Skip to content
Opens in a new window
Listen to this chapter • 6:12

[1] ಆ ಕಾಲದಲ್ಲಿ ಯೆಹೂದನು ತನ್ನ ಸಹೋದರರ ಬಳಿಯಿಂದ ಹೊರಟು, ಅದುಲ್ಲಾಮೂರಿನವನಾದ ಹೀರಾನ ಬಳಿಗೆ ಹೋದನು.

[2] ಅಲ್ಲಿ ಯೆಹೂದನು ಕಾನಾನ್ಯನಾದ ಶೂಗನ ಮಗಳನ್ನು ಕಂಡು, ಅವಳನ್ನು ಮದುವೆಯಾಗಿ ಅವಳನ್ನು ಕೂಡಿದನು.

[3] ಅವಳು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಯೆಹೂದನು ಅವನಿಗೆ ಏರ್ ಎಂದು ಹೆಸರಿಟ್ಟನು.

[4] ಆಕೆಯು ತಿರುಗಿ ಗರ್ಭಿಣಿಯಾಗಿ ಮಗನನ್ನು ಹೆತ್ತು, ಅವನಿಗೆ ಓನಾನ್ ಎಂದು ಹೆಸರಿಟ್ಟಳು.

[5] ಆಕೆಯು ಮತ್ತೊಂದು ಸಾರಿ ಮಗನನ್ನು ಹೆತ್ತು, ಅವನಿಗೆ ಶೇಲಹ ಎಂದು ಹೆಸರಿಟ್ಟಳು. ಆಕೆಯು ಅವನನ್ನು ಹೆತ್ತಾಗ, ಯೆಹೂದನು ಕೆಜೀಬಿನಲ್ಲಿ ಇದ್ದನು.

[6] ಇದಾದ ಮೇಲೆ ಯೆಹೂದನು ತನ್ನ ಜೇಷ್ಠಪುತ್ರ ಏರನಿಗೆ ತಾಮಾರ್ ಎಂಬ ಹೆಣ್ಣನ್ನು ತಂದು ಮದುವೆಮಾಡಿದನು.

[7] ಆದರೆ ಯೆಹೂದನ ಜೇಷ್ಠಪುತ್ರ ಏರನು ಯೆಹೋವ ದೇವರ ದೃಷ್ಟಿಯಲ್ಲಿ ದುಷ್ಟನಾಗಿದ್ದುದರಿಂದ, ಯೆಹೋವ ದೇವರು ಅವನನ್ನು ಸಾವಿಗೀಡುಮಾಡಿದರು.

[8] ಆಗ ಯೆಹೂದನು ಓನಾನನಿಗೆ, “ನಿನ್ನ ಸಹೋದರನ ಹೆಂಡತಿಯ ಬಳಿಗೆ ಹೋಗಿ, ಅವಳನ್ನು ಮದುವೆಯಾಗಿ, ನಿನ್ನ ಅಣ್ಣನಿಗೆ ಸಂತತಿಯನ್ನು ಉಂಟುಮಾಡು,” ಎಂದನು.

[9] ಆದರೆ ಓನಾನನು ಆ ಸಂತತಿಯು ತನ್ನದಾಗತಕ್ಕದ್ದಲ್ಲವೆಂದು ತಿಳಿದುಕೊಂಡು, ತನ್ನ ಅಣ್ಣನಿಗೆ ಸಂತತಿಯನ್ನು ಉಂಟು ಮಾಡದ ಹಾಗೆ, ತನ್ನ ವೀರ್ಯವನ್ನು ನೆಲದ ಮೇಲೆ ಚೆಲ್ಲಿದನು.

[10] ಅವನು ಮಾಡಿದ್ದು ಯೆಹೋವ ದೇವರ ದೃಷ್ಟಿಯಲ್ಲಿ ಮೆಚ್ಚಿಗೆಯಾಗಿರಲಿಲ್ಲ. ಆದ್ದರಿಂದ ಅವರು ಇವನನ್ನೂ ಸಾವಿಗೀಡುಮಾಡಿದರು.

[11] ಆಗ ಯೆಹೂದನು ತನ್ನ ಸೊಸೆ ತಾಮಾರಳಿಗೆ, “ನನ್ನ ಮಗ ಶೇಲಹನು ದೊಡ್ಡವನಾಗುವವರೆಗೆ ವಿಧವೆಯಾಗಿದ್ದು, ನಿನ್ನ ತಂದೆಯ ಮನೆಯಲ್ಲಿರು,” ಎಂದನು. ಏಕೆಂದರೆ ಇವನು ಸಹ ತನ್ನ ಸಹೋದರರ ಹಾಗೆ ಸತ್ತಾನೆಂದು ಅಂದುಕೊಂಡನು. ತಾಮಾರಳಾದರೋ ಹೋಗಿ ತನ್ನ ತಂದೆಯ ಮನೆಯಲ್ಲಿ ವಾಸಮಾಡಿದಳು.

[12] ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ಸತ್ತಳು. ಯೆಹೂದನು ಆದರಣೆ ಹೊಂದಿದ ಮೇಲೆ, ತಾನೂ, ತನ್ನ ಸ್ನೇಹಿತನಾಗಿರುವ ಅದುಲ್ಲಾಮ್ಯನಾದ ಹೀರಾನನೂ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವವರ ಬಳಿಗೆ ತಿಮ್ನಾ ಊರಿಗೆ ಹೋದರು.

[13] ಆಗ ತಾಮಾರಳಿಗೆ, “ನಿನ್ನ ಮಾವನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವುದಕ್ಕೆ ತಿಮ್ನಾ ಊರಿಗೆ ಹೋಗುತ್ತಿದ್ದಾನೆ,” ಎಂದು ತಿಳಿಸಿದಾಗ,

[14] ಆಕೆಯು ವಿಧವೆಯ ವಸ್ತ್ರಗಳನ್ನು ತೆಗೆದಿಟ್ಟು, ಮುಸುಕುಹಾಕಿ ಮುಚ್ಚಿಕೊಂಡು, ತಿಮ್ನಾ ಊರಿನ ಮಾರ್ಗದಲ್ಲಿರುವ ಏನಯಿಮೂರಿನ ಬಹಿರಂಗ ಸ್ಥಳದಲ್ಲಿ ಕೂತುಕೊಂಡಳು. ಏಕೆಂದರೆ ಶೇಲಹನು ದೊಡ್ಡವನಾಗಿದ್ದರೂ ತನ್ನನ್ನು ಅವನಿಗೆ ಹೆಂಡತಿಯಾಗಿ ಕೊಡಲಿಲ್ಲವೆಂದು ಹಾಗೆ ಮಾಡಿದಳು.

[15] ಯೆಹೂದನು ಅವಳನ್ನು ಕಂಡಾಗ, ಅವಳು ಮುಖ ಮುಚ್ಚಿಕೊಂಡಿದ್ದರಿಂದ ಅವಳು ವೇಶ್ಯೆಯೆಂದು ತಿಳಿದುಕೊಂಡನು.

[16] ಮಾರ್ಗದಿಂದ ಆಕೆಯ ಕಡೆಗೆ ತಿರುಗಿಕೊಂಡು ಅವನು, “ನನ್ನನ್ನು ನಿನ್ನ ಬಳಿಗೆ ಬರಗೊಡಿಸು,” ಎಂದನು. ಏಕೆಂದರೆ ಅವಳು ತನ್ನ ಸೊಸೆಯೆಂದು ಅವನಿಗೆ ತಿಳಿದಿರಲಿಲ್ಲ. ಅವಳು, “ನೀನು ನನ್ನ ಬಳಿಗೆ ಬಂದರೆ, ನನಗೆ ಏನು ಕೊಡುವೆ?” ಎಂದಳು.

[17] ಅವನು, “ಮಂದೆಯಿಂದ ನಿನಗೆ ಮೇಕೆಯ ಮರಿಯನ್ನು ಕಳುಹಿಸುತ್ತೇನೆ,” ಎಂದನು. ಅವಳು, “ನೀನು ಅದನ್ನು ಕಳುಹಿಸುವವರೆಗೆ ಈಡು ಕೊಡುವೆಯೋ?” ಎಂದಳು.

[18] ಅದಕ್ಕೆ ಅವನು, “ನಿನಗೆ ಕೊಡತಕ್ಕ ಈಡು ಏನು?” ಎಂದಾಗ. ಅವಳು, “ನಿನ್ನ ಮುದ್ರೆಯೂ ನಿನ್ನ ದಾರವೂ ನಿನ್ನ ಕೈಯಲ್ಲಿರುವ ಕೋಲೂ,” ಎಂದಳು. ಆಗ ಅವನು ಅವುಗಳನ್ನು ಆಕೆಗೆ ಕೊಟ್ಟು, ಆಕೆಯನ್ನು ಕೂಡಿದನು. ಹೀಗೆ ಅವಳು ಅವನಿಂದ ಗರ್ಭಿಣಿಯಾದಳು.

[19] ತರುವಾಯ ಅವಳು ಎದ್ದು ಹೋಗಿ, ಮುಸುಕನ್ನು ತೆಗೆದಿಟ್ಟು, ತನ್ನ ವಿಧವೆಯ ವಸ್ತ್ರಗಳನ್ನು ಹಾಕಿಕೊಂಡಳು.

[20] ಯೆಹೂದನು ಆ ಸ್ತ್ರೀಯ ಕೈಯಿಂದ ಈಡು ತೆಗೆದುಕೊಳ್ಳುವದಕ್ಕೆ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಿಂದ ಮೇಕೆಯ ಮರಿಯನ್ನು ಕಳುಹಿಸಿದಾಗ ಆಕೆಯು ಸಿಗಲಿಲ್ಲ.

[21] ಅದುಲ್ಲಾಮ್ಯನು ಆಕೆಯ ಊರಿನವರನ್ನು, “ಏನಯಿಮಿನ ಬಹಿರಂಗ ಮಾರ್ಗದ ಬಳಿಯಲ್ಲಿದ್ದ ವೇಶ್ಯೆ ಎಲ್ಲಿ?” ಎಂದು ಕೇಳಿದಾಗ. ಅವರು, “ಈ ಸ್ಥಳದಲ್ಲಿ ಯಾವ ವೇಶ್ಯೆಯೂ ಇರಲಿಲ್ಲ,” ಎಂದರು.

[22] ಆಗ ಅವನು ಯೆಹೂದನ ಬಳಿಗೆ ತಿರುಗಿಬಂದು, “ಆಕೆಯು ನನಗೆ ಸಿಕ್ಕಲಿಲ್ಲ, ಇದಲ್ಲದೆ ಆ ಸ್ಥಳದ ಮನುಷ್ಯರು, ‘ಈ ಸ್ಥಳದಲ್ಲಿ ದೇವದಾಸಿ ಇರಲಿಲ್ಲ,’ ಎಂದು ಹೇಳಿದರು,” ಎಂದು ಹೇಳಿದನು.

[23] ಆಗ ಯೆಹೂದನು, “ನಾವು ಅಪಹಾಸ್ಯಕ್ಕೆ ಒಳಗಾಗದ ಹಾಗೆ ಅವಳು ಅದನ್ನು ತೆಗೆದುಕೊಂಡು ಹೋಗಲಿ, ಈ ಮೇಕೆಯ ಮರಿಯನ್ನು ನಾನು ಕಳುಹಿಸಿದೆನು, ಆದರೆ ಆಕೆಯು ನಿನಗೆ ಸಿಕ್ಕಲಿಲ್ಲ,” ಎಂದನು.

[24] ಹೆಚ್ಚು ಕಡಿಮೆ ಮೂರು ತಿಂಗಳಾದ ಮೇಲೆ ಯೆಹೂದನಿಗೆ, “ನಿನ್ನ ಸೊಸೆ ತಾಮಾರಳು ವೇಶ್ಯಾವೃತ್ತಿಮಾಡಿ ವ್ಯಭಿಚಾರದಿಂದ ಗರ್ಭಿಣಿಯಾಗಿದ್ದಾಳೆ,” ಎಂದು ತಿಳಿಸಿದರು. ಆಗ ಯೆಹೂದನು, “ಅವಳನ್ನು ಹೊರಗೆ ತನ್ನಿರಿ, ಅವಳನ್ನು ಸುಡಬೇಕು,” ಎಂದನು.

[25] ಆಕೆಯನ್ನು ಹೊರಗೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಒತ್ತೆಯ ಸಾಮಾನುಗಳನ್ನು ಕೊಟ್ಟ ಆ ಮನುಷ್ಯನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಆದ್ದರಿಂದ ಈ ಮುದ್ರೆಯೂ ದಾರವೂ ಕೋಲೂ ಯಾರವೆಂದು ತಿಳಿದುಕೋ,” ಎಂದು ಹೇಳಿದಳು.

[26] ಆಗ ಯೆಹೂದನು ಅವುಗಳನ್ನು ಗುರುತಿಸಿ, “ಆಕೆಯು ನನಗಿಂತ ನೀತಿವಂತಳು, ಏಕೆಂದರೆ ನಾನು ನನ್ನ ಮಗ ಶೇಲಹನಿಗೆ ಅವಳನ್ನು ಕೊಡಲಿಲ್ಲ,” ಎಂದನು. ಅವನು ಮತ್ತೆ ಆಕೆಯೊಡನೆ ಸಂಸರ್ಗವಿಲ್ಲದೆ ಇದ್ದನು.

[27] ಅವಳು ಹೆರುವ ಸಮಯದಲ್ಲಿ, ಅವಳಿ ಮಕ್ಕಳು ಆಕೆಯ ಗರ್ಭದಲ್ಲಿದ್ದವು.

[28] ಆಕೆಯು ಹೆರುವಾಗ ಒಂದು ಮಗುವು ತನ್ನ ಕೈಚಾಚಿತು. ಆಗ ಸೂಲಗಿತ್ತಿಯು, “ಇದು ಮೊದಲು ಬಂದದ್ದು,” ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು.

[29] ಆ ಮಗುವು ತನ್ನ ಕೈಯನ್ನು ಹಿಂದಕ್ಕೆ ಎಳೆದಾಗ, ಅವನ ಸಹೋದರನು ಹೊರಗೆ ಬಂದನು. ಆಗ ಅವಳು, “ನೀನು ಕಿತ್ತುಕೊಂಡು ಹೊರಗೆ ಬಂದೆಯಾ?” ಎಂದಳು. ಹೀಗೆ ಅವನಿಗೆ ಪೆರೆಚ್ ಎಂದು ಹೆಸರಾಯಿತು.

[30] ತರುವಾಯ ತನ್ನ ಕೈಯಲ್ಲಿ ಕೆಂಪು ನೂಲು ಇದ್ದ ಅವನ ಸಹೋದರನು ಹೊರಗೆ ಬಂದನು. ಅವನಿಗೆ ಜೆರಹ ಎಂದು ಹೆಸರಾಯಿತು.

ಆದಿಕಾಂಡ — Chapters