[1] ಲೇಯಳು ಯಾಕೋಬನಿಗೆ ಹೆತ್ತ ಮಗಳಾದ ದೀನಳು ದೇಶದ ಸ್ತ್ರೀಯರನ್ನು ನೋಡುವುದಕ್ಕಾಗಿ ಹೊರಗೆ ಹೋದಳು.
[2] ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ತೆಗೆದುಕೊಂಡುಹೋಗಿ ಮಾನಭಂಗ ಮಾಡಿದನು.
[3] ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಅವನು ಆ ಹುಡುಗಿಯನ್ನು ಪ್ರೀತಿಸಿ, ಆಕೆಯೊಂದಿಗೆ ಅನುರಾಗದಿಂದ ಮಾತನಾಡಿದನು.
[4] ಶೆಕೆಮನು ತನ್ನ ತಂದೆ ಹಮೋರನಿಗೆ, “ಈ ಹುಡುಗಿಯನ್ನು ನನಗೆ ಹೆಂಡತಿಯಾಗಿರುವಂತೆ ಹೇಳು,” ಎಂದನು.
[5] ಯಾಕೋಬನು ತನ್ನ ಮಗಳಾದ ದೀನಳನ್ನು ಶೆಕೆಮನು ಕೆಡಿಸಿದ್ದಾನೆಂದು ಕೇಳಿದಾಗ, ಅವನ ಮಕ್ಕಳು ಅವನ ಪಶುಗಳ ಸಂಗಡ ಹೊಲದಲ್ಲಿದ್ದರು. ಅವರು ಬರುವವರೆಗೆ ಯಾಕೋಬನು ಸುಮ್ಮನಿದ್ದನು.
[6] ಆಗ ಶೆಕೆಮನ ತಂದೆ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು.
[7] ಯಾಕೋಬನ ಮಕ್ಕಳು ಆ ವಿಷಯವನ್ನು ಕೇಳಿದ ಕೂಡಲೇ ಹೊಲದಿಂದ ಬಂದರು. ಶೆಕೆಮನು ಯಾಕೋಬನ ಮಗಳ ಸಂಗಡ ಮಲಗಿ, ಇಸ್ರಾಯೇಲಿನಲ್ಲಿ ಅವಮಾನಕರವಾದದ್ದನ್ನು ಮಾಡಿದ್ದರಿಂದ, ಅವರು ವ್ಯಸನಪಟ್ಟು, ಬಹಳ ಕೋಪಗೊಂಡರು. ಅದು ಹಾಗೆ ಆಗಬಾರದಾಗಿತ್ತು.
[8] ಹಮೋರನು ಅವರಿಗೆ, “ನನ್ನ ಮಗ ಶೆಕೆಮನ ಮನಸ್ಸು ನಿಮ್ಮ ಮಗಳನ್ನು ಆಶಿಸುತ್ತದೆ. ಆಕೆಯನ್ನು ಅವನಿಗೆ ಹೆಂಡತಿಯಾಗಿ ಕೊಡಿರಿ, ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
[9] ನೀವು ನಮ್ಮೊಂದಿಗೆ ಮದುವೆ ಸಂಬಂಧ ಮಾಡಿಕೊಳ್ಳಿರಿ. ನಿಮ್ಮ ಪುತ್ರಿಯರನ್ನು ನಮಗೆ ಕೊಡಿರಿ, ನಮ್ಮ ಪುತ್ರಿಯರನ್ನು ನೀವು ಮದುವೆಯಾಗಿರಿ.
[10] ಇದಲ್ಲದೆ ನೀವು ನಮ್ಮ ಸಂಗಡ ವಾಸಮಾಡಿರಿ. ದೇಶವು ನಿಮ್ಮ ಮುಂದೆ ಇದೆ. ನೀವು ಅದರಲ್ಲಿ ವಾಸಿಸಿ, ಅದರಲ್ಲಿ ವ್ಯಾಪಾರಮಾಡಿ, ಅದರಿಂದ ಆಸ್ತಿಯನ್ನು ಮಾಡಿಕೊಳ್ಳಿರಿ,” ಎಂದನು.
[11] ಬಳಿಕ ಶೆಕೆಮನು ಆಕೆಯ ತಂದೆಗೂ, ಆಕೆಯ ಸಹೋದರರಿಗೂ, “ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ, ನೀವು ಕೇಳಿದ್ದನ್ನು ನಾನು ನಿಮಗೆ ಕೊಡುವೆನು.
[12] ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ,” ಎಂದನು.
[13] ಆಗ ಯಾಕೋಬನ ಮಕ್ಕಳು ಶೆಕೆಮನಿಗೂ, ಅವನ ತಂದೆ ಹಮೋರನಿಗೂ ವಂಚನೆಯ ಉತ್ತರವನ್ನು ಕೊಟ್ಟರು. ಏಕೆಂದರೆ ಅವನು ತಮ್ಮ ತಂಗಿ ದೀನಳನ್ನು ಕೆಡಿಸಿದ್ದನು.
[14] ಯಾಕೋಬನ ಮಕ್ಕಳು ಅವರಿಗೆ, “ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿ ಇಲ್ಲದ ಮನುಷ್ಯನಿಗೆ ನಮ್ಮ ತಂಗಿಯನ್ನು ಕೊಡಲಾರೆವು. ಅದು ನಮಗೆ ಅವಮಾನ.
[15] ಆದರೆ ನೀವು ನಮ್ಮ ಹಾಗಿದ್ದು, ನಿಮ್ಮಲ್ಲಿರುವ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಂಡರೆ ಮಾತ್ರ ನಾವು ನಿಮಗೆ ಒಪ್ಪುವೆವು.
[16] ನಮ್ಮ ಪುತ್ರಿಯರನ್ನು ನಿಮಗೆ ಕೊಟ್ಟು, ನಿಮ್ಮ ಪುತ್ರಿಯರನ್ನು ತೆಗೆದುಕೊಳ್ಳುವೆವು. ಇದಲ್ಲದೆ ನಾವು ನಿಮ್ಮೊಂದಿಗೆ ವಾಸಮಾಡಿ, ಒಂದೇ ಜನಾಂಗವಾಗುವೆವು.
[17] ಆದರೆ ನೀವು ನಮ್ಮ ಮಾತನ್ನು ಕೇಳದೆ, ಸುನ್ನತಿ ಮಾಡಿಸಿಕೊಳ್ಳದೆ ಹೋದರೆ, ನಮ್ಮ ಹುಡುಗಿಯನ್ನು ನಾವು ಕರೆದುಕೊಂಡು ಹೋಗಿಬಿಡುತ್ತೇವೆ,” ಎಂದು ಹೇಳಿದರು.
[18] ಅವರ ಮಾತುಗಳು ಹಮೋರನಿಗೂ, ಅವನ ಮಗ ಶೆಕೆಮನಿಗೂ ಯೋಗ್ಯವಾಗಿ ಕಂಡವು.
[19] ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ, ಆ ಕಾರ್ಯವನ್ನು ಮಾಡುವುದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.
[20] ಆಗ ಹಮೋರನೂ, ಅವನ ಮಗ ಶೆಕೆಮನೂ ತಮ್ಮ ಪಟ್ಟಣ ದ್ವಾರದ ಬಳಿಗೆ ಬಂದು, ತಮ್ಮ ಪಟ್ಟಣದ ಜನರ ಸಂಗಡ ಮಾತನಾಡಿ ಅವರಿಗೆ,
[21] “ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ದೇಶದಲ್ಲಿ ವಾಸಮಾಡಿ, ಅದರಲ್ಲಿ ವ್ಯಾಪಾರಮಾಡಲಿ. ದೇಶವು ಅವರಿಗಾಗಿ ಸಾಕಷ್ಟು ವಿಸ್ತಾರವಾಗಿದೆ. ಅವರ ಪುತ್ರಿಯರನ್ನು ನಮಗೆ ಹೆಂಡತಿಯರನ್ನಾಗಿ ಮಾಡಿಕೊಳ್ಳೋಣ ಮತ್ತು ನಮ್ಮ ಪುತ್ರಿಯರನ್ನು ಅವರಿಗೆ ಕೊಡೋಣ.
[22] ಸುನ್ನತಿ ಮಾಡಿಸಿಕೊಂಡರೆ ಮಾತ್ರ ಅವರು ನಮ್ಮ ಸಂಗಡ ವಾಸಮಾಡುವುದಕ್ಕೂ, ಒಂದೇ ಜನಾಂಗವಾಗುವುದಕ್ಕೂ ಒಪ್ಪುವರು.
[23] ಅವರ ಮಂದೆಗಳೂ, ಅವರ ಸಂಪತ್ತೂ, ಅವರ ಎಲ್ಲಾ ಪಶುಗಳೂ ನಮ್ಮದಾಗುವುವು ಅಲ್ಲವೋ? ಅವರಿಗೆ ನಾವು ಒಪ್ಪಿಕೊಂಡರೆ ಮಾತ್ರ, ಅವರು ನಮ್ಮ ಸಂಗಡ ವಾಸಿಸುವರು,” ಎಂದರು.
[24] ಆಗ ಪಟ್ಟಣದ ದ್ವಾರದಲ್ಲಿ ಹೋಗುವ ಗಂಡಸರೆಲ್ಲರೂ ಹಮೋರನೂ, ಅವನ ಮಗ ಶೆಕೆಮನೂ ಹೇಳಿದ ಮಾತುಗಳನ್ನು ಕೇಳಿ, ಒಪ್ಪಿಕೊಂಡರು. ಹೀಗೆ ಪಟ್ಟಣದಲ್ಲಿದ್ದ ಎಲ್ಲಾ ಗಂಡಸರು ಸುನ್ನತಿ ಮಾಡಿಸಿಕೊಂಡರು.
[25] ಮೂರನೆಯ ದಿನದಲ್ಲಿ ಅವರಿಗೆ ನೋವುಂಟಾದಾಗ, ಯಾಕೋಬನ ಮಕ್ಕಳಲ್ಲಿ ಇಬ್ಬರು ಅಂದರೆ, ದೀನಳ ಸಹೋದರರಾದ ಸಿಮೆಯೋನನೂ, ಲೇವಿಯೂ ತಮ್ಮ ತಮ್ಮ ಖಡ್ಗಗಳನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು, ಗಂಡಸರನ್ನೆಲ್ಲಾ ಕೊಂದುಹಾಕಿದರು.
[26] ಹಮೋರನನ್ನೂ, ಅವನ ಮಗನಾದ ಶೆಕೆಮನನ್ನೂ ಅವರು ಖಡ್ಗದಿಂದ ಕೊಂದುಹಾಕಿ, ದೀನಳನ್ನು ಶೆಕೆಮನ ಮನೆಯಿಂದ ಕರೆದುಕೊಂಡು ಹೊರಗೆ ಹೋದರು.
[27] ಅವರು ತಮ್ಮ ಸಹೋದರಿಯನ್ನು ಕೆಡಿಸಿದ್ದರಿಂದ ಯಾಕೋಬನ ಮಕ್ಕಳು ಬಂದು ಆ ಊರನ್ನೇ ಕೊಳ್ಳೆಹೊಡೆದರು.
[28] ಪಟ್ಟಣದಲ್ಲಿಯೂ, ಹೊಲದಲ್ಲಿಯೂ ಇದ್ದ ಅವರ ಕುರಿ, ದನ, ಕತ್ತೆಗಳನ್ನು ತೆಗೆದುಕೊಂಡರು.
[29] ಅವರ ಎಲ್ಲಾ ಆಸ್ತಿಯನ್ನೂ, ಅವರ ಎಲ್ಲಾ ಚಿಕ್ಕ ಮಕ್ಕಳನ್ನೂ, ಅವರ ಹೆಂಡತಿಯರನ್ನೂ ಸೆರೆಹಿಡಿದು, ಮನೆಯಲ್ಲಿ ಇದ್ದದ್ದೆಲ್ಲವನ್ನೂ ಅವರು ಕೊಳ್ಳೆಹೊಡೆದರು.
[30] ಆಗ ಯಾಕೋಬನು ಸಿಮೆಯೋನನಿಗೂ, ಲೇವಿಗೂ, “ನೀವು ನನ್ನನ್ನು ಈ ದೇಶದ ನಿವಾಸಿಗಳಾದ ಕಾನಾನ್ಯರಿಗೂ ಪೆರಿಜೀಯರಿಗೂ ಅಸಹ್ಯವಾಗುವಂತೆ ಮಾಡಿ, ನನ್ನನ್ನು ಕಳವಳಪಡಿಸಿದಿರಿ. ನಾವು ಸ್ವಲ್ಪ ಜನರು, ಹೀಗಿರುವಲ್ಲಿ ಅವರು ನನಗೆ ವಿರೋಧವಾಗಿ ಕೂಡಿಕೊಂಡು ನನ್ನನ್ನು ದಾಳಿಮಾಡುವರು. ಆಗ ನಾನೂ, ನನ್ನ ಮನೆಯವರೂ ನಾಶವಾಗುವೆವು,” ಎಂದನು.
[31] ಆದರೆ ಅವರು, “ಅವನು ನಮ್ಮ ತಂಗಿಯನ್ನು ವೇಶ್ಯೆಯಂತೆ ನಡೆಸಬಹುದೋ?” ಎಂದರು.