[1] ದೇವರು ಯಾಕೋಬನಿಗೆ, “ನೀನು ಇಲ್ಲಿಂದ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು, ನಿನ್ನ ಸಹೋದರ ಏಸಾವನ ಎದುರಿನಿಂದ ಓಡಿ ಹೋಗುತ್ತಿದ್ದಾಗ, ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟು,” ಎಂದರು.
[2] ಆಗ ಯಾಕೋಬನು ತನ್ನ ಮನೆಯವರಿಗೂ, ತನ್ನ ಸಂಗಡ ಇದ್ದವರೆಲ್ಲರಿಗೂ, “ನಿಮ್ಮ ಮಧ್ಯದಲ್ಲಿರುವ ಅನ್ಯದೇವರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ, ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ.
[3] ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಆಲಿಸಿ, ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಬಲಿಪೀಠವನ್ನು ಕಟ್ಟುವೆನು,” ಎಂದನು.
[4] ಆಗ ಅವರು ತಮ್ಮ ಬಳಿಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ, ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ತೆಗೆದು, ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಊರಿಗೆ ಸಮೀಪವಾಗಿದ್ದ ಏಲಾ ಮರದ ಕೆಳಗೆ ಹೂಳಿಟ್ಟರು.
[5] ತರುವಾಯ ಅವರು ಮುಂದೆ ಪ್ರಯಾಣಮಾಡಿದರು. ಆಗ ಸುತ್ತಲಿರುವ ಪಟ್ಟಣಗಳವರ ಮೇಲೆ ದೇವರ ಭಯವು ಇದ್ದುದರಿಂದ, ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ.
[6] ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನರಸಹಿತವಾಗಿ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದನು.
[7] ಅಲ್ಲಿ ಅವನು ಬಲಿಪೀಠವನ್ನು ಕಟ್ಟಿ, ತಾನು ತನ್ನ ಸಹೋದರನ ಬಳಿಯಿಂದ ಓಡಿಹೋದಾಗ, ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
[8] ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಮರಣಹೊಂದಿದಳು. ಬೇತೇಲಿನ ಕೆಳಗಿದ್ದ ಏಲಾ ಮರದ ಬುಡದಲ್ಲಿ ಆಕೆಯನ್ನು ಹೂಳಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಾಯಿತು.
[9] ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ, ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ, ಅವನನ್ನು ಆಶೀರ್ವದಿಸಿದರು.
[10] ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಆದರೆ ಇನ್ನು ಮೇಲೆ ನೀನು ಯಾಕೋಬನೆಂದು ಕರೆಸಿಕೊಳ್ಳದೆ, ‘ಇಸ್ರಾಯೇಲ್,’ ಎಂದು ಕರೆಸಿಕೊಳ್ಳುವೆ,” ಎಂದು ಹೇಳಿ, ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟರು.
[11] ದೇವರು ಅವನಿಗೆ, “ಸರ್ವಶಕ್ತ ದೇವರು ನಾನೇ. ನೀನು ಅಭಿವೃದ್ಧಿಯಾಗಿ, ನಿನ್ನ ಸಂತಾನವು ಹೆಚ್ಚಲಿ. ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವುವು. ಅರಸರು ನಿನ್ನಿಂದ ಹುಟ್ಟುವರು.
[12] ಇದಲ್ಲದೆ ಅಬ್ರಹಾಮನಿಗೂ, ಇಸಾಕನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಕೊಡುವೆನು,” ಎಂದರು.
[13] ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದರು.
[14] ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ, ಆ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ, ಪಾನಾರ್ಪಣೆ ಮಾಡಿ, ಅದರ ಮೇಲೆ ಎಣ್ಣೆಯನ್ನು ಹೊಯ್ದನು.
[15] ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು.
[16] ಬೇತೇಲಿನಿಂದ ಅವರು ಪ್ರಯಾಣಮಾಡಿ, ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ, ರಾಹೇಲಳು ಪ್ರಸವವೇದನೆಯಿಂದ ಕಷ್ಟಪಟ್ಟಳು.
[17] ಹೆರುವುದರಲ್ಲಿ ಆಕೆಯು ಕಷ್ಟಪಡುತ್ತಿದ್ದಾಗ, ಸೂಲಗಿತ್ತಿಯು ಅವಳಿಗೆ, “ನೀನು ಭಯಪಡಬೇಡ, ಈ ಮಗನನ್ನು ಸಹ ನೀನು ಪಡೆಯುವೆ,” ಎಂದಳು.
[18] ಆದರೆ ರಾಹೇಲಳು ಸತ್ತುಹೋದಳು. ಅವಳು ಪ್ರಾಣಬಿಡುವಾಗ, ಮಗನಿಗೆ ಬೆನೋನಿ ಎಂದು ಹೆಸರಿಟ್ಟಳು, ಆದರೆ ಅವನ ತಂದೆ ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು.
[19] ಸತ್ತು ಹೋದ ರಾಹೇಲಳನ್ನು ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಹೂಳಿಟ್ಟರು.
[20] ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
[21] ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರಿನ ಆಚೆ ತನ್ನ ಗುಡಾರವನ್ನು ಹಾಕಿದನು.
[22] ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ, ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿ ಬಿಲ್ಹಳ ಸಂಗಡ ಮಲಗಿದನು. ಈ ವಿಷಯ ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಪುತ್ರರು ಇದ್ದರು.
[23] ಅವರಲ್ಲಿ ಲೇಯಳ ಪುತ್ರರು: ಯಾಕೋಬನ ಚೊಚ್ಚಲ ಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.
[24] ರಾಹೇಲಳ ಪುತ್ರರು: ಯೋಸೇಫ್ ಮತ್ತು ಬೆನ್ಯಾಮೀನ್.
[25] ರಾಹೇಲಳ ದಾಸಿ ಬಿಲ್ಹಳ ಪುತ್ರರು: ದಾನ್, ನಫ್ತಾಲಿ.
[26] ಲೇಯಳ ದಾಸಿ ಜಿಲ್ಪಳ ಪುತ್ರರು: ಗಾದ್ ಮತ್ತು ಆಶೇರ್. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು.
[27] ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ಅಬ್ರಹಾಮನೂ, ಇಸಾಕನೂ ಪ್ರವಾಸಿಗರಾಗಿ ವಾಸವಾಗಿದ್ದ ಹೆಬ್ರೋನ್ ಎಂಬ ಕಿರ್ಯತ್ ಅರ್ಬ ಪಟ್ಟಣಕ್ಕೆ ಬಂದನು.
[28] ಆಗ ಇಸಾಕನು ನೂರ ಎಂಬತ್ತು ವರ್ಷದವನಾಗಿದ್ದನು.
[29] ಇಸಾಕನು ಮುದುಕನಾಗಿಯೂ, ತುಂಬಾ ಆಯುಷ್ಯವುಳ್ಳವನಾಗಿಯೂ ಮರಣಹೊಂದಿ ತನ್ನ ಪಿತೃಗಳೊಂದಿಗೆ ಸೇರಿದನು. ಅವನ ಮಕ್ಕಳಾದ ಏಸಾವನೂ, ಯಾಕೋಬನೂ ಅವನನ್ನು ಸಮಾಧಿಮಾಡಿದರು.