Skip to content
Opens in a new window
Listen to this chapter • 7:28

[1] ಯಾಕೋಬನು ತನ್ನ ತಂದೆ ಪ್ರವಾಸಿಯಾಗಿದ್ದ ಕಾನಾನ್ ದೇಶದಲ್ಲಿ ವಾಸವಾಗಿದ್ದನು.

[2] ಇದು ಯಾಕೋಬನ ವಂಶದವರ ಚರಿತ್ರೆ: ಯೋಸೇಫನು ಹದಿನೇಳು ವರ್ಷದವನಾಗಿದ್ದಾಗ, ತನ್ನ ಸಹೋದರರ ಸಂಗಡ ಅಂದರೆ, ತನ್ನ ತಂದೆಯ ಹೆಂಡತಿಯರಾಗಿದ್ದ ಬಿಲ್ಹಳ ಮತ್ತು ಜಿಲ್ಪಳ ಮಕ್ಕಳ ಸಂಗಡ ಕುರಿಮಂದೆಗಳನ್ನು ಕಾಯುತ್ತಿದ್ದನು. ಯೋಸೇಫನು ಅವರ ಕೆಟ್ಟತನದ ಸುದ್ದಿಯನ್ನು ತನ್ನ ತಂದೆಗೆ ತಿಳಿಸುತ್ತಿದ್ದನು.

[3] ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನ ವಯಸ್ಸಿನಲ್ಲಿ ಹುಟ್ಟಿದ ಮಗನಾಗಿದ್ದುದರಿಂದ ಅವನು ತನ್ನ ಎಲ್ಲಾ ಮಕ್ಕಳಿಗಿಂತ ಅವನನ್ನು ಹೆಚ್ಚು ಪ್ರೀತಿಮಾಡಿ, ಅವನಿಗೆ ಅನೇಕ ಬಣ್ಣಗಳ ಅಂಗಿಯನ್ನು ಹೊಲಿಸಿಕೊಟ್ಟನು.

[4] ತಮ್ಮ ತಂದೆಯು ಅವನನ್ನು ಎಲ್ಲಾ ಸಹೋದರರಿಗಿಂತ ಹೆಚ್ಚು ಪ್ರೀತಿಮಾಡುತ್ತಿರುವುದನ್ನು ಅವನ ಸಹೋದರರು ಕಂಡು, ಅವನನ್ನು ದ್ವೇಷಿಸಿ, ಅವನ ಸಂಗಡ ಸಮಾಧಾನದಿಂದ ಮಾತಾಡದೆಹೋದರು.

[5] ಯೋಸೇಫನು ಒಂದು ಕನಸನ್ನು ಕಂಡು ತನ್ನ ಸಹೋದರರಿಗೆ ತಿಳಿಸಿದಾಗ, ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು.

[6] ಅವನು ಅವರಿಗೆ, “ನಾನು ಕಂಡ ಈ ಕನಸನ್ನು ಹೇಳುತ್ತೇನೆ ಕೇಳಿರಿ.

[7] ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು. ನನ್ನ ಸಿವುಡು ಎದ್ದುನಿಂತಿತು. ಆಗ ನಿಮ್ಮ ಸಿವುಡುಗಳು ತಿರುಗಿ ನನ್ನ ಸಿವುಡಿಗೆ ಅಡ್ಡಬಿದ್ದವು,” ಎಂದನು.

[8] ಆಗ ಅವನ ಸಹೋದರರು ಅವನಿಗೆ, “ನೀನು ನಮ್ಮನ್ನು ನಿಶ್ಚಯವಾಗಿಯೂ ಆಳುವೆಯೋ? ನಿಜವಾಗಿ ನಮ್ಮ ಮೇಲೆ ದೊರೆತನ ಮಾಡುವಿಯೋ?” ಎಂದು ಹೇಳಿ, ಅವನ ಕನಸು ಮತ್ತು ಅವನ ಮಾತುಗಳಿಗೆ ಅವನನ್ನು ಮತ್ತಷ್ಟೂ ದ್ವೇಷಿಸಿದರು.

[9] ಇದಲ್ಲದೆ ಅವನು ಇನ್ನೊಂದು ಕನಸನ್ನು ಕಂಡು ತನ್ನ ಸಹೋದರರಿಗೆ, “ಇನ್ನೊಂದು ಕನಸನ್ನು ಕಂಡಿದ್ದೇನೆ. ಸೂರ್ಯನೂ ಚಂದ್ರನೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು,” ಎಂದನು.

[10] ಅವನು ತನ್ನ ತಂದೆಗೂ ತನ್ನ ಸಹೋದರರಿಗೂ ತಿಳಿಸಿದಾಗ, ಅವನ ತಂದೆಯು ಅವನನ್ನು ಗದರಿಸಿ, “ನೀನು ಕಂಡ ಈ ಕನಸು ಏನು? ನಾನು, ನಿನ್ನ ತಾಯಿ, ನಿನ್ನ ಸಹೋದರರೂ ನಿಜವಾಗಿ ನಿನ್ನ ಮುಂದೆ ಅಡ್ಡ ಬೀಳುವುದಕ್ಕೆ ಬರಬೇಕೋ?” ಎಂದನು.

[11] ಹೀಗೆ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.

[12] ಅವನ ಸಹೋದರರು ಶೆಕೆಮಿನಲ್ಲಿ ತಮ್ಮ ತಂದೆಯ ಮಂದೆಯನ್ನು ಮೇಯಿಸುವುದಕ್ಕೆ ಹೋದರು.

[13] ಆದ್ದರಿಂದ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಸಹೋದರರು ಶೆಕೆಮಿನಲ್ಲಿ ಮಂದೆಯನ್ನು ಮೇಯಿಸುತ್ತಾರಲ್ಲಾ. ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಹೋಗು,” ಎಂದನು. ಅದಕ್ಕೆ ಅವನು, “ಆಗಲಿ ಹೋಗುತ್ತೇನೆ,” ಎಂದನು.

[14] ಯಾಕೋಬನು ಅವನಿಗೆ, “ಹೋಗಿ ನಿನ್ನ ಸಹೋದರರ ಕ್ಷೇಮಸಮಾಚಾರವನ್ನೂ, ಮಂದೆಗಳ ಕ್ಷೇಮಸಮಾಚಾರವನ್ನೂ ತಿಳಿದುಕೊಂಡು ಬಂದು ನನಗೆ ತಿಳಿಸು,” ಎಂದು ಹೇಳಿ ಹೆಬ್ರೋನ್ ಕಣಿವೆಯಿಂದ ಕಳುಹಿಸಿದನು. ಯೋಸೇಫನು ಶೆಕೆಮಿಗೆ ಬಂದಾಗ,

[15] ಒಬ್ಬಾನೊಬ್ಬ ಮನುಷ್ಯನು ಯೋಸೇಫನು ಹೊಲದಲ್ಲಿ ಅಲೆದಾಡುವುದನ್ನು ಕಂಡು ಅವನಿಗೆ, “ನೀನು ಏನು ಹುಡುಕುತ್ತಿದ್ದೀ?” ಎಂದು ಕೇಳಿದನು.

[16] ಅದಕ್ಕೆ ಅವನು, “ನನ್ನ ಸಹೋದರರನ್ನು ಹುಡುಕುತ್ತಿದ್ದೇನೆ, ಅವರು ತಮ್ಮ ಮಂದೆಗಳನ್ನು ಎಲ್ಲಿ ಮೇಯಿಸುತ್ತಿದ್ದಾರೆಂದು ದಯವಿಟ್ಟು ನನಗೆ ಹೇಳು,” ಎಂದನು.

[17] ಆ ಮನುಷ್ಯನು, “ಅವರು ಇಲ್ಲಿಂದ ಹೊರಟು ಹೋದರು. ಅವರು, ‘ನಾವು ದೋತಾನಿಗೆ ಹೋಗೋಣ,’ ಎಂದು ಮಾತಾಡುವದನ್ನು ನಾನು ಕೇಳಿಸಿಕೊಂಡೆ,” ಎಂದನು. ಆಗ ಯೋಸೇಫನು ತನ್ನ ಸಹೋದರರನ್ನು ಹುಡುಕಿಕೊಂಡು ಹೋಗಿ ದೋತಾನಿನಲ್ಲಿ ಅವರನ್ನು ಕಂಡುಕೊಂಡನು.

[18] ಅವರು ದೂರದಿಂದ ಅವನನ್ನು ನೋಡಿದಾಗ, ಅವನು ಸಮೀಪಕ್ಕೆ ಬರುವ ಮುಂಚೆಯೇ ಅವನನ್ನು ಕೊಂದುಹಾಕಬೇಕೆಂದು ಅವನಿಗೆ ವಿರೋಧವಾಗಿ ಒಳಸಂಚು ಮಾಡಿಕೊಂಡರು.

[19] ಅವರು, “ಇಗೋ, ಈ ಕನಸುಗಾರ ಬರುತ್ತಿದ್ದಾನೆ,

[20] ಬನ್ನಿರಿ, ಈಗ ಅವನನ್ನು ಕೊಂದು, ಯಾವುದೋ ಒಂದು ಕಾಡುಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ. ತರುವಾಯ ಅವನ ಕನಸುಗಳು ಏನಾಗುವವೋ ನೋಡೋಣ,” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.

[21] ಆದರೆ ರೂಬೇನನು ಅದನ್ನು ಕೇಳಿ, ಅವನನ್ನು ಅವರ ಕೈಗಳಿಂದ ತಪ್ಪಿಸಿ, “ಅವನನ್ನು ಕೊಲ್ಲುವುದು ಬೇಡ,” ಎಂದನು.

[22] ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ, ತನ್ನ ತಂದೆಯ ಬಳಿಗೆ ತಿರುಗಿ ಕರೆದುಕೊಂಡುಹೋಗುವ ಉದ್ದೇಶದಿಂದ ಅವರಿಗೆ, “ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ಗುಂಡಿಯಲ್ಲಿ ಹಾಕಿರಿ, ಆದರೆ ಅವನ ಮೇಲೆ ಕೈಹಾಕಬೇಡಿರಿ,” ಎಂದನು.

[23] ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ, ಅವರು ಯೋಸೇಫನ ಮೇಲಿದ್ದ ಬಣ್ಣಗಳ ಅಂಗಿಯನ್ನು ತೆಗೆದರು.

[24] ಅವನನ್ನು ತೆಗೆದುಕೊಂಡು ಗುಂಡಿಯಲ್ಲಿ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು.

[25] ಅವರು ಊಟಕ್ಕೆ ಕುಳಿತುಕೊಂಡಾಗ, ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ, ಇಷ್ಮಾಯೇಲರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ, ಸುಗಂಧ ತೈಲ, ರಕ್ತಬೋಳಗಳನ್ನು ಹೊರುತ್ತಿದ್ದವು. ಅವರು ಅವುಗಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು.

[26] ಆಗ ಯೆಹೂದನು ತನ್ನ ಸಹೋದರರಿಗೆ, “ನಾವು ನಮ್ಮ ಸಹೋದರನನ್ನು ಕೊಂದುಹಾಕಿ, ಅವನ ರಕ್ತವನ್ನು ಮರೆಮಾಡುವುದರಲ್ಲಿ ಲಾಭವೇನು?

[27] ಬನ್ನಿರಿ, ಇಷ್ಮಾಯೇಲರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಏಕೆಂದರೆ ಅವನು ನಮ್ಮ ಸಹೋದರನೂ ನಮ್ಮ ದೇಹವೂ ರಕ್ತವೂ ಆಗಿದ್ದಾನೆ,” ಎಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು.

[28] ಈ ಪ್ರಕಾರ ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ, ಅವರು ಯೋಸೇಫನನ್ನು ಗುಂಡಿಯಿಂದ ಮೇಲೆತ್ತಿ, ಇಷ್ಮಾಯೇಲರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು. ಅವರು ಯೋಸೇಫನನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು.

[29] ರೂಬೇನನು ಗುಂಡಿಯ ಬಳಿಗೆ ತಿರುಗಿ ಬಂದಾಗ, ಯೋಸೇಫನು ಗುಂಡಿಯಲ್ಲಿ ಇಲ್ಲದ್ದರಿಂದ, ತನ್ನ ವಸ್ತ್ರಗಳನ್ನು ಹರಿದುಕೊಂಡನು.

[30] ಅವನು ತನ್ನ ಸಹೋದರರ ಬಳಿಗೆ ತಿರುಗಿ ಹೋಗಿ, “ಬಾಲಕನು ಅಲ್ಲಿ ಇಲ್ಲವಲ್ಲಾ, ನಾನು ಎಲ್ಲಿಗೆ ಹೋಗಲಿ?” ಎಂದನು.

[31] ಆಗ ಅವರು ಯೋಸೇಫನ ಅಂಗಿಯನ್ನು ತೆಗೆದುಕೊಂಡು, ಒಂದು ಹೋತವನ್ನು ಕೊಯ್ದು, ಆ ಅಂಗಿಯನ್ನು ರಕ್ತದಲ್ಲಿ ಅದ್ದಿ,

[32] ಆ ಬಣ್ಣದ ಅಂಗಿಯನ್ನು ಅವರು ತಮ್ಮ ತಂದೆಯ ಬಳಿಗೆ ತಂದು, “ಇದು ನಮಗೆ ಸಿಕ್ಕಿತು, ಇದು ನಿನ್ನ ಮಗನ ಅಂಗಿಯೋ ಏನೋ ನೋಡು,” ಎಂದು ಹೇಳಿದರು.

[33] ಯಾಕೋಬನು ಅದನ್ನು ಗುರುತು ಹಿಡಿದು, “ಇದು ನನ್ನ ಮಗನ ಅಂಗಿ ಹೌದು, ದುಷ್ಟಮೃಗವು ಅವನನ್ನು ತಿಂದುಬಿಟ್ಟಿತು, ಯೋಸೇಫನನ್ನು ನಿಸ್ಸಂದೇಹವಾಗಿ ಸೀಳಿಹಾಕಿರಬೇಕು,” ಎಂದನು.

[34] ಆಗ ಯಾಕೋಬನು ತನ್ನ ವಸ್ತ್ರಗಳನ್ನು ಹರಿದುಕೊಂಡು ತನ್ನ ನಡುವಿಗೆ ಗೋಣಿಯನ್ನು ಕಟ್ಟಿಕೊಂಡು ತನ್ನ ಮಗನಿಗೋಸ್ಕರ ಬಹುದಿನ ದುಃಖಪಟ್ಟನು.

[35] ಅವನ ಪುತ್ರಪುತ್ರಿಯರೆಲ್ಲಾ ಅವನನ್ನು ಆದರಿಸಿದರೂ ಅವನು ಆದರಣೆ ಹೊಂದಲೊಲ್ಲದೆ, “ನನ್ನ ಮಗನಿರುವ ಸಮಾಧಿಗೆ ದುಃಖದಿಂದಲೇ ಇಳಿದು ಹೋಗುವೆನು,” ಎಂದನು. ಹೀಗೆ ಅವನ ತಂದೆ ಅವನಿಗೋಸ್ಕರ ಅತ್ತನು.

[36] ಇದರೊಂದಿಗೆ, ಆ ಮಿದ್ಯಾನ್ಯರು ಯೋಸೇಫನನ್ನು ಈಜಿಪ್ಟ್ ದೇಶಕ್ಕೆ ತೆಗೆದುಕೊಂಡುಹೋಗಿ ಪೋಟೀಫರನಿಗೆ ಮಾರಿದರು. ಇವನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.

ಆದಿಕಾಂಡ — Chapters