[1] ಯಾಕೋಬನೊಂದಿಗೆ ಈಜಿಪ್ಟಿಗೆ ತಮ್ಮ ತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲನ ಮಕ್ಕಳ ಹೆಸರುಗಳು:
[2] ರೂಬೇನ್, ಸಿಮೆಯೋನ್, ಲೇವಿ ಮತ್ತು ಯೆಹೂದ,
[3] ಇಸ್ಸಾಕಾರ್ ಜೆಬುಲೂನ್ ಮತ್ತು ಬೆನ್ಯಾಮೀನ್,
[4] ದಾನ್, ನಫ್ತಾಲಿ, ಗಾದ್ ಮತ್ತು ಆಶೇರ್.
[5] ಯಾಕೋಬನ ವಂಶಜರು ಒಟ್ಟು ಎಪ್ಪತ್ತು ಮಂದಿ ಆದರೆ ಯೋಸೇಫನು ಮೊದಲೇ ಈಜಿಪ್ಟಿನಲ್ಲಿದ್ದನು.
[6] ಹಲವು ವರ್ಷಗಳ ಬಳಿಕ ಯೋಸೇಫನೂ ಅವನ ಸಹೋದರರೆಲ್ಲರೂ ಆ ಸಂತತಿಯವರೆಲ್ಲರೂ ಸತ್ತರು.
[7] ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹರಡಿಕೊಂಡು ಬಲಗೊಂಡರು, ಅದರಿಂದ ಆ ದೇಶವು ಅವರಿಂದ ತುಂಬಿತು.
[8] ತರುವಾಯ ಯೋಸೇಫನನ್ನೇ ಅರಿಯದ ಬೇರೊಬ್ಬ ಅರಸನು, ಈಜಿಪ್ಟಿನಲ್ಲಿ ಅಧಿಕಾರಕ್ಕೆ ಬಂದನು.
[9] ಅವನು ತನ್ನ ಜನರಿಗೆ, “ಇಸ್ರಾಯೇಲರು ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ಹೆಚ್ಚು ಬಲವುಳ್ಳವರಾಗಿದ್ದಾರೆ.
[10] ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು, ನಮಗೆ ವಿರೋಧವಾಗಿ ಯುದ್ಧಮಾಡಿ, ದೇಶವನ್ನು ಬಿಟ್ಟು ಹೋಗಬಹುದು ಆದ್ದರಿಂದ ಅವರು ವೃದ್ಧಿಯಾಗದಂತೆ ಅವರೊಂದಿಗೆ ಬುದ್ಧಿವಂತಿಕೆಯಿಂದ ನಾವು ವರ್ತಿಸೋಣ,” ಎಂದನು.
[11] ಆಗ ಅವರನ್ನು ಬಿಟ್ಟೀ ಕೆಲಸಗಳಿಂದ ಶ್ರಮಪಡಿಸುವುದಕ್ಕಾಗಿ, ಬಿಟ್ಟೀ ಕೆಲಸಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ನೇಮಿಸಿದರು. ಅವರು ಫರೋಹನಿಗೆ ಪಿತೋಮ್ ಮತ್ತು ರಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದರು.
[12] ಆದರೆ ಈಜಿಪ್ಟನವರು ಅವರನ್ನು ಎಷ್ಟು ಶ್ರಮಪಡಿಸಿದರೋ, ಅಷ್ಟು ಅಧಿಕವಾಗಿ ಅವರು ಹೆಚ್ಚಿ ಹರಡಿಕೊಂಡದ್ದರಿಂದ ಈಜಿಪ್ಟಿನವರು ಇಸ್ರಾಯೇಲರ ಬಗ್ಗೆ ಹೆದರಿದವರಾದರು.
[13] ಆದ್ದರಿಂದ ಈಜಿಪ್ಟಿನವರು ಇಸ್ರಾಯೇಲರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾ ಸೇವೆ ಮಾಡಿಸಿಕೊಂಡರು.
[14] ಮಣ್ಣು ಅಗೆಯುವ, ಇಟ್ಟಿಗೆಯನ್ನು ಮಾಡುವ ಮತ್ತು ವ್ಯವಸಾಯದ ಎಲ್ಲಾ ವಿಧವಾದ ಕೆಲಸಗಳಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಈಜಿಪ್ಟಿನವರು ಅವರಿಂದ ಮಾಡಿಸಿದ ಎಲ್ಲಾ ಕೆಲಸವು ಕಠೋರವಾಗಿತ್ತು.
[15] ಈಜಿಪ್ಟಿನ ಅರಸನು ಶಿಪ್ರಾ ಮತ್ತು ಪೂಗಾ ಎಂದು ಹೆಸರಿದ್ದ ಹಿಬ್ರಿಯ ಸೂಲಗಿತ್ತಿಯರ ಸಂಗಡ ಮಾತನಾಡಿ,
[16] ಅವರಿಗೆ, “ನೀವು ಹಿಬ್ರಿಯ ಸ್ತ್ರೀಯರಿಗೆ ಸೂಲಗಿತ್ತಿಯ ಕೆಲಸ ಮಾಡುವುದಕ್ಕೆ ಹೆರಿಗೆಯ ಸಮಯದಲ್ಲಿ ಅವರನ್ನು ಪರಾಂಬರಿಸುವಾಗ, ಗಂಡು ಮಗುವಾದರೆ ಅದನ್ನು ಕೊಂದುಹಾಕಿರಿ, ಹೆಣ್ಣಾದರೆ ಬದುಕಲಿ,” ಎಂದು ಹೇಳಿದ್ದನು.
[17] ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಈಜಿಪ್ಟಿನ ಅರಸನು ತಮಗೆ ಹೇಳಿದಂತೆ ಮಾಡದೆ ಗಂಡು ಮಕ್ಕಳನ್ನು ಬದುಕಿಸಿದರು.
[18] ಆಗ ಈಜಿಪ್ಟಿನ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ಏಕೆ ಗಂಡು ಮಕ್ಕಳನ್ನು ಬದುಕಿಸಿದ್ದೀರಿ? ಇಂಥ ಕೆಲಸವನ್ನು ಏಕೆ ಮಾಡಿದಿರಿ?” ಎಂದನು.
[19] ಸೂಲಗಿತ್ತಿಯರು ಫರೋಹನಿಗೆ, “ಹಿಬ್ರಿಯರ ಸ್ತ್ರೀಯರು ಈಜಿಪ್ಟಿನ ಸ್ತ್ರೀಯರಂತೆ ಅಲ್ಲ, ಅವರು ಚುರುಕಾಗಿದ್ದಾರೆ. ಸೂಲಗಿತ್ತಿಯರು ಅವರ ಹತ್ತಿರ ಬರುವುದಕ್ಕೆ ಮುಂಚೆಯೇ ಹೆರುತ್ತಾರೆ,” ಎಂದರು.
[20] ಆದ್ದರಿಂದ ದೇವರು ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದರು. ಇದಲ್ಲದೆ ಇಸ್ರಾಯೇಲರು ಸಂಖ್ಯೆಯಲ್ಲೂ ಹೆಚ್ಚಾಗಿ ಬಹು ಬಲಗೊಂಡರು.
[21] ಸೂಲಗಿತ್ತಿಯರು ದೇವರಿಗೆ ಭಯಪಟ್ಟದ್ದರಿಂದ, ದೇವರು ಅವರ ಕುಟುಂಬಕ್ಕೆ ಅಭಿವೃದ್ಧಿಯನ್ನು ಉಂಟುಮಾಡಿದರು.
[22] ಆದರೆ ಫರೋಹನು ತನ್ನ ಎಲ್ಲಾ ಜನರಿಗೆ, “ಹುಟ್ಟುವ ಹಿಬ್ರಿಯರ ಗಂಡು ಮಕ್ಕಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಮಕ್ಕಳನ್ನೆಲ್ಲಾ ಬದುಕಿಸಬೇಕು,” ಎಂದು ಅಪ್ಪಣೆಕೊಟ್ಟನು.