Skip to content
Opens in a new window
Listen to this chapter • 3:45

[1] ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು.

[2] ಅವಳು ಕಾನಾನ್ ದೇಶದಲ್ಲಿರುವ ಹೆಬ್ರೋನಿನಲ್ಲಿ ಅಂದರೆ ಕಿರ್ಯತ್ ಅರ್ಬದಲ್ಲಿ ಮರಣಹೊಂದಿದಳು. ಅಬ್ರಹಾಮನು ಸಾರಳಿಗೋಸ್ಕರ ಗೋಳಾಡಿದನು.

[3] ಆಗ ಅಬ್ರಹಾಮನು ತನ್ನ ಹೆಂಡತಿಯ ಶವದ ಬಳಿಯಿಂದ ಎದ್ದು, ಹಿತ್ತಿಯರ ಬಳಿಗೆ ಬಂದು, ಅವರಿಗೆ,

[4] “ನಾನು ನಿಮ್ಮೊಂದಿಗೆ ಪರದೇಶಸ್ಥನೂ, ಪರವಾಸಿಯೂ ಆಗಿದ್ದೇನೆ. ನನಗೆ ನಿಮ್ಮ ಬಳಿಯಲ್ಲಿ ಸಮಾಧಿಯ ಸ್ಥಳವನ್ನು ಕೊಡಿರಿ. ಆಗ ನನ್ನ ಹೆಂಡತಿಯ ಶವವನ್ನು ಹೂಳಿಡುವೆನು,” ಎಂದನು.

[5] ಹಿತ್ತಿಯರು ಅಬ್ರಹಾಮನಿಗೆ ಉತ್ತರಕೊಟ್ಟು,

[6] “ಒಡೆಯಾ, ನಮ್ಮ ಮಾತನ್ನು ಕೇಳು, ನೀನು ನಮ್ಮ ಮಧ್ಯದಲ್ಲಿ ಮಹಾಪ್ರಭುವಾಗಿದ್ದೀ. ನಮ್ಮ ಸಮಾಧಿಗಳೊಳಗೆ ಉತ್ತಮವಾದದ್ದರಲ್ಲಿ ನಿನ್ನ ಹೆಂಡತಿಯ ಶವವನ್ನು ಹೂಳಿಡು. ನಮ್ಮಲ್ಲಿ ಯಾರೂ ನಿನಗೆ ಸಮಾಧಿಯನ್ನು ಕೊಡುವುದಿಲ್ಲ ಎಂದು ಹೇಳಲಾರರು,” ಎಂದರು.

[7] ಆಗ ಅಬ್ರಹಾಮನು ಎದ್ದು, ಆ ದೇಶದ ಜನರಾದ ಹಿತ್ತಿಯರ ಮುಂದೆ ತಲೆಬಾಗಿ,

[8] ಅವರ ಸಂಗಡ ಮಾತನಾಡಿ, “ನಾನು ನನ್ನ ಹೆಂಡತಿಯ ಶವವನ್ನು ಹೂಳಿಡುವುದು ನಿಮ್ಮ ಮನಸ್ಸಿಗೆ ಸರಿಬಿದ್ದರೆ, ನನ್ನ ಮಾತು ಕೇಳಿ ಚೋಹರನ ಮಗ ಎಫ್ರೋನನನ್ನು ನನಗಾಗಿ ಬೇಡಿಕೊಳ್ಳಿರಿ.

[9] ಅವನು ತನ್ನ ಹೊಲದ ಅಂಚಿನಲ್ಲಿರುವ ಮಕ್ಪೇಲಾ ಗವಿಯನ್ನು ನನಗೆ ಕೊಡಲಿ. ಅವನು ಅದನ್ನು ತಕ್ಕ ಕ್ರಯಕ್ಕೆ ನಿಮ್ಮ ಎದುರಿನಲ್ಲಿ ನನಗೆ ಕೊಡಲಿ,” ಎಂದನು.

[10] ಆಗ ಅವರ ಮಧ್ಯದಲ್ಲಿ ಕುಳಿತುಕೊಂಡಿದ್ದ ಹಿತ್ತಿಯನಾದ ಎಫ್ರೋನನು ಪಟ್ಟಣದ ದ್ವಾರದ ಬಳಿಯಲ್ಲಿ ಕೂತಿದ್ದ ಎಲ್ಲಾ ಹಿತ್ತಿಯರು ಕೇಳುವಂತೆ ಅಬ್ರಹಾಮನಿಗೆ,

[11] “ಒಡೆಯನೇ ಹಾಗಲ್ಲ, ನನ್ನ ಮಾತನ್ನು ಕೇಳು. ಆ ಹೊಲವನ್ನು ನಿನಗೆ ಕೊಡುತ್ತೇನೆ. ಅದರಲ್ಲಿರುವ ಗವಿಯನ್ನೂ ನಿನಗೆ ಕೊಡುತ್ತೇನೆ. ಅದನ್ನು ನನ್ನ ಜನರ ಎದುರಿನಲ್ಲಿ ನಿನಗೆ ಕೊಡುತ್ತೇನೆ. ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.

[12] ಆಗ ಅಬ್ರಹಾಮನು ದೇಶದ ಜನರ ಮುಂದೆ ತಲೆಬಾಗಿ,

[13] ದೇಶದ ಜನರು ಕೇಳುವಂತೆ ಎಫ್ರೋನನಿಗೆ, “ನೀನು ನನಗೆ ಕೊಡಬೇಕೆಂದಿದ್ದರೆ ನನ್ನ ಮಾತನ್ನು ಕೇಳು. ನಾನು ಹೊಲದ ಕ್ರಯವನ್ನು ಕೊಡುತ್ತೇನೆ. ಅದನ್ನು ನನ್ನಿಂದ ತೆಗೆದುಕೋ, ಆಗ ನನ್ನ ಹೆಂಡತಿಯ ಶವವನ್ನು ಅಲ್ಲಿ ಹೂಳಿಡುವೆನು,” ಎಂದನು.

[14] ಎಫ್ರೋನನು ಅಬ್ರಹಾಮನಿಗೆ ಉತ್ತರವಾಗಿ,

[15] “ನನ್ನ ಒಡೆಯನೇ, ನನ್ನ ಮಾತನ್ನು ಕೇಳು. ಆ ಭೂಮಿಯು ನಾನೂರು ಬೆಳ್ಳಿಯ ನಾಣ್ಯಗಳ ಬೆಲೆಯುಳ್ಳದ್ದು, ಈ ಕುರಿತು ನಮ್ಮೊಳಗೇ ವಾದವೇಕೆ? ನಿನ್ನ ಹೆಂಡತಿಯ ಶವವನ್ನು ಹೂಳಿಡು,” ಎಂದನು.

[16] ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿಕೊಂಡು, ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ಬೆಲೆ ಅಂದರೆ, ವರ್ತಕರಲ್ಲಿ ನಡೆಯುವ ನಾನೂರು ಬೆಳ್ಳಿ ನಾಣ್ಯಗಳನ್ನು ತೂಕಮಾಡಿ ಅವನಿಗೆ ಕೊಟ್ಟನು.

[17] ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲದಲ್ಲಿರುವ ಎಫ್ರೋನನ ಹೊಲವೂ, ಆ ಹೊಲದಲ್ಲಿರುವ ಗವಿಯೂ, ಆ ಹೊಲದ ಸುತ್ತಲೂ ಇರುವ ಎಲ್ಲಾ ಮರಗಳೂ,

[18] ಹಿತ್ತಿಯರ ಮುಂದೆಯೂ, ಅವರ ಪಟ್ಟಣದ ಹೆಬ್ಬಾಗಿಲಿನಲ್ಲಿ ಸೇರುವ ಎಲ್ಲರ ಮುಂದೆಯೂ ಅಬ್ರಹಾಮನ ಆಸ್ತಿಯೆಂದು ದೃಢವಾಯಿತು.

[19] ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿ ಸಾರಳನ್ನು ಕಾನಾನ್ ದೇಶದಲ್ಲಿ ಹೆಬ್ರೋನ್ ಎಂಬ ಮಮ್ರೆಗೆ ಎದುರಾಗಿರುವ ಮಕ್ಪೇಲ ಹೊಲದ ಗವಿಯಲ್ಲಿ ಹೂಳಿಟ್ಟನು.

[20] ಆ ಹೊಲವೂ, ಅದರಲ್ಲಿರುವ ಗವಿಯೂ ಹಿತ್ತಿಯರಿಂದ ಅಬ್ರಹಾಮನಿಗೆ ಸ್ವಂತ ಸಮಾಧಿ ಎಂದು ಸ್ಥಿರವಾಯಿತು.

ಆದಿಕಾಂಡ — Chapters