[1] ಕೆಲವು ಕಾಲದ ನಂತರ ಯೋಸೇಫನಿಗೆ, “ನಿನ್ನ ತಂದೆ ಅಸ್ವಸ್ಥನಾಗಿದ್ದಾನೆ,” ಎಂಬ ಸುದ್ದಿ ಬಂದಿತು. ಆಗ ಅವನು ತನ್ನ ಇಬ್ಬರು ಪುತ್ರರಾದ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಕರೆದುಕೊಂಡು ತಂದೆಯ ಬಳಿಗೆ ಬಂದನು.
[2] ಯಾಕೋಬನಿಗೆ, “ನಿನ್ನ ಮಗ ಯೋಸೇಫನು ಬಂದಿದ್ದಾನೆ,” ಎಂದು ತಿಳಿಸಿದಾಗ, ಇಸ್ರಾಯೇಲನು ಚೇತರಿಸಿಕೊಂಡು ಹಾಸಿಗೆಯ ಮೇಲೆ ಕುಳಿತುಕೊಂಡನು.
[3] ಆಗ ಯಾಕೋಬನು ಯೋಸೇಫನಿಗೆ, “ಸರ್ವಶಕ್ತ ದೇವರು ಕಾನಾನ್ ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು, ನನ್ನನ್ನು ಆಶೀರ್ವದಿಸಿದರು.
[4] ದೇವರು ನನಗೆ, ‘ನಿನ್ನನ್ನು ಅಭಿವೃದ್ಧಿಪಡಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು. ಅನೇಕ ಜನಾಂಗಗಳು ನಿನ್ನಿಂದುಟಾಗುವಂತೆ ಮಾಡುವೆನು, ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಶಾಶ್ವತವಾದ ಸ್ವತ್ತನ್ನಾಗಿ ಕೊಡುತ್ತೇನೆ,’ ಎಂದು ಹೇಳಿದರು.
[5] “ಈಗ ನಾನು ನಿನ್ನ ಬಳಿಗೆ ಈಜಿಪ್ಟಿಗೆ ಬರುವ ಮೊದಲು ಈಜಿಪ್ಟಿನಲ್ಲಿ ನಿನಗೆ ಹುಟ್ಟಿದ ಇಬ್ಬರು ಪುತ್ರರಾದ ಎಫ್ರಾಯೀಮ್ ಮನಸ್ಸೆಯರು ನನ್ನವರಾಗಿರಬೇಕು. ಅವರು ರೂಬೇನ್ ಮತ್ತು ಸಿಮೆಯೋನರಂತೆ ನನ್ನವರಾಗಿರಬೇಕು.
[6] ಆದರೆ ಅವರ ತರುವಾಯ ನಿನ್ನಿಂದ ಹುಟ್ಟುವ ಸಂತಾನವು ನಿನ್ನದಾಗಿರಲಿ. ಅವರು ತಮ್ಮ ಸಹೋದರರ ಸೊತ್ತಿಗೆ ಬಾಧ್ಯತೆಯನ್ನು ಪಡೆದು ಅವರ ಕುಲದ ಹೆಸರನ್ನೇ ಇಟ್ಟುಕೊಳ್ಳಲಿ.
[7] ನಾನು ಪದ್ದನ್ ಅರಾಮಿನಿಂದ ಬಂದಾಗ, ಕಾನಾನ್ ದೇಶದಲ್ಲಿ ಎಫ್ರಾತಿನಿಂದ ಸ್ವಲ್ಪ ದೂರವಾಗಿರುವಾಗ, ರಾಹೇಲಳು ಸತ್ತುಹೋದಳು. ಅಲ್ಲಿ ಅಂದರೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಆಕೆಯನ್ನು ಸಮಾಧಿಮಾಡಿದೆನು,” ಎಂದನು.
[8] ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ಕಂಡು, “ಇವರು ಯಾರು?” ಎಂದನು.
[9] ಅದಕ್ಕೆ ಯೋಸೇಫನು ತನ್ನ ತಂದೆಗೆ, “ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಪುತ್ರರು,” ಎಂದನು. ಆಗ ಇಸ್ರಾಯೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ,” ಎಂದನು.
[10] ಇಸ್ರಾಯೇಲನು ಮುದುಕನಾಗಿದ್ದದ್ದರಿಂದ, ಅವನ ಕಣ್ಣುಗಳು ಕಾಣದಷ್ಟು ಮಬ್ಬಾಗಿದ್ದವು. ಯೋಸೇಫನು ಅವರನ್ನು ಅವನ ಸಮೀಪಕ್ಕೆ ತಂದಾಗ, ಅವನು ಅವರನ್ನು ಮುದ್ದಿಟ್ಟು, ಅಪ್ಪಿಕೊಂಡನು.
[11] ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಾಣುವೆನೆಂದು ನಾನು ನೆನಸಿರಲಿಲ್ಲ. ಆದರೆ ನಿನ್ನ ಸಂತಾನವನ್ನು ಸಹ ದೇವರು ನನಗೆ ಕಾಣುವಂತೆ ಅನುಗ್ರಹಿಸಿದ್ದಾನೆ,” ಎಂದನು.
[12] ಆಗ ಯೋಸೇಫನು ಅವರನ್ನು ಮೊಣಕಾಲುಗಳ ಬಳಿಯಿಂದ ಬರಮಾಡಿ ತಂದೆಗೆ ಅಡ್ಡಬಿದ್ದನು.
[13] ತರುವಾಯ ಯೋಸೇಫನು ತನ್ನ ಬಲಗಡೆಯಲ್ಲಿ ಇಸ್ರಾಯೇಲನ ಎಡಗೈಗೆ ಎದುರಾಗಿ ಎಫ್ರಾಯೀಮನನ್ನೂ, ತನ್ನ ಎಡಗಡೆಯಲ್ಲಿ ಇಸ್ರಾಯೇಲನ ಬಲಗೈಗೆ ಎದುರಾಗಿ ಮನಸ್ಸೆಯನ್ನೂ ನಿಲ್ಲಿಸಿ, ಅವರಿಬ್ಬರನ್ನೂ ತನ್ನ ತಂದೆಯ ಬಳಿಗೆ ತಂದನು.
[14] ಆಗ ಇಸ್ರಾಯೇಲನು ತನ್ನ ಬಲಗೈಯನ್ನು ಚಾಚಿ ಚಿಕ್ಕವನಾದ ಎಫ್ರಾಯೀಮನ ತಲೆಯ ಮೇಲೆಯೂ, ತನ್ನ ಎಡಗೈಯನ್ನು ಮನಸ್ಸೆಯ ತಲೆಯ ಮೇಲೆಯೂ ಇಟ್ಟನು. ಮನಸ್ಸೆಯು ಹಿರಿಯವನಾಗಿದ್ದರೂ, ಬೇಕೆಂದೇ ಅವನು ತನ್ನ ಕೈಗಳನ್ನು ಹಾಗೆ ಇಟ್ಟನು.
[15] ಆಗ ಅವನು ಯೋಸೇಫನನ್ನು ಹೀಗೆ ಆಶೀರ್ವದಿಸಿದನು, “ನನ್ನ ತಂದೆ ಅಬ್ರಹಾಮನೂ ಇಸಾಕನೂ ಯಾವ ದೇವರ ಮುಂದೆ ನಡೆದುಕೊಂಡರೋ, ಆ ದೇವರೇ ನಾನು ಹುಟ್ಟಿದಂದಿನಿಂದ ಇಂದಿನವರೆಗೆ ನನಗೆ ಕುರುಬ ಆಗಿದ್ದ ದೇವರು.
[16] ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸಿದ ಆ ದೇವರ ದೂತ, ಈ ಹುಡುಗರನ್ನು ಆಶೀರ್ವದಿಸಲಿ. ನನ್ನ ಹೆಸರಿನಿಂದಲೂ, ನನ್ನ ಪಿತೃಗಳಾದ ಅಬ್ರಹಾಮ, ಇಸಾಕರ ಹೆಸರಿನಿಂದಲೂ ಅವರು ಮುಂದುವರೆಯಲಿ. ಭೂಮಿಯ ಮೇಲೆ ಸಮೂಹವಾಗಿ ಹೆಚ್ಚಲಿ.”
[17] ತನ್ನ ತಂದೆಯು ಎಫ್ರಾಯೀಮನ ತಲೆಯ ಮೇಲೆ ಬಲಗೈಯನ್ನು ಇಟ್ಟದ್ದನ್ನು ಯೋಸೇಫನು ಕಂಡಾಗ, ಅದು ಅವನಿಗೆ ಇಷ್ಟವಾಗಿರಲಿಲ್ಲ. ಆದ್ದರಿಂದ ಅವನು ತನ್ನ ತಂದೆಯ ಕೈಯನ್ನು ಹಿಡಿದು, ಎಫ್ರಾಯೀಮನ ತಲೆಯ ಮೇಲಿಂದ ತೆಗೆದು, ಮನಸ್ಸೆಯ ತಲೆಯ ಮೇಲೆ ಇಡುವುದರಲ್ಲಿದ್ದನು.
[18] ಯೋಸೇಫನು ತನ್ನ ತಂದೆಗೆ, “ಅಪ್ಪಾ, ಹಾಗಲ್ಲ, ಇವನೇ ಜೇಷ್ಠಪುತ್ರನು. ಇವನ ತಲೆಯ ಮೇಲೆ ಬಲಗೈ ಇಡು,” ಎಂದನು.
[19] ಅದಕ್ಕೆ ಅವನ ತಂದೆಯು ಒಪ್ಪದೆ, “ನನಗೆ ಗೊತ್ತು. ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವುದಲ್ಲದೆ ಅವನು ದೊಡ್ಡವನಾಗುವನು. ಆದರೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತತಿಯು ಜನಾಂಗಗಳ ಸಮೂಹವಾಗುವುದು,” ಎಂದನು.
[20] ಹೀಗೆ ಅವನು ಅವರನ್ನು ಆ ದಿನದಲ್ಲಿ ಆಶೀರ್ವದಿಸಿ, ಹೀಗೆಂದನು: “ನಿಮ್ಮ ಹೆಸರಿನಲ್ಲಿ ಇಸ್ರಾಯೇಲರು ಈ ಆಶೀರ್ವಾದವನ್ನು ಹೇಳುವರು: ‘ಎಫ್ರಾಯೀಮ್ ಮನಸ್ಸೆಯರ ಹಾಗೆ ದೇವರು ನಿನ್ನನ್ನು ಮಾಡಲಿ.’ ” ಹೀಗೆ ಹೇಳುತ್ತಾ ಯಾಕೋಬನು ಎಫ್ರಾಯೀಮನಿಗೆ ಮನಸ್ಸೆಗಿಂತಲೂ ಉನ್ನತಸ್ಥಾನವನ್ನು ಕೊಟ್ಟನು.
[21] ಆಗ ಇಸ್ರಾಯೇಲನು ಯೋಸೇಫನಿಗೆ, “ನಾನು ಸಾಯುತ್ತೇನೆ, ಆದರೆ ದೇವರು ನಿಮ್ಮ ಸಂಗಡವಿದ್ದು, ನಿಮ್ಮನ್ನು ನಿಮ್ಮ ಪಿತೃಗಳ ದೇಶಕ್ಕೆ ಮತ್ತೆ ಸೇರಿಸುವರು.
[22] ಇದಲ್ಲದೆ ನಾನು ನನ್ನ ಖಡ್ಗದಿಂದಲೂ ಬಿಲ್ಲಿನಿಂದಲೂ ಅಮೋರಿಯರ ಕೈಯಿಂದ ತೆಗೆದುಕೊಂಡ ಒಂದು ಹೊಲವನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ,” ಎಂದನು.