[1] ಯೆಹೋವ ದೇವರು ನೋಹನಿಗೆ, “ನೀನೂ, ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಸೇರಿಕೊಳ್ಳಿರಿ. ಏಕೆಂದರೆ ಈ ಕಾಲದವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವುದನ್ನು ನಾನು ನೋಡಿದ್ದೇನೆ.
[2] ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡು, ಹೆಣ್ಣುಗಳನ್ನೂ, ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡು, ಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು.
[3] ಆಕಾಶದ ಪಕ್ಷಿಗಳಲ್ಲಿ ಗಂಡು, ಹೆಣ್ಣು ಏಳೇಳರಂತೆ ತೆಗೆದುಕೊಂಡು, ಭೂಮಿಯ ಮೇಲೆಲ್ಲಾ ಅವುಗಳ ಸಂತತಿಯನ್ನು ಜೀವಂತವಾಗಿ ಉಳಿಸಬೇಕು.
[4] ಏಳು ದಿವಸಗಳಾದ ಮೇಲೆ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳು ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಪ್ರತಿಯೊಂದು ಜೀವರಾಶಿಯನ್ನೂ ಭೂಮಿಯ ಮೇಲಿಂದ ಅಳಿಸಿಬಿಡುತ್ತೇನೆ,” ಎಂದರು.
[5] ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನೂ ಮಾಡಿದನು.
[6] ಜಲಪ್ರಳಯವು ಭೂಮಿಯ ಮೇಲೆ ಉಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು.
[7] ಆಗ ನೋಹನು ಪ್ರಳಯದ ನಿಮಿತ್ತವಾಗಿ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯಲ್ಲಿ ಸೇರಿದನು.
[8] ಶುದ್ಧ ಪ್ರಾಣಿಗಳಲ್ಲಿಯೂ, ಅಶುದ್ಧ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಜೀವಿಗಳೆಲ್ಲವೂ
[9] ದೇವರು ನೋಹನಿಗೆ ಆಜ್ಞಾಪಿಸಿದಂತೆಯೇ ಗಂಡುಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು.
[10] ಏಳು ದಿವಸಗಳಾದ ನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು.
[11] ನೋಹನ ಜೀವನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾಸಾಗರದ ಸೆಲೆಗಳು ಒಡೆದವು. ಆಕಾಶದ ಪ್ರವಾಹದ ದ್ವಾರಗಳು ತೆರೆದವು.
[12] ನಲವತ್ತು ದಿವಸ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು.
[13] ಅದೇ ದಿನದಲ್ಲಿ ನೋಹನು ಮತ್ತು ಅವನ ಪುತ್ರರಾದ ಶೇಮ್, ಹಾಮ್, ಯೆಫೆತ್ ಇವರೂ ನೋಹನ ಹೆಂಡತಿಯೂ ಅವನ ಪುತ್ರರ ಹೆಂಡತಿಯರೂ ನಾವೆಯನ್ನು ಪ್ರವೇಶಿಸಿದರು.
[14] ಇದಲ್ಲದೆ ತಮ್ಮ ತಮ್ಮ ಜಾತಿಗನುಸಾರವಾಗಿ ಎಲ್ಲಾ ಕಾಡು ಮೃಗಗಳೂ ಎಲ್ಲಾ ಪಶುಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳೂ ಎಲ್ಲಾ ಪಕ್ಷಿಗಳೂ ಎಲ್ಲಾ ವಿಧವಾದ ರೆಕ್ಕೆಯಿರುವ ಜೀವಿಗಳೂ ಪ್ರವೇಶಿಸಿದವು.
[15] ಹೀಗೆ ಜೀವಶ್ವಾಸವಿರುವ ಎಲ್ಲಾ ಸೃಷ್ಟಿಗಳಲ್ಲಿ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು.
[16] ದೇವರು ನೋಹನಿಗೆ ಆಜ್ಞಾಪಿಸಿದಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವ ದೇವರು ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
[17] ನಲವತ್ತು ದಿನ ಭೂಮಿಯ ಮೇಲೆ ಪ್ರಳಯವು ಬಂದು, ನೀರು ಹೆಚ್ಚಿ ನಾವೆಯನ್ನು ಮೇಲಕ್ಕೆ ಎತ್ತಲು ಅದು ಭೂಮಿಯಿಂದ ತೇಲಾಡಿತು.
[18] ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಿದಾಗ ನಾವೆಯು ನೀರಿನ ಮೇಲೆ ಚಲಿಸಿತು.
[19] ಭೂಮಿಯ ಮೇಲೆ ನೀರು ಅಧಿಕವಾಗಿ ಪ್ರಬಲವಾದದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಕೊಂಡವು.
[20] ನೀರು ಬೆಟ್ಟವನ್ನು ಮುಚ್ಚಿ ಅವುಗಳ ಮೇಲೆ ಸುಮಾರು ಏಳು ಮೀಟರಷ್ಟು ಏರಿತು.
[21] ಪಕ್ಷಿಗಳು, ಪಶುಗಳು, ಕಾಡುಮೃಗಗಳು, ನೆಲದ ಮೇಲೆ ಚಲಿಸುವ ಸಕಲ ಪ್ರಾಣಿಗಳು ಮತ್ತು ಮನುಷ್ಯರು ನಾಶವಾದರು.
[22] ಒಣನೆಲದ ಮೇಲಿದ್ದ ಮೂಗಿನಿಂದ ಶ್ವಾಸಬೀಡುವ ಜೀವಿಗಳೆಲ್ಲವೂ ಸತ್ತು ಹೋದವು.
[23] ಹೀಗೆ ಮನುಷ್ಯರು, ಪಶುಪಕ್ಷಿ, ಕ್ರಿಮಿಕೀಟಗಳು, ಭೂಮಿಯ ಮೇಲಿದ್ದ ಎಲ್ಲಾ ಜೀವರಾಶಿಗಳೂ ನಾಶವಾಯಿತು. ಅವು ಭೂಮಿಯ ಮೇಲಿಂದ ಅಳಿದುಹೋದವು. ನೋಹನು ಮತ್ತು ಅವನ ಸಂಗಡ ನಾವೆಯಲ್ಲಿದ್ದವರು ಮಾತ್ರ ಜೀವಂತವಾಗಿ ಉಳಿದರು.
[24] ಜಲವು ಭೂಮಿಯ ಮೇಲೆ ನೂರೈವತ್ತು ದಿನ ಮುಂದುವರೆಯಿತು.