Skip to content
Opens in a new window
Listen to this chapter • 4:39

[1] ಯೋಸೇಫನನ್ನು ಕರೆದುಕೊಂಡುಹೋದ ಇಷ್ಮಾಯೇಲರು ಈಜಿಪ್ಟಿಗೆ ಸೇರಿದಾಗ ಅವನನ್ನು ಈಜಿಪ್ಟಿನ ಪೋಟೀಫರ್ ಎಂಬವನಿಗೆ ಮಾರಿಬಿಟ್ಟರು. ಪೋಟೀಫರನು ಫರೋಹನ ಉದ್ಯೋಗಸ್ಥನೂ ಮೈಗಾವಲಿನ ದಳಪತಿಯೂ ಆಗಿದ್ದನು.

[2] ಯೆಹೋವ ದೇವರು ಯೋಸೇಫನ ಸಂಗಡ ಇದ್ದುದರಿಂದ, ಅವನು ಏಳಿಗೆಯಾಗಿ ಈಜಿಪ್ಟಿನವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು.

[3] ಯೆಹೋವ ದೇವರು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಯೆಹೋವ ದೇವರು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನಿಗೆ ತಿಳಿಯಿತು.

[4] ಆದ್ದರಿಂದ ಯೋಸೇಫನು ಪೋಟೀಫರನ ದೃಷ್ಟಿಯಲ್ಲಿ ದಯೆಹೊಂದಿ ಅವನ ಸೇವೆ ಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ, ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು.

[5] ಅವನನ್ನು ಮನೆಯಲ್ಲಿಯೂ, ತನಗಿದ್ದ ಎಲ್ಲದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಯೆಹೋವ ದೇವರು ಆ ಈಜಿಪ್ಟಿನವನ ಮನೆಯನ್ನು ಯೋಸೇಫನಿಗಾಗಿ ಆಶೀರ್ವದಿಸಿದರು. ಮನೆಯಲ್ಲಿಯೂ ಹೊಲದಲ್ಲಿಯೂ ಅವನಿಗಿದ್ದ ಎಲ್ಲದರ ಮೇಲೆಯೂ ಯೆಹೋವ ದೇವರ ಆಶೀರ್ವಾದವಿತ್ತು.

[6] ಹೀಗಿರುವುದರಿಂದ ಅವನು ತನಗಿದ್ದದ್ದನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿ, ತನ್ನ ಊಟದ ವಿಷಯದಲ್ಲಿ ಹೊರತು ಬೇರೆ ಯಾವುದರ ವಿಷಯದಲ್ಲಿಯೂ ಚಿಂತಿಸದೆ ಇದ್ದನು. ಯೋಸೇಫನು ಸುರೂಪಿಯೂ ಸುಂದರನೂ ಆಗಿದ್ದನು.

[7] ಸ್ವಲ್ಪ ಸಮಯದ ನಂತರ ಯೋಸೇಫನ ಯಜಮಾನನ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ, “ನನ್ನ ಸಂಗಡ ಮಲಗು,” ಎಂದಳು.

[8] ಆದರೆ ಅವನು ಅದಕ್ಕೆ ಒಪ್ಪದೆ, ತನ್ನ ಯಜಮಾನನ ಹೆಂಡತಿಗೆ, “ನನ್ನ ಯಜಮಾನನು ತನ್ನ ಮನೆಯಲ್ಲಿರುವ ಯಾವುದರ ಬಗ್ಗೆಯೂ ಚಿಂತಿಸದೆ, ತನಗಿದ್ದದ್ದನ್ನೆಲ್ಲಾ ನನಗೆ ಒಪ್ಪಿಸಿದ್ದಾನೆ.

[9] ಈ ಮನೆಯಲ್ಲಿ ನನಗಿಂತ ದೊಡ್ಡವನಾರೂ ಇಲ್ಲ. ನೀನು ಅವನ ಹೆಂಡತಿಯಾಗಿರುವುದರಿಂದ, ನಿನ್ನನ್ನು ಹೊರತುಪಡಿಸಿ ನನಗೆ ಮತ್ತೇನೂ ಮರೆಮಾಡಲಿಲ್ಲ. ಹಾಗಿರುವಲ್ಲಿ ನಾನು ಈ ಮಹಾ ದುಷ್ಕೃತ್ಯ ಮಾಡಿ, ದೇವರಿಗೆ ವಿರೋಧವಾಗಿ ಪಾಪ ಮಾಡುವುದು ಹೇಗೆ?” ಎಂದನು.

[10] ಅವಳು ಪ್ರತಿದಿನ ಯೋಸೇಫನ ಸಂಗಡ ಮಾತನಾಡಿದರೂ, ಅವನು ಅವಳ ಕೂಡ ಮಲಗುವುದಕ್ಕಾಗಲಿ, ಅವಳ ಹತ್ತಿರ ಇರುವುದಕ್ಕಾಗಲಿ ಒಪ್ಪಲಿಲ್ಲ.

[11] ಹೀಗಿರುವಲ್ಲಿ ಒಂದು ದಿನ ಅವನು ತನ್ನ ಕೆಲಸ ಮಾಡುವುದಕ್ಕೆ ಮನೆಯನ್ನು ಪ್ರವೇಶಿಸಿದಾಗ, ಮನೆಯ ಸೇವಕರಲ್ಲಿ ಒಬ್ಬರೂ ಇರಲಿಲ್ಲ.

[12] ಆಗ ಆಕೆಯು ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನ ಸಂಗಡ ಮಲಗು,” ಎಂದಳು. ಆದರೆ ಅವನು ತನ್ನ ವಸ್ತ್ರವನ್ನು ಅವಳ ಕೈಯಲ್ಲಿ ಬಿಟ್ಟು ಹೊರಗೆ ಓಡಿಹೋದನು.

[13] ಅವನು ತನ್ನ ವಸ್ತ್ರವನ್ನು ತನ್ನ ಕೈಯಲ್ಲಿ ಬಿಟ್ಟು ಬಿಟ್ಟಿದ್ದನ್ನೂ, ಹೊರಗೆ ಓಡಿ ಹೋದದ್ದನ್ನೂ ಅವಳು ಕಂಡು,

[14] ತನ್ನ ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನಮ್ಮನ್ನು ಅವಮಾನ ಮಾಡುವುದಕ್ಕೆ ಈ ಹಿಬ್ರಿಯನು ನಮ್ಮಲ್ಲಿಗೆ ಬಂದಿದ್ದಾನೆ. ಅವನು ನನ್ನ ಮೇಲೆ ಅತ್ಯಾಚಾರಮಾಡುವುದಕ್ಕೆ ನನ್ನ ಹತ್ತಿರ ಬಂದನು. ಆಗ ನಾನು ಗಟ್ಟಿಯಾಗಿ ಕೂಗಿದೆನು.

[15] ನಾನು ಜೋರಾಗಿ ಕೂಗಿದ್ದನ್ನು ಅವನು ಕೇಳಿ, ತನ್ನ ವಸ್ತ್ರವನ್ನು ನನ್ನ ಬಳಿಯಲ್ಲೇ ಬಿಟ್ಟು ಹೊರಗೆ ಓಡಿಹೋದನು,” ಎಂದಳು.

[16] ತನ್ನ ಯಜಮಾನನು ಹೊರಗಿನಿಂದ ಬರುವವರೆಗೆ, ಆಕೆಯು ಅವನ ವಸ್ತ್ರವನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಳು.

[17] ಅವನು ಬಂದಾಗ ಅವನಿಗೂ ಅದರಂತೆಯೇ ಹೇಳುತ್ತಾ, “ನೀನು ನಮ್ಮ ಬಳಿಗೆ ತಂದ ಹಿಬ್ರಿಯ ಸೇವಕನು ನನ್ನನ್ನು ಅವಮಾನ ಮಾಡುವುದಕ್ಕೆ ನನ್ನ ಬಳಿಗೆ ಬಂದನು.

[18] ಆದರೆ ನಾನು ಜೋರಾಗಿ ಕೂಗಿಕೊಂಡಾಗ, ಅವನು ತನ್ನ ವಸ್ತ್ರವನ್ನು ನನ್ನ ಬಳಿಯಲ್ಲಿ ಬಿಟ್ಟು ಹೊರಗೆ ಓಡಿಹೋದನು,” ಎಂದಳು.

[19] “ನಿನ್ನ ಸೇವಕನು ನನಗೆ ಹೀಗೆ ಮಾಡಿದ,” ಎಂದು ತನ್ನ ಹೆಂಡತಿ ಹೇಳಿದ್ದನ್ನು ಯಜಮಾನನು ಕೇಳಿ, ಅವನ ಕೋಪವೇರಿತು.

[20] ಆಗ ಯೋಸೇಫನ ಯಜಮಾನನು ಅವನನ್ನು ಹಿಡಿದುಕೊಂಡು, ರಾಜನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿದನು. ಯೋಸೇಫನು ಆ ಸೆರೆಮನೆಯಲ್ಲಿದ್ದನು.

[21] ಆದರೆ ಯೆಹೋವ ದೇವರು ಯೋಸೇಫನ ಸಂಗಡ ಇದ್ದು, ಅವನ ಮೇಲೆ ಕರುಣೆಯಿಟ್ಟು, ಸೆರೆಮನೆಯ ಯಜಮಾನನು ಅವನ ಮೇಲೆ ದಯೆ ತೋರಿಸುವಂತೆ ಮಾಡಿದರು.

[22] ಆದ್ದರಿಂದ ಸೆರೆಯ ಯಜಮಾನನು ಸೆರೆಮನೆಯಲ್ಲಿ ಬಂಧಿಸಿದ ಕೈದಿಗಳನ್ನೆಲ್ಲಾ ಯೋಸೇಫನಿಗೆ ಒಪ್ಪಿಸಿದನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.

[23] ಯೆಹೋವ ದೇವರು ಅವನ ಸಂಗಡ ಇದ್ದುದರಿಂದಲೂ ಅವನು ಮಾಡುವುದನ್ನು ಯೆಹೋವ ದೇವರು ಅಭಿವೃದ್ಧಿಮಾಡಿದ್ದರಿಂದಲೂ ಸೆರೆಯ ಯಜಮಾನನು ಅವನ ಕೈಗೆ ಒಪ್ಪಿಸಿದ ಯಾವುದಕ್ಕೂ ಚಿಂತೆ ಮಾಡದೆ ಇದ್ದನು.

ಆದಿಕಾಂಡ — Chapters