[1] ಇವುಗಳಾದ ಮೇಲೆ ಯೆಹೋವ ದೇವರ ವಾಕ್ಯವು ಅಬ್ರಾಮನಿಗೆ ದರ್ಶನದಲ್ಲಿ ಉಂಟಾಗಿ ಹೇಳಿದ್ದೇನೆಂದರೆ: “ಅಬ್ರಾಮನೇ, ಭಯಪಡಬೇಡ. ನಾನು ನಿನಗೆ ಗುರಾಣಿಯಾಗಿದ್ದೇನೆ. ನಾನೇ ನಿನಗೆ ಅತ್ಯಧಿಕ ಬಹುಮಾನವಾಗಿದ್ದೇನೆ.”
[2] ಅದಕ್ಕೆ ಅಬ್ರಾಮನು, “ಸಾರ್ವಭೌಮ ಯೆಹೋವ ದೇವರೇ, ಮಕ್ಕಳಿಲ್ಲದವನಾಗಿರುವ ನನಗೆ ಏನು ಕೊಡುವಿರಿ? ಈ ದಮಸ್ಕದ ಎಲೀಯೆಜೆರನಿಗೆ ನನ್ನ ಆಸ್ತಿ ಪಾಲಾಗಿಬಿಡುವುದು,” ಎಂದನು.
[3] ಅನಂತರ ಅಬ್ರಾಮನು, “ನೀವು ನನಗೆ ಸಂತಾನವನ್ನು ಕೊಡಲಿಲ್ಲ. ನನ್ನ ಮನೆಯಲ್ಲಿರುವ ದಾಸನೇ ಉತ್ತರಾಧಿಕಾರಿಯಾಗಿರುವನು,” ಎಂದನು.
[4] ಆಗ ಯೆಹೋವ ದೇವರ ವಾಕ್ಯವು, “ಈ ಮನುಷ್ಯನು ನಿನ್ನ ಉತ್ತರಾಧಿಕಾರಿಯಾಗುವುದಿಲ್ಲ. ನಿನ್ನಿಂದಲೇ ಹುಟ್ಟಿಬರುವ ನಿನ್ನ ಮಗನು ನಿನ್ನ ವಾರಸುದಾರನಾಗುವನು,” ಎಂದು ಹೇಳಿ,
[5] ಯೆಹೋವ ದೇವರು ಅವನನ್ನು ಹೊರಗೆ ಕರೆದುಕೊಂಡು ಬಂದು, “ಈಗ ನೀನು ಆಕಾಶವನ್ನು ದೃಷ್ಟಿಸಿ, ನಕ್ಷತ್ರಗಳನ್ನು ಲೆಕ್ಕಿಸಲು ನಿನ್ನಿಂದಾದರೆ, ಲೆಕ್ಕಿಸು. ಅದರಂತೆಯೇ ನಿನ್ನ ಸಂತತಿಯು ಆಗುವುದು,” ಎಂದು ಹೇಳಿದರು.
[6] ಅಬ್ರಾಮನು ಯೆಹೋವ ದೇವರನ್ನು ನಂಬಿದನು, ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು.
[7] ದೇವರು ಅವನಿಗೆ, “ಈ ದೇಶವನ್ನು ಸೊತ್ತಾಗಿ ನಿನಗೆ ಕೊಡಲು, ಕಸ್ದೀಯರ ಊರ್ ಎಂಬ ಪ್ರದೇಶದಿಂದ ನಿನ್ನನ್ನು ಹೊರಗೆ ತಂದ ಯೆಹೋವ ದೇವರು ನಾನೇ,” ಎಂದು ಹೇಳಿದರು.
[8] ಅದಕ್ಕೆ ಅವನು, “ಸಾರ್ವಭೌಮ ಯೆಹೋವ ದೇವರೇ ನಾನು ಅದನ್ನು ನನ್ನ ಸೊತ್ತಾಗಿ ಹೊಂದುವೆನೆಂದು ಯಾವುದರಿಂದ ತಿಳಿದುಕೊಳ್ಳಲಿ?” ಎಂದನು.
[9] ಅದಕ್ಕೆ ಯೆಹೋವ ದೇವರು ಅಬ್ರಾಮನಿಗೆ, “ಮೂರು ವರ್ಷದ ಕಡಸನ್ನು, ಮೂರು ವರ್ಷದ ಮೇಕೆಯನ್ನು, ಮೂರು ವರ್ಷದ ಟಗರನ್ನು, ಒಂದು ಬೆಳವಕ್ಕಿಯನ್ನು, ಒಂದು ಪಾರಿವಾಳವನ್ನು ನನಗಾಗಿ ತೆಗೆದುಕೊಂಡು ಬಾ,” ಎಂದರು.
[10] ಅನಂತರ ಅವನು ಇವುಗಳನ್ನೆಲ್ಲಾ ಯೆಹೋವ ದೇವರಿಗಾಗಿ ತೆಗೆದುಕೊಂಡು ಬಂದು ಎರಡೆರಡು ಹೋಳುಮಾಡಿ, ಒಂದು ತುಂಡನ್ನು ಇನ್ನೊಂದರ ಎದುರಾಗಿ ಇಟ್ಟನು. ಆದರೆ ಅವನು ಪಕ್ಷಿಗಳನ್ನು ತುಂಡು ಮಾಡಲಿಲ್ಲ.
[11] ರಣಹದ್ದುಗಳು ಆ ಶವಗಳ ಮೇಲೆ ಇಳಿದು ಬಂದಾಗ, ಅಬ್ರಾಮನು ಅವುಗಳನ್ನು ಓಡಿಸಿದನು.
[12] ಸೂರ್ಯನು ಅಸ್ತಮಿಸಲಾಗಿ ಅಬ್ರಾಮನಿಗೆ ಗಾಢನಿದ್ರೆ ಹತ್ತಿತ್ತು. ಭೀಕರವಾದ ಕಾರ್ಗತ್ತಲು ಅವನ ಮೇಲೆ ಕವಿಯಿತು.
[13] ಯೆಹೋವ ದೇವರು ಅಬ್ರಾಮನಿಗೆ, “ನಿನ್ನ ಸಂತತಿಯವರು ತಮ್ಮದಲ್ಲದ ದೇಶದಲ್ಲಿ ಪ್ರವಾಸಿಗಳಾಗಿರುವರು, ಅವರು ಗುಲಾಮರಾಗಿ ನಾಲ್ಕುನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಗುರಿಯಾಗುವರು ಎಂಬುದನ್ನು ನೀನು ಖಂಡಿತವಾಗಿಯೂ ತಿಳಿಯತಕ್ಕದ್ದು.
[14] ಆದರೆ ಅವರು ಗುಲಾಮರಾಗಿ ಸೇವೆ ಸಲ್ಲಿಸುತ್ತಿದ್ದ ದೇಶಕ್ಕೆ ನಾನು ನ್ಯಾಯತೀರಿಸುವೆನು. ತರುವಾಯ ಮಹಾ ಸಂಪತ್ತಿನೊಂದಿಗೆ ಅವರು ಹೊರಗೆ ಬರುವರು.
[15] ನೀನಾದರೋ ಸಮಾಧಾನದಿಂದ ನಿನ್ನ ಪಿತೃಗಳ ಬಳಿಗೆ ಸೇರುವೆ. ಬಹಳ ಮುದಿ ಪ್ರಾಯದವನಾಗಿ ಮರಣಹೊಂದುವೆ.
[16] ಆಗ ನಾಲ್ಕನೆಯ ಸಂತಾನದವರು ಇಲ್ಲಿಗೆ ತಿರುಗಿ ಬರುವರು. ಏಕೆಂದರೆ ಅಮೋರಿಯರ ಅಪರಾಧವು ಇನ್ನೂ ಪೂರ್ಣಸ್ಥಿತಿಗೆ ಬರಲಿಲ್ಲ,” ಎಂದು ಹೇಳಿದರು.
[17] ಇದಾದ ಮೇಲೆ ಹೊತ್ತು ಮುಳುಗಿ ಕತ್ತಲಾಗುತ್ತಿರಲು, ಹೊಗೆ ಹಾಯುವ ಒಲೆಯೂ ಉರಿಯುವ ದೀಪವೂ ಆ ತುಂಡುಗಳ ಮಧ್ಯದಲ್ಲಿ ಹಾದು ಹೋದವು.
[18] ಅದೇ ದಿನದಲ್ಲಿ ಯೆಹೋವ ದೇವರು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು, “ಈಜಿಪ್ಟ್ ದೇಶದ ನದಿಯಿಂದ ಮಹಾನದಿ ಯೂಫ್ರೇಟೀಸ್ ನದಿಯವರೆಗೆ ವಾಸಿಸುವ
[19] ಕೇನ್ಯರೂ ಕೆನಿಜ್ಜೀಯರೂ ಕದ್ಮೋನಿಯರೂ
[20] ಹಿತ್ತಿಯರೂ ಪೆರಿಜೀಯರೂ ರೆಫಾಯರೂ
[21] ಅಮೋರಿಯರೂ ಕಾನಾನ್ಯರೂ ಗಿರ್ಗಾಷಿಯರೂ ಯೆಬೂಸಿಯರೂ ವಾಸವಾಗಿರುವ ದೇಶವನ್ನು ನಾನು ನಿನ್ನ ಸಂತತಿಗೆ ಕೊಟ್ಟಿದ್ದೇನೆ,” ಎಂದು ಹೇಳಿದರು.