[1] ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಲು, ಆಕೆಯು ಗರ್ಭಿಣಿಯಾಗಿ, ಕಾಯಿನನನ್ನು ಹೆತ್ತು, “ನಾನು ಯೆಹೋವ ದೇವರ ಅನುಗ್ರಹದಿಂದ ಗಂಡು ಮಗುವನ್ನು ಪಡೆದಿದ್ದೇನೆ,” ಎಂದು ಹೇಳಿದಳು.
[2] ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು. ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು.
[3] ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು.
[4] ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು.
[5] ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.
[6] ಆಗ ಯೆಹೋವ ದೇವರು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ?
[7] ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು,” ಎಂದು ಹೇಳಿದರು.
[8] ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು.
[9] ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು, ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು.
[10] ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ.
[11] ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ.
[12] ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.
[13] ಆಗ ಕಾಯಿನನು ಯೆಹೋವ ದೇವರಿಗೆ, “ನನ್ನ ಶಿಕ್ಷೆಯು ತಾಳಲಾರದಷ್ಟು ದೊಡ್ಡದಾಗಿದೆ.
[14] ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು.
[15] ಆದ್ದರಿಂದ ಯೆಹೋವ ದೇವರು ಅವನಿಗೆ, “ಹಾಗಲ್ಲ, ಕಾಯಿನನನ್ನು ಕೊಲ್ಲುವವನ ಮೇಲೆ ಏಳರಷ್ಟು ಪ್ರತೀಕಾರವಿರುವುದು,” ಎಂದು ಹೇಳಿದರು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವ ದೇವರು ಅವನ ಮೇಲೆ ಒಂದು ಗುರುತನ್ನು ಇಟ್ಟರು.
[16] ಆಗ ಕಾಯಿನನು ಯೆಹೋವ ದೇವರ ಸನ್ನಿಧಿಯಿಂದ ಹೊರಟುಹೋಗಿ, ಏದೆನ್ ಸೀಮೆಗೆ ಪೂರ್ವದಲ್ಲಿದ್ದ ನೋದು ಎಂಬ ದೇಶದಲ್ಲಿ ವಾಸಿಸಿದನು.
[17] ಕಾಯಿನನು ತನ್ನ ಹೆಂಡತಿಯನ್ನು ಕೂಡಲು, ಅವಳು ಗರ್ಭಿಣಿಯಾಗಿ ಹನೋಕನನ್ನು ಪಡೆದಳು. ಇದಲ್ಲದೆ ಕಾಯಿನನು ಒಂದು ಊರನ್ನು ಕಟ್ಟಿ, ಅದಕ್ಕೆ ಹನೋಕ್ ಎಂದು ತನ್ನ ಮಗನ ಹೆಸರನ್ನಿಟ್ಟನು.
[18] ಹನೋಕನಿಂದ ಈರಾದನು ಹುಟ್ಟಿದನು. ಈರಾದನಿಂದ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಂದ ಮೆತೂಷಾಯೇಲನು ಹುಟ್ಟಿದನು. ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು.
[19] ಲೆಮೆಕನು ಇಬ್ಬರು ಸ್ತ್ರೀಯರನ್ನು ಮದುವೆಯಾದನು. ಒಬ್ಬಳ ಹೆಸರು ಆದಾ ಮತ್ತೊಬ್ಬಳ ಹೆಸರು ಚಿಲ್ಲಾ.
[20] ಆದಾಳು ಯಾಬಾಲನನ್ನು ಹೆತ್ತಳು. ಪಶುಗಳನ್ನು ಸಾಕುತ್ತಾ, ಗುಡಾರಗಳಲ್ಲಿ ವಾಸಿಸುವವರೆಲ್ಲರ ಮೂಲಪುರುಷನು ಇವನೇ.
[21] ಇವನ ತಮ್ಮನ ಹೆಸರು ಯೂಬಾಲನು. ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರ ಮೂಲಪುರುಷನು.
[22] ಚಿಲ್ಲಾ ತೂಬಲ್ ಕಾಯಿನನನ್ನು ಪಡೆದಳು. ಅವನು ಕಂಚು ಮತ್ತು ಕಬ್ಬಿಣದ ಆಯುಧಗಳನ್ನು ಮಾಡುವವನಾಗಿದ್ದನು. ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ.
[23] ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು: “ಆದಾ, ಚಿಲ್ಲಾ, ನನ್ನ ಮಾತನ್ನು ಕೇಳಿರಿ. ಲೆಮೆಕನ ಹೆಂಡತಿಯರೇ, ನಾನು ಹೇಳುವುದನ್ನು ಗಮನಿಸಿರಿ. ನನಗೆ ಗಾಯಮಾಡಿದ ಒಬ್ಬ ಮನುಷ್ಯನನ್ನು ಕೊಂದೆನು. ನನ್ನನ್ನು ಹೊಡೆದ ಯುವಕನನ್ನು ಹತ ಮಾಡಿದೆನು.
[24] ಕಾಯಿನನನ್ನು ಕೊಂದವನಿಗೆ ಏಳರಷ್ಟು ಪ್ರತೀಕಾರವಾದರೆ, ಲೆಮೆಕನನ್ನು ಹೊಡೆಯುವವನಿಗೆ, ಎಪ್ಪತ್ತೇಳರಷ್ಟಾಗುವುದು.”
[25] ಆದಾಮನು ತಿರುಗಿ ತನ್ನ ಹೆಂಡತಿಯನ್ನು ಕೂಡಲು, ಆಕೆ ಗಂಡು ಮಗುವನ್ನು ಹೆತ್ತು, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ, ದೇವರು ನನಗೆ ಬೇರೆ ಸಂತಾನವನ್ನು ನೇಮಿಸಿದನು,” ಎಂದು ಆ ಮಗುವಿಗೆ, ಸೇತ್ ಎಂದು ಹೆಸರಿಟ್ಟಳು.
[26] ಸೇತನಿಗೆ ಒಬ್ಬ ಮಗನು ಹುಟ್ಟಿದನು. ಅವನಿಗೆ ಎನೋಷ್ ಎಂದು ಹೆಸರಿಟ್ಟನು. ಆ ಕಾಲದಲ್ಲಿ ಜನರು, ಯೆಹೋವ ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದರು.