Skip to content
Opens in a new window
Listen to this chapter • 6:25

[1] ಆಗ ಯಾಕೋಬನು ತನ್ನ ಪುತ್ರರನ್ನು ಕರೆಯಿಸಿ ಅವರಿಗೆ, “ನೀವೆಲ್ಲರೂ ಕೂಡಿಬನ್ನಿರಿ. ಅಂತ್ಯ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ.

[2] “ಯಾಕೋಬನ ಪುತ್ರರೇ, ನೀವು ಒಟ್ಟಿಗೆ ಕೂಡಿಕೊಂಡು ಕೇಳಿರಿ, ನಿಮ್ಮ ತಂದೆ ಇಸ್ರಾಯೇಲನ ಮಾತಿಗೆ ಕಿವಿಗೊಡಿರಿ.

[3] “ರೂಬೇನನೇ, ನೀನು ನನ್ನ ಜೇಷ್ಠಪುತ್ರನು. ನನ್ನ ಶಕ್ತಿ, ನನ್ನ ಬಲದ ಸಂಕೇತವೂ, ಗೌರವದಲ್ಲಿ ಶಕ್ತಿಯಲ್ಲಿ ಮಿತಿಮೀರಿದವನೂ ಆಗಿರುವೆ.

[4] ನೀರಿನಂತೆ ಚಂಚಲನಾಗಿದ್ದು, ನೀನು ಶ್ರೇಷ್ಠನಾಗುವುದಿಲ್ಲ. ಏಕೆಂದರೆ ನಿನ್ನ ತಂದೆಯ ಮಂಚವನ್ನೇರಿ ಹೊಲೆಮಾಡಿದೆ, ನನ್ನ ಹಾಸಿಗೆಯನ್ನು ಏರಿದೆ.

[5] “ಸಿಮೆಯೋನನೂ ಲೇವಿಯೂ ಸಹೋದರರು ಹಿಂಸಾಚಾರದ ಆಯುಧಗಳು.

[6] ನನ್ನ ಮನವೇ, ಅವರ ಆಲೋಚನೆಗೆ ಒಳಪಡಬೇಡ. ನನ್ನ ಪ್ರಾಣವೇ, ಅವರ ಕೂಟಗಳಲ್ಲಿ ಸೇರಬೇಡ. ಅವರು ತಮ್ಮ ಕೋಪದಲ್ಲಿ ಮನುಷ್ಯರನ್ನು ಕೊಂದರು, ಮದದಿಂದ ಎತ್ತುಗಳನ್ನು ಊನಪಡಿಸಿದರು.

[7] ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದ್ದು, ಅದಕ್ಕೆ ಶಾಪಗ್ರಸ್ತವಾಗಲಿ. ಯಾಕೋಬನ ಕುಟುಂಬದಲ್ಲಿ ಅವರನ್ನು ವಿಭಾಗಿಸಿ ಇಸ್ರಾಯೇಲಿನಲ್ಲಿ ಅವರನ್ನು ಚದರಿಸಿಬಿಡುವೆನು.

[8] “ಯೆಹೂದನೇ, ನಿನ್ನ ಸಹೋದರರು ನಿನ್ನನ್ನು ಹೊಗಳುವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. ನಿನ್ನ ತಂದೆಯ ಮಕ್ಕಳು ನಿನಗೆ ಅಡ್ಡಬೀಳುವರು.

[9] ಯೆಹೂದನು ಸಿಂಹದ ಮರಿಯಾಗಿದ್ದಾನೆ. ನನ್ನ ಮಗನೇ, ಬೇಟೆಹಿಡಿದು ಮೇಲಕ್ಕೆ ಬಂದೆ. ಅವನು ಸಿಂಹದಂತೆಯೂ ಪ್ರಾಯದ ಸಿಂಹದ ಹಾಗೆಯೂ ಮುದುರಿಕೊಂಡು ಮಲಗಿದ್ದಾನೆ. ಅವನನ್ನು ಕೆಣಕುವವರು ಯಾರು?

[10] ರಾಜದಂಡವನ್ನು ಹಿಡಿಯತಕ್ಕವನು ಶೀಲೋವಿನಿಂದ ಬರುವ ತನಕ, ಯೆಹೂದನ ಕೈಯಿಂದ ರಾಜದಂಡವಾಗಲೀ, ಆಡಳಿತಗಾರನ ಅಧಿಕಾರವಾಗಲೀ ಬಿಟ್ಟು ಹೋಗುವುದಿಲ್ಲ. ಎಲ್ಲಾ ಜನಾಂಗಗಳು ಅವನಿಗೆ ವಿಧೇಯವಾಗುವುವು.

[11] ಅವನು ತನ್ನ ವಾಹನ ಪಶುವನ್ನು ದ್ರಾಕ್ಷಾಲತೆಗೆ ಕಟ್ಟುವನು. ರಾಜದ್ರಾಕ್ಷೆಗೆ ತನ್ನ ಕತ್ತೆಯನ್ನು ಬಿಗಿಯುವನು. ದ್ರಾಕ್ಷಾರಸದಲ್ಲಿ ತನ್ನ ಬಟ್ಟೆ ಒಗೆಯುವನು, ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು.

[12] ದ್ರಾಕ್ಷಾರಸದಿಂದ ಅವನ ಕಣ್ಣುಗಳು ಕೆಂಪಾಗಿರುವವು, ಹಾಲಿನಿಂದ ಅವನ ಹಲ್ಲುಗಳು ಬಿಳುಪಾಗಿರುವವು.

[13] “ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು, ಅವನಿಗೆ ಹಡಗುಗಳು ಸೇರುವ ರೇವೂ ಇರುವುದು. ಅವನ ಮೇರೆಯು ಸೀದೋನಿಗೆ ಮುಟ್ಟುವುದು.

[14] “ಇಸ್ಸಾಕಾರನು ಕುರಿಯ ಹಟ್ಟಿಗಳ ನಡುವೆ ಮಲಗಿಕೊಳ್ಳುವ ಬಲವುಳ್ಳ ಕತ್ತೆಯಾಗಿದ್ದಾನೆ.

[15] ವಿಶ್ರಾಂತಿಯು ಒಳ್ಳೆಯದೆಂದೂ ದೇಶವು ರಮ್ಯವೆಂದೂ ನೋಡಿ ಹೊರೆ ಹೊರುವುದಕ್ಕೆ ತನ್ನ ಹೆಗಲನ್ನು ಬಗ್ಗಿಸಿ ಬಿಟ್ಟಿಯ ಕೆಲಸ ಮಾಡುವನು.

[16] “ದಾನನು ಇಸ್ರಾಯೇಲನ ಗೋತ್ರಗಳಲ್ಲಿ ಒಂದು ಗೋತ್ರವಾಗಿ ತನ್ನ ಜನರಿಗೆ ನ್ಯಾಯತೀರಿಸುವನು.

[17] ದಾನನು ಮಾರ್ಗದಲ್ಲಿರುವ ಸರ್ಪವೂ ದಾರಿಯಲ್ಲಿರುವ ಹಾವೂ ಆಗಿರುವನು. ಕುದುರೆಯ ಹಿಮ್ಮಡಿಯನ್ನು ಕಚ್ಚಿದರೆ, ಹತ್ತಿದವನು ಬೋರಲು ಬೀಳುವನು.

[18] “ಯೆಹೋವ ದೇವರೇ, ನಿಮ್ಮ ವಿಮೋಚನೆಗಾಗಿ ಕಾಯುತ್ತಿದ್ದೇನೆ.

[19] “ಗಾದನ ಮೇಲೆ ಸೈನ್ಯವು ದಾಳಿಮಾಡುವುದು, ಕೊನೆಗೆ ಅವನೇ ಅವರನ್ನು ಓಡಿಸಿಬಿಡುವನು.

[20] “ಆಶೇರನ ಆಹಾರವು ಕೊಬ್ಬಿದ ಆಹಾರವು. ಅವನು ಅರಸನಿಗೆ ಸವಿಯೂಟವನ್ನು ಕೊಡುವನು.

[21] “ನಫ್ತಾಲಿ ಬಿಡುಗಡೆ ಹೊಂದಿದ ಜಿಂಕೆ, ಅವನು ಮಾತುಗಳು ಸುಂದರ ಮಕ್ಕಳ ಮಾತುಗಳಂತೆ.

[22] “ಯೋಸೇಫನು ಫಲಭರಿತವಾದ ದ್ರಾಕ್ಷಿಬಳ್ಳಿ ಕಾಲುವೆಗಳ ಬಳಿಯಲ್ಲಿರುವ ಫಲಭರಿತ ದ್ರಾಕ್ಷಿಬಳ್ಳಿ, ಅದರ ಕೊಂಬೆಗಳು ಗೋಡೆಗಳನ್ನೇರುತ್ತವೆ.

[23] ಸಿಟ್ಟಿನಿಂದ ಬಿಲ್ಲುಗಾರರು ಅವನ ಮೇಲೆ ಬೀಳುವರು. ವಿರೋಧದಿಂದ ಅವನ ಮೇಲೆ ಬಾಣಗಳನ್ನು ಎಸೆಯುವರು.

[24] ಆದರೆ ಅವನ ಬಿಲ್ಲು ಸ್ಥಿರವಾಗಿ ನಿಲ್ಲುವುದು. ಅವನ ಬಲವಾದ ತೋಳುಗಳು ಚುರುಕಾಗಿ ನಿಂತವು. ಇದಕ್ಕೆ ಕಾರಣ ಯಾಕೋಬನಿಗೆ ಸರ್ವಶಕ್ತರಾಗಿರುವ ದೇವರ ಹಸ್ತವೇ; ಇದಕ್ಕೆ ಕಾರಣ ಇಸ್ರಾಯೇಲನ ಬಂಡೆಯಾಗಿರುವ ಕುರುಬ.

[25] ಇದಕ್ಕೆ ಕಾರಣ ನಿನಗೆ ಸಹಾಯ ಮಾಡುವ ನಿನ್ನ ಪಿತೃಗಳ ದೇವರು; ನಿನ್ನನ್ನು ಸರ್ವಶಕ್ತರಾದ ದೇವರು ಆಶೀರ್ವದಿಸಲಿ. ಆ ಆಶೀರ್ವಾದಗಳು ಪರಲೋಕದವುಗಳು. ಆ ಆಶೀರ್ವಾದಗಳು ಕೆಳಗಿನಾಳದಲ್ಲಿರುವವುಗಳು. ಅವು ಎದೆಯ ಹಾಗೂ ಗರ್ಭದ ಆಶೀರ್ವಾದಗಳು.

[26] ಪುರಾತನ ಪರ್ವತಗಳ ಆಶೀರ್ವಾದಗಳಿಗಿಂತ ನಿನ್ನ ತಂದೆಯ ಆಶೀರ್ವಾದಗಳು ಶ್ರೇಷ್ಠವಾದವುಗಳು. ಅವು ಪುರಾತನ ಶಿಖರಗಳ ಐಶ್ವರ್ಯಕ್ಕಿಂತ ಹೆಚ್ಚಿನವುಗಳು. ಇವೆಲ್ಲವೂ ಯೋಸೇಫನ ತಲೆಯ ಮೇಲೆ ಅಂದರೆ, ತನ್ನ ಸಹೋದರರಲ್ಲಿ ರಾಜಕುಮಾರನಾದವನ ಹಣೆಯ ಮೇಲಿರಲಿ.

[27] “ಬೆನ್ಯಾಮೀನನು ಕ್ರೂರವಾದ ತೋಳದಂತಿದ್ದಾನೆ. ಬೆಳಿಗ್ಗೆ ತಿನ್ನುತ್ತಾನೆ, ಸಂಜೆ ಕೊಳ್ಳೆಯನ್ನು ಹಂಚಿಕೊಳ್ಳುತ್ತಾನೆ.”

[28] ಇವರೆಲ್ಲಾ ಇಸ್ರಾಯೇಲಿನ ಹನ್ನೆರಡು ಗೋತ್ರಗಳು. ಅವರ ತಂದೆ ಅವರಿಗೆ ಹೇಳಿದ್ದೂ ಇದೇ. ಅವನು ಒಬ್ಬೊಬ್ಬನನ್ನೂ ಅವನಿಗೆ ತಕ್ಕ ಆಶೀರ್ವಾದದ ಪ್ರಕಾರ ಆಶೀರ್ವದಿಸಿದನು.

[29] ಅವನು ಅವರಿಗೆ ಆಜ್ಞಾಪಿಸಿ ಹೇಳಿದ್ದೇನೆಂದರೆ, “ನಾನು ನನ್ನ ಜನರೊಂದಿಗೆ ಸೇರಿಕೊಳ್ಳುತ್ತೇನೆ. ನನ್ನ ಪಿತೃಗಳ ಸಂಗಡ ಹಿತ್ತಿಯನಾದ ಎಫ್ರೋನನ ಹೊಲದಲ್ಲಿರುವ ಗವಿಯಲ್ಲಿ

[30] ಕಾನಾನ್ ದೇಶದಲ್ಲಿ ಮಮ್ರೆಗೆ ಎದುರಾಗಿ ಮಕ್ಪೇಲ ಹೊಲದಲ್ಲಿರುವಂಥ ಅಬ್ರಹಾಮನು, ಹೊಲದ ಸಂಗಡ ಸ್ವಂತ ಸಮಾಧಿಗೋಸ್ಕರ ಹಿತ್ತಿಯನಾದ ಎಫ್ರೋನನಿಂದ ಕೊಂಡುಕೊಂಡಂಥ ಗವಿಯಲ್ಲಿ ನನ್ನನ್ನು ಹೂಳಿರಿ.

[31] ಅಲ್ಲಿ ಅಬ್ರಹಾಮನನ್ನೂ, ಅವನ ಹೆಂಡತಿ ಸಾರಳನ್ನೂ ಹೂಳಿದರು. ಅಲ್ಲಿ ಇಸಾಕನನ್ನೂ, ಅವನ ಹೆಂಡತಿ ರೆಬೆಕ್ಕಳನ್ನೂ ಹೂಳಿಟ್ಟರು. ಅಲ್ಲಿ ನಾನು ಲೇಯಳನ್ನೂ ಹೂಳಿದೆನು.

[32] ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಕೊಂಡುಕೊಂಡದ್ದು,” ಎಂದನು.

[33] ಯಾಕೋಬನು ತನ್ನ ಪುತ್ರರಿಗೆ ಆಜ್ಞಾಪಿಸಿದ ತರುವಾಯ, ತನ್ನ ಕಾಲುಗಳನ್ನು ಮಂಚದ ಮೇಲೆ ಮುದುರಿಕೊಂಡನು. ಅವನು ಪ್ರಾಣ ಬಿಟ್ಟು ತನ್ನ ಪಿತೃಗಳೊಂದಿಗೆ ಸೇರಿದನು.

ಆದಿಕಾಂಡ — Chapters