Skip to content
Opens in a new window
Listen to this chapter • 4:10

[1] ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಮನುಷ್ಯರ ಸಂಗಡ ಬರುತ್ತಿದ್ದನು. ಆಗ ಅವನು ಲೇಯಳಿಗೂ, ರಾಹೇಲಳಿಗೂ, ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ, ಅವರನ್ನು ಬೇರೆ ಬೇರೆ ಮಾಡಿದನು.

[2] ದಾಸಿಯರನ್ನೂ, ಅವರ ಮಕ್ಕಳನ್ನೂ ಮುಂದುಗಡೆಯಲ್ಲಿಯೂ; ಅವರ ಹಿಂದೆ ಲೇಯಳನ್ನೂ, ಆಕೆಯ ಮಕ್ಕಳನ್ನೂ; ಕಟ್ಟಕಡೆಯಲ್ಲಿ ರಾಹೇಲಳನ್ನೂ, ಯೋಸೇಫನನ್ನೂ ಇರಿಸಿದನು.

[3] ತಾನೇ ಅವರ ಮುಂದಾಗಿ ಹೋಗಿ ತನ್ನ ಸಹೋದರನ ಬಳಿಗೆ ಬರುವವರೆಗೆ ಏಳು ಸಾರಿ ನೆಲದವರೆಗೆ ಬಗ್ಗಿದನು.

[4] ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು, ಅವನನ್ನು ಅಪ್ಪಿಕೊಂಡು, ಅವನ ಕೊರಳಿನ ಮೇಲೆ ಬಿದ್ದು, ಅವನಿಗೆ ಮುದ್ದಿಟ್ಟನು. ಅವರಿಬ್ಬರೂ ಅತ್ತರು.

[5] ಆಗ ಏಸಾವನು ತನ್ನ ದೃಷ್ಟಿ ಹರಿಸಿ, ಆ ಸ್ತ್ರೀಯರನ್ನೂ, ಮಕ್ಕಳನ್ನೂ ನೋಡಿ, “ನಿನ್ನ ಜೊತೆಯಲ್ಲಿರುವ ಇವರು ಯಾರು?” ಎಂದು ಕೇಳಿದನು. ಅದಕ್ಕವನು, “ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು,” ಎಂದನು.

[6] ಆಗ ದಾಸಿಯರೂ, ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು.

[7] ಲೇಯಳು ಸಹ ತನ್ನ ಮಕ್ಕಳೊಂದಿಗೆ ಹತ್ತಿರ ಬಂದು ಅಡ್ಡಬಿದ್ದಳು. ತರುವಾಯ ಯೋಸೇಫನೂ, ರಾಹೇಲಳೂ ಬಂದು ಅಡ್ಡಬಿದ್ದರು.

[8] ಆಗ ಏಸಾವನು, “ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆಗಳೆಲ್ಲಾ ಏತಕ್ಕೆ?” ಎಂದು ಕೇಳಿದನು. ಯಾಕೋಬನು, “ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕುವುದಕ್ಕೋಸ್ಕರ,” ಎಂದನು.

[9] ಅದಕ್ಕೆ ಏಸಾವನು, “ನನ್ನ ಸಹೋದರನೇ, ನನಗೆ ಸಾಕಷ್ಟು ಇದೆ. ನಿನಗೆ ಇದ್ದದ್ದು ನೀನೇ ಇಟ್ಟುಕೋ,” ಎಂದನು.

[10] ಆಗ ಯಾಕೋಬನು, “ಹಾಗಲ್ಲ, ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದಿದ್ದೆನಾದರೆ, ನನ್ನ ಕಾಣಿಕೆಯನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು. ಏಕೆಂದರೆ ನಾನು ದೇವರ ಮುಖವನ್ನು ಕಂಡಂತೆ, ನಿನ್ನ ಮುಖವನ್ನು ಕಂಡದ್ದಕ್ಕಾಗಿಯೂ, ನೀನು ನನ್ನನ್ನು ಮೆಚ್ಚಿದ್ದಕ್ಕಾಗಿಯೂ,

[11] ನಿನಗೋಸ್ಕರ ತಂದಿರುವ ನನ್ನ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡುತ್ತೇನೆ. ದೇವರು ನನ್ನೊಂದಿಗೆ ಕೃಪೆಯಿಂದ ವರ್ತಿಸಿದ್ದರಿಂದ ನನಗೆ ಬೇಕಾದಷ್ಟು ಇವೆ,” ಎಂದು ಹೇಳಿ, ಅವನನ್ನು ಬಲವಂತ ಮಾಡಿದ್ದರಿಂದ ಏಸಾವನು ಅದನ್ನು ತೆಗೆದುಕೊಂಡನು.

[12] ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ನಿನ್ನ ಮುಂದೆ ಹೋಗುವೆನು,” ಎಂದನು.

[13] ಅದಕ್ಕೆ ಯಾಕೋಬನು ಅವನಿಗೆ, “ಮಕ್ಕಳು ಎಳೆಯ ಪ್ರಾಯದವರಿದ್ದಾರೆ, ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ನನ್ನ ಒಡೆಯನಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡೆಸಿದರೆ, ಎಲ್ಲಾ ಮಂದೆಯು ಸತ್ತು ಹೋದಾವು.

[14] ಆದ್ದರಿಂದ ನನ್ನ ಒಡೆಯನೇ, ನೀನು ನಿನ್ನ ಸೇವಕನಿಗಿಂತಲೂ ಮುಂಚೆ ಹೋಗಬಹುದು. ನಾನು ನನ್ನ ಒಡೆಯನ ಬಳಿಗೆ ಸೇಯೀರಿಗೆ ಬರುವವರೆಗೆ, ನನ್ನ ಮುಂದಿರುವ ಮಂದೆಗಳ ನಡಿಗೆಗೂ, ಮಕ್ಕಳ ನಡಿಗೆಗೂ ತಕ್ಕ ಹಾಗೆ ಮೆಲ್ಲಗೆ ನಡೆದು ಬರುವೆನು,” ಎಂದನು.

[15] ಅದಕ್ಕೆ ಏಸಾವನು, “ನನ್ನ ಬಳಿಯಲ್ಲಿರುವ ಜನರಲ್ಲಿ ಕೆಲವರನ್ನು ನಿನ್ನ ಬಳಿಯಲ್ಲಿ ಬಿಟ್ಟು ಹೋಗುತ್ತೇನೆ,” ಅನ್ನಲು. ಯಾಕೋಬನು, “ಅದರ ಅಗತ್ಯವೇನು? ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ,” ಎಂದನು.

[16] ಹೀಗೆ ಏಸಾವನು ಆ ದಿನವೇ ತನ್ನ ಮಾರ್ಗವಾಗಿ ಸೇಯೀರಿಗೆ ಹಿಂದಿರುಗಿ ಹೋದನು.

[17] ಯಾಕೋಬನು ಪ್ರಯಾಣಮಾಡಿ, ಸುಕ್ಕೋತಿಗೆ ಹೋಗಿ, ಮನೆಯನ್ನು ಕಟ್ಟಿಸಿಕೊಂಡನು. ಇದಲ್ಲದೆ ತನ್ನ ಪಶುಗಳಿಗೆ ಹಟ್ಟಿಗಳನ್ನು ಮಾಡಿಸಿದನು. ಆದ್ದರಿಂದ ಆ ಸ್ಥಳಕ್ಕೆ ಸುಕ್ಕೋತ್ ಎಂದು ಹೆಸರಾಯಿತು.

[18] ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸೇರಿ, ಅದರ ಮುಂದೆ ತನ್ನ ಗುಡಾರಗಳನ್ನು ಹಾಕಿದನು.

[19] ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡುಕೊಂಡನು.

[20] ಅಲ್ಲಿ ಬಲಿಪೀಠವನ್ನು ಕಟ್ಟಿಸಿ ಅದಕ್ಕೆ, ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.

ಆದಿಕಾಂಡ — Chapters