Skip to content
Opens in a new window
Listen to this chapter • 3:36

[1] ಆಗ ಅಬ್ರಾಮನು ತನ್ನ ಹೆಂಡತಿಯೊಂದಿಗೆ ತನಗೆ ಇದ್ದದ್ದನ್ನೆಲ್ಲಾ ತೆಗೆದುಕೊಂಡು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ನೆಗೆವಕ್ಕೆ ಪ್ರಯಾಣಮಾಡಿದನು.

[2] ಅಬ್ರಾಮನು ಪಶುಗಳು, ಬೆಳ್ಳಿ ಮತ್ತು ಬಂಗಾರವನ್ನು ಹೊಂದಿ ಬಹು ಧನವಂತನಾಗಿದ್ದನು.

[3] ಅವನು ತನ್ನ ಪ್ರಯಾಣಗಳಲ್ಲಿ ನೆಗೆವದಿಂದ ಬೇತೇಲಿಗೆ, ಎಂದರೆ ಮೊದಲು ಬೇತೇಲಿಗೂ ಆಯಿ ಎಂಬ ಊರಿಗೂ ಮಧ್ಯದಲ್ಲಿ ಅವನ ಗುಡಾರವಿದ್ದ ಸ್ಥಳಕ್ಕೆ ಬಂದನು.

[4] ಅಲ್ಲಿ ಅಬ್ರಾಮನು ಯೆಹೋವ ದೇವರ ಹೆಸರನ್ನು ಹೇಳಿಕೊಂಡು ಆರಾಧಿಸಿದನು.

[5] ಅಬ್ರಾಮನ ಸಂಗಡ ಬಂದ ಲೋಟನಿಗೆ ಸಹ ಕುರಿ ದನಗಳೂ ಗುಡಾರಗಳೂ ಇದ್ದವು.

[6] ಆಗ ಅವರು ಒಂದಾಗಿ ವಾಸಿಸಲಿಕ್ಕೆ ಆ ಸ್ಥಳ ಸಾಲದೆ ಹೋಯಿತು. ಅವರಿಬ್ಬರ ಸಂಪತ್ತು ಬಹಳವಾಗಿದ್ದರಿಂದ ಒಂದೇ ಸ್ಥಳದಲ್ಲಿ ಅವರು ವಾಸವಾಗಿರಲು ಆಗಲಿಲ್ಲ.

[7] ಆಗ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಯಿತು. ಕಾನಾನ್ಯರೂ ಪೆರಿಜೀಯರೂ ಆಗ ದೇಶದಲ್ಲಿ ವಾಸವಾಗಿದ್ದರು.

[8] ಅಬ್ರಾಮನು ಲೋಟನಿಗೆ, “ನನಗೂ, ನಿನಗೂ; ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಿರಬಾರದು. ಏಕೆಂದರೆ ನಾವು ಬಳಗದವರು.

[9] ದೇಶವೆಲ್ಲಾ ನಿನ್ನ ಮುಂದೆ ಇರುತ್ತದೆಯಲ್ಲವೆ? ನಾವು ಪ್ರತ್ಯೇಕವಾಗೋಣ. ನೀನು ಎಡಕ್ಕೆ ಹೋದರೆ, ನಾನು ಬಲಕ್ಕೆ ಹೋಗುವೆನು; ನೀನು ಬಲಕ್ಕೆ ಹೋದರೆ, ನಾನು ಎಡಕ್ಕೆ ಹೋಗುವೆನು,” ಎಂದನು.

[10] ಲೋಟನು ತನ್ನ ಕಣ್ಣುಗಳನ್ನೆತ್ತಿ ನೋಡಿ ಯೊರ್ದನಿನ ಮೈದಾನವನ್ನೆಲ್ಲಾ ಕಂಡನು. ಏಕೆಂದರೆ ಯೆಹೋವ ದೇವರು ಸೊದೋಮನ್ನೂ ಗೊಮೋರವನ್ನೂ ನಾಶ ಮಾಡುವುದಕ್ಕಿಂತ ಮುಂಚೆ, ಅದೆಲ್ಲಾ ಚೋಗರಿನವರೆಗೆ ನೀರಾವರಿ ಪ್ರದೇಶವಾಗಿದ್ದು, ಯೆಹೋವ ದೇವರ ತೋಟದಂತೆಯೂ ಈಜಿಪ್ಟ್ ದೇಶದಂತೆಯೂ ಇತ್ತು.

[11] ಆದುದರಿಂದ ಲೋಟನು ಯೊರ್ದನಿನ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಲೋಟನು ಪೂರ್ವದಿಕ್ಕಿನ ಕಡೆಗೆ ಹೊರಟಿದ್ದರಿಂದ, ಅವರು ಒಬ್ಬರಿಂದೊಬ್ಬರು ಪ್ರತ್ಯೇಕವಾದರು.

[12] ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನಾದರೋ ಸಮತಟ್ಟಾದ ಊರುಗಳಲ್ಲಿ ವಾಸಿಸುತ್ತಾ ಸೊದೋಮಿನ ಬಳಿ ತನ್ನ ಗುಡಾರವನ್ನು ಹಾಕಿದನು.

[13] ಸೊದೋಮಿನ ಜನರು ದುಷ್ಟರಾಗಿದ್ದರು ಮತ್ತು ಯೆಹೋವ ದೇವರ ವಿರುದ್ಧ ಬಹಳ ಪಾಪಮಾಡುತ್ತಿದ್ದರು.

[14] ಲೋಟನು ಅಬ್ರಾಮನಿಂದ ಹೋದ ಮೇಲೆ ಯೆಹೋವ ದೇವರು ಅವನಿಗೆ, “ಈಗ ನೀನಿರುವ ಸ್ಥಳದಿಂದ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಪಶ್ಚಿಮಕ್ಕೂ ಕಣ್ಣೆತ್ತಿ ನೋಡು.

[15] ಏಕೆಂದರೆ ನೀನು ಕಾಣುವ ದೇಶವನ್ನೆಲ್ಲಾ ನಾನು ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.

[16] ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ, ನಿನ್ನ ಸಂತಾನದವರನ್ನು ಸಹ ಲೆಕ್ಕಿಸಲು ಸಾಧ್ಯವಾಗುವುದು.

[17] ಎದ್ದು ದೇಶದ ಉದ್ದಗಲಕ್ಕೂ ನಡೆದಾಡು. ನಾನು ನಿನಗೆ ಅದನ್ನು ಕೊಡುವೆನು,” ಎಂದರು.

[18] ಅನಂತರ ಅಬ್ರಾಮನು ತನ್ನ ಗುಡಾರವನ್ನು ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆಯ ತೋಪಿಗೆ ಬಂದು, ಅಲ್ಲಿ ವಾಸವಾಗಿದ್ದನು. ಅಲ್ಲಿ ಯೆಹೋವ ದೇವರಿಗೆ ಒಂದು ಬಲಿಪೀಠವನ್ನು ಕಟ್ಟಿದನು.

ಆದಿಕಾಂಡ — Chapters