[1] ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ಯಾಕೋಬನು ತಿಳಿದಾಗ, ಅವನು ತನ್ನ ಪುತ್ರರಿಗೆ, “ನೀವು ಒಬ್ಬರನ್ನೊಬ್ಬರು ನೋಡಿಕೊಂಡು ಸುಮ್ಮನಿರುವುದೇನು?” ಎಂದನು.
[2] ಅವನು ಮುಂದುವರಿಸಿ, “ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ, ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡುಕೊಳ್ಳಿರಿ,” ಎಂದನು.
[3] ಆಗ ಯೋಸೇಫನ ಹತ್ತು ಮಂದಿ ಸಹೋದರರು ಈಜಿಪ್ಟಿನಲ್ಲಿ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಹೋದರು.
[4] ಆದರೆ ಯೋಸೇಫನ ಸಹೋದರನಾದ ಬೆನ್ಯಾಮೀನನನ್ನು ಕಳುಹಿಸಲಿಲ್ಲ. ಏಕೆಂದರೆ ಅವನಿಗೆ ಕೇಡು ಬಂದೀತೆಂದು ಹೇಳಿ, ಯಾಕೋಬನು ಅವನನ್ನು ಅವನ ಸಹೋದರರ ಸಂಗಡ ಕಳುಹಿಸಲಿಲ್ಲ.
[5] ಕಾನಾನ್ ದೇಶದಲ್ಲಿ ಬರವಿದ್ದುದರಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಬರುವವರೊಂದಿಗೆ ಇಸ್ರಾಯೇಲನ ಪುತ್ರರೂ ಬಂದರು.
[6] ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರುವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು, ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
[7] ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ, ತಿಳಿಯದವನ ಹಾಗೆ ಅನ್ಯನಂತೆ ಕಠಿಣವಾದ ಮಾತುಗಳನ್ನಾಡಿ, ಅವರಿಗೆ, “ಎಲ್ಲಿಂದ ಬಂದಿರಿ?” ಎಂದನು. ಅದಕ್ಕೆ ಅವರು, “ಆಹಾರ ಕೊಂಡುಕೊಳ್ಳುವುದಕ್ಕೆ ಕಾನಾನ್ ದೇಶದಿಂದ ಬಂದೆವು,” ಎಂದರು.
[8] ಯೋಸೇಫನು ತನ್ನ ಸಹೋದರರನ್ನು ಗುರುತಿಸಿದರೂ, ಅವರು ಅವನನ್ನು ಗುರುತಿಸಲಿಲ್ಲ.
[9] ಆಗ ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವರಿಗೆ, “ನೀವು ಗೂಢಚಾರರು, ದೇಶದ ಒಳಗುಟ್ಟನ್ನು ನೋಡುವುದಕ್ಕೆ ಬಂದಿದ್ದೀರಿ,” ಎಂದನು.
[10] ಅದಕ್ಕವರು, “ಅಲ್ಲ, ನಮ್ಮ ಒಡೆಯಾ, ನಿನ್ನ ದಾಸರಾದ ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕೆ ಬಂದಿದ್ದೇವೆ.
[11] ನಾವೆಲ್ಲರೂ ಒಬ್ಬ ಮನುಷ್ಯನ ಪುತ್ರರಾಗಿದ್ದು ಸತ್ಯವಂತರಾಗಿದ್ದೇವೆ. ಆದ್ದರಿಂದ ನಿನ್ನ ದಾಸರು ಗೂಢಚಾರರಲ್ಲ,” ಎಂದರು.
[12] ಆದರೆ ಅವನು ಅವರಿಗೆ, “ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ ಬಂದಿದ್ದೀರಿ,” ಎಂದನು.
[13] ಅದಕ್ಕವರು, “ನಿನ್ನ ದಾಸರಾದ ನಾವು ಹನ್ನೆರಡು ಸಹೋದರರು. ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಈಗ ಚಿಕ್ಕವನು ನನ್ನ ತಂದೆಯೊಂದಿಗೆ ಇದ್ದಾನೆ, ಮತ್ತೊಬ್ಬನು ಇಲ್ಲ,” ಎಂದು ಹೇಳಿದರು.
[14] ಆಗ ಯೋಸೇಫನು ಅವರಿಗೆ, “ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ!
[15] ಈಗ ನಿಮ್ಮನ್ನು ನಾನು ಪರೀಕ್ಷಿಸುತ್ತೇನೆ. ಹೇಗೆಂದರೆ, ನಿಮ್ಮ ಚಿಕ್ಕ ಸಹೋದರನು ಇಲ್ಲಿಗೆ ಬಂದ ಹೊರತು, ಫರೋಹನ ಜೀವದಾಣೆ ನೀವು ಇಲ್ಲಿಂದ ಹೋಗಬಾರದು.
[16] ನಿಮ್ಮಲ್ಲಿಂದ ಒಬ್ಬನನ್ನು ಕಳುಹಿಸಿರಿ, ಅವನು ನಿಮ್ಮ ಸಹೋದರನನ್ನು ಕರೆದುಕೊಂಡು ಬರಲಿ. ಆದರೆ ನೀವು ಸೆರೆಮನೆಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ, ಇಲ್ಲವೋ ಎಂದು ನಿಮ್ಮ ಮಾತುಗಳನ್ನು ಪರೀಕ್ಷಿಸುತ್ತೇನೆ. ಇಲ್ಲದಿದ್ದರೆ, ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು,” ಎಂದು ಹೇಳಿದನು.
[17] ಯೋಸೇಫನು ಎಲ್ಲರನ್ನು ಒಟ್ಟಿಗೆ ಮೂರು ದಿನಗಳು ಸೆರೆಯಲ್ಲಿಟ್ಟನು.
[18] ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ, “ನಾನು ದೇವರಿಗೆ ಭಯಪಡುವವನಾಗಿದ್ದೇನೆ.
[19] ನೀವು ಸತ್ಯವಂತರಾಗಿದ್ದರೆ, ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿತನಾಗಿರಲಿ. ಆದರೆ ನೀವು ಎಲ್ಲರೂ ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ.
[20] ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ಕರೆತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು. ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಿದರು.
[21] ಆಗ ಅವರು, “ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ, ಅವನ ಪ್ರಾಣಸಂಕಟವನ್ನು ಕಂಡರೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು,” ಎಂದು ಮಾತಾಡಿಕೊಂಡರು.
[22] ಆಗ ರೂಬೇನನು ಅವರಿಗೆ ಉತ್ತರವಾಗಿ, “ಹುಡುಗನಿಗೆ ಏನೂ ಕೇಡು ಮಾಡಬೇಡಿರಿ, ಎಂದು ನಾನು ನಿಮಗೆ ಹೇಳಿದರೂ ನೀವು ಕೇಳಲಿಲ್ಲ. ಆದ್ದರಿಂದ ಅವನಿಗಾದ ಪ್ರಾಣಹಾನಿಯ ವಿಷಯದಲ್ಲಿ ಈಗ ನಾವು ಲೆಕ್ಕ ಒಪ್ಪಿಸುತ್ತಿದ್ದೇವೆ,” ಎಂದನು.
[23] ಆದರೆ ಯೋಸೇಫನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಿದ್ದನು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಏಕೆಂದರೆ ಯೋಸೇಫನು ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದನು.
[24] ಅನಂತರ ಯೋಸೇಫನು ಅವರ ಬಳಿಯಿಂದ ಹೊರಟುಹೋಗಿ ಅತ್ತನು. ಮತ್ತೆ ಅವರ ಬಳಿಗೆ ಬಂದು, ಅವರ ಸಂಗಡ ಮಾತನಾಡಿ ಅವರೊಂದಿಗೆ ಸಿಮೆಯೋನನನ್ನು ತಂದು, ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿದನು.
[25] ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸಬೇಕೆಂದೂ, ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರುಗಿ ಇಡಬೇಕೆಂದೂ, ಪ್ರಯಾಣಕ್ಕಾಗಿ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು.
[26] ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು, ಅಲ್ಲಿಂದ ಹೊರಟು ಹೋದರು.
[27] ಆಗ ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವುದಕ್ಕೆ ವಸತಿಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ, ಚೀಲದ ಬಾಯಲ್ಲಿಟ್ಟಿದ್ದ ತನ್ನ ಹಣವನ್ನು ಕಂಡನು.
[28] ಅವನು ತನ್ನ ಸಹೋದರರಿಗೆ, “ನನ್ನ ಹಣವನ್ನು ಹಿಂದಕ್ಕೆ ಕೊಟ್ಟಿದ್ದಾರೆ, ಅದು ನನ್ನ ಚೀಲದಲ್ಲಿದೆ,” ಎಂದು ಹೇಳಿದ. ಅವರಿಗೆ ಹೃದಯ ಕಂಪನವಾದಂತಾಗಿ ಹೆದರಿ ಒಬ್ಬರಿಗೊಬ್ಬರು, “ದೇವರು ನಮಗೆ ಮಾಡಿದ್ದೇನು?” ಎಂದರು.
[29] ಅವರು ಕಾನಾನ್ ದೇಶದಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದಾಗ, ತಮಗೆ ಸಂಭವಿಸಿದ್ದೆಲ್ಲವನ್ನೂ ಅವನಿಗೆ ತಿಳಿಸಿದರು.
[30] ದೇಶದ ಅಧಿಪತಿಯಾಗಿರುವ ಮನುಷ್ಯನು ನಮ್ಮ ಸಂಗಡ ಕಠಿಣವಾಗಿ ಮಾತನಾಡಿ, ದೇಶದ ಗೂಢಚಾರರನ್ನಾಗಿ ನಮ್ಮನ್ನು ಎಣಿಸಿದನು.
[31] ನಾವು ಅವನಿಗೆ, “ನಾವು ಗೂಢಚಾರರಲ್ಲ, ಸತ್ಯವಂತರೇ.
[32] ನಾವು ಹನ್ನೆರಡು ಮಂದಿ ಸಹೋದರರಾಗಿದ್ದು, ಒಂದೇ ತಂದೆಯ ಪುತ್ರರಾಗಿದ್ದೇವೆ, ಒಬ್ಬನು ಇಲ್ಲ, ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್ ದೇಶದಲ್ಲಿ ಇದ್ದಾನೆ,” ಎಂದೆವು.
[33] “ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು, ‘ನೀವು ಯಥಾರ್ಥರೆಂದು ನಾನು ಇದರಲ್ಲಿ ತಿಳಿದುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು, ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತೆಗೆದುಕೊಂಡು ಹೋಗಿರಿ.
[34] ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ. ಆಗ ನೀವು ಗೂಢಚಾರರಲ್ಲವೆಂದೂ, ಯಥಾರ್ಥರೆಂದೂ ತಿಳಿದುಕೊಂಡು, ನಿಮ್ಮ ಸಹೋದರರನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು,’ ಎಂದು ಹೇಳಿದನು,” ಎಂದರು.
[35] ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ, ಅವನವನ ಹಣದ ಗಂಟು, ಅವನವನ ಚೀಲದಲ್ಲಿ ಇತ್ತು. ಅವರೂ, ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು.
[36] ಆಗ ಅವರ ತಂದೆ ಯಾಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗುವುದರಲ್ಲಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ,” ಎಂದನು.
[37] ರೂಬೇನನು ತನ್ನ ತಂದೆಗೆ, “ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ನನ್ನ ಇಬ್ಬರು ಪುತ್ರರನ್ನು ಕೊಂದುಬಿಡು. ನೀನು ಬೆನ್ಯಾಮೀನನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರುಗಿ ತರುವೆನು,” ಎಂದನು.
[38] ಆದರೆ ಯಾಕೋಬನು, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು, ಅವನ ಅಣ್ಣ ಸತ್ತು ಹೋಗಿ, ಇವನೊಬ್ಬನೇ ಉಳಿದಿದ್ದಾನೆ. ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ, ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಸುವಿರಿ,” ಎಂದನು.