[1] ಯೋಸೇಫನು ಹೋಗಿ ಫರೋಹನಿಗೆ, “ನನ್ನ ತಂದೆಯೂ, ನನ್ನ ಸಹೋದರರೂ ತಮ್ಮ ಕುರಿದನಗಳನ್ನೂ, ತಮಗಿದ್ದ ಎಲ್ಲವುಗಳನ್ನೂ ತೆಗೆದುಕೊಂಡು ಕಾನಾನ್ ದೇಶದಿಂದ ಬಂದಿದ್ದಾರೆ. ಅವರು ಗೋಷೆನ್ ಪ್ರಾಂತದಲ್ಲಿ ಇದ್ದಾರೆ,” ಎಂದನು.
[2] ಅವನು ತನ್ನ ಸಹೋದರರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಮುಂದೆ ನಿಲ್ಲಿಸಿದನು.
[3] ಫರೋಹನು ಯೋಸೇಫನ ಸಹೋದರರಿಗೆ, “ನಿಮ್ಮ ಕೆಲಸವೇನು?” ಎಂದು ಕೇಳಿದನು. ಅವರು ಫರೋಹನಿಗೆ, “ನಿನ್ನ ದಾಸರಾದ ನಾವೂ, ನಮ್ಮ ತಂದೆಯವರೂ ಕುರಿಕಾಯುವವರಾಗಿದ್ದೇವೆ.
[4] ದೇಶದಲ್ಲಿ ಪ್ರವಾಸಮಾಡುವುದಕ್ಕಾಗಿ ಬಂದಿದ್ದೇವೆ. ಏಕೆಂದರೆ ಕಾನಾನ್ ದೇಶದಲ್ಲಿ ಕ್ಷಾಮವು ಕಠಿಣವಾಗಿರುವುದರಿಂದ, ನಿನ್ನ ದಾಸರ ಮಂದೆಗಳಿಗೆ ಹುಲ್ಲುಗಾವಲು ಇಲ್ಲ. ಹೀಗಿರುವುದರಿಂದ ನಿನ್ನ ದಾಸರು ಗೋಷೆನ್ ಪ್ರಾಂತದ ನಿವಾಸಿಗಳಾಗುವಂತೆ ಮಾಡಬೇಕೆಂದು ನಿನ್ನನ್ನು ಕೇಳಿಕೊಳ್ಳುತ್ತೇವೆ,” ಎಂದರು.
[5] ಅದಕ್ಕೆ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ, ನಿನ್ನ ಸಹೋದರರೂ ನಿನ್ನ ಬಳಿಗೆ ಬಂದಿದ್ದಾರೆ.
[6] ಈಜಿಪ್ಟ್ ದೇಶವು ನಿನ್ನ ಮುಂದೆ ಇದೆ. ದೇಶದ ಉತ್ತಮವಾದ ಕಡೆ ನಿನ್ನ ತಂದೆಯೂ, ಸಹೋದರರೂ ವಾಸಮಾಡುವಂತೆ ಮಾಡು. ಗೋಷೆನ್ ಪ್ರಾಂತದಲ್ಲಿ ಅವರು ವಾಸವಾಗಿರಲಿ. ಅವರಲ್ಲಿ ಯಾರಾದರೂ ಸಮರ್ಥರೆಂದು ನೀನು ತಿಳಿದರೆ, ಅವರನ್ನು ನಮಗಿರುವ ಪಶುಗಳ ಮೇಲೆ ವಿಚಾರಕರನ್ನಾಗಿ ಇರಿಸು,” ಎಂದನು.
[7] ಯೋಸೇಫನು ತನ್ನ ತಂದೆ ಯಾಕೋಬನನ್ನು ಕರೆದುಕೊಂಡು ಬಂದು, ಫರೋಹನ ಮುಂದೆ ನಿಲ್ಲಿಸಿದನು. ಯಾಕೋಬನು ಫರೋಹನನ್ನು ಆಶೀರ್ವದಿಸಿದನು.
[8] ಫರೋಹನು ಯಾಕೋಬನಿಗೆ, “ನಿನಗೆ ಎಷ್ಟು ವರ್ಷಗಳು?” ಎಂದು ಕೇಳಿದನು.
[9] ಯಾಕೋಬನು ಫರೋಹನಿಗೆ, “ನಾನು ಲೋಕದಲ್ಲಿ ಸಂಚಾರಮಾಡಿದ್ದು ನೂರಮೂವತ್ತು ವರುಷಗಳೇ. ನನ್ನ ವರ್ಷಗಳು ಕಡಿಮೆಯಾದರೂ ಕಠಿಣವಾದವುಗಳು ಆಗಿವೆ. ಅವು ನನ್ನ ಪಿತೃಗಳ ಪ್ರಯಾಣದ ವರ್ಷಗಳಿಗೆ ಸಮವಾಗಿಲ್ಲ,” ಎಂದನು.
[10] ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ, ಅವನಿಂದ ಬೀಳ್ಕೊಂಡನು.
[11] ಯೋಸೇಫನು ತನ್ನ ತಂದೆಗೂ, ತನ್ನ ಸಹೋದರರಿಗೂ ನಿವಾಸವನ್ನು ಕೊಟ್ಟು, ಫರೋಹನ ಅಪ್ಪಣೆಯ ಪ್ರಕಾರ, ಅವರಿಗೆ ಈಜಿಪ್ಟ್ ದೇಶದ ಉತ್ತಮವಾದ ರಮ್ಸೇಸ್ ಸೀಮೆಯ ಸ್ವತ್ತನ್ನು ಕೊಟ್ಟನು.
[12] ಯೋಸೇಫನು ತನ್ನ ತಂದೆಯನ್ನೂ, ತನ್ನ ಸಹೋದರರನ್ನೂ, ತನ್ನ ತಂದೆಯ ಮನೆಯವರೆಲ್ಲರನ್ನೂ ಅವರ ಮಕ್ಕಳ ಲೆಕ್ಕದ ಪ್ರಕಾರ ಆಹಾರಕೊಟ್ಟು, ಅವರನ್ನು ಸಂರಕ್ಷಿಸಿದನು.
[13] ಆದರೆ ಬರವು ಅತಿ ಘೋರವಾಗಿದ್ದದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಈಜಿಪ್ಟ್ ದೇಶವೂ, ಕಾನಾನ್ ದೇಶವೂ ಕ್ಷಾಮದಿಂದ ಕ್ಷೀಣವಾದವು.
[14] ಆಗ ಯೋಸೇಫನು ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ, ಅದನ್ನು ಫರೋಹನ ಮನೆಗೆ ತಂದನು.
[15] ಈಜಿಪ್ಟ್ ದೇಶದಲ್ಲಿಯೂ, ಕಾನಾನ್ ದೇಶದಲ್ಲಿಯೂ ಹಣವು ಮುಗಿದಾಗ, ಈಜಿಪ್ಟಿನವರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮಗೆ ಆಹಾರವನ್ನು ಕೊಡು, ನಾವು ನಿನ್ನ ಮುಂದೆ ಏಕೆ ಸಾಯಬೇಕು? ಏಕೆಂದರೆ ಹಣವೆಲ್ಲಾ ತೀರಿತು,” ಎಂದರು.
[16] ಆಗ ಯೋಸೇಫನು, “ನಿಮ್ಮ ಪಶುಗಳನ್ನು ತೆಗೆದುಕೊಂಡು ಬನ್ನಿರಿ, ಹಣ ತೀರಿದ್ದೇಯಾದರೆ, ನಿಮ್ಮ ಪಶುಗಳಿಗೆ ಬದಲಾಗಿ ಧಾನ್ಯವನ್ನು ಕೊಡುತ್ತೇನೆ,” ಎಂದನು.
[17] ಅವರು ತಮ್ಮ ಪಶುಗಳನ್ನೆಲ್ಲಾ ಯೋಸೇಫನ ಬಳಿಗೆ ತಂದರು. ಅವುಗಳ ಬದಲಾಗಿ ಅವನು ಆಹಾರ ಧಾನ್ಯ ಕೊಟ್ಟನು. ಅವರ ಕುದುರೆಗಳನ್ನೂ ಕುರಿಗಳನ್ನೂ ಆಡುಗಳನ್ನೂ ದನಗಳನ್ನೂ ಕತ್ತೆಗಳನ್ನೂ ಬದಲಾಗಿ ತೆಗೆದುಕೊಂಡನು. ಆ ವರ್ಷ ಅವರು ಆಹಾರಕ್ಕಾಗಿ ತಮ್ಮ ಎಲ್ಲಾ ಪಶುಪ್ರಾಣಿಗಳನ್ನು ಮಾರಿಕೊಂಡರು.
[18] ಆ ವರ್ಷವಾದ ಮೇಲೆ ಮಾರನೆಯ ವರ್ಷದಲ್ಲಿ, ಅವರು ಅವನ ಬಳಿಗೆ ಬಂದು ಅವನಿಗೆ, “ಹಣವೂ ಪಶುಗಳ ಮಂದೆಗಳೂ ನಮ್ಮ ಒಡೆಯನ ವಶವಾಗಿ ಮುಗಿದಿರುವುದರಿಂದ, ನಮ್ಮ ಶರೀರಗಳೂ, ನಮ್ಮ ಭೂಮಿಯೂ ಹೊರತು ನಮ್ಮ ಒಡೆಯನ ಮುಂದೆ ಏನೂ ಉಳಿಯಲಿಲ್ಲವೆಂಬುದನ್ನು ನಮ್ಮ ಒಡೆಯನಿಗೆ ಮರೆಮಾಡದೆ ತಿಳಿಸುತ್ತಿದ್ದೇವೆ.
[19] ನಾವೂ, ನಮ್ಮ ಭೂಮಿಯೂ ನಿನ್ನ ಕಣ್ಣೆದುರಿಗೆ ಸಾಯುವುದು ಏಕೆ? ನಮ್ಮನ್ನೂ, ನಮ್ಮ ಭೂಮಿಯನ್ನೂ ಆಹಾರಕ್ಕಾಗಿ ಕೊಂಡುಕೋ. ಆಗ ನಾವೂ, ನಮ್ಮ ಭೂಮಿಯೂ ಫರೋಹನಿಗೆ ದಾಸರಾಗಿರುವೆವು. ನಮಗೆ ಬೀಜವನ್ನು ಕೊಡು, ಆಗ ನಾವು ಸಾಯದೆ ಬದುಕುವೆವು, ಭೂಮಿಯು ಹಾಳಾಗದೆ ಇರುವುದು,” ಎಂದರು.
[20] ಆಗ ಯೋಸೇಫನು ಈಜಿಪ್ಟ್ ದೇಶವನ್ನೆಲ್ಲಾ ಫರೋಹನಿಗಾಗಿ ಕೊಂಡುಕೊಂಡನು. ಬರವು ಅವರಿಗೆ ಘೋರವಾಗಿದ್ದುದರಿಂದ ಈಜಿಪ್ಟನವರು ತಮ್ಮ ತಮ್ಮ ಹೊಲಗಳನ್ನು ಮಾರಿಬಿಟ್ಟರು. ಹೀಗೆ ದೇಶವು ಫರೋಹನದಾಯಿತು.
[21] ಯೋಸೇಫನು ಈಜಿಪ್ಟ್ ದೇಶದ ಒಂದು ಮೇರೆಯಿಂದ ಇನ್ನೊಂದು ಮೇರೆಯವರೆಗೂ ಜನರನ್ನು ದಾಸರನ್ನಾಗಿ ಮಾಡಿದನು.
[22] ಯಾಜಕರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಏಕೆಂದರೆ ಫರೋಹನು ಯಾಜಕರಿಗೆ ಭತ್ಯೆಗಳನ್ನು ನೇಮಿಸಿದ್ದನು. ಅವನು ಅವರಿಗೆ ನೇಮಿಸಿದ್ದನ್ನು, ಅವರು ಊಟಮಾಡುತ್ತಿದ್ದರು. ಆದ್ದರಿಂದ ಅವರು ತಮ್ಮ ಭೂಮಿಗಳನ್ನು ಮಾರಲಿಲ್ಲ.
[23] ಯೋಸೇಫನು ಜನರಿಗೆ, “ಇಂದು ನಿಮ್ಮನ್ನೂ, ನಿಮ್ಮ ಭೂಮಿಯನ್ನೂ ಫರೋಹನಿಗಾಗಿ ಕೊಂಡುಕೊಂಡಿದ್ದೇನೆ. ಇಲ್ಲಿ ನಿಮಗೆ ಬೀಜವಿದೆ. ನೀವು ಭೂಮಿಯಲ್ಲಿ ಬೀಜ ಬಿತ್ತಿರಿ.
[24] ಬೆಳೆ ಬಂದಾಗ ಐದನೆಯ ಪಾಲನ್ನು ಫರೋಹನಿಗೆ ಕೊಡಬೇಕು. ಉಳಿದ ನಾಲ್ಕು ಪಾಲು ಹೊಲದ ಬೀಜಕ್ಕಾಗಿಯೂ, ನಿಮ್ಮ ಆಹಾರಕ್ಕಾಗಿಯೂ, ನಿಮ್ಮ ಮಕ್ಕಳ ಆಹಾರಕ್ಕಾಗಿಯೂ ನಿಮಗೆ ಇರಲಿ,” ಎಂದನು.
[25] ಆಗ ಅವರು, “ನೀನೇ ನಮ್ಮನ್ನು ಬದುಕಿಸಿದ್ದೀ, ನಮ್ಮ ಒಡೆಯನ ಕಣ್ಣುಗಳ ಮುಂದೆ ನಮಗೆ ದಯೆ ದೊರಕಲಿ. ನಾವು ಫರೋಹನ ದಾಸರಾಗಿರುವೆವು,” ಎಂದರು.
[26] ಹೀಗೆ ಯೋಸೇಫನು ಫರೋಹನಿಗೆ ಐದನೆಯ ಪಾಲು ಆಗಬೇಕೆಂಬುದನ್ನು ಈಜಿಪ್ಟಿನ ಭೂಮಿಗೆ ಇಂದಿನವರೆಗೂ ನಿಯಮವಾಗಿ ಸ್ಥಾಪಿಸಿದನು. ಯಾಜಕರ ಭೂಮಿಯು ಮಾತ್ರ ಫರೋಹನದಾಗಲಿಲ್ಲ.
[27] ಇಸ್ರಾಯೇಲರು ಈಜಿಪ್ಟ್ ದೇಶದ ಗೋಷೆನ್ ಪ್ರಾಂತದಲ್ಲಿ ವಾಸವಾಗಿದ್ದು, ಆಸ್ತಿಯನ್ನು ಸಂಪಾದಿಸಿ, ಬೆಳೆದು ಬಹಳವಾಗಿ ವೃದ್ಧಿಹೊಂದಿದರು.
[28] ಇದಲ್ಲದೆ ಯಾಕೋಬನು ಈಜಿಪ್ಟ್ ದೇಶದಲ್ಲಿ ಹದಿನೇಳು ವರುಷ ಬದುಕಿದನು. ಯಾಕೋಬನು ಬದುಕಿದ ದಿನಗಳು ನೂರ ನಲ್ವತ್ತೇಳು ವರ್ಷಗಳು.
[29] ಇಸ್ರಾಯೇಲನ ಮರಣದ ಸಮಯವು ಸಮೀಪಿಸಿದಾಗ, ಅವನು ತನ್ನ ಮಗ ಯೋಸೇಫನನ್ನು ಕರೆಯಿಸಿ ಅವನಿಗೆ, “ಈಗ ನಿನ್ನ ಸಮ್ಮುಖದಲ್ಲಿ ನಾನು ದಯೆ ಹೊಂದಿದ್ದೇಯಾದರೆ, ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು, ನನಗೆ ಉಪಕಾರವನ್ನೂ, ನಂಬಿಗಸ್ತಿಕೆಯನ್ನೂ ತೋರಿಸು. ಈಜಿಪ್ಟಿನಲ್ಲಿ ನನ್ನನ್ನು ಹೂಳಿಡಬೇಡ.
[30] ನನ್ನ ತಂದೆಯ ಸಂಗಡ ನಾನು ಮಲಗಬೇಕು. ಈಜಿಪ್ಟಿನಿಂದ ನನ್ನನ್ನು ತೆಗೆದುಕೊಂಡುಹೋಗಿ, ಅವರ ಸಮಾಧಿಯ ಸ್ಥಳದಲ್ಲಿ ನನ್ನನ್ನು ಹೂಳಿಡು,” ಎಂದನು. ಅದಕ್ಕವನು, “ನಿನ್ನ ಮಾತಿನ ಪ್ರಕಾರ ನಾನು ಮಾಡುತ್ತೇನೆ,” ಎಂದನು.
[31] ಯಾಕೋಬನು ತನಗೆ ಪ್ರಮಾಣಮಾಡು ಎಂದಾಗ ಯೋಸೇಫನು ಅವನಿಗೆ ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.