು: ಯಹಚೇಲ, ಗೂನೀ, ಯೇಚೆರ್, ಶಿಲ್ಲೇಮ್ ಎಂಬುವರು.

[25] ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಪುತ್ರರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲರೂ ಕೂಡಿ ಏಳುಮಂದಿ.

[26] ಯಾಕೋಬನ ಪುತ್ರರ ಹೆಂಡತಿಯರಲ್ಲದೆ, ಯಾಕೋಬನ ಸಂಗಡ ಈಜಿಪ್ಟಿಗೆ ಹೋದವರು ಒಟ್ಟು ಅರವತ್ತಾರು ಮಂದಿ.

[27] ಅವರಲ್ಲದೆ ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಪುತ್ರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಈಜಿಪ್ಟಿಗೆ ಹೋದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.

[28] ಇದಲ್ಲದೆ ಗೋಷೆನ್ ಪ್ರಾಂತಕ್ಕೆ ಮಾರ್ಗವನ್ನು ತೋರಿಸುವಂತೆ ಯಾಕೋಬನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಪ್ರಾಂತಕ್ಕೆ ಬಂದು ಸೇರಿದರು.

[29] ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು, ತನ್ನ ತಂದೆ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋದನು. ಯೋಸೇಫನು ತನ್ನ ತಂದೆಯನ್ನು ಸಂಧಿಸಿ, ಅಪ್ಪಿಕೊಂಡು, ಬಹಳ ಹೊತ್ತಿನವರೆಗೆ ಅತ್ತನು.

[30] ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಂಡಿದ್ದರಿಂದ ಇನ್ನು ನಾನು ಮರಣ ಹೊಂದಲು ಸಿದ್ಧನಾಗಿದ್ದೇನೆ. ನೀನು ಇನ್ನೂ ಜೀವದಿಂದ ಇದ್ದೀಯೆ,” ಎಂದನು.

[31] ಯೋಸೇಫನು ತನ್ನ ಸಹೋದರರಿಗೂ, ತನ್ನ ತಂದೆಯ ಮನೆಯವರಿಗೂ, “ನಾನು ಹೋಗಿ ಫರೋಹನಿಗೆ, ಕಾನಾನ್ ದೇಶದಲ್ಲಿದ್ದ ನನ್ನ ಸಹೋದರರೂ, ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ.

[32] ಅವರು ಕುರಿಕಾಯುವವರು, ಅವರಿಗೆ ಪಶುಗಳು ಇವೆ. ತಮ್ಮ ಕುರಿದನಗಳನ್ನೂ, ತಮಗಿದ್ದದ್ದೆಲ್ಲವನ್ನೂ ತೆಗೆದುಕೊಂಡು ಬಂದಿದ್ದಾರೆ, ಎಂದು ಹೇಳುವೆನು.

[33] ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಕೆಲಸವೇನು?’ ಎಂದು ಕೇಳುವನು.

[34] ನೀವು ಅವನಿಗೆ, ‘ಚಿಕ್ಕಂದಿನಿಂದ ಇಂದಿನವರೆಗೂ ನಿನ್ನ ದಾಸರಾದ ನಾವೂ ನಮ್ಮ ಪೂರ್ವಿಕರೂ ಪಶುಗಳನ್ನು ಕಾಯುವವರಾಗಿದ್ದೇವೆ,’ ಎಂದು ಹೇಳಬೇಕು. ಏಕೆಂದರೆ ಕುರಿ ಕಾಯುವವರೆಲ್ಲಾ ಈಜಿಪ್ಟಿನವರಿಗೆ ಅಸಹ್ಯವಾಗಿದ್ದರಿಂದ, ನೀವು ಗೋಷೆನ್ ಪ್ರಾಂತದಲ್ಲಿ ವಾಸವಾಗಿರುವಂತೆ ನೇಮಿಸುವನು,” ಎಂದನು.

ಆದಿಕಾಂಡ — Chapters