[1] ಆದಾಮನ ವಂಶದವರ ದಾಖಲೆಯಿದು: ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ಅವನನ್ನು ತಮ್ಮನ್ನೇ ಹೋಲುವಂತೆ ಉಂಟುಮಾಡಿದರು.
[2] ದೇವರು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು. ಅದೇ ದಿನದಲ್ಲಿ ಅವರನ್ನು ಆಶೀರ್ವದಿಸಿ, ಅವರಿಗೆ “ಮನುಷ್ಯ” ಎಂದು ಕರೆದರು.
[3] ಆದಾಮನು ನೂರಮೂವತ್ತು ವರುಷದವನಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ, “ಸೇತ್” ಎಂದು ಹೆಸರಿಟ್ಟನು.
[4] ಸೇತನು ಹುಟ್ಟಿದ ಮೇಲೆ ಆದಾಮನು ಗಂಡು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರು ವರುಷ ಬದುಕಿದನು.
[5] ಆದಾಮನು ಒಟ್ಟು ಒಂಬೈನೂರ ಮೂವತ್ತು ವರುಷ ಬದುಕಿ ಸತ್ತನು.
[6] ಸೇತನು ನೂರ ಐದು ವರುಷದವನಾದಾಗ ಎನೋಷನನ್ನು ಪಡೆದನು.
[7] ಎನೋಷನು ಹುಟ್ಟಿದ ಮೇಲೆ ಸೇತನು ಎಂಟುನೂರ ಏಳು ವರುಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು.
[8] ಸೇತನು ಒಟ್ಟು ಒಂಬೈನೂರ ಹನ್ನೆರಡು ವರ್ಷ ಬದುಕಿ ಸತ್ತನು.
[9] ಎನೋಷನು ತೊಂಬತ್ತು ವರ್ಷದವನಾದಾಗ ಕೇನಾನನನ್ನು ಪಡೆದನು.
[10] ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರುಷ ಬದುಕಿದನು.
[11] ಅವನು ಒಟ್ಟು ಒಂಬೈನೂರ ಐದು ವರುಷ ಬದುಕಿ ಸತ್ತನು.
[12] ಕೇನಾನನು ಎಪ್ಪತ್ತು ವರುಷದವನಾದಾಗ, ಅವನಿಂದ ಮಹಲಲೇಲನು ಹುಟ್ಟಿದನು.
[13] ಕೇನಾನನು ಮಹಲಲೇಲನು ಹುಟ್ಟಿದ ಮೇಲೆ ಎಂಟುನೂರ ನಲವತ್ತು ವರ್ಷ ಬದುಕಿ, ಗಂಡು ಹೆಣ್ಣು ಮಕ್ಕಳನ್ನು ಪಡೆದನು.
[14] ಕೇನಾನನು ಒಟ್ಟು ಒಂಬೈನೂರ ಹತ್ತು ವರ್ಷ ಬದುಕಿ ಸತ್ತನು.
[15] ಮಹಲಲೇಲನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಯೆರೆದನು ಹುಟ್ಟಿದನು.
[16] ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಎಂಟುನೂರ ಮೂವತ್ತು ವರ್ಷ ಬದುಕಿ ಗಂಡು, ಹೆಣ್ಣು ಮಕ್ಕಳನ್ನು ಪಡೆದನು.
[17] ಮಹಲಲೇಲನು ಎಂಟುನೂರ ತೊಂಬತ್ತೈದು ವರ್ಷ ಬದುಕಿ ತರುವಾಯ ಸತ್ತನು.
[18] ಯೆರೆದನು ನೂರ ಅರವತ್ತೆರಡು ವರುಷದವನಾಗಿದ್ದಾಗ, ಅವನಿಂದ ಹನೋಕನು ಹುಟ್ಟಿದನು.
[19] ಹನೋಕನು ಹುಟ್ಟಿದ ಮೇಲೆ, ಯೆರೆದನು ಎಂಟುನೂರು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.
[20] ಯೆರೆದನು ಒಟ್ಟು ಒಂಬೈನೂರ ಅರವತ್ತೆರಡು ವರ್ಷ ಬದುಕಿ, ತರುವಾಯ ಸತ್ತನು.
[21] ಹನೋಕನು ಅರವತ್ತೈದು ವರ್ಷದವನಾಗಿದ್ದಾಗ, ಅವನಿಂದ ಮೆತೂಷೆಲಹನು ಹುಟ್ಟಿದನು.
[22] ಮೆತೂಷೆಲಹನು ಹುಟ್ಟಿದ ತರುವಾಯ, ಹನೋಕನು ಮುನ್ನೂರು ವರ್ಷ ದೇವರೊಂದಿಗೆ ನಡೆದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.
[23] ಹನೋಕನು ಒಟ್ಟು ಮುನ್ನೂರ ಅರವತ್ತೈದು ವರ್ಷ ಬದುಕಿದನು.
[24] ದೇವರೊಂದಿಗೆ ನಂಬಿಗಸ್ತನಾಗಿ ನಡೆಯುತ್ತಿದ್ದ ಹನೋಕನನ್ನು ದೇವರು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.
[25] ಮೆತೂಷೆಲಹನು ನೂರ ಎಂಬತ್ತೇಳು ವರ್ಷದವನಾಗಿದ್ದಾಗ, ಅವನಿಂದ ಲೆಮೆಕನು ಹುಟ್ಟಿದನು.
[26] ಲೆಮೆಕನು ಹುಟ್ಟಿದ ಮೇಲೆ, ಮೆತೂಷೆಲಹನು ಏಳುನೂರ ಎಂಬತ್ತೆರಡು ವರ್ಷ ಬದುಕಿದನು. ಅವನಿಂದ ಗಂಡು, ಹೆಣ್ಣುಮಕ್ಕಳು ಹುಟ್ಟಿದರು.
[27] ಮೆತೂಷೆಲಹನಿಗೆ ಒಟ್ಟು ಒಂಬೈನೂರ ಅರವತ್ತೊಂಭತ್ತು ವರ್ಷಗಳಾಗಿದ್ದವು. ತರುವಾಯ ಅವನು ಸತ್ತನು.
[28] ಲೆಮೆಕನು ನೂರ ಎಂಬತ್ತೆರಡು ವರ್ಷದವನಾದಾಗ, ಒಬ್ಬ ಮಗನನ್ನು ಪಡೆದನು.
[29] ಅವನಿಗೆ, ನೋಹ ಎಂದು ಹೆಸರಿಟ್ಟು, “ಯೆಹೋವ ದೇವರು ಶಪಿಸಿದ ಭೂಮಿಯಿಂದ ನಮಗೆ ಉಂಟಾದ ಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಉಪಶಮನಗೊಳಿಸುವನು,” ಎಂದು ಹೇಳಿದನು.
[30] ನೋಹನು ಹುಟ್ಟಿದ ಮೇಲೆ, ಲೆಮೆಕನು ಗಂಡು, ಹೆಣ್ಣು ಮಕ್ಕಳನ್ನು ಪಡೆದು, ಐನೂರ ತೊಂಬತ್ತೈದು ವರ್ಷ ಬದುಕಿದನು.
[31] ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿದನು. ತರುವಾಯ ಅವನು ಸತ್ತನು.
[32] ನೋಹನು ಐನೂರು ವರ್ಷದವನಾಗಿದ್ದನು. ಆಗ ನೋಹನಿಂದ ಶೇಮ್, ಹಾಮ್, ಯೆಫೆತರು ಹುಟ್ಟಿದರು.