[1] ಅಬ್ರಾಮನು ತೊಂಬತ್ತೊಂಬತ್ತು ವರ್ಷದವನಾದಾಗ, ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನೇ ಸರ್ವಶಕ್ತ ದೇವರು. ನೀನು ನನ್ನ ಸನ್ನಿಧಿಯಲ್ಲಿಯೇ ನಡೆಯುತ್ತಾ ದೋಷವಿಲ್ಲದವನಾಗಿರು.
[2] ನನಗೂ ನಿನಗೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ಮಾಡುವೆನು. ಇದಲ್ಲದೆ ನಿನ್ನನ್ನು ಅತ್ಯಧಿಕವಾಗಿ ವೃದ್ಧಿಪಡಿಸುವೆನು,” ಎಂದು ಅವನಿಗೆ ಹೇಳಿದರು.
[3] ಆಗ ಅಬ್ರಾಮನು ಸಾಷ್ಟಾಂಗ ನಮಸ್ಕಾರಮಾಡಿದನು. ದೇವರು ಅವನ ಸಂಗಡ ಮಾತನಾಡಿದ್ದೇನೆಂದರೆ:
[4] “ನಾನಾದರೋ ಈ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ: ನೀನು ಅನೇಕ ರಾಷ್ಟ್ರಗಳಿಗೆ ತಂದೆಯಾಗಿರುವೆ.
[5] ಇನ್ನು ಮುಂದೆ, ‘ಅಬ್ರಾಮ್’ ಎಂದು ನಿನಗೆ ಹೆಸರಿರುವುದಿಲ್ಲ. ನಿನ್ನ ಹೆಸರು, ‘ಅಬ್ರಹಾಮ’ ಎಂದು ಇರುವುದು. ಏಕೆಂದರೆ ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ.
[6] ನಿನ್ನಿಂದ ಅನೇಕ ಜನಾಂಗಗಳೂ ಅರಸರೂ ಹುಟ್ಟುವರು.
[7] ಇದಲ್ಲದೆ ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನು. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುವೆನು.
[8] ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ತರುವಾಯ ನಿನ್ನ ಸಂತತಿಗೂ ಶಾಶ್ವತವಾದ ಸ್ವತ್ತನ್ನಾಗಿ ಕೊಟ್ಟು, ನಾನು ಅವರಿಗೆ ದೇವರಾಗಿರುವೆನು,” ಎಂದರು.
[9] ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನೂ, ನಿನ್ನ ತರುವಾಯ ಬರುವ ನಿನ್ನ ಸಂತತಿಯವರೂ ತಲತಲಾಂತರಕ್ಕೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು.
[10] ನೀನೂ, ನಿನ್ನ ತರುವಾಯ ನಿನ್ನ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ: ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು.
[11] ನೀವು ಸುನ್ನತಿ ಮಾಡಿಸಿಕೊಳ್ಳುವುದು, ನಿಮಗೂ ನನಗೂ ಉಂಟಾದ ಒಡಂಬಡಿಕೆಗೆ ಗುರುತಾಗಿ ಇರುವುದು.
[12] ನಿಮ್ಮ ಸಂತತಿಯವರಲ್ಲಿ ಪ್ರತಿಯೊಂದು ಗಂಡು ಮಗುವಿಗೂ ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು. ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಕ್ರಯಕ್ಕೆ ತೆಗೆದುಕೊಂಡವನಾಗಲಿ,
[13] ಹೀಗೆ ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ಕ್ರಯಕ್ಕೆ ತೆಗೆದುಕೊಂಡವನಿಗೂ ಸುನ್ನತಿಯಾಗಬೇಕು. ಈ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವುದನ್ನು ಸೂಚಿಸುವುದು.
[14] ಸುನ್ನತಿ ಮಾಡಿಸಿಕೊಳ್ಳದವನು ನನ್ನ ಒಡಂಬಡಿಕೆಯನ್ನು ಮೀರಿದ ಕಾರಣ, ಅವನನ್ನು ಜನರೊಳಗಿಂದ ಬಹಿಷ್ಕರಿಸಬೇಕು,” ಎಂದರು.
[15] ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಯಳ ವಿಷಯದಲ್ಲಾದರೋ, ಆಕೆಯನ್ನು ಸಾರಯಳೆಂದು ಕರೆಯಬೇಡ, ಅವಳ ಹೆಸರು, ‘ಸಾರಾ.’
[16] ಆಕೆಯನ್ನು ನಾನು ಆಶೀರ್ವದಿಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಆಕೆಯು ಜನಾಂಗಗಳ ತಾಯಿಯಾಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ರಾಷ್ಟ್ರಗಳೂ ಅರಸರೂ ಹುಟ್ಟುವರು,” ಎಂದರು.
[17] ಅಬ್ರಹಾಮನು ಅಡ್ಡಬಿದ್ದು ನಕ್ಕು, “ನೂರು ವರ್ಷದವನಿಗೆ ಮಗುವು ಹುಟ್ಟುವುದುಂಟೇ? ತೊಂಬತ್ತು ವರ್ಷದವಳಾದ ಸಾರಳು ಹೆರುವುದುಂಟೋ?” ಎಂದು ತನ್ನ ಹೃದಯದಲ್ಲಿ ಅಂದುಕೊಂಡನು.
[18] ಅಬ್ರಹಾಮನು ದೇವರಿಗೆ, “ಇಷ್ಮಾಯೇಲನು ನಿನ್ನ ಆಶೀರ್ವಾದದಲ್ಲಿ ಬದುಕಲಿ,” ಎಂದನು.
[19] ಅದಕ್ಕೆ ದೇವರು, “ನಿಶ್ಚಯವಾಗಿ ನಿನ್ನ ಹೆಂಡತಿ ಸಾರಳು ಮಗನನ್ನು ಹೆರುವಳು. ಅವನಿಗೆ, ‘ಇಸಾಕ್’ ಎಂದು ಹೆಸರಿಡಬೇಕು. ಅವನ ಸಂಗಡವೂ ಅವನ ತರುವಾಯ ಹುಟ್ಟುವ ಅವನ ಸಂತತಿಯವರ ಸಂಗಡವೂ ನಾನು ನನ್ನ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುವೆನು.
[20] ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ನಾನು ಅವನನ್ನು ಸಹ ಆಶೀರ್ವದಿಸುವೆನು. ಅವನನ್ನು ಅಭಿವೃದ್ಧಿ ಮಾಡಿ, ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು.
[21] ಆದರೆ ಬರುವ ವರ್ಷ ಈ ಕಾಲದಲ್ಲಿ ಸಾರಳು ನಿನ್ನಿಂದ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸವೆನು,” ಎಂದು ಹೇಳಿದರು.
[22] ಆಗ ದೇವರು ಅವನ ಸಂಗಡ ಮಾತನಾಡುವುದನ್ನು ಮುಗಿಸಿ, ಅಬ್ರಹಾಮನ ಬಳಿಯಿಂದ ಹೊರಟು ಹೋದರು.
[23] ಅಬ್ರಹಾಮನು ತನ್ನ ಮಗ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿ ಹುಟ್ಟಿದವರೆಲ್ಲರಿಗೂ ತಾನು ಕ್ರಯಕ್ಕೆ ತೆಗೆದುಕೊಂಡವರೆಲ್ಲರಿಗೂ ಹೀಗೆ ತನ್ನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ದೇವರು ತನಗೆ ಹೇಳಿದ ಹಾಗೆ, ಆ ದಿನವೇ ಸುನ್ನತಿ ಮಾಡಿಸಿದನು.
[24] ಅಬ್ರಹಾಮನಿಗೆ ಸುನ್ನತಿಯಾದಾಗ ಅವನು ತೊಂಬತ್ತೊಂಬತ್ತು ವರ್ಷದವನಾಗಿದ್ದನು.
[25] ಅವನ ಮಗ ಇಷ್ಮಾಯೇಲನಿಗೆ ಸುನ್ನತಿಯಾದಾಗ, ಅವನು ಹದಿಮೂರು ವರ್ಷದವನಾಗಿದ್ದನು.
[26] ಅಬ್ರಹಾಮನೂ ಅವನ ಮಗ ಇಷ್ಮಾಯೇಲನೂ ಅದೇ ದಿನದಲ್ಲಿ ಸುನ್ನತಿ ಮಾಡಿಸಿಕೊಂಡರು.
[27] ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದವರಿಗೂ ಪರರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನ ಸಂಗಡವೇ ಸುನ್ನತಿ ಆಯಿತು.