[1] ಆಗ ಯಾಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಪೂರ್ವದಿಕ್ಕಿನ ಜನರ ದೇಶಕ್ಕೆ ಬಂದನು.
[2] ಅವನು ಕಣ್ಣೆತ್ತಿ ನೋಡಲಾಗಿ, ಹೊಲದಲ್ಲಿ ಒಂದು ಬಾವಿ ಇತ್ತು. ಅದರ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿದ್ದವು. ಏಕೆಂದರೆ ಆ ಬಾವಿಯ ನೀರನ್ನು ಮಂದೆಗಳಿಗೆ ಕುಡಿಸುತ್ತಿದ್ದರು. ಆ ಬಾವಿಯ ಮೇಲೆ ಒಂದು ದೊಡ್ಡ ಕಲ್ಲು ಇತ್ತು.
[3] ಅಲ್ಲಿ ಮಂದೆಗಳೆಲ್ಲಾ ಕೂಡಿದಾಗ, ಬಾವಿಯ ಮೇಲಿದ್ದ ಕಲ್ಲನ್ನು ಉರುಳಿಸಿ, ಕುರಿಗಳಿಗೆ ನೀರನ್ನು ಕುಡಿಸಿ, ಕಲ್ಲನ್ನು ಮತ್ತೆ ಅದರ ಸ್ಥಳದಲ್ಲಿ ಇಡುತ್ತಿದ್ದರು.
[4] ಯಾಕೋಬನು ಅವರಿಗೆ, “ನನ್ನ ಸಹೋದರರೇ, ನೀವು ಎಲ್ಲಿಯವರು?” ಎಂದಾಗ. ಅವರು, “ನಾವು ಹಾರಾನಿನವರು,” ಎಂದರು.
[5] ಅದಕ್ಕವನು ಅವರಿಗೆ, “ನಾಹೋರನ ಮೊಮ್ಮಗ ಲಾಬಾನನನ್ನು ನೀವು ಬಲ್ಲಿರೋ?” ಎಂದಾಗ. ಅವರು, “ನಾವು ಅವನನ್ನು ಬಲ್ಲೆವು,” ಎಂದರು.
[6] ಯಾಕೋಬನು ಅವರಿಗೆ, “ಅವನು ಕ್ಷೇಮವಾಗಿದ್ದಾನೋ?” ಎಂದು ಕೇಳಿದಾಗ, ಆಗ ಅವರು, “ಕ್ಷೇಮವಾಗಿದ್ದಾನೆ, ಅಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು.
[7] ಯಾಕೋಬನು ಅವರಿಗೆ, “ಇನ್ನೂ ಬಹಳ ಹೊತ್ತು ಇದೆ. ಮಂದೆಗಳನ್ನು ಕೂಡಿಸುವ ಸಮಯವು ಇದಲ್ಲ. ಕುರಿಗಳಿಗೆ ನೀರು ಕುಡಿಸಿ ಹೋಗಿ ಮೇಯಿಸಿರಿ,” ಎಂದನು.
[8] ಅದಕ್ಕೆ ಅವರು, “ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಉರುಳಿಸುತ್ತಾರೆ. ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ,” ಎಂದರು.
[9] ಯಾಕೋಬನು ಇನ್ನೂ ಅವರ ಸಂಗಡ ಮಾತನಾಡುತ್ತಿದ್ದಾಗ, ಕುರಿಗಳನ್ನು ಮೇಯಿಸುವ ರಾಹೇಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು.
[10] ಯಾಕೋಬನು ತನ್ನ ತಾಯಿಯ ಸಹೋದರ ಲಾಬಾನನ ಮಗಳಾದ ರಾಹೇಲಳನ್ನೂ, ಅವಳ ಕುರಿಗಳನ್ನೂ ನೋಡಿದಾಗ, ಯಾಕೋಬನು ಹತ್ತಿರ ಬಂದು, ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ, ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು.
[11] ಆಗ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು, ತನ್ನ ಸ್ವರವನ್ನೆತ್ತಿ ಗಟ್ಟಿಯಾಗಿ ಅತ್ತನು.
[12] ಯಾಕೋಬನು ರಾಹೇಲಳಿಗೆ, ತಾನು ಆಕೆಯ ತಂದೆಗೆ ಸೋದರಳಿಯನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ಆಕೆಯು ಓಡಿಹೋಗಿ ತನ್ನ ತಂದೆಗೆ ತಿಳಿಸಿದಳು.
[13] ಲಾಬಾನನು ತನ್ನ ಸಹೋದರಿಯ ಮಗ ಯಾಕೋಬನ ಸುದ್ದಿಯನ್ನು ಕೇಳಿದಾಗ, ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು.
[14] ಆಗ ಲಾಬಾನನು ಅವನಿಗೆ, “ನಿಶ್ಚಯವಾಗಿ ನೀನು ನನ್ನ ರಕ್ತಸಂಬಂಧಿಯಾಗಿದ್ದೀ,” ಎಂದನು. ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು.
[15] ಲಾಬಾನನು ಯಾಕೋಬನಿಗೆ, “ನೀನು ನನ್ನ ಸಂಬಂಧಿಕನಾಗಿರುವುದರಿಂದ ಸುಮ್ಮನೆ ನನಗೆ ಸೇವೆ ಮಾಡಬೇಕೆ? ನಿನ್ನ ಸಂಬಳ ಎಷ್ಟೆಂಬುದನ್ನು ನನಗೆ ಹೇಳು?” ಎಂದನು.
[16] ಲಾಬಾನನಿಗೆ ಇಬ್ಬರು ಪುತ್ರಿಯರಿದ್ದರು. ದೊಡ್ಡವಳ ಹೆಸರು ಲೇಯಳು, ಚಿಕ್ಕವಳ ಹೆಸರು ರಾಹೇಲಳು.
[17] ಲೇಯಳ ಕಣ್ಣುಗಳು ಕಾಂತಿಹೀನವಾಗಿದ್ದವು. ಆದರೆ ರಾಹೇಲಳು ಸುಂದರಿಯೂ ರೂಪವತಿಯೂ ಆಗಿದ್ದಳು.
[18] ಹೀಗಿರುವುದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಸಿ, “ನಾನು ನಿನ್ನ ಕಿರಿ ಮಗಳಾಗಿರುವ ರಾಹೇಲಳಿಗೋಸ್ಕರ ನಿಮ್ಮಲ್ಲಿ ಏಳು ವರ್ಷ ಸೇವೆ ಮಾಡುತ್ತೇನೆ,” ಎಂದನು.
[19] ಅದಕ್ಕೆ ಲಾಬಾನನು, “ಅವಳನ್ನು ಬೇರೊಬ್ಬನಿಗೆ ಕೊಡುವುದಕ್ಕಿಂತ, ನಿನಗೆ ಕೊಡುವುದು ಒಳ್ಳೆಯದು. ಆದ್ದರಿಂದ ನನ್ನ ಸಂಗಡವಿರು,” ಎಂದನು.
[20] ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರ್ಷಗಳು ಅವನಿಗೆ ಸ್ವಲ್ಪದಿನಗಳಾಗಿ ತೋರಿದವು.
[21] ತರುವಾಯ ಯಾಕೋಬನು ಲಾಬಾನನಿಗೆ, “ನನ್ನ ಸೇವಾ ದಿನಗಳು ಪೂರ್ತಿಯಾದವು. ನಾನು ನನ್ನ ಹೆಂಡತಿಯೊಂದಿಗೆ ಬಾಳುವಂತೆ ಆಕೆಯನ್ನು ನನಗೆ ಕೊಡು,” ಎಂದನು.
[22] ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣ ಮಾಡಿಸಿದನು.
[23] ರಾತ್ರಿಯಾದಾಗ ಅವನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕರೆತಂದನು. ಆಗ ಅವನು ಲೇಯಳ ಬಳಿಗೆ ಬಂದನು.
[24] ಇದಲ್ಲದೆ ಲಾಬಾನನು ತನ್ನ ದಾಸಿಯಾದ ಜಿಲ್ಪಳನ್ನು, ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟನು.
[25] ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಯಾಕೋಬನು ಲಾಬಾನನಿಗೆ, “ಇದೇನು ನೀನು ನನಗೆ ಮಾಡಿದೆ? ರಾಹೇಲಳಿಗೋಸ್ಕರ ನಾನು ನಿನಗೆ ಸೇವೆಮಾಡಿದೆನಲ್ಲಾ? ಏಕೆ ನನಗೆ ಮೋಸಮಾಡಿದೆ?” ಎಂದನು.
[26] ಅದಕ್ಕೆ ಲಾಬಾನನು, “ಹಿರಿಯಳಿಗಿಂತ ಮೊದಲು ಕಿರಿಯಳನ್ನು ಮದುವೆ ಮಾಡಿಕೊಡುವುದು ನಮ್ಮ ಪದ್ಧತಿಯಲ್ಲ.
[27] ಹಿರಿಯಳೊಡನೆ ಈ ವಾರವನ್ನು ಪೂರೈಸು. ತರುವಾಯ ನೀನು ಇನ್ನು ಬೇರೆ ಏಳು ವರ್ಷಗಳವರೆಗೆ ಸೇವೆ ಮಾಡಲು ಒಪ್ಪಿಕೊಂಡರೆ, ನಾನು ಕಿರಿಯ ಮಗಳನ್ನು ನಿನಗೆ ಕೊಡುತ್ತೇನೆ,” ಎಂದನು.
[28] ಯಾಕೋಬನು ಅದರಂತೆ ಮಾಡಿ, ವಾರವನ್ನು ಪೂರೈಸಿದನು. ಆಗ ಲಾಬಾನನು ತನ್ನ ಮಗಳಾದ ರಾಹೇಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು.
[29] ಲಾಬಾನನು ತನ್ನ ಮಗಳಾದ ರಾಹೇಲಳಿಗೆ, ತನ್ನ ದಾಸಿಯಾದ ಬಿಲ್ಹಳನ್ನು ದಾಸಿಯಾಗಿ ಕೊಟ್ಟನು.
[30] ಯಾಕೋಬನು ರಾಹೇಲಳೊಂದಿಗೆ ಕೂಡಿ, ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಸಿದನು. ಇನ್ನೂ ಏಳು ವರ್ಷ ಲಾಬಾನನ ಬಳಿಯಲ್ಲಿ ಸೇವೆ ಮಾಡಿದನು.
[31] ಲೇಯಳು ತಾತ್ಸಾರಕ್ಕೆ ತುತ್ತಾಗುವಳೆಂದು ಯೆಹೋವ ದೇವರು ಕಂಡು, ಅವಳು ಗರ್ಭಿಣಿಯಾಗುವಂತೆ ಅನುಗ್ರಹಮಾಡಿದರು. ಆದರೆ ರಾಹೇಲಳು ಬಂಜೆಯಾಗಿದ್ದಳು.
[32] ಲೇಯಳು ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಿಜವಾಗಿ ಯೆಹೋವ ದೇವರು ನನ್ನ ಬಾಧೆಯನ್ನು ನೋಡಿದ್ದಾರೆ. ಆದ್ದರಿಂದ ನನ್ನ ಗಂಡನು ನನ್ನನ್ನು ಪ್ರೀತಿ ಮಾಡುವನು,” ಎಂದು ಹೇಳಿ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು.
[33] ಲೇಯಳು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಾನು ತಾತ್ಸಾರವಾಗಿದ್ದೆ ಎಂದು ಯೆಹೋವ ದೇವರು ಕೇಳಿ, ಇವನನ್ನು ನನಗೆ ಕೊಟ್ಟಿದ್ದಾರೆ,” ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು.
[34] ಮತ್ತೊಮ್ಮೆ ಲೇಯಳು ಮಗನನ್ನು ಹೆತ್ತು, “ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಏಕೆಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ,” ಎಂದು ಹೇಳಿ, ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು.
[35] ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ಈಗ ನಾನು ಯೆಹೋವ ದೇವರನ್ನು ಸ್ತುತಿಸುವೆನು,” ಎಂದು ಹೇಳಿ, ಅವನಿಗೆ ಯೆಹೂದ ಎಂದು ಹೆಸರಿಟ್ಟಳು. ಆಮೇಲೆ ಆಕೆಗೆ ಮಕ್ಕಳಾಗಲಿಲ್ಲ.