[1] ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ, ಲೋಟನು ಸೊದೋಮಿನ ಬಾಗಿಲಲ್ಲಿ ಕುಳಿತಿದ್ದನು. ಲೋಟನು ಅವರನ್ನು ಎದುರುಗೊಳ್ಳುವುದಕ್ಕೆ ಎದ್ದು ನೆಲದವರೆಗೆ ಬಾಗಿ,
[2] “ಸ್ವಾಮಿಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ತಂಗಿ, ರಾತ್ರಿ ಕಳೆಯಿರಿ. ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ. ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು,” ಎಂದು ಬೇಡಿಕೊಂಡನು. ಅದಕ್ಕೆ ಅವರು, “ಹಾಗಲ್ಲ, ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ,” ಎಂದರು.
[3] ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ, ಅವರು ತಿರುಗಿಬಂದು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣ ಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸಿದ್ಧಮಾಡಿದನು. ಅವರು ಊಟಮಾಡಿದರು.
[4] ಆದರೆ ಅವರು ಮಲಗುವುದಕ್ಕಿಂತ ಮುಂಚೆ ಸೊದೋಮ್ ಪಟ್ಟಣದ ಜನರು, ಹುಡುಗರು ಮೊದಲುಗೊಂಡು ಮುದುಕರವರೆಗೆ ಎಲ್ಲಾ ಜನರೂ ಪ್ರತಿಯೊಂದು ಮೂಲೆಯಿಂದ ಕೂಡಿ, ಮನೆಯನ್ನು ಸುತ್ತಿಕೊಂಡರು.
[5] ಅವರು ಲೋಟನನ್ನು ಕರೆದು, “ಈ ರಾತ್ರಿಯಲ್ಲಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ನಮ್ಮ ಬಳಿಗೆ ಕರೆದುಕೊಂಡು ಬಾ, ಅವರೊಡನೆ ಸಂಭೋಗಿಸಬೇಕು,” ಎಂದು ಹೇಳಿದರು.
[6] ಆಗ ಲೋಟನು ಅವರ ಬಳಿಗೆ ಬಂದು ಬಾಗಿಲನ್ನು ತನ್ನ ಹಿಂದೆ ಮುಚ್ಚಿಕೊಂಡು,
[7] “ನನ್ನ ಸಹೋದರರೇ, ಈ ದುಷ್ಟತನವನ್ನು ಮಾಡಬೇಡಿರಿ.
[8] ಗಂಡಸರನ್ನು ಅರಿಯದ ಇಬ್ಬರು ಪುತ್ರಿಯರು ನನಗೆ ಇದ್ದಾರೆ. ಅವರನ್ನು ನಿಮ್ಮ ಬಳಿಗೆ ಕರೆ ತರುವೆನು. ನಿಮ್ಮ ದೃಷ್ಟಿಗೆ ಒಳ್ಳೆಯದೆಂದು ಕಾಣುವ ಹಾಗೆ ನೀವು ಅವರಿಗೆ ಮಾಡಿರಿ. ಆ ಮನುಷ್ಯರಿಗೆ ಮಾತ್ರ ಏನೂ ಮಾಡಬೇಡಿರಿ. ಏಕೆಂದರೆ ಅವರು ನನ್ನ ಮನೆಯ ಆಶ್ರಯಕ್ಕೆ ಬಂದಿದ್ದಾರೆ,” ಎಂದು ಬೇಡಿಕೊಂಡನು.
[9] ಆದರೆ ಅವರು, “ಹಿಂದಕ್ಕೆ ಸರಿ,” ಎಂದು ಹೇಳಿ, “ಇವನು ಪ್ರವಾಸಿಯಾಗಿ ಬಂದು ನ್ಯಾಯಾಧಿಪತಿಯಾಗಲು ಯತ್ನಿಸುತ್ತಿದ್ದಾನೆ. ಈಗ ನಿನಗೆ ಅವರಿಗಿಂತ ಹೆಚ್ಚು ಕೇಡು ಮಾಡುತ್ತೇವೆ,” ಎಂದರು. ಅವರು ಲೋಟನನ್ನು ಬಲವಾಗಿ ತುಳಿದು, ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.
[10] ಆಗ ಲೋಟನ ಮನೆಗೆ ಬಂದಿದ್ದ ಆ ದೂತರಿಬ್ಬರು ತಮ್ಮ ಕೈಯಿಂದ ಲೋಟನನ್ನು ತಮ್ಮ ಕಡೆಗೆ ಒಳಕ್ಕೆ ಎಳೆದುಕೊಂಡು ಬಾಗಿಲನ್ನು ಮುಚ್ಚಿದರು.
[11] ಬಾಗಿಲಲ್ಲಿದ್ದವರನ್ನು ಕಿರಿಯರಿಂದ ಹಿರಿಯರವರೆಗೆ ಕುರುಡಾಗುವಂತೆ ಮಾಡಿದರು. ಆಗ ಆ ಊರಿನವರು ಬಾಗಿಲನ್ನು ಕಂಡುಕೊಳ್ಳದೆ ಬೇಸರಗೊಂಡರು.
[12] ಆ ದೂತರಿಬ್ಬರು ಲೋಟನಿಗೆ, “ಇಲ್ಲಿ ನಿನಗೆ ಇನ್ನೂ ಯಾರಾದರೂ ಇದ್ದಾರೋ? ನಿನ್ನ ಅಳಿಯಂದಿರನ್ನೂ, ನಿನ್ನ ಪುತ್ರರನ್ನೂ, ಪುತ್ರಿಯರನ್ನೂ, ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಈ ಸ್ಥಳದಿಂದ ಹೊರಗೆ ಕರೆದುಕೊಂಡು ಬಾ.
[13] ಏಕೆಂದರೆ ಈ ಸ್ಥಳದವರ ಕೂಗು ಯೆಹೋವ ದೇವರ ಸನ್ನಿಧಿಯಲ್ಲಿ ದೊಡ್ಡದಾಗಿರುವುದರಿಂದ ನಾವು ಇದನ್ನು ನಾಶ ಮಾಡುತ್ತೇವೆ. ಯೆಹೋವ ದೇವರು ನಮ್ಮನ್ನು ಕಳುಹಿಸಿದ್ದಾರೆ.”
[14] ಆಗ ಲೋಟನು ಹೊರಟುಹೋಗಿ, ತನ್ನ ಪುತ್ರಿಯರನ್ನು ಗೊತ್ತುಮಾಡಿದ್ದ ಅಳಿಯಂದಿರ ಸಂಗಡ ಮಾತನಾಡಿ, “ಎದ್ದು ಈ ಸ್ಥಳದಿಂದ ಹೊರಡಿರಿ. ಏಕೆಂದರೆ ಯೆಹೋವ ದೇವರು ಈ ಪಟ್ಟಣವನ್ನು ನಾಶಮಾಡುವುದಕ್ಕಿದ್ದಾರೆ,” ಎಂದನು. ಆದರೆ ಅವನು ತನ್ನ ಅಳಿಯಂದಿರಿಗೆ ಪರಿಹಾಸ್ಯಮಾಡುವಂತೆ ಕಾಣಿಸಿದನು.
[15] ಸೂರ್ಯೋದಯವಾಗುವ ಮೊದಲು ದೂತರು ಲೋಟನನ್ನು ತ್ವರೆಪಡಿಸಿ, “ಈ ಪಟ್ಟಣಕ್ಕೆ ಉಂಟಾಗುವ ದಂಡನೆಯಿಂದ ನೀನು ನಾಶವಾಗದ ಹಾಗೆ ಎದ್ದು ನಿನ್ನ ಹೆಂಡತಿಯನ್ನೂ ಇಲ್ಲಿರುವ ನಿನ್ನ ಪುತ್ರಿಯರನ್ನೂ ಕರೆದುಕೊಂಡು ನಡೆ,” ಎಂದರು.
[16] ಅವರು ತಡಮಾಡಿದಾಗ ಯೆಹೋವ ದೇವರು ಅವನನ್ನು ಕನಿಕರಿಸಿದ್ದರಿಂದ, ಆ ದೂತರು ಅವನ ಕೈಯನ್ನೂ, ಅವನ ಹೆಂಡತಿಯ ಕೈಯನ್ನೂ, ಅವನ ಇಬ್ಬರು ಪುತ್ರಿಯರ ಕೈಗಳನ್ನೂ ಹಿಡಿದು, ಅವರನ್ನು ಪಟ್ಟಣದ ಹೊರಗೆ ತಂದುಬಿಟ್ಟರು.
[17] ಅವರನ್ನು ಹೊರಗೆ ತಂದಮೇಲೆ ಅವರಲ್ಲಿ ಒಬ್ಬನು, “ಹಿಂದಕ್ಕೆ ನೋಡಬೇಡ. ಸುತ್ತಲಿರುವ ಯಾವ ಮೈದಾನದಲ್ಲಿಯೂ ನಿಂತುಕೊಳ್ಳಬೇಡ. ನೀನು ನಾಶವಾಗದ ಹಾಗೆ ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗು,” ಎಂದನು.
[18] ಅದಕ್ಕೆ ಲೋಟನು, “ಸ್ವಾಮಿ, ಅದು ನನ್ನಿಂದಾಗದು.
[19] ಈಗ ನಿನ್ನ ದಾಸನಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಿದೆ. ನನ್ನ ಪ್ರಾಣವನ್ನು ಉಳಿಸುವ ಹಾಗೆ ನೀನು ನನಗೆ ಮಾಡಿದ ದಯೆ ದೊಡ್ಡದು. ಆದರೆ ನಾನು ತಪ್ಪಿಸಿಕೊಂಡು ಬೆಟ್ಟಕ್ಕೆ ಓಡಿಹೋಗಲಾರೆನು, ನನಗೆ ವಿಪತ್ತು ಉಂಟಾಗಿ ಸತ್ತೇನು.
[20] ಆ ಪಟ್ಟಣವನ್ನು ನೋಡಿರಿ. ನಾನು ಅಲ್ಲಿಗೆ ಓಡಿಹೋಗಲು ಸಮೀಪವಾಗಿದೆ ಮತ್ತು ಅದು ಸಣ್ಣದು. ನಾನು ತಪ್ಪಿಸಿಕೊಂಡು ಅಲ್ಲಿಗೆ ಹೋಗುತ್ತೇನೆ. ಇದರಿಂದ ನನ್ನ ಪ್ರಾಣವು ಉಳಿಯುವುದು,” ಎಂದನು.
[21] ದೂತನು ಅವನಿಗೆ, “ಈ ವಿಷಯದಲ್ಲಿಯೂ ನಾನು ನಿನ್ನ ಬೇಡಿಕೆಯನ್ನು ಅಂಗೀಕರಿಸಿದ್ದೇನೆ. ನೋಡು, ನೀನು ಹೇಳಿದ ಆ ಊರನ್ನು ನಾನು ಕೆಡವಿ ಹಾಕುವುದಿಲ್ಲ.
[22] ಬೇಗನೆ ತಪ್ಪಿಸಿಕೊಂಡು ಅಲ್ಲಿಗೆ ಹೋಗು, ಏಕೆಂದರೆ ನೀನು ಅಲ್ಲಿ ಸೇರುವ ತನಕ ನಾನೇನೂ ಮಾಡಲಾರೆನು,” ಎಂದನು. ಆದ್ದರಿಂದ ಆ ಊರಿಗೆ ಚೋಗರ್ ಎಂದು ಹೆಸರಾಯಿತು.
[23] ಲೋಟನು ಚೋಗರಿಗೆ ಬಂದಾಗ ಸೂರ್ಯೋದಯವಾಗಿತ್ತು.
[24] ಆಗ ಯೆಹೋವ ದೇವರು ಸೊದೋಮ್ ಮತ್ತು ಗೊಮೋರದ ಮೇಲೆ ಗಂಧಕವನ್ನೂ, ಬೆಂಕಿಯನ್ನೂ ಆಕಾಶದಿಂದ ಸುರಿಸಿದರು.
[25] ಹೀಗೆ ದೇವರು ಆ ಪಟ್ಟಣಗಳನ್ನೂ, ಅಲ್ಲಿಯ ಪ್ರದೇಶವನ್ನೂ, ಪಟ್ಟಣಗಳ ಎಲ್ಲಾ ನಿವಾಸಿಗಳನ್ನೂ, ಭೂಮಿಯ ಮೇಲೆ ಬೆಳೆದ ಬೆಳೆಯನ್ನೂ ಅಳಿಸಿಬಿಟ್ಟರು.
[26] ಆದರೆ ಲೋಟನ ಹಿಂದೆ ಬರುತ್ತಿದ್ದ ಅವನ ಹೆಂಡತಿಯು ಹಿಂದಿರುಗಿ ನೋಡಿ ಉಪ್ಪಿನ ಸ್ತಂಭವಾದಳು.
[27] ಅಬ್ರಹಾಮನು ಬೆಳಿಗ್ಗೆ ಎದ್ದು, ತಾನು ಯೆಹೋವ ದೇವರ ಸನ್ನಿಧಿಯಲ್ಲಿ ನಿಂತಿದ್ದ ಆ ಸ್ಥಳಕ್ಕೆ ಹೋದನು.
[28] ಅವನು ಸೊದೋಮ್ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶಗಳ ಕಡೆಗೂ ನೋಡಿದನು. ಆ ಪ್ರದೇಶದಿಂದ ಹೊಗೆಯು ಕುಲುಮೆಯ ಹೊಗೆಯಂತೆ ಏರುತ್ತಿತ್ತು.
[29] ದೇವರು ಆ ಬಯಲುಸೀಮೆಯ ಪಟ್ಟಣಗಳನ್ನು ನಾಶಮಾಡಿದಾಗ, ಲೋಟನು ವಾಸವಾಗಿದ್ದ ಪಟ್ಟಣಗಳನ್ನು ನಾಶಮಾಡಿದರು. ಆದರೆ ಅಬ್ರಹಾಮನನ್ನು ಜ್ಞಾಪಕಮಾಡಿಕೊಂಡು, ಲೋಟನನ್ನು ಹೊರಗೆ ಕಳುಹಿಸಿ ಪಾರು ಮಾಡಿದರು.
[30] ಲೋಟನು ಚೋಗರಿನಲ್ಲಿ ವಾಸಿಸಲು ಭಯಪಟ್ಟು, ತನ್ನ ಇಬ್ಬರು ಪುತ್ರಿಯರ ಸಂಗಡ ಬೆಟ್ಟದ ಮೇಲೆ ಹೋಗಿ ವಾಸಮಾಡಿದನು. ಅಲ್ಲಿ ಅವನೂ ಅವನ ಇಬ್ಬರು ಪುತ್ರಿಯರೂ ಒಂದು ಗವಿಯಲ್ಲಿ ವಾಸವಾಗಿದ್ದರು.
[31] ಆಗ ಹಿರಿಯ ಮಗಳು ಚಿಕ್ಕವಳಿಗೆ, “ನಮ್ಮ ತಂದೆಯು ಮುದುಕನಾಗಿದ್ದಾನೆ. ಲೋಕದ ಎಲ್ಲಾ ಕ್ರಮದ ಪ್ರಕಾರ ನಮ್ಮೊಂದಿಗಿರಲು ನಮ್ಮ ಸುತ್ತಲಿನ ಪ್ರದೇಶದಲ್ಲಿ ಪುರುಷರಿಲ್ಲ.
[32] ಆದ್ದರಿಂದ ನಾವು ನಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ನಾವು ಅವನ ಸಂಗಡ ಮಲಗಿಕೊಳ್ಳೋಣ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು.
[33] ಆ ರಾತ್ರಿಯಲ್ಲಿ ಅವರು ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಹಿರಿಯ ಮಗಳು ಬಂದು ತನ್ನ ತಂದೆಯ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ.
[34] ಮರುದಿನ ಹಿರಿಯವಳು ಚಿಕ್ಕವಳಿಗೆ, “ಕಳೆದ ರಾತ್ರಿ ತಂದೆಯ ಸಂಗಡ ನಾನು ಮಲಗಿಕೊಂಡೆನು. ಈ ರಾತ್ರಿಯಲ್ಲಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸಿ, ನೀನು ಹೋಗಿ ಅವನ ಸಂಗಡ ಮಲಗಿಕೋ. ಏಕೆಂದರೆ ನಾವು ನಮ್ಮ ತಂದೆಯ ಸಂತಾನವನ್ನು ಉಳಿಸಬೇಕು,” ಎಂದಳು.
[35] ಹಾಗೆ ಆ ರಾತ್ರಿಯಲ್ಲಿಯೂ ತಮ್ಮ ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದರು. ಆಗ ಚಿಕ್ಕವಳು ಎದ್ದು, ಅವನ ಸಂಗಡ ಮಲಗಿಕೊಂಡಳು. ಅವಳು ಮಲಗಿಕೊಂಡದ್ದೂ, ಎದ್ದು ಹೋದದ್ದೂ ಅವನಿಗೆ ತಿಳಿಯಲಿಲ್ಲ.
[36] ಈ ಪ್ರಕಾರ ಲೋಟನ ಇಬ್ಬರು ಪುತ್ರಿಯರು ತಮ್ಮ ತಂದೆಯಿಂದ ಗರ್ಭಿಣಿಯರಾದರು.
[37] ಹಿರಿಯ ಮಗಳು ಮಗನನ್ನು ಹೆತ್ತು, ಅವನಿಗೆ ಮೋವಾಬ್ ಎಂದು ಹೆಸರಿಟ್ಟಳು. ಈಗಿನ ಮೋವಾಬ್ಯರಿಗೂ ಇವನೇ ತಂದೆ.
[38] ಚಿಕ್ಕವಳು ಸಹ ಮಗನನ್ನು ಹೆತ್ತು, ಅವನಿಗೆ ಬೆನಮ್ಮಿ ಎಂದು ಹೆಸರಿಟ್ಟಳು. ಈಗಿನ ಅಮ್ಮೋನಿಯರಿಗೂ ಇವನೇ ತಂದೆ.