[1] ಭೂಮಿಯ ಮೇಲೆ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ ಅವರಿಗೆ ಪುತ್ರಿಯರು ಹುಟ್ಟಿದರು.
[2] ಆಗ ದೇವಪುತ್ರರು, ಮನುಷ್ಯ ಪುತ್ರಿಯರ ಸೌಂದರ್ಯವನ್ನು ಕಂಡು ಅವರನ್ನು ಆರಿಸಿಕೊಂಡು, ತಮಗೆ ಹೆಂಡತಿಯರನ್ನಾಗಿ ಮಾಡಿಕೊಂಡರು.
[3] ಆಗ ಯೆಹೋವ ದೇವರು, “ನನ್ನ ಆತ್ಮವು ಮನುಷ್ಯರಲ್ಲಿ ನಿತ್ಯವಾಗಿ ಇರುವುದಿಲ್ಲ. ಏಕೆಂದರೆ ಅವರು ಮರ್ತ್ಯರೇ. ಆದರೂ ಅವರ ಆಯುಷ್ಯವು ನೂರ ಇಪ್ಪತ್ತು ವರ್ಷಗಳಾಗಿರುವುದು,” ಎಂದರು.
[4] ಆ ದಿನಗಳಲ್ಲಿ ಭೂಮಿಯ ಮೇಲೆ ನೆಫೀಲಿಯೆಂಬ ರಾಕ್ಷಸ ವಂಶದವರು ಇದ್ದರು. ನಂತರದಲ್ಲಿಯೂ ಇದ್ದರು. ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಕೂಡಿದಾಗ, ಮಕ್ಕಳು ಹುಟ್ಟಿದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಿಗಳು.
[5] ಮನುಷ್ಯನ ದುಷ್ಟತನವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು.
[6] ಯೆಹೋವ ದೇವರು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ನಿಟ್ಟುಸಿರುಬಿಟ್ಟು, ತಮ್ಮ ಹೃದಯದಲ್ಲಿ ನೊಂದುಕೊಂಡರು.
[7] ಇದಲ್ಲದೆ ಯೆಹೋವ ದೇವರು, “ನಾನು ಸೃಷ್ಟಿಸಿದ ಮನುಷ್ಯನಿಂದ ಹಿಡಿದು, ಸಕಲ ಪ್ರಾಣಿ, ಆಕಾಶದ ಪಕ್ಷಿಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನು, ಭೂಮಿಯ ಮೇಲಿನಿಂದ ಎಲ್ಲವನ್ನು ನಾಶಮಾಡುವೆನು. ನಾನು ಅವರನ್ನು ಉಂಟುಮಾಡಿದ್ದಕ್ಕೆ ದುಃಖಪಡುತ್ತೇನೆ,” ಎಂದರು.
[8] ಆದರೆ ನೋಹನಿಗೆ ಯೆಹೋವ ದೇವರ ದಯೆ ದೊರಕಿತು.
[9] ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ: ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು.
[10] ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳಿದ್ದರು.
[11] ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು. ಹಿಂಸಾಚಾರವು ಲೋಕವನ್ನು ತುಂಬಿಕೊಂಡಿತ್ತು.
[12] ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋಗಿತ್ತು, ಮನುಷ್ಯರೆಲ್ಲರೂ ಭೂಮಿಯ ಮೇಲೆ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.
[13] ಆಗ ದೇವರು ನೋಹನಿಗೆ, “ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು.
[14] ಆದ್ದರಿಂದ ನಿನಗೋಸ್ಕರವಾಗಿ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ಕೋಣೆಗಳನ್ನು ಮಾಡು, ಅದರ ಒಳಭಾಗಕ್ಕೂ ಹೊರಭಾಗಕ್ಕೂ ರಾಳವನ್ನು ಹಚ್ಚು.
[15] ನೀನು ಅದನ್ನು ಈ ರೀತಿಯಾಗಿ ಮಾಡತಕ್ಕದ್ದು: ನಾವೆಯ ಉದ್ದವು ಸುಮಾರು ಒಂದುನೂರ ಮೂವತ್ತೈದು ಮೀಟರ್, ಅದರ ಅಗಲ ಇಪ್ಪತ್ತಮೂರು ಮೀಟರ್, ಅದರ ಎತ್ತರ ಹದಿನಾಲ್ಕು ಮೀಟರ್ ಇರಬೇಕು.
[16] ಅದಕ್ಕೆ ಚಾವಣಿಯನ್ನು ಮಾಡು, ಅದರ ಕೆಳಗೆ ಹದಿನೆಂಟು ಇಂಚಿನ ಕಿಟಕಿಯನ್ನು ನಾವೆಯ ಸುತ್ತಲೂ ಮಾಡಬೇಕು; ಅದರ ಪಕ್ಕದಲ್ಲಿ ನಾವೆಯ ಬಾಗಿಲನ್ನು ಇಡಬೇಕು. ಕೆಳಗಿನದು, ಎರಡನೆಯದು, ಮೂರನೆಯದು ಎಂಬ ಮೂರು ಅಂತಸ್ತುಗಳನ್ನು ಮಾಡಬೇಕು.
[17] ನಾನು ಆಕಾಶದ ಕೆಳಗಿರುವ ಜೀವಶ್ವಾಸವುಳ್ಳ ಸಕಲ ಪ್ರಾಣಿಗಳನ್ನು ನಾಶಮಾಡುವುದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ. ಆಗ ಭೂಮಿಯಲ್ಲಿರುವುದೆಲ್ಲವೂ ನಾಶವಾಗುವುದು.
[18] ಆದರೆ ನಾನು ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀನು, ನಿನ್ನ ಸಂಗಡ ನಿನ್ನ ಮಕ್ಕಳು, ನಿನ್ನ ಹೆಂಡತಿ ಹಾಗೂ ಸೊಸೆಯರು ನಾವೆಯೊಳಗೆ ಸೇರಬೇಕು.
[19] ಜೀವಿಗಳ ಪ್ರತಿಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು; ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಜೀವಂತವಾಗಿ ಉಳಿಸಿಕೊಳ್ಳಬೇಕು.
[20] ಪಕ್ಷಿಗಳಲ್ಲಿ ಅವುಗಳ ಜಾತಿಗನುಸಾರವಾಗಿ, ಪ್ರಾಣಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಮತ್ತು ನೆಲದ ಮೇಲೆ ಹರಿದಾಡುವ ಸಕಲ ಜೀವಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಎರಡೆರಡು ಬದುಕಿಬಾಳಲು ಅವುಗಳನ್ನು ನೀನು ಕಾಪಾಡುವಂತೆ ನಿನ್ನ ಬಳಿಗೆ ಬರುವುವು.
[21] ನೀನು, ಎಲ್ಲ ವಿಧವಾದ ಆಹಾರ ಪದಾರ್ಥಗಳನ್ನು ಕೂಡಿಸಿಡಬೇಕು. ಅದು ನಿಮಗೂ ಮತ್ತು ಪ್ರಾಣಿಗಳಿಗೂ ಆಹಾರವಾಗಿರಬೇಕು,” ಎಂದು ಹೇಳಿದರು.
[22] ದೇವರು ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನು ಮಾಡಿದನು.