[1] ದೇಶದಲ್ಲಿ ಬರವು ಘೋರವಾಗಿತ್ತು.
[2] ಅವರು ಈಜಿಪ್ಟಿನಿಂದ ತಂದಿದ್ದ ಧಾನ್ಯವು ತೀರಿದ ಮೇಲೆ ಅವರ ತಂದೆ ಅವರಿಗೆ, “ತಿರುಗಿ ಹೋಗಿ ನಮಗಾಗಿ ಸ್ವಲ್ಪ ಆಹಾರ ಕೊಂಡುಕೊಳ್ಳಿರಿ,” ಎಂದನು.
[3] ಆಗ ಯೆಹೂದನು ಅವನಿಗೆ, “ಆ ಮನುಷ್ಯನು ನಮಗೆ ನಿಮ್ಮ ಸಹೋದರನು ನಿಮ್ಮ ಸಂಗಡ ಇದ್ದ ಹೊರತು, ನೀವು ನನ್ನ ಮುಖವನ್ನು ನೋಡಬಾರದೆಂದು, ನಮಗೆ ದೃಢವಾಗಿ ನಿರ್ಣಯಿಸಿ ಹೇಳಿದ್ದಾನೆ.
[4] ನೀನು ನಮ್ಮ ತಮ್ಮನನ್ನು ನಮ್ಮ ಸಂಗಡ ಕಳುಹಿಸಿದರೆ, ನಾವು ಹೋಗಿ ನಿನಗಾಗಿ ಆಹಾರವನ್ನು ಕೊಂಡುಕೊಂಡು ಬರುತ್ತೇವೆ.
[5] ಅವನನ್ನು ಕಳುಹಿಸದೆ ಹೋದರೆ, ನಾವು ಹೋಗುವುದಿಲ್ಲ. ಏಕೆಂದರೆ ಆ ಮನುಷ್ಯನು, ‘ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ, ನನ್ನ ಮುಖವನ್ನು ನೋಡಬಾರದು,’ ಎಂದು ನಮಗೆ ಹೇಳಿದ್ದಾನೆ,” ಎಂದನು.
[6] ಇಸ್ರಾಯೇಲನು, “ನಿಮಗೆ ಇನ್ನೊಬ್ಬ ತಮ್ಮನು ಇದ್ದಾನೆಂದು ನೀವು ಏಕೆ ಆ ಮನುಷ್ಯನಿಗೆ ಹೇಳಿ ನನಗೆ ಕೇಡು ಮಾಡಿದ್ದೀರಿ?” ಎಂದನು.
[7] ಅವರು ಅವನಿಗೆ, “ಆ ಮನುಷ್ಯನು ನಮ್ಮ ವಿಷಯದಲ್ಲಿ ಮತ್ತು ನಮ್ಮ ಮನೆಯವರ ವಿಷಯದಲ್ಲಿ ನೇರವಾಗಿ ಕೇಳಿ ಅವನು, ‘ನಿಮ್ಮ ತಂದೆ ಇನ್ನೂ ಬದುಕಿದ್ದಾನೋ? ನಿಮಗೆ ಇನ್ನೊಬ್ಬ ಸಹೋದರನು ಇದ್ದಾನೋ?’ ಎಂದು ಕೇಳಿದನು. ಆಗ ಈ ಮಾತುಗಳಿಗೆ ತಕ್ಕ ಹಾಗೆ ನಾವು ಅವನಿಗೆ ತಿಳಿಸಿದೆವು. ‘ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ,’ ಎಂದು ಅವನು ನಮಗೆ ಹೇಳುತ್ತಾನೆಂದು ನಮಗೆ ಹೇಗೆ ತಿಳಿಯಲು ಸಾಧ್ಯ?” ಎಂದರು.
[8] ಯೆಹೂದನು ತನ್ನ ತಂದೆ ಇಸ್ರಾಯೇಲನಿಗೆ, “ಆ ಹುಡುಗನನ್ನು ನನ್ನ ಸಂಗಡ ಕಳುಹಿಸು, ಆಗ ನಾವು ಹೋಗುವೆವು. ನಾವು, ನೀನೂ ಮತ್ತು ನಮ್ಮ ಮಕ್ಕಳು ಸಾಯದೆ ಬದುಕುವೆವು.
[9] ನಾನು ಅವನಿಗೋಸ್ಕರ ಹೊಣೆಯಾಗಿರುವೆನು. ನೀನು ಅವನ ವಿಷಯದಲ್ಲಿ ನನ್ನನ್ನೇ ಕೇಳಬಹುದು. ನಾನು ಅವನನ್ನು ನಿನ್ನ ಬಳಿಗೆ ತಂದು ನಿನ್ನೆದುರಿಗೆ ನಿಲ್ಲಿಸದಿದ್ದರೆ, ಎಂದೆಂದಿಗೂ ನಾನು ಅಪರಾಧವನ್ನು ಹೊರುವೆನು.
[10] ಏಕೆಂದರೆ ನಾವು ತಡಮಾಡದೆ ಇದ್ದಿದ್ದರೆ, ಇಷ್ಟರಲ್ಲಿ ಎರಡು ಸಾರಿ ಹೋಗಿ ಬರಬಹುದಾಗಿತ್ತು,” ಎಂದನು.
[11] ಆಗ ಅವರ ತಂದೆ ಇಸ್ರಾಯೇಲನು ಅವರಿಗೆ, “ಹಾಗಿದ್ದರೆ ನೀವು ಹೀಗೆ ಮಾಡಿರಿ. ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ಫಲಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡು, ಆ ಮನುಷ್ಯನಿಗೆ ಕಾಣಿಕೆ ತೆಗೆದುಕೊಂಡು ಹೋಗಿರಿ. ಅಂದರೆ, ಸ್ವಲ್ಪ ತೈಲ, ಸ್ವಲ್ಪ ಜೇನು, ಸುಗಂಧದ್ರವ್ಯ, ರಕ್ತಬೋಳ, ಆಕ್ರೋಡು ಮತ್ತು ಬಾದಾಮಿ ಇವುಗಳನ್ನು ತೆಗೆದುಕೊಂಡು ಹೋಗಿರಿ.
[12] ಇದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ. ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನೂ ತೆಗೆದುಕೊಂಡು ಹೋಗಿರಿ. ಒಂದು ವೇಳೆ ಅದು ಅವರಿಗೆ ತಿಳಿಯದೆ ಬಂದಿರಬಹುದು.
[13] ನಿಮ್ಮ ಸಹೋದರನನ್ನು ಕರೆದುಕೊಂಡು ಆ ಮನುಷ್ಯನ ಬಳಿಗೆ ತಿರುಗಿ ಹೋಗಿರಿ.
[14] ಸರ್ವಶಕ್ತ ದೇವರು ನಿಮ್ಮ ಮತ್ತೊಬ್ಬ ಸಹೋದರನನ್ನೂ ಬೆನ್ಯಾಮೀನನನ್ನೂ ಕಳುಹಿಸಿಕೊಡುವ ಹಾಗೆ, ಆ ಮನುಷ್ಯನು ನಿಮ್ಮ ಮೇಲೆ ಕರುಣೆ ತೋರಿಸುವಂತೆ ಮಾಡಲಿ. ನಾನಂತೂ ಮಕ್ಕಳನ್ನು ಕಳೆದುಕೊಂಡವನಾಗಿರಬೇಕಾದರೆ ಹಾಗೆಯೇ ಆಗಲಿ,” ಎಂದನು.
[15] ಆಗ ಅವರು ಆ ಕಾಣಿಕೆಯನ್ನು ತೆಗೆದುಕೊಂಡು, ತಮ್ಮ ಕೈಯಲ್ಲಿ ಎರಡರಷ್ಟು ಹಣವನ್ನೂ, ಬೆನ್ಯಾಮೀನನನ್ನೂ ಕರೆದುಕೊಂಡು ಈಜಿಪ್ಟಿಗೆ ಹೋಗಿ, ಯೋಸೇಫನ ಮುಂದೆ ನಿಂತರು.
[16] ಯೋಸೇಫನು ಬೆನ್ಯಾಮೀನನನ್ನು ಅವರ ಸಂಗಡ ಕಂಡಾಗ ತನ್ನ ಮನೆ ಉಗ್ರಾಣಿಕನಿಗೆ, “ಈ ಮನುಷ್ಯರನ್ನು ಮನೆಗೆ ಕರೆದುಕೊಂಡು ಹೋಗಿ, ಮಾಂಸದ ಅಡುಗೆ ಸಿದ್ಧಮಾಡು. ಏಕೆಂದರೆ ಈ ಮನುಷ್ಯರು ಮಧ್ಯಾಹ್ನದಲ್ಲಿ ನನ್ನ ಸಂಗಡ ಊಟಮಾಡಬೇಕು,” ಎಂದನು.
[17] ಯೋಸೇಫನು ಹೇಳಿದಂತೆ ಅವನು ಮಾಡಿದನು. ಅವನು ಆ ಮನುಷ್ಯರನ್ನು ಯೋಸೇಫನ ಮನೆಗೆ ಕರೆದುಕೊಂಡು ಹೋದನು.
[18] ಯೋಸೇಫನ ಮನೆಗೆ ಕರೆತಂದದ್ದರಿಂದ ಅವರು ಭಯಪಟ್ಟು, “ಹಿಂದೆ ನಮ್ಮ ಚೀಲಗಳಲ್ಲಿ ತಿರುಗಿ ಸೇರಿದ ಹಣಕ್ಕಾಗಿ ನಮ್ಮನ್ನು ಹಿಡಿದು, ನಮ್ಮ ಮೇಲೆ ಬಿದ್ದು, ನಮ್ಮನ್ನು ದಾಸರಾಗಿ ಮಾಡಿ, ನಮ್ಮ ಕತ್ತೆಗಳನ್ನು ತೆಗೆದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ತಂದಿದ್ದಾನೆ,” ಎಂದರು.
[19] ಆಗ ಅವರು ಯೋಸೇಫನ ಮನೆಯ ಬಳಿಗೆ ಹೋಗಿ, ಬಾಗಿಲಿನ ಮುಂದೆ ಗೃಹನಿರ್ವಾಹಕನ ಸಂಗಡ ಮಾತನಾಡಿ,
[20] “ಒಡೆಯಾ, ನಾವು ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಮೊದಲನೆಯ ಸಾರಿ ಬಂದದ್ದು ನಿಜವೇ.
[21] ಇದಾದ ಮೇಲೆ ನಾವು ವಸತಿಗೃಹಕ್ಕೆ ಬಂದು ನಮ್ಮ ಚೀಲಗಳನ್ನು ತೆರೆದಾಗ, ಪ್ರತಿಯೊಬ್ಬನ ಹಣವು ಅವನವನ ಚೀಲದ ಬಾಯಲ್ಲಿ ಇತ್ತು. ನಮ್ಮ ಕೈಗಳಲ್ಲಿ ಅದನ್ನು ತಿರುಗಿ ತೆಗೆದುಕೊಂಡು ಬಂದಿದ್ದೇವೆ.
[22] ಇದಲ್ಲದೆ ಆಹಾರವನ್ನು ಕೊಂಡುಕೊಳ್ಳುವುದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಈ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೆಂದು ನಮಗೆ ತಿಳಿಯದು,” ಎಂದರು.
[23] ಅದಕ್ಕವನು, “ನಿಮಗೆ ಸಮಾಧಾನವಿರಲಿ, ಭಯಪಡಬೇಡಿರಿ. ನಿಮ್ಮ ದೇವರೂ ನಿಮ್ಮ ತಂದೆಯ ದೇವರೂ ನಿಮ್ಮ ಚೀಲಗಳಲ್ಲಿ ನಿಮಗೆ ನಿಕ್ಷೇಪವನ್ನು ಕೊಟ್ಟಿದ್ದಾರೆ. ನಿಮ್ಮ ಹಣವು ನನಗೆ ಮುಟ್ಟಿದೆ,” ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ತಂದನು.
[24] ಆ ಮನುಷ್ಯನು ಅವರನ್ನು ಯೋಸೇಫನ ಮನೆಯೊಳಗೆ ಕರೆದುಕೊಂಡು ಬಂದು ಅವರಿಗೆ ನೀರನ್ನು ಕೊಟ್ಟಾಗ, ಅವರು ತಮ್ಮ ಕಾಲುಗಳನ್ನು ತೊಳೆದುಕೊಂಡರು. ಇದಲ್ಲದೆ ಅವರ ಕತ್ತೆಗಳಿಗೆ ಮೇವನ್ನು ಹಾಕಿದನು.
[25] ಅವರು ಅಲ್ಲಿ ಊಟ ಮಾಡಬೇಕೆಂದು ಕೇಳಿದ್ದರಿಂದ, ಯೋಸೇಫನು ಮಧ್ಯಾಹ್ನದಲ್ಲಿ ಮನೆಗೆ ಬರುವಷ್ಟರಲ್ಲಿ ಕಾಣಿಕೆಯನ್ನು ಸಿದ್ಧಮಾಡಿಕೊಂಡರು.
[26] ಯೋಸೇಫನು ಮನೆಗೆ ಬಂದ ಮೇಲೆ, ತಮ್ಮ ಕೈಗಳಲ್ಲಿದ್ದ ಕಾಣಿಕೆಯನ್ನು ಮನೆಯೊಳಗೆ ತೆಗೆದುಕೊಂಡು ಬಂದು, ಅವನಿಗೆ ನೆಲದವರೆಗೂ ಅಡ್ಡಬಿದ್ದರು.
[27] ಆಗ ಯೋಸೇಫನು ಅವರ ಕ್ಷೇಮಸಮಾಚಾರವನ್ನು ಕೇಳಿ, “ನೀವು ಹೇಳಿದ ವೃದ್ಧನಾದ ನಿಮ್ಮ ತಂದೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ?” ಎಂದನು.
[28] ಅದಕ್ಕವರು, “ನಿನ್ನ ದಾಸನಾದ ನಮ್ಮ ತಂದೆಯು ಕ್ಷೇಮದಿಂದಿದ್ದಾನೆ, ಅವನು ಇನ್ನೂ ಬದುಕಿದ್ದಾನೆ,” ಎಂದು ಹೇಳಿ ತಮ್ಮ ತಲೆಗಳನ್ನು ಮತ್ತೆ ಬಾಗಿಸಿ ವಂದಿಸಿದರು.
[29] ಆಗ ಅವನು ತನ್ನ ದೃಷ್ಟಿಯಿಟ್ಟು, ತನ್ನ ತಾಯಿಯ ಮಗನೂ ತನ್ನ ತಮ್ಮನೂ ಆದ ಬೆನ್ಯಾಮೀನನನ್ನು ನೋಡಿ, “ನೀವು ನನಗೆ ಹೇಳಿದ ನಿಮ್ಮ ಚಿಕ್ಕ ತಮ್ಮನು ಇವನೋ?” ಎಂದು ಹೇಳಿ, “ನನ್ನ ಮಗನೇ, ದೇವರು ನಿನಗೆ ಕೃಪಾಳುವಾಗಿರಲಿ,” ಎಂದನು.
[30] ಆಗ ಯೋಸೇಫನ ಕರುಳು ತನ್ನ ತಮ್ಮನ ಬಗ್ಗೆ ಮರುಗಿದ್ದರಿಂದ ಅವನು ಅವಸರದಲ್ಲಿ ಎದ್ದು ಅಳುವುದಕ್ಕೆ ಸ್ಥಳವನ್ನು ಹುಡುಕಿ, ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು.
[31] ತರುವಾಯ ಅವನು ಮುಖವನ್ನು ತೊಳೆದುಕೊಂಡು ಹೊರಗೆ ಬಂದನು. ಅವನು ಮನಸ್ಸನ್ನು ಬಿಗಿಹಿಡಿದುಕೊಂಡು, “ಊಟಕ್ಕೆ ಬಡಿಸಿರಿ,” ಎಂದನು.
[32] ಆಗ ಅವರು ಯೋಸೇಫನಿಗೆ, ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡ ಇದ್ದ ಈಜಿಪ್ಟಿನವರಿಗೂ ಬೇರೆಬೇರೆಯಾಗಿ ಊಟಕ್ಕೆ ಇಟ್ಟರು. ಏಕೆಂದರೆ ಈಜಿಪ್ಟಿನವರು ಹಿಬ್ರಿಯರ ಕೂಡ ಊಟಮಾಡುತ್ತಿರಲಿಲ್ಲ. ಅದು ಈಜಿಪ್ಟಿನವರಿಗೆ ಅಸಹ್ಯವಾಗಿತ್ತು.
[33] ಯೋಸೇಫನು ಅವರನ್ನು ಹಿರಿಯವರಿಂದ ಕಿರಿಯವನವರೆಗೆ ಅವರವರ ವಯಸ್ಸಿನ ಪ್ರಕಾರ ಕುಳಿತುಕೊಳ್ಳುವಂತೆ ಮಾಡಿದ್ದರಿಂದ, ಅವರು ತಮ್ಮತಮ್ಮೊಳಗೆ ಆಶ್ಚರ್ಯಪಟ್ಟರು.
[34] ಯೋಸೇಫನು ತನ್ನ ಮುಂದಿಟ್ಟಿದ್ದ ಆಹಾರವನ್ನು ಕಳುಹಿಸಿದಾಗ, ಬೆನ್ಯಾಮೀನನಿಗೆ ಕಳುಹಿಸಿದ ಆಹಾರವು ಅವರೆಲ್ಲರ ಆಹಾರಗಳಿಗಿಂತ ಐದರಷ್ಟು ಹೆಚ್ಚಾಗಿತ್ತು ಮತ್ತು ಅವರು ಅವನ ಸಂಗಡ ಕುಡಿದು ಸಂತೋಷದಿಂದಿದ್ದರು.