Skip to content
Opens in a new window
Listen to this chapter • 6:15

[1] ಯೆಹೋವ ದೇವರು ಸಾರಳಿಗೆ ವಾಗ್ದಾನ ಮಾಡಿದಂತೆ ಆಕೆಗೆ ದಯೆತೋರಿಸಿದರು.

[2] ದೇವರು ಅಬ್ರಹಾಮನಿಗೆ ಹೇಳಿದ ಸಮಯದಲ್ಲಿ ಅವನು ಮುದುಕನಾಗಿದ್ದಾಗ, ಸಾರಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು.

[3] ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ, ಇಸಾಕ, ಎಂದು ಹೆಸರಿಟ್ಟನು.

[4] ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು.

[5] ಅಬ್ರಹಾಮನ ಮಗ ಇಸಾಕನು ಜನಿಸಿದಾಗ ಅವನು ನೂರು ವರ್ಷದವನಾಗಿದ್ದನು.

[6] ಆಗ ಸಾರಳು, “ದೇವರು ನನ್ನನ್ನು ನಗುವಂತೆ ಮಾಡಿದ್ದಾರೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು.

[7] ಸಾರಳು ಮಕ್ಕಳಿಗೆ ಹಾಲು ಕುಡಿಸುವಳೆಂದು ಅಬ್ರಹಾಮನಿಗೆ ಯಾರು ಹೇಳುತ್ತಿದ್ದರು? ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು,” ಎಂದಳು.

[8] ಇಸಾಕನು ಬೆಳೆದು ಬಾಲಕನಾಗಿ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟನು. ಆ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣ ಮಾಡಿಸಿದನು.

[9] ಈಜಿಪ್ಟಿನವಳಾದ ಹಾಗರಳಿಗೆ ಅಬ್ರಹಾಮನಿಂದ ಜನಿಸಿದ ಮಗನು ಹಾಸ್ಯ ಮಾಡುವುದನ್ನು ಸಾರಳು ನೋಡಿ,

[10] ಅಬ್ರಹಾಮನಿಗೆ, “ಈ ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಈ ದಾಸಿಯ ಮಗನು ನನ್ನ ಮಗ ಇಸಾಕನ ಸಂಗಡ ಬಾಧ್ಯನಾಗಬಾರದು,” ಎಂದಳು.

[11] ಅಬ್ರಹಾಮನಿಗೆ ತನ್ನ ಮಗನ ದೆಸೆಯಿಂದ ಬಹು ದುಃಖವಾಯಿತು.

[12] ಆಗ ದೇವರು ಅಬ್ರಹಾಮನಿಗೆ, “ಹುಡುಗನಿಗಾಗಿಯೂ, ನಿನ್ನ ದಾಸಿಗಾಗಿಯೂ ನೀನು ಚಿಂತಿಸಬೇಡ. ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು. ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು.

[13] ದಾಸಿಯ ಮಗನೂ ನಿನ್ನ ಸಂತಾನವಾಗಿರುವುದರಿಂದ, ಅವನನ್ನೂ ನಾನು ಜನಾಂಗವಾಗಿ ಮಾಡುವೆನು,” ಎಂದರು.

[14] ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ, ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು, ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ, ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಮರುಭೂಮಿಯಲ್ಲಿ ಅಲೆದಾಡುತ್ತಿದ್ದಳು.

[15] ತಿತ್ತಿಯೊಳಗಿನ ನೀರು ಮುಗಿದಾಗ, ಆಕೆ ಮಗುವನ್ನು ಒಂದು ಮರದ ಕೆಳಗೆ ಮಲಗಿಸಿ,

[16] ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು, “ಮಗುವಿನ ಸಾವನ್ನು ನಾನು ನೋಡಲಾರೆನು,” ಎಂದು ಹೇಳಿ ಸ್ವರವೆತ್ತಿ ಅತ್ತಳು.

[17] ದೇವರು ಆ ಹುಡುಗನ ಅಳುವ ಸ್ವರವನ್ನು ಕೇಳಿದರು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು, ಆಕೆಗೆ, “ಹಾಗರಳೇ, ವ್ಯಥೆಪಡುವುದೇಕೆ? ಅಂಜಬೇಡ ದೇವರು ಹುಡುಗನ ಸ್ವರವನ್ನು ಕೇಳಿದ್ದಾರೆ.

[18] ಎದ್ದು ಹುಡುಗನನ್ನು ಎತ್ತಿಕೊಂಡು ನಿನ್ನ ಕೈಯಲ್ಲಿ ತೆಗೆದುಕೋ. ನಾನು ಅವನನ್ನು ದೊಡ್ಡ ಜನಾಂಗದವನನ್ನಾಗಿ ಮಾಡುವೆನು,” ಎಂದನು.

[19] ದೇವರು ಆಕೆಯ ಕಣ್ಣುಗಳನ್ನು ತೆರೆಯಲು, ಆಕೆಯು ನೀರಿನ ಬಾವಿಯನ್ನು ನೋಡಿದಳು. ಅಲ್ಲಿಗೆ ಹೋಗಿ ತಿತ್ತಿಯಲ್ಲಿ ನೀರನ್ನು ತುಂಬಿಸಿ, ಹುಡುಗನಿಗೆ ಕುಡಿಯಲು ಕೊಟ್ಟಳು.

[20] ದೇವರು ಆ ಹುಡುಗನ ಸಂಗಡ ಇದ್ದರು. ಹುಡುಗನು ಬೆಳೆದು ಮರುಭೂಮಿಯಲ್ಲಿ ವಾಸಮಾಡಿ ಬಿಲ್ಲುಗಾರನಾದನು.

[21] ಇಷ್ಮಾಯೇಲನು ಪಾರಾನಿನ ಮರುಭೂಮಿಯಲ್ಲಿ ವಾಸಮಾಡುತ್ತಿದ್ದಾಗ, ಅವನ ತಾಯಿಯು ಅವನಿಗೋಸ್ಕರ ಈಜಿಪ್ಟ್ ದೇಶದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.

[22] ಆ ಕಾಲದಲ್ಲಿ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಕಾರ್ಯಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾರೆ.

[23] ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು.

[24] ಅದಕ್ಕೆ ಅಬ್ರಹಾಮನು, “ನಾನು ಹಾಗೆಯೇ ಪ್ರಮಾಣ ಮಾಡುತ್ತೇನೆ,” ಎಂದನು.

[25] ಅಬೀಮೆಲೆಕನ ಸೇವಕರು ಬಲಾತ್ಕಾರದಿಂದ ತೆಗೆದುಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಿದನು.

[26] ಅದಕ್ಕೆ ಅಬೀಮೆಲೆಕನು, “ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆ. ನೀನೂ ನನಗೆ ತಿಳಿಸಲಿಲ್ಲ. ನಾನು ಇಂದಿನವರೆಗೂ ಅದನ್ನು ಕೇಳಲೂ ಇಲ್ಲ,” ಎಂದನು.

[27] ಆಗ ಅಬ್ರಹಾಮನು ಕುರಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು. ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು.

[28] ಅಬ್ರಹಾಮನು ಹಿಂಡಿನಿಂದ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ಮಾಡಿ ನಿಲ್ಲಿಸಿದನು.

[29] ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಆ ಏಳು ಹೆಣ್ಣು ಕುರಿಮರಿಗಳನ್ನು ಬೇರೆಯಾಗಿ ನಿಲ್ಲಿಸಿದ ಅರ್ಥ ಏನು?” ಎಂದನು.

[30] ಅದಕ್ಕೆ ಅಬ್ರಹಾಮನು, “ನಾನೇ ಆ ಬಾವಿಯನ್ನು ಅಗೆದಿದ್ದೇನೆಂಬುದಕ್ಕೆ ಸಾಕ್ಷಿಯಾಗಿ ಆ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು,” ಎಂದನು.

[31] ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣ ಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಅಬ್ರಹಾಮನು ಹೆಸರಿಟ್ಟನು.

[32] ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿದರು.

[33] ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು, ಅಲ್ಲಿ ನಿತ್ಯ ದೇವರಾಗಿರುವ ಯೆಹೋವ ದೇವರ ಹೆಸರನ್ನು ಹೇಳಿ ಆರಾಧಿಸಿದನು.

[34] ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹುಕಾಲ ತಂಗಿದ್ದನು.

ಆದಿಕಾಂಡ — Chapters