Skip to content
Opens in a new window
Listen to this chapter • 5:38

[1] ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. “ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ,” ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ.

[2] ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ, ಹೊರಗಿದ್ದ ಈಜಿಪ್ಟಿನವರೂ, ಫರೋಹನ ಮನೆಯವರೂ ಕೇಳಿಸಿಕೊಂಡರು.

[3] ಯೋಸೇಫನು ತನ್ನ ಸಹೋದರರಿಗೆ, “ನಾನು ಯೋಸೇಫನು! ನನ್ನ ತಂದೆಯು ಬದುಕಿದ್ದಾನೋ?” ಎಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ, ಅವನಿಗೆ ಉತ್ತರ ಕೊಡಲಾರದೆ ಹೋದರು.

[4] ಆಗ ಯೋಸೇಫನು ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿರಿ,” ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, “ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ!

[5] ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ.

[6] ಏಕೆಂದರೆ ಈ ಎರಡು ವರ್ಷಗಳವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರ್ಷಗಳವರೆಗೆ ಬಿತ್ತುವುದೂ, ಕೊಯ್ಯುವುದೂ ಇರುವುದಿಲ್ಲ.

[7] ಆದ್ದರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವುದಕ್ಕೂ, ದೊಡ್ಡ ಬರಗಾಲದಿಂದ ನಿಮ್ಮ ಪ್ರಾಣಗಳನ್ನು ಉಳಿಸುವುದಕ್ಕೂ ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ.

[8] “ಆದ್ದರಿಂದ ಈಗ ನೀವಲ್ಲ, ದೇವರು ತಾವೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ದೇವರು ನನ್ನನ್ನು ಫರೋಹನಿಗೆ ತಂದೆಯಾಗಿಯೂ, ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಈಜಿಪ್ಟ್ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾರೆ.

[9] ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ, ‘ನಿನ್ನ ಮಗ ಯೋಸೇಫನನ್ನು ದೇವರು ಈಜಿಪ್ಟಿಗೆಲ್ಲಾ ಪ್ರಭುವನ್ನಾಗಿ ಮಾಡಿದ್ದಾರೆ, ತಡಮಾಡದೆ ನನ್ನ ಬಳಿಗೆ ಬೇಗ ಬಾ.

[10] ಗೋಷೆನ್ ಪ್ರದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ದನಕುರಿಗಳೂ, ನಿನಗಿದ್ದದ್ದೆಲ್ಲವೂ ನನ್ನ ಸಮೀಪದಲ್ಲಿರಬೇಕು.

[11] ಅಲ್ಲಿ ನಿನ್ನನ್ನು ಪೋಷಿಸುವೆನು. ಏಕೆಂದರೆ ಇನ್ನೂ ಕ್ಷಾಮದ ಐದು ವರ್ಷಗಳಿವೆ. ನಿನಗೂ, ನಿನ್ನ ಮನೆಗೂ, ನಿನಗಿರುವುದೆಲ್ಲದಕ್ಕೂ ಬಡತನವಾಗಬಾರದು’ ಎಂದು ಹೇಳಿರಿ.

[12] “ನಿಮ್ಮ ಸಂಗಡ ಮಾತನಾಡುವುದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ, ನನ್ನ ಸಹೋದರ ಬೆನ್ಯಾಮೀನನ ಕಣ್ಣುಗಳೂ ನೋಡಿವೆ.

[13] ಹೀಗಿರಲಾಗಿ ನೀವು ಈಜಿಪ್ಟ್ ದೇಶದಲ್ಲಿ ನನಗಿರುವ ಎಲ್ಲಾ ಘನತೆಯನ್ನೂ, ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ,” ಎಂದನು.

[14] ಅವನು ತನ್ನ ತಮ್ಮ ಬೆನ್ಯಾಮೀನನ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತನು, ಬೆನ್ಯಾಮೀನನೂ ಅತ್ತನು.

[15] ಇದಲ್ಲದೆ ತನ್ನ ಸಹೋದರರಿಗೆಲ್ಲಾ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.

[16] ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ, ಅವನ ಸೇವಕರಿಗೂ ಅದು ಮೆಚ್ಚಿಗೆಯಾಗಿತ್ತು.

[17] ಆಗ ಫರೋಹನು ಯೋಸೇಫನಿಗೆ, “ನಿನ್ನ ಸಹೋದರರಿಗೆ ಹೀಗೆ ಮಾಡಲು ಹೇಳು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ವಸ್ತುಗಳನ್ನು ಹೇರಿ, ಕಾನಾನ್ ದೇಶಕ್ಕೆ ಹೋಗಿ,

[18] ನಿಮ್ಮ ತಂದೆಯನ್ನೂ, ಕುಟುಂಬದವರನ್ನೂ ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಈಜಿಪ್ಟ್ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’

[19] “ಇದನ್ನು ಸಹ ನಿನ್ನ ಸಹೋದರರು ಹೇಳುವಂತೆ ನಿನಗೆ ಅಪ್ಪಣೆಯಾಗಿದೆ: ‘ಈಜಿಪ್ಟ್ ದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ, ಹೆಂಡತಿಯರಿಗಾಗಿಯೂ ಬಂಡಿಗಳನ್ನು ತೆಗೆದುಕೊಂಡುಹೋಗಿ, ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ.

[20] ನಿಮ್ಮ ಸಾಮಗ್ರಿಗಳಿಗಾಗಿ ಚಿಂತಿಸಬೇಡಿರಿ. ಈಜಿಪ್ಟ್ ದೇಶದಲ್ಲಿರುವ ಉತ್ತಮವಾದದ್ದೆಲ್ಲಾ ನಿಮ್ಮದೇ,’ ” ಎಂದನು.

[21] ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ, ಮಾರ್ಗಕ್ಕೋಸ್ಕರ ಆಹಾರವನ್ನೂ ಕೊಟ್ಟನು.

[22] ಅವರೆಲ್ಲರಿಗೆ ಬದಲು ವಸ್ತ್ರಗಳನ್ನೂ, ಬೆನ್ಯಾಮೀನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ, ಐದು ಬದಲು ವಸ್ತ್ರಗಳನ್ನೂ ಕೊಟ್ಟನು.

[23] ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು.

[24] ಯೋಸೇಫನು ಅವರಿಗೆ, “ಮಾರ್ಗದಲ್ಲಿ ಜಗಳವಾಡಬೇಡಿರಿ,” ಎಂದು ಹೇಳಿ ಕಳುಹಿಸಿದನು.

[25] ಅವರು ಈಜಿಪ್ಟಿನಿಂದ ಹೊರಟುಹೋಗಿ ಕಾನಾನಿನಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದು,

[26] “ಯೋಸೇಫನು ಇನ್ನೂ ಜೀವದಿಂದ ಇದ್ದಾನೆ! ಅವನೇ ಈಜಿಪ್ಟ್ ದೇಶವನ್ನೆಲ್ಲಾ ಆಳುತ್ತಿದ್ದಾನೆ,” ಎಂದು ಅವನಿಗೆ ತಿಳಿಸಿದಾಗ, ಅವನು ಆಶ್ಚರ್ಯಪಟ್ಟನು, ಅವರನ್ನು ನಂಬಲಿಲ್ಲ.

[27] ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದರು. ಅವನನ್ನು ಕರೆದುಕೊಂಡು ಹೋಗುವುದಕ್ಕೆ ಯೋಸೇಫನು ಕಳುಹಿಸಿದ ರಥಗಳನ್ನು ಅವನು ನೋಡಿದಾಗ ಯಾಕೋಬನ ಆತ್ಮವು ಉಜ್ಜೀವಿಸಿತು.

[28] ಕೊನೆಗೆ ಇಸ್ರಾಯೇಲನು, “ನನ್ನ ಮಗ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ, ಅಷ್ಟೇ ಸಾಕು! ನಾನು ಸಾಯುವುದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.

ಆದಿಕಾಂಡ — Chapters