Skip to content
Opens in a new window
Listen to this chapter • 6:19

[1] ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬಳನ್ನು ಮದುವೆಮಾಡಿಕೊಂಡನು.

[2] ಆಕೆಯು ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.

[3] ಯೊಕ್ಷಾನನಿಗೆ ಶೆಬಾ ಮತ್ತು ದೆದಾನ್ ಹುಟ್ಟಿದರು. ದೆದಾನನ ಪುತ್ರರು ಅಶ್ಯೂರರು, ಲೆಟೂಶ್ಯರೂ, ಲೆಯುಮ್ಯರೂ.

[4] ಮಿದ್ಯಾನನ ಪುತ್ರರು: ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ. ಇವರೆಲ್ಲರೂ ಕೆಟೂರಳ ಸಂತತಿಯವರು.

[5] ಆದರೆ ಅಬ್ರಹಾಮನು ತನಗಿದ್ದದ್ದನ್ನೆಲ್ಲಾ ಇಸಾಕನಿಗೆ ಕೊಟ್ಟನು.

[6] ಅಬ್ರಹಾಮನಿಗೆ ಇದ್ದ ಉಪಪತ್ನಿಯರ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು, ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಕಳುಹಿಸಿದನು.

[7] ಅಬ್ರಹಾಮನು ನೂರೆಪ್ಪತ್ತೈದು ವರ್ಷಗಳವರೆಗೆ ಜೀವಿಸಿದನು.

[8] ಅವನು ಪೂರ್ಣಾಯುಷ್ಯನಾಗಿ ತುಂಬಾ ಮುದುಕನಾಗಿ ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.

[9] ಅವನ ಪುತ್ರರಾದ ಇಸಾಕನೂ, ಇಷ್ಮಾಯೇಲನೂ ಮಮ್ರೆಗೆ ಎದುರಾಗಿರುವ ಹಿತ್ತಿಯನಾದ ಚೋಹರನ ಮಗ ಎಫ್ರೋನನ ಹೊಲದಲ್ಲಿರುವ ಮಕ್ಪೇಲ ಎಂಬ ಗವಿಯಲ್ಲಿ ಅವನನ್ನು ಹೂಳಿಟ್ಟರು.

[10] ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅಬ್ರಹಾಮನಿಗೂ, ಅವನ ಹೆಂಡತಿ ಸಾರಳಿಗೂ ಒಂದೇ ಸ್ಥಳದಲ್ಲಿ ಸಮಾಧಿ ಆಯಿತು.

[11] ಅಬ್ರಹಾಮನು ಸತ್ತ ನಂತರ ದೇವರು ಅವನ ಮಗ ಇಸಾಕನನ್ನು ಆಶೀರ್ವದಿಸಿದರು. ಇಸಾಕನು ಬೇರ್ ಲಹೈರೋಯಿ ಎಂಬ ಬಾವಿಯ ಬಳಿಯಲ್ಲಿ ವಾಸಿಸಿದನು.

[12] ಸಾರಳ ದಾಸಿ ಈಜಿಪ್ಟಿನ ಹಾಗರಳು ಅಬ್ರಹಾಮನಿಗೆ ಹೆತ್ತ ಮಗ ಇಷ್ಮಾಯೇಲನ ವಂಶಾವಳಿ:

[13] ಜನನದ ಪ್ರಕಾರ ಇಷ್ಮಾಯೇಲನ ಪುತ್ರರ ಹೆಸರುಗಳು ಇವೇ: ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತ್, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,

[14] ಮಿಷ್ಮಾ, ದೂಮಾ, ಮಸ್ಸಾ,

[15] ಹದದ್, ತೇಮಾ, ಯೆಟೂರ್, ನಾಫೀಷ್, ಕೇದೆಮ.

[16] ಇವರೇ ಇಷ್ಮಾಯೇಲನ ಪುತ್ರರು. ಇವುಗಳೇ ಅವರ ಗ್ರಾಮಗಳ ಪ್ರಕಾರವಾಗಿಯೂ, ಪಾಳೆಯಗಳ ಪ್ರಕಾರವಾಗಿಯೂ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು.

[17] ಇಷ್ಮಾಯೇಲನು ಬದುಕಿದ ವರ್ಷಗಳು ನೂರಮೂವತ್ತೇಳು. ಅವನು ಮರಣಹೊಂದಿ ತನ್ನ ಪಿತೃಗಳ ಬಳಿಗೆ ಸೇರಿದನು.

[18] ಅವನ ವಂಶಸ್ಥರು ಅಸ್ಸೀರಿಯಗೆ ಹೋಗುವ, ಈಜಿಪ್ಟಿನ ಮೇರೆಯಲ್ಲಿ ಹವೀಲದಿಂದ ಶೂರ್‌ವರೆಗಿನ ಪ್ರದೇಶದಲ್ಲಿ ವಾಸಿಸಿದರು. ಅವರು ತಮ್ಮ ಎಲ್ಲಾ ಸಹೋದರರೊಂದಿಗೆ ಎದುರುಬದಿರಿನಲ್ಲೇ ವಾಸಮಾಡಿದರು.

[19] ಅಬ್ರಹಾಮನ ಮಗ ಇಸಾಕನ ವಂಶಾವಳಿ: ಅಬ್ರಹಾಮನಿಂದ ಇಸಾಕನು ಹುಟ್ಟಿದನು.

[20] ಇಸಾಕನು ನಲವತ್ತು ವರ್ಷದವನಾಗಿದ್ದಾಗ ಪದ್ದನ್ ಅರಾಮಿನಿಂದ ಅರಾಮ್ಯನಾದ ಬೆತೂಯೇಲನ ಮಗಳೂ, ಲಾಬಾನನ ಸಹೋದರಿಯೂ ಆದ ರೆಬೆಕ್ಕಳನ್ನು ಹೆಂಡತಿಯಾಗಿ ತೆಗೆದುಕೊಂಡನು.

[21] ಆದರೆ ಆಕೆಯು ಬಂಜೆಯಾಗಿದ್ದುದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವ ದೇವರನ್ನು ಬೇಡಿಕೊಂಡನು. ಯೆಹೋವ ದೇವರು ಅವನ ಬೇಡಿಕೆಯನ್ನು ಪೂರೈಸಿದರು. ಆದ್ದರಿಂದ ಅವನ ಹೆಂಡತಿ ರೆಬೆಕ್ಕಳು ಗರ್ಭಿಣಿಯಾದಳು.

[22] ಅವಳ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಿಕೊಂಡಾಗ ಆಕೆಯು, “ನನಗೆ ಏಕೆ ಹೀಗಾಗುತ್ತಿದೆ?” ಎಂದು ಕೇಳಿ, ಯೆಹೋವ ದೇವರ ಬಳಿಗೆ ವಿಚಾರಿಸುವುದಕ್ಕೆ ಹೋದಳು.

[23] ಯೆಹೋವ ದೇವರು ಆಕೆಗೆ ಹೀಗೆ ಹೇಳಿದರು: “ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ಜನಾಂಗಗಳು ಹೊರಟುಬಂದು ಬೇರೆಯಾಗುವುವು. ಒಂದು ಇನ್ನೊಂದಕ್ಕಿಂತ ಬಲವಾಗಿರುವುದು. ಇದಲ್ಲದೆ ಹಿರಿಯನು ಕಿರಿಯವನಿಗೆ ಸೇವೆಮಾಡುವನು.”

[24] ಆಕೆಯು ಹೆರುವುದಕ್ಕೆ ದಿನತುಂಬಿದಾಗ, ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದರು.

[25] ಮೊದಲನೆಯವನು ಕೆಂಪಾಗಿಯೂ ಕೂದಲಿನ ವಸ್ತ್ರದಂತೆ ಇಡೀ ದೇಹವು ಇದ್ದುದರಿಂದ ಅವನಿಗೆ, ಏಸಾವ, ಎಂದು ಹೆಸರಿಟ್ಟರು.

[26] ತರುವಾಯ ಅವನ ತಮ್ಮನು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡಿದುಕೊಂಡು ಹೊರಗೆ ಬಂದನು. ಅವನಿಗೆ, ಯಾಕೋಬ, ಎಂದು ಹೆಸರಿಟ್ಟರು. ಆಕೆಯು ಇವರನ್ನು ಹೆತ್ತಾಗ ಇಸಾಕನು ಅರವತ್ತು ವರ್ಷದವನಾಗಿದ್ದನು.

[27] ಆ ಹುಡುಗರು ಬೆಳೆದಾಗ ಏಸಾವನು ಬೇಟೆಯಾಡುವುದರಲ್ಲಿ ಜಾಣನಾಗಿದ್ದು, ಅಡವಿಯ ಮನುಷ್ಯನಾದನು. ಯಾಕೋಬನು ಗುಡಾರಗಳಲ್ಲಿ ವಾಸಮಾಡುವ ಸಾಧು ಮನುಷ್ಯನಾಗಿದ್ದನು.

[28] ಬೇಟೆಯಲ್ಲಿ ಆಸಕ್ತನಾಗಿದ್ದ ಇಸಾಕನು ಏಸಾವನನ್ನು ಪ್ರೀತಿಸಿದನು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.

[29] ಒಂದು ಸಾರಿ ಯಾಕೋಬನು ಅಡಿಗೆ ಮಾಡುತ್ತಿದ್ದಾಗ, ಏಸಾವನು ದಣಿದು ಅಡವಿಯಿಂದ ಬಂದನು.

[30] ಏಸಾವನು ಯಾಕೋಬನಿಗೆ, “ಆ ಕೆಂಪಾದ ಪದಾರ್ಥವನ್ನು ತಿನ್ನುವುದಕ್ಕೆ ನನಗೆ ಕೊಡು, ನಾನು ದಣಿದಿದ್ದೇನೆ,” ಎಂದನು. ಆದ್ದರಿಂದ ಅವನಿಗೆ, ಎದೋಮ್, ಎಂದು ಹೆಸರಾಯಿತು.

[31] ಆಗ ಯಾಕೋಬನು, “ಈ ಹೊತ್ತು ನಿನ್ನ ಜೇಷ್ಠ ಪುತ್ರನ ಹಕ್ಕನ್ನು ನನಗೆ ಮಾರು,” ಎಂದನು.

[32] ಏಸಾವನು, “ಇಗೋ, ನಾನು ಸಾಯುತ್ತಿದ್ದೇನೆ, ಜೇಷ್ಠ ಪುತ್ರನ ಹಕ್ಕಿನಿಂದ ನನಗೇನು ಲಾಭ?” ಎಂದನು.

[33] ಯಾಕೋಬನು, “ಈ ಹೊತ್ತು ನನಗೆ ಪ್ರಮಾಣಮಾಡು,” ಎಂದನು. ಆಗ ಅವನು ಯಾಕೋಬನಿಗೆ ಪ್ರಮಾಣಮಾಡಿ, ತನ್ನ ಜೇಷ್ಠ ಪುತ್ರನ ಹಕ್ಕನ್ನು ಅವನಿಗೆ ಮಾರಿದನು.

[34] ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ, ಅಲಸಂದಿ ಗುಗ್ಗರಿಯನ್ನೂ ಕೊಟ್ಟನು. ಅವನು ತಿಂದು, ಕುಡಿದು ಎದ್ದು ಹೋದನು. ಹೀಗೆ ಏಸಾವನು ತನ್ನ ಜೇಷ್ಠ ಪುತ್ರನ ಹಕ್ಕನ್ನು ತಾತ್ಸಾರದಿಂದ ಕಂಡನು.

ಆದಿಕಾಂಡ — Chapters