Skip to content
Opens in a new window
Listen to this chapter • 3:44

[1] ಅಬ್ರಾಮನ ಹೆಂಡತಿ ಸಾರಯಳಿಗೆ ಮಕ್ಕಳಿರಲಿಲ್ಲ. ಆಕೆಗೆ ಹಾಗರಳೆಂಬ ಈಜಿಪ್ಟಿನ ದಾಸಿ ಇದ್ದಳು.

[2] ಆಗ ಸಾರಯಳು ಅಬ್ರಾಮನಿಗೆ, “ನಾನು ಮಕ್ಕಳನ್ನು ಹೆರದಂತೆ ಯೆಹೋವ ದೇವರು ನನಗೆ ಅಡ್ಡಿ ಮಾಡಿದ್ದಾರೆ. ದಯಮಾಡಿ ನೀನು ನನ್ನ ದಾಸಿಯ ಬಳಿಗೆ ಹೋಗು. ಒಂದು ವೇಳೆ ನಾನು ಅವಳ ಮೂಲಕ ಕುಟುಂಬವನ್ನು ಕಟ್ಟಬಲ್ಲೆ,” ಎಂದಳು. ಅಬ್ರಾಮನು ಸಾರಯಳ ಮಾತನ್ನು ಕೇಳಿದನು.

[3] ಅಬ್ರಾಮನು ಕಾನಾನ್ ದೇಶದಲ್ಲಿ ಹತ್ತು ವರ್ಷ ವಾಸಿಸಿದ ತರುವಾಯ, ಅಬ್ರಾಮನ ಹೆಂಡತಿಯಾದ ಸಾರಯಳು ಈಜಿಪ್ಟಿನವಳಾದ ಹಾಗರಳೆಂಬ ದಾಸಿಯನ್ನು ತನ್ನ ಗಂಡನಿಗೆ ಹೆಂಡತಿಯಾಗಿ ಒಪ್ಪಿಸಿದಳು.

[4] ಅವನು ಹಾಗರಳನ್ನು ಕೂಡಿದನು. ಆಗ ಅವಳು ಗರ್ಭಿಣಿಯಾದಳು. ತಾನು ಗರ್ಭಿಣಿಯಾದೆನೆಂದು ತಿಳಿದಾಗ, ಅವಳು ತನ್ನ ಯಜಮಾನಿಯನ್ನು ತಿರಸ್ಕರಿಸಿದಳು.

[5] ಸಾರಯಳು ಅಬ್ರಾಮನಿಗೆ, “ನನಗೆ ಆದ ಅನ್ಯಾಯಕ್ಕೆ ನೀನೇ ಹೊಣೆ. ನಾನು ನನ್ನ ದಾಸಿಯನ್ನು ನಿನಗೆ ಹೆಂಡತಿಯಾಗಿ ಕೊಟ್ಟೆನು. ಈಗ ಅವಳು ಗರ್ಭಿಣಿಯಾದ್ದರಿಂದ ನಾನು ಅವಳ ಕಣ್ಣಿಗೆ ತಿರಸ್ಕಾರಕ್ಕೆ ಯೋಗ್ಯಳಾದೆನು. ಯೆಹೋವ ದೇವರು ನಿನಗೂ ನನಗೂ ನ್ಯಾಯತೀರಿಸಲಿ,” ಎಂದಳು.

[6] ಆದರೆ ಅಬ್ರಾಮನು ಸಾರಯಳಿಗೆ, “ಇಗೋ, ನಿನ್ನ ದಾಸಿಯು ನಿನ್ನ ಕೈಯಲ್ಲಿ ಇದ್ದಾಳೆ. ನಿನ್ನ ಮನಸ್ಸಿಗೆ ಬಂದಂತೆ ಮಾಡು,” ಎಂದನು. ಆಗ ಸಾರಯಳು ಹಾಗರಳನ್ನು ಬಾಧಿಸಿದ್ದರಿಂದ, ಅವಳು ಸಾರಯಳಿಂದ ಓಡಿ ಹೋದಳು.

[7] ಯೆಹೋವ ದೇವರ ದೂತನು ಮರುಭೂಮಿಯಲ್ಲಿ ಶೂರಿನ ಮಾರ್ಗವಾಗಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಹಾಗರಳನ್ನು ಕಂಡು,

[8] “ಸಾರಯಳ ದಾಸಿ ಹಾಗರಳೇ, ನೀನು ಎಲ್ಲಿಂದ ಬಂದೆ? ನೀನು ಎಲ್ಲಿಗೆ ಹೋಗುತ್ತೀ?” ಎಂದು ವಿಚಾರಿಸಿದನು. ಅವಳು, “ನನ್ನ ಯಜಮಾನಿ ಸಾರಯಳನ್ನು ಬಿಟ್ಟು ಓಡಿ ಹೋಗುತ್ತಿದ್ದೇನೆ,” ಎಂದಳು.

[9] ಯೆಹೋವ ದೇವರ ದೂತನು ಆಕೆಗೆ, “ನಿನ್ನ ಯಜಮಾನಿಯ ಬಳಿಗೆ ಹಿಂದಿರುಗಿ ಹೋಗಿ ಆಕೆಗೆ ಅಧೀನಳಾಗಿರು,” ಎಂದನು.

[10] ಇದಲ್ಲದೆ ಯೆಹೋವ ದೇವರ ದೂತನು ಅವಳಿಗೆ, “ನಿನ್ನ ಸಂತಾನವನ್ನು ಲೆಕ್ಕಿಸಲಾಗದಷ್ಟು ಹೆಚ್ಚಿಸುತ್ತೇನೆ,” ಎಂದನು.

[11] ಅನಂತರ ಯೆಹೋವ ದೇವರ ದೂತನು ಆಕೆಗೆ ಹೀಗೆ ಹೇಳಿದನು: “ನೀನು ಈಗ ಗರ್ಭಿಣಿಯಾಗಿರುವೆ, ಒಬ್ಬ ಮಗನನ್ನು ಹೆರುವೆ. ಅವನಿಗೆ, ಇಷ್ಮಾಯೇಲ್ ಎಂದು ಹೆಸರಿಡಬೇಕು. ಏಕೆಂದರೆ ಯೆಹೋವ ದೇವರು ನಿನ್ನ ವ್ಯಥೆಗೆ ಕಿವಿಗೊಟ್ಟಿದ್ದಾರೆ.

[12] ಅವನು ಕಾಡುಕತ್ತೆಯಂತೆ ಇರುವನು. ಪ್ರತಿಯೊಬ್ಬರಿಗೂ ವಿರೋಧವಾಗಿ ಅವನು ಕೈ ಎತ್ತುವನು, ಪ್ರತಿಯೊಬ್ಬರ ಕೈಯೂ ಅವನ ವಿರೋಧವಾಗಿ ಇರುವುದು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು.”

[13] ಆಮೇಲೆ ಆಕೆಯು ತನ್ನ ಸಂಗಡ ಮಾತನಾಡಿದ ಯೆಹೋವ ದೇವರಿಗೆ, “ನೀವು ನನ್ನನ್ನು ನೋಡುವ ದೇವರು,” ಎಂದು ಹೆಸರಿಟ್ಟಳು. ಏಕೆಂದರೆ, “ನನ್ನನ್ನು ನೋಡುವ ದೇವರನ್ನು ನಾನು ಇಲ್ಲಿ ನೋಡಿದೆ,” ಎಂದುಕೊಂಡಳು.

[14] ಆದ್ದರಿಂದ ಆ ಬಾವಿಗೆ, ಬೇರ್ ಲಹೈರೋಯಿ ಎಂದು ಹೆಸರಾಯಿತು. ಅದು ಕಾದೇಶಿಗೂ ಬೆರೆದಿಗೂ ಮಧ್ಯದಲ್ಲಿ ಇದೆ.

[15] ತರುವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳ ಮಗನಿಗೆ ಅಬ್ರಾಮನು ಇಷ್ಮಾಯೇಲ್ ಎಂದು ಹೆಸರಿಟ್ಟನು.

[16] ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ, ಅಬ್ರಾಮನು ಎಂಬತ್ತಾರು ವರ್ಷದವನಾಗಿದ್ದನು.

ಆದಿಕಾಂಡ — Chapters