[1] ಶಿನಾರಿನ ಅರಸ ಅಮ್ರಾಫೆಲನು ಎಲ್ಲಸಾರಿನ ಅರಸ ಅರಿಯೋಕನು, ಏಲಾಮಿನ ಅರಸ ಕೆದೊರ್ಲಗೋಮರನು, ಗೋಯಿಮದ ಅರಸ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನೆಂದರೆ:
[2] ಇವರು ಸೊದೋಮಿನ ಅರಸ ಬೆರಗನೂ ಗೊಮೋರದ ಅರಸ ಬಿರ್ಶಗನೂ ಅದ್ಮಾಹದ ಅರಸ ಶಿನಾಬನಿಗೂ ಚೆಬೋಯಿಮಿನ ಅರಸ ಶೆಮೇಬರನಿಗೂ ಬೆಲಗಿನ ಅಂದರೆ, ಚೋಗರದ ಅರಸನಿಗೂ ವಿರೋಧವಾಗಿ ಯುದ್ಧಮಾಡಿದರು.
[3] ಇವರೆಲ್ಲರು ಉಪ್ಪಿನ ಸಮುದ್ರವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿಬಂದರು.
[4] ಅವರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಸೇವೆಮಾಡಿ, ಹದಿಮೂರನೆಯ ವರ್ಷದಲ್ಲಿ ತಿರುಗಿಬಿದ್ದರು.
[5] ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ, ಹಾಮಿನಲ್ಲಿ ಜೂಜ್ಯರನ್ನೂ, ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ,
[6] ಅವರ ಬೆಟ್ಟವಾದ ಸೇಯೀರನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸಮೀಪವಾದ ಏಲ್ಪಾರಾನಿನವರೆಗೂ ಅವರನ್ನು ಸೋಲಿಸಿದರು.
[7] ಅವರು ಹಿಂದಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು, ಅಮಾಲೇಕ್ಯರ ಎಲ್ಲಾ ಬಯಲನ್ನು ಹಜಜೋನ್ ತಾಮಾರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಜಯಿಸಿದರು.
[8] ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಿಮಿನ ಅರಸನೂ ಚೋಗರೆಂಬ ಬೆಲಗದ ಅರಸನೂ ಹೊರಟು,
[9] ಏಲಾಮಿನ ಅರಸ ಕೆದೊರ್ಲಗೋಮರನಿಗೂ ಗೋಯಿಮದ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸ ಅಮ್ರಾಫೆಲನಿಗೂ ಎಲ್ಲಸಾರಿನ ಅರಸ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಹೀಗೆ ನಾಲ್ವರು ಅರಸರಿಗೆ ವಿರೋಧವಾಗಿ ಐದು ಮಂದಿ ಅರಸರು ಎದುರಿಸಿದರು.
[10] ಸಿದ್ದೀಮ್ ತಗ್ಗು ಕಲ್ಲರಗಿನ ಕೆಸರುಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗಿ ಅದರಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು.
[11] ಆಗ ಅವರು ಸೊದೋಮ್, ಗೊಮೋರಗಳ ಎಲ್ಲಾ ಸಂಪತ್ತನ್ನೂ, ಅವರ ಎಲ್ಲಾ ಆಹಾರ ಪದಾರ್ಥಗಳನ್ನೂ ತೆಗೆದುಕೊಂಡು ಹೊರಟು ಹೋದರು.
[12] ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗ ಲೋಟನನ್ನು ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.
[13] ತಪ್ಪಿಸಿಕೊಂಡವನೊಬ್ಬನು ಹೋಗಿ ಹಿಬ್ರಿಯನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಆಗ ಅಬ್ರಾಮನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದ ಅಮೋರಿಯನಾದ ಮಮ್ರೆಯನ ತೋಪಿನಲ್ಲಿ ವಾಸವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು.
[14] ತನ್ನ ಸಹೋದರನ ಮಗನು ಸೆರೆಯಾಗಿ ಹೋಗಿರುವುದನ್ನು ಕೇಳಿದಾಗ, ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ, ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ, ದಾನಿನವರೆಗೆ ಹಿಂದಟ್ಟಿದನು.
[15] ಅಬ್ರಾಮನು ರಾತ್ರಿಯಲ್ಲಿ ಅವರಿಗೆ ವಿರೋಧವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ, ಅವರನ್ನು ಹೊಡೆದು, ದಮಸ್ಕದ ಉತ್ತರದಲ್ಲಿ ಹೋಬಾದವರೆಗೆ ಅವರನ್ನು ಸೋಲಿಸಿದನು.
[16] ಆಸ್ತಿಯನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಬಂಧುವಾದ ಲೋಟನನ್ನೂ, ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತೆಗೆದುಕೊಂಡು ಬಂದನು.
[17] ಅವನು ಕೆದೊರ್ಲಗೋಮರನನ್ನೂ, ಅವನ ಸಂಗಡ ಇದ್ದ ರಾಜರನ್ನೂ ಸೋಲಿಸಿ, ಹಿಂದಿರುಗಿ ಬಂದಾಗ, ಸೊದೋಮಿನ ಅರಸನು ಹೊರಟು ಶಾವೆ ತಗ್ಗು ಎಂಬ ಅರಸನ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಳ್ಳುವುದಕ್ಕಾಗಿ ಬಂದನು.
[18] ಸಾಲೇಮಿನ ಅರಸ ಮೆಲ್ಕಿಜೆದೇಕನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಂದನು. ಇವನು ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು.
[19] ಇವನು ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು: “ಅಬ್ರಾಮನು ಭೂಮಿ, ಆಕಾಶವನ್ನು ಸೃಷ್ಟಿಸಿದ ಮಹೋನ್ನತ ದೇವರಿಂದ ಆಶೀರ್ವಾದ ಹೊಂದಲಿ.
[20] ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ದೇವರು ಸ್ತುತಿಹೊಂದಲಿ.” ಅಬ್ರಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನು.
[21] ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿಕೊಂಡು ಬಂದ ಜನರನ್ನು ನನಗೆ ಕೊಡು. ಸಂಪತ್ತನ್ನು ನೀನು ತೆಗೆದುಕೋ,” ಎಂದನು.
[22] ಅದಕ್ಕೆ ಅಬ್ರಾಮನು ಸೊದೋಮಿನ ಅರಸನಿಗೆ, “ಭೂಮಿ ಆಕಾಶವನ್ನು ಸ್ವಾಧೀನ ಪಡಿಸಿಕೊಂಡಿರುವ ಮಹೋನ್ನತ ದೇವರಾಗಿರುವ ಯೆಹೋವ ದೇವರ ಕಡೆಗೆ ನನ್ನ ಕೈ ಎತ್ತಿ ಪ್ರಮಾಣ ಮಾಡುತ್ತೇನೆ.
[23] ನಿನಗೆ ಸೇರಿದ ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ’ ಎಂದು ನೀನು ಹೇಳಬಾರದು.
[24] ನನ್ನ ಆಳುಗಳು ಊಟಮಾಡಿದ್ದು ಸಾಕು. ನನ್ನ ಸಂಗಡ ಬಂದ ಆನೇರ, ಎಷ್ಕೋಲ್ ಮತ್ತು ಮಮ್ರೆ ಎಂಬ ಈ ಜನರ ಪಾಲನ್ನು ಬಿಟ್ಟು ನಾನು ಏನನ್ನೂ ತೆಗೆದುಕೊಳ್ಳುವುದಿಲ್ಲ. ಇವರು ತಮ್ಮ ಪಾಲನ್ನು ತೆಗೆದುಕೊಳ್ಳಲಿ,” ಎಂದನು.