[1] ಅನಂತರ ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ, ದೇವದೂತರು ಅವನ ಎದುರಿಗೆ ಬಂದರು.
[2] ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೈನ್ಯ,” ಎಂದು ಹೇಳಿ, ಆ ಸ್ಥಳಕ್ಕೆ ಮಹನಯಿಮ್ ಎಂದು ಹೆಸರಿಟ್ಟನು.
[3] ಯಾಕೋಬನು ಎದೋಮ್ಯರ ದೇಶವಾದ ಸೇಯೀರನ ಸೀಮೆಯಲ್ಲಿರುವ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು.
[4] ಕಳುಹಿಸುವಾಗ ಅವರಿಗೆ, “ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳಬೇಕು: ‘ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ: ಲಾಬಾನನ ಸಂಗಡ ನಾನು ಇಲ್ಲಿಯವರೆಗೆ ಪ್ರವಾಸಿಯಾಗಿದ್ದೆನು.
[5] ಈಗ ನನಗೆ ಎತ್ತು, ಕತ್ತೆ, ಕುರಿಗಳು, ದಾಸದಾಸಿಯರು ಇದ್ದಾರೆ. ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದುವಂತೆ ನಾನು ಈ ಸಂದೇಶವನ್ನು ನನ್ನ ಯಜಮಾನನಾದ ನಿಮಗೆ ತಿಳಿಸುವುದಕ್ಕಾಗಿ ಕಳುಹಿಸಿದ್ದೇನೆ,’ ಎಂದು ಹೇಳಿರಿ,” ಎಂದನು.
[6] ಆಗ ದೂತರು ಯಾಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿನ್ನ ಸಹೋದರ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರೆದುಕೊಂಡು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಿದ್ದಾನೆ,” ಎಂದರು.
[7] ಆಗ ಯಾಕೋಬನು ಬಹಳವಾಗಿ ಭಯಪಟ್ಟು, ತನ್ನ ಸಂಗಡ ಇದ್ದ ಜನರನ್ನೂ, ಕುರಿಗಳನ್ನೂ, ದನಗಳನ್ನೂ, ಒಂಟೆಗಳನ್ನೂ ಎರಡು ಗುಂಪುಗಳಾಗಿ ವಿಭಾಗಿಸಿದನು.
[8] ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ದಾಳಿಮಾಡಿದರೆ, ಉಳಿದ ಗುಂಪು ತಪ್ಪಿಸಿಕೊಂಡು ಹೋಗಬಹುದು,” ಎಂದುಕೊಂಡನು.
[9] ಇದಲ್ಲದೆ ಯಾಕೋಬನು, “ನನ್ನ ತಂದೆ ಅಬ್ರಹಾಮನ ದೇವರೇ, ನನ್ನ ತಂದೆ ಇಸಾಕನ ದೇವರೇ, ನಿಮ್ಮ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ಆಗ ನಾನು ನಿನಗೆ ಒಳ್ಳೆಯದನ್ನು ಮಾಡುವೆನು ಎಂದು ನನಗೆ ಹೇಳಿದ ಯೆಹೋವ ದೇವರೇ,
[10] ನೀವು ನಿಮ್ಮ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ, ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಏಕೆಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ, ನನ್ನ ಕೈಯಲ್ಲಿ ಕೋಲು ಮಾತ್ರವೇ ಇತ್ತು, ಈಗ ನನಗೆ ಎರಡು ಗುಂಪುಗಳಿವೆ.
[11] ನನ್ನ ಅಣ್ಣ ಏಸಾವನ ಕೈಯಿಂದ ನನ್ನನ್ನು ತಪ್ಪಿಸಿರಿ. ಏಕೆಂದರೆ ಅವನು ಬಂದು ನನ್ನನ್ನೂ, ಮಕ್ಕಳೊಂದಿಗೆ ತಾಯಂದಿರನ್ನೂ, ದಾಳಿಮಾಡುವನು ಎಂದು ನಾನು ಅವನಿಗೆ ಭಯಪಡುತ್ತೇನೆ.
[12] ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡುವೆನು ಮತ್ತು ನಿನ್ನ ಸಂತತಿಯನ್ನು ಎಣಿಸುವುದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು,’ ಎಂದು ನನಗೆ ಹೇಳಿದ್ದೀರಲ್ಲಾ?” ಎಂದನು.
[13] ಯಾಕೋಬನು ಆ ರಾತ್ರಿ ಅಲ್ಲೇ ಕಳೆದನು. ತಾನು ತಂದದ್ದರಲ್ಲಿ ಕೆಲವನ್ನು ಅವನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು.
[14] ಅವು ಯಾವುವೆಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು,
[15] ಹಾಲು ಕೊಡುವ ಮೂವತ್ತು ಒಂಟೆಗಳು, ಅವುಗಳ ಮರಿಗಳು, ನಲವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಗಂಡುಕತ್ತೆಗಳು,
[16] ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನೂ, ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ, ಅವರಿಗೆ, “ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳ ಬಿಡಿರಿ,” ಎಂದನು.
[17] ಅವನು ಮೊದಲನೆಯವನಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಕಡೆಯವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವ ಇವೆಲ್ಲ ಯಾರವು?’ ಎಂದು ಕೇಳಿದರೆ,
[18] ನೀನು ಅವನಿಗೆ, ‘ಇವು ನಿನ್ನ ದಾಸನಾದ ಯಾಕೋಬನವುಗಳೇ, ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲಾದ ಕಾಣಿಕೆ, ಅವನೂ ನಮ್ಮ ಹಿಂದೆ ಇದ್ದಾನೆ,’ ಎಂದು ಅವನಿಗೆ ಹೇಳಬೇಕು,” ಎಂದು ಆಜ್ಞಾಪಿಸಿದನು.
[19] ಎರಡನೆಯವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂ, “ನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು.
[20] ಇದಲ್ಲದೆ, ‘ನಿನ್ನ ದಾಸ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು,’ ” ಎಂದು ಆಜ್ಞಾಪಿಸಿದನು. ಏಕೆಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ಕಾಣುವೆನು. ಅವನು ನನ್ನನ್ನು ಅಂಗೀಕರಿಸುವನೇನೋ ಎಂದುಕೊಂಡನು.
[21] ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಅಲ್ಲಿಯೇ ತಂಗಿದನು.
[22] ಆ ರಾತ್ರಿಯಲ್ಲಿ ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ, ತನ್ನ ಇಬ್ಬರು ದಾಸಿಯರನ್ನೂ, ತನ್ನ ಹನ್ನೊಂದು ಮಂದಿ ಪುತ್ರರನ್ನೂ ಕರೆದುಕೊಂಡು ಯಬ್ಬೋಕ್ ಎಂಬ ಹೊಳೆಯ ದಂಡೆಯನ್ನು ದಾಟಿದನು.
[23] ಅವನು ಅವರನ್ನು ಕರೆದುಕೊಂಡು ಹೊಳೆ ದಂಡೆಯನ್ನು ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು.
[24] ಆಗ ಯಾಕೋಬನು ಒಬ್ಬನೇ ಉಳಿದಾಗ, ಒಬ್ಬ ಮನುಷ್ಯನು ಉದಯವಾಗುವವರೆಗೆ ಅವನ ಸಂಗಡ ಹೋರಾಡಿದನು.
[25] ಆ ಮನುಷ್ಯನು ಅವನನ್ನು ಜಯಿಸದೆ ಇರುವುದನ್ನು ಕಂಡು, ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಸಂಗಡ ಹೋರಾಡುತ್ತಿರುವಾಗಲೇ ಯಾಕೋಬನ ತೊಡೆಯ ಕೀಲು ತಪ್ಪಿತು.
[26] ಅವನು ಯಾಕೋಬನಿಗೆ, “ಉದಯವಾಯಿತು, ನನ್ನನ್ನು ಹೋಗಗೊಡು,” ಎಂದಾಗ. ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು, ನಾನು ನಿನ್ನನ್ನು ಹೋಗಗೊಡಿಸೆನು,” ಎಂದನು.
[27] ಆ ಮನುಷ್ಯನು ಅವನಿಗೆ, “ನಿನ್ನ ಹೆಸರು ಏನು?” ಎಂದಾಗ. ಅವನು, “ಯಾಕೋಬ,” ಎಂದನು.
[28] ಅದಕ್ಕೆ ಅವನು, “ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಎನಿಸಿಕೊಳ್ಳದೆ, ಇಸ್ರಾಯೇಲ್ ಎಂದು ನಿನಗೆ ಹೆಸರಾಗುವುದು. ಏಕೆಂದರೆ ನೀನು ದೇವರ ಸಂಗಡವೂ, ಮನುಷ್ಯರ ಸಂಗಡವೂ ಹೋರಾಡಿ ಜಯಿಸಿದ್ದೀ,” ಎಂದನು.
[29] ಯಾಕೋಬನು, “ನಿನ್ನ ಹೆಸರನ್ನು ನನಗೆ ತಿಳಿಸು,” ಎಂದು ಅವನನ್ನು ಕೇಳಿಕೊಂಡನು. ಆತನು, “ನನ್ನ ಹೆಸರನ್ನು ಏಕೆ ಕೇಳುತ್ತೀ?” ಎಂದು ಹೇಳಿ ಅವನನ್ನು ಅಲ್ಲೇ ಆಶೀರ್ವದಿಸಿದನು.
[30] ಆಗ ಯಾಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ, ನನ್ನ ಪ್ರಾಣ ಉಳಿಯಿತು,” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.
[31] ಯಾಕೋಬನು ಪೆನೀಯೇಲನ್ನು ದಾಟಿಹೋದಾಗ, ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು.
[32] ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲರು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದವರೆಗೂ ತಿನ್ನುವುದಿಲ್ಲ.