Skip to content
Opens in a new window
Listen to this chapter • 8:54

[1] ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರಲಿಲ್ಲ ಎಂದು ತಿಳಿದಾಗ, ಆಕೆಯು ತನ್ನ ಸಹೋದರಿಯ ಮೇಲೆ ಹೊಟ್ಟೆಕಿಚ್ಚು ಪಟ್ಟು ಯಾಕೋಬನಿಗೆ, “ನನಗೆ ಮಕ್ಕಳನ್ನು ಕೊಡು, ಇಲ್ಲದಿದ್ದರೆ ನಾನು ಸಾಯುತ್ತೇನೆ,” ಎಂದಳು.

[2] ಅದಕ್ಕೆ ಯಾಕೋಬನು ರಾಹೇಲಳ ಮೇಲೆ ಕೋಪಿಸಿಕೊಂಡು, “ನಿನಗೆ ಗರ್ಭ ಫಲವನ್ನು ಕೊಡುವ ದೇವರ ಸ್ಥಾನದಲ್ಲಿ ನಾನಿದ್ದೇನೋ?” ಎಂದನು.

[3] ಅದಕ್ಕೆ ಆಕೆಯು, “ನನ್ನ ದಾಸಿ ಬಿಲ್ಹಳು ಇದ್ದಾಳೆ, ಅವಳ ಬಳಿಗೆ ಹೋಗು, ಅವಳು ಹೆತ್ತು ನನ್ನ ಮಡಿಲಲ್ಲಿ ಇಡಲಿ. ಅವಳಿಂದ ನನಗೆ ಮಕ್ಕಳಾಗುವರು,” ಎಂದಳು.

[4] ಹೀಗೆ ಅವನಿಗೆ ತನ್ನ ದಾಸಿ ಬಿಲ್ಹಳನ್ನು ಕೊಟ್ಟಳು. ಯಾಕೋಬನು ಅವಳನ್ನು ಸ್ವೀಕರಿಸಿದನು.

[5] ಬಿಲ್ಹಳು ಗರ್ಭಿಣಿಯಾಗಿ, ಯಾಕೋಬನಿಗೆ ಮಗನನ್ನು ಹೆತ್ತಳು.

[6] ರಾಹೇಲಳು, “ದೇವರು ನನಗೆ ನ್ಯಾಯತೀರಿಸಿ, ನನ್ನ ಸ್ವರವನ್ನು ಕೇಳಿ, ನನಗೆ ಮಗನನ್ನು ಕೊಟ್ಟಿದ್ದಾರೆ,” ಎಂದು ಹೇಳಿದಳು. ಆದ್ದರಿಂದ ಆಕೆಯು ಅವನಿಗೆ ದಾನ್ ಎಂದು ಹೆಸರಿಟ್ಟಳು.

[7] ರಾಹೇಲಳ ದಾಸಿ ಬಿಲ್ಹಳು ಮತ್ತೆ ಗರ್ಭಿಣಿಯಾಗಿ, ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.

[8] ಆಗ ರಾಹೇಲಳು, “ಅಧಿಕವಾದ ಹೋರಾಟಗಳಿಂದ ನನ್ನ ಸಹೋದರಿಯ ಸಂಗಡ ಹೋರಾಡಿ ಜಯಿಸಿದ್ದೇನೆ,” ಎಂದು ಹೇಳಿ ಅವನಿಗೆ ನಫ್ತಾಲಿ ಎಂದು ಹೆಸರಿಟ್ಟಳು.

[9] ಲೇಯಳು ತಾನು ಹೆರುವುದು ನಿಂತಿತೆಂದು ತಿಳಿದು, ತನ್ನ ದಾಸಿ ಜಿಲ್ಪಳನ್ನು ಯಾಕೋಬನಿಗೆ ಹೆಂಡತಿಯಾಗಿ ಕೊಟ್ಟಳು.

[10] ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಮಗನನ್ನು ಹೆತ್ತಳು.

[11] ಆಗ ಲೇಯಳು, “ಎಂಥಾ ಸೌಭಾಗ್ಯ,” ಎಂದು ಹೇಳಿ ಅವನಿಗೆ ಗಾದ್ ಎಂದು ಹೆಸರಿಟ್ಟಳು.

[12] ಲೇಯಳ ದಾಸಿ ಜಿಲ್ಪಳು ಯಾಕೋಬನಿಗೆ ಎರಡನೆಯ ಮಗನನ್ನು ಹೆತ್ತಳು.

[13] ಆಗ ಲೇಯಳು, “ನಾನು ಧನ್ಯಳಾದೆನು, ಏಕೆಂದರೆ ಸ್ತ್ರೀಯರು ನನ್ನನ್ನು ಧನ್ಯಳೆಂದು ಕರೆಯುವರು,” ಎಂದು ಹೇಳಿ ಅವನಿಗೆ ಆಶೇರ್ ಎಂದು ಹೆಸರಿಟ್ಟಳು.

[14] ರೂಬೇನನು ಗೋಧಿ ಕೊಯ್ಯುವ ಕಾಲದಲ್ಲಿ ಹೋಗಿ, ಹೊಲದಲ್ಲಿ ದುದಾಯಿ ಫಲಗಳನ್ನು ಕಂಡು, ತಾಯಿ ಲೇಯಳ ಬಳಿಗೆ ಕೆಲವು ಫಲಗಳನ್ನು ತಂದಾಗ, ರಾಹೇಲಳು ಲೇಯಳಿಗೆ, “ನಿನ್ನ ಮಗನು ತಂದ ಫಲಗಳಲ್ಲಿ ಕೆಲವನ್ನು ನನಗೆ ಕೊಡು,” ಎಂದಳು.

[15] ಅದಕ್ಕೆ ಆಕೆಯು, “ನೀನು ನನ್ನ ಗಂಡನನ್ನು ತೆಗೆದುಕೊಂಡದ್ದು ಅಲ್ಪಕಾರ್ಯವೋ? ನೀನು ಈಗ ನನ್ನ ಮಗನು ತಂದ ದುದಾಯ ಫಲಗಳನ್ನು ಸಹ ತೆಗೆದುಕೊಳ್ಳುವಿಯೋ?” ಎಂದಳು. ಅದಕ್ಕೆ ರಾಹೇಲಳು, “ನಿನ್ನ ಮಗನು ತಂದ ದುದಾಯ ಫಲಗಳಿಗೋಸ್ಕರ ಯಾಕೋಬನು ಈ ರಾತ್ರಿ ನಿನ್ನ ಸಂಗಡ ಮಲಗಲಿ,” ಎಂದಳು.

[16] ಯಾಕೋಬನು ಸಾಯಂಕಾಲದಲ್ಲಿ ಹೊಲದಿಂದ ಬಂದಾಗ, ಲೇಯಳು ಅವನೆದುರಿಗೆ ಹೋಗಿ, “ನೀನು ನನ್ನ ಬಳಿಗೆ ಬರಬೇಕು. ನನ್ನ ಮಗನು ತಂದ ದುದಾಯಿ ಫಲಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ,” ಎಂದಳು. ಆದ್ದರಿಂದ ಅವನು ಆ ರಾತ್ರಿಯಲ್ಲಿ ಆಕೆಯ ಸಂಗಡ ಮಲಗಿದನು.

[17] ಆಗ ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದ್ದರಿಂದ, ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಮಗನನ್ನು ಹೆತ್ತಳು.

[18] ಲೇಯಳು, “ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾರೆ,” ಎಂದು ಹೇಳಿ, ಅವನಿಗೆ ಇಸ್ಸಾಕಾರ್ ಎಂದು ಹೆಸರಿಟ್ಟಳು.

[19] ಮತ್ತೊಂದು ಸಾರಿ ಲೇಯಳು ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಮಗನನ್ನು ಹೆತ್ತಳು,

[20] ಲೇಯಳು, “ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾರೆ. ಈಗ ನಾನು ಅವನಿಗೆ ಆರು ಮಕ್ಕಳನ್ನು ಹೆತ್ತದ್ದರಿಂದ, ನನ್ನ ಗಂಡನು ಈಗಲಾದರೂ ನನ್ನನ್ನು ಗೌರವಿಸುವನು,” ಎಂದು ಹೇಳಿ, ಅವನಿಗೆ ಜೆಬುಲೂನ್ ಎಂದು ಹೆಸರಿಟ್ಟಳು.

[21] ತರುವಾಯ ಆಕೆಯು ಒಬ್ಬ ಮಗಳನ್ನು ಹೆತ್ತು, ಆಕೆಗೆ ದೀನಾ ಎಂದು ಹೆಸರಿಟ್ಟಳು.

[22] ಆಗ ದೇವರು ರಾಹೇಲಳನ್ನು ಜ್ಞಾಪಕಮಾಡಿಕೊಂಡರು. ದೇವರು ಆಕೆಯ ಮೊರೆಯನ್ನು ಕೇಳಿ, ಆಕೆಗೆ ಮಕ್ಕಳಾಗುವಂತೆ ಅನುಗ್ರಹಮಾಡಿದರು.

[23] ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು, “ದೇವರು ನನ್ನ ನಿಂದೆಯನ್ನು ತೆಗೆದುಬಿಟ್ಟಿದ್ದಾರೆ,” ಎಂದಳು.

[24] ಆಕೆಯು, “ಯೆಹೋವ ದೇವರು ನನಗೆ ಮತ್ತೊಬ್ಬ ಮಗನನ್ನು ದಯಪಾಲಿಸುವರು,” ಎಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.

[25] ರಾಹೇಲಳು ಯೋಸೇಫನನ್ನು ಹೆತ್ತಾಗ ಯಾಕೋಬನು ಲಾಬಾನನಿಗೆ, “ನಾನು ನನ್ನ ಸ್ಥಳಕ್ಕೂ ಸ್ವದೇಶಕ್ಕೂ ಹೋಗುವಂತೆ ನನ್ನನ್ನು ಕಳುಹಿಸಿಕೊಡು.

[26] ನಾನು ಯಾರಿಗೋಸ್ಕರ ನಿನಗೆ ಸೇವೆ ಮಾಡಿದೆನೋ, ಆ ನನ್ನ ಹೆಂಡತಿಯರನ್ನೂ, ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡು. ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿದ್ದೀಯೆ,” ಎಂದನು.

[27] ಲಾಬಾನನು ಅವನಿಗೆ, “ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದಿದವನಾಗಿದ್ದರೆ, ನನ್ನ ಬಳಿಯಲ್ಲಿಯೇ ಇರು. ಏಕೆಂದರೆ ಯೆಹೋವ ದೇವರು ನಿನಗೋಸ್ಕರ ನನ್ನನ್ನು ಆಶೀರ್ವದಿಸಿದ್ದಾರೆಂದು ನಾನು ಭವಿಷ್ಯಜ್ಞಾನ ಅನುಭವದಿಂದ ಕಲಿತುಕೊಂಡಿದ್ದೇನೆ.

[28] ನೀನು ನಿನ್ನ ಸಂಬಳವನ್ನು ನಿರ್ಣಯಿಸು. ಅದನ್ನು ನಾನು ನಿನಗೆ ಕೊಡುವೆನು,” ಎಂದನು.

[29] ಅದಕ್ಕೆ ಯಾಕೋಬನು ಅವನಿಗೆ, “ನಾನು ನಿನಗೆ ಮಾಡಿದ ಸೇವೆಯನ್ನೂ, ನಿನ್ನ ಪಶುಗಳು ನನ್ನ ಬಳಿಯಲ್ಲಿ ಹೇಗೆ ಅಭಿವೃದ್ಧಿ ಆಗಿವೆ ಎಂಬುದನ್ನೂ ನೀನು ಬಲ್ಲೆ.

[30] ನಾನು ಬರುವುದಕ್ಕಿಂತ ಮುಂಚೆ ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಬಂದಂದಿನಿಂದ ಯೆಹೋವ ದೇವರು ನಿನ್ನನ್ನು ಆಶೀರ್ವದಿಸಿದ್ದಾರೆ. ಈಗ ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದಿಸಲಿ?” ಎಂದನು.

[31] ಅದಕ್ಕೆ ಲಾಬಾನನು, “ನಿನಗೆ ನಾನು ಏನು ಕೊಡಲಿ?” ಎಂದನು. ಯಾಕೋಬನು, “ಏನೂ ಕೊಡಬೇಡ, ಒಂದು ವಿಷಯದಲ್ಲಿ ಒಪ್ಪಿಕೊಂಡರೆ, ನಾನು ಮತ್ತೆ ನಿನ್ನ ಮಂದೆಯನ್ನು ಮೇಯಿಸಿ ಕಾಯುವೆನು.

[32] ಈ ಹೊತ್ತು ನಾನು ನಿನ್ನ ಎಲ್ಲಾ ಮಂದೆಯ ಮಧ್ಯದಲ್ಲಿ ಹಾದು ಹೋಗುವೆನು. ಕುರಿಗಳಲ್ಲಿ ಕಂದುಬಣ್ಣದವುಗಳನ್ನೆಲ್ಲಾ, ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಉಳ್ಳವುಗಳನ್ನೆಲ್ಲಾ ಬೇರೆ ಮಾಡುವೆನು. ಅವೇ ನನ್ನ ಕೂಲಿಯಾಗಿರಲಿ.

[33] ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ, ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿಕೊಡುವುದು. ಮೇಕೆಗಳಲ್ಲಿ ಚುಕ್ಕೆ ಮತ್ತು ಮಚ್ಚೆ ಕುರಿಗಳಲ್ಲಿ ಕಂದು ಬಣ್ಣವಿಲ್ಲದವುಗಳು ನನ್ನ ಬಳಿಯಲ್ಲಿದ್ದರೆ, ಅವು ಕದ್ದವುಗಳು ಎಂದು ಎಣಿಕೆಯಾಗಿರಲಿ,” ಎಂದನು.

[34] ಲಾಬಾನನು, “ನೀನು ಹೇಳಿದಂತೆಯೇ ಆಗಲಿ,” ಎಂದನು.

[35] ಅದೇ ದಿನದಲ್ಲಿ ಲಾಬಾನನು ಹೋತಗಳಲ್ಲಿ ರೇಖೆ, ಮಚ್ಚೆ ಇದ್ದವುಗಳನ್ನೂ ಮತ್ತು ಸ್ವಲ್ಪ ಬಿಳುಪಾದ ಬಣ್ಣವಿದ್ದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಂದು ಬಣ್ಣವಿದ್ದವುಗಳನ್ನೂ ವಿಂಗಡಿಸಿ, ತನ್ನ ಪುತ್ರರ ಕೈಗೆ ಕೊಟ್ಟನು.

[36] ತನಗೂ, ಯಾಕೋಬನಿಗೂ ಮಧ್ಯದಲ್ಲಿ ಮೂರು ದಿನಗಳ ಪ್ರಯಾಣದಷ್ಟು ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಮಿಕ್ಕ ಮಂದೆಯನ್ನು ಮೇಯಿಸಿದನು.

[37] ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬ ಮರಗಳ ಹಸಿ ಕೋಲುಗಳನ್ನು ತೆಗೆದುಕೊಂಡು, ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು, ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು.

[38] ಮಂದೆಗಳು ನೀರು ಕುಡಿಯುವುದಕ್ಕೆ ಬಂದಾಗ, ಅವು ಗರ್ಭಧರಿಸಬೇಕೆಂದು ನೀರು ಕುಡಿಯುವ ದೋಣಿಗಳಲ್ಲಿ ತಾನು ತೊಗಟೆ ಸುಲಿದ ಕೋಲುಗಳನ್ನು ಅವುಗಳ ಮುಂದೆ ಇಟ್ಟನು.

[39] ಮಂದೆಗಳು ಆ ಕೋಲುಗಳನ್ನು ನೋಡಿ, ಸಂಗಮ ಮಾಡಿದ್ದರಿಂದ, ಚುಕ್ಕೆ ಮಚ್ಚೆ ರೇಖೆಗಳುಳ್ಳ ಮರಿಗಳನ್ನು ಈಯುತ್ತಿದ್ದವು.

[40] ಯಾಕೋಬನು ಕುರಿಗಳನ್ನು ಬೇರೆ ಮಾಡಿ, ಲಾಬಾನನ ಮಂದೆಯಲ್ಲಿರುವ ರೇಖೆಗಳುಳ್ಳ ಆಡುಕುರಿಗಳೆದುರಾಗಿಯೂ ಕಂದು ಬಣ್ಣ ಉಳ್ಳವುಗಳೆದುರಾಗಿಯೂ ಕುರಿಗಳನ್ನು ಇರಿಸಿದನು. ಅವನು ತನ್ನ ಮಂದೆಯನ್ನು ಲಾಬಾನನ ಮಂದೆಗಳೊಂದಿಗೆ ಸೇರಿಸದೆ, ಅವುಗಳನ್ನು ಬೇರೆ ಇಟ್ಟುಕೊಂಡನು.

[41] ಬಲವಾದ ಕುರಿಗಳು ಸಂಗಮ ಮಾಡುವಾಗ ಯಾಕೋಬನು ಆ ಕುರಿಗಳು ಕೋಲುಗಳನ್ನು ನೋಡುತ್ತಾ ಗರ್ಭಧರಿಸುವ ಹಾಗೆ ಕೋಲುಗಳನ್ನು ಕುರಿಗಳ ಕಣ್ಣೆದುರಾಗಿ ದೋಣಿಗಳಲ್ಲಿ ಇಡುತ್ತಿದ್ದನು.

[42] ಆದರೆ ಕುರಿಗಳು ಬಲಹೀನವಾಗಿದ್ದಾಗ, ಅವನು ಕೋಲುಗಳನ್ನು ದೋಣಿಗಳಲ್ಲಿ ಇಡಲಿಲ್ಲ. ಹೀಗಾಗಿ ಬಲಹೀನವಾದವುಗಳು ಲಾಬಾನನಿಗೂ, ಬಲವಾದವುಗಳು ಯಾಕೋಬನಿಗೂ ಆದವು.

[43] ಈ ಪ್ರಕಾರ ಯಾಕೋಬನು ಅತ್ಯಧಿಕವಾಗಿ ಅಭಿವೃದ್ಧಿಯಾದ್ದರಿಂದ, ಬಹು ಕುರಿಗಳೂ ದಾಸದಾಸಿಯರೂ ಒಂಟೆಗಳೂ ಕತ್ತೆಗಳೂ ಅವನಿಗೆ ದೊರೆತವು.

ಆದಿಕಾಂಡ — Chapters