[1] ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ, ದೇಶದಲ್ಲಿ ಮತ್ತೊಂದು ಬರವು ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
[2] ಆಗ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ಈಜಿಪ್ಟಿಗೆ ಇಳಿದು ಹೋಗಬೇಡ. ನಾನು ನಿನಗೆ ಹೇಳುವ ದೇಶದಲ್ಲಿ ವಾಸವಾಗಿರು.
[3] ಈ ದೇಶದಲ್ಲಿ ಪ್ರವಾಸಿಯಾಗಿರು. ಆಗ ನಾನು ನಿನ್ನ ಸಂಗಡ ಇದ್ದು, ನಿನ್ನನ್ನು ಆಶೀರ್ವದಿಸುವೆನು. ನಿನಗೂ, ನಿನ್ನ ಸಂತಾನಕ್ಕೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ತಂದೆ ಅಬ್ರಹಾಮನಿಗೆ ನಾನು ಮಾಡಿದ ಪ್ರಮಾಣವನ್ನು ಈಡೇರಿಸುವೆನು.
[4] ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವಾಗುವುದು.
[5] ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ನನ್ನ ವಿಧಿಯನ್ನೂ, ನನ್ನ ಆಜ್ಞೆಗಳನ್ನೂ, ನನ್ನ ಕಟ್ಟಳೆಗಳನ್ನೂ ನನ್ನ ನೇಮಗಳನ್ನೂ, ಕೈಗೊಂಡು ನಡೆದನು,” ಎಂದರು.
[6] ಆಗ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.
[7] ಆ ಸ್ಥಳದ ಮನುಷ್ಯರು ಅವನ ಹೆಂಡತಿಯ ವಿಷಯದಲ್ಲಿ ವಿಚಾರಿಸಿದಾಗ ಅವನು, ರೆಬೆಕ್ಕಳು ನೋಟಕ್ಕೆ ಚೆಲುವೆಯಾಗಿದ್ದುದರಿಂದ ಆಕೆಯ ನಿಮಿತ್ತ ಆ ಸ್ಥಳದ ಜನರು ತನ್ನನ್ನು ಕೊಂದಾರೆಂದು, ಆಕೆ ತನ್ನ ಹೆಂಡತಿಯೆಂದು ಹೇಳುವುದಕ್ಕೆ ಅಂಜಿ ಅವನು, “ಆಕೆಯು ನನ್ನ ತಂಗಿ” ಎಂದನು.
[8] ಅವನು ಅಲ್ಲಿ ಬಹಳ ದಿನಗಳಿದ್ದ ಮೇಲೆ, ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡುತ್ತಿದ್ದಾಗ, ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸಮಾಡುವುದನ್ನು ಕಂಡನು.
[9] ಆಗ ಅಬೀಮೆಲೆಕನು ಇಸಾಕನನ್ನು ಕರೆದು, “ಆಕೆಯು ಖಂಡಿತ ನಿನ್ನ ಹೆಂಡತಿಯಾಗಿದ್ದಾಳೆ. ಆದರೆ ನೀನು, ‘ಆಕೆಯು ನನ್ನ ತಂಗಿ,’ ಎಂದು ಏಕೆ ಹೇಳಿದೆ?” ಎಂದನು. ಇಸಾಕನು ಅವನಿಗೆ, “ನಾನು ಆಕೆಯ ನಿಮಿತ್ತ ಸಾಯಬಾರದೆಂದು ಹಾಗೆ ಹೇಳಿದೆನು,” ಎಂದನು.
[10] ಆಗ ಅಬೀಮೆಲೆಕನು, “ನೀನು ನಮಗೆ ಮಾಡಿದ್ದೇನು? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯನ್ನು ತೆಗೆದುಕೊಂಡಿದ್ದರೆ, ನೀನು ನಮ್ಮ ಮೇಲೆ ಅಪರಾಧವನ್ನು ಬರಮಾಡುತ್ತಿದ್ದೆಯಲ್ಲಾ,” ಎಂದನು.
[11] ಅಬೀಮೆಲೆಕನು ತನ್ನ ಜನರಿಗೆಲ್ಲಾ, “ಈ ಮನುಷ್ಯನನ್ನಾಗಲಿ, ಅವನ ಹೆಂಡತಿಯನ್ನಾಗಲಿ ಮುಟ್ಟುವವನು ಖಂಡಿತವಾಗಿ ಸಾಯಬೇಕು,” ಎಂದು ಅಪ್ಪಣೆಕೊಟ್ಟನು.
[12] ಇಸಾಕನು ಆ ದೇಶದಲ್ಲಿ ಬಿತ್ತಿದ ವರ್ಷದಲ್ಲಿಯೇ ನೂರರಷ್ಟು ಬೆಳೆಯನ್ನು ಹೊಂದಿದನು. ಯೆಹೋವ ದೇವರು ಅವನನ್ನು ಆಶೀರ್ವದಿಸಿದರು.
[13] ಅವನು ಬಹಳ ಶ್ರೀಮಂತನಾಗಿ, ಕ್ರಮೇಣವಾಗಿ ಹೆಚ್ಚಿದ್ದರಿಂದ ಅಭಿವೃದ್ಧಿಯಾದನು.
[14] ಏಕೆಂದರೆ ಅವನಿಗೆ ಕುರಿ ಮಂದೆಗಳೂ ದನಗಳ ಹಿಂಡುಗಳೂ ಬಹಳ ಮಂದಿ ಸೇವಕರೂ ಇದ್ದರು. ಆದ್ದರಿಂದ ಫಿಲಿಷ್ಟಿಯರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು.
[15] ಅವನ ತಂದೆ ಅಬ್ರಹಾಮನ ದಿನಗಳಲ್ಲಿ ಅಬ್ರಹಾಮನ ಸೇವಕರು ಅಗೆದ ಬಾವಿಗಳನ್ನೆಲ್ಲಾ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದರು.
[16] ಅಬೀಮೆಲೆಕನು ಇಸಾಕನಿಗೆ, “ನಮ್ಮನ್ನು ಬಿಟ್ಟು ಹೋಗು, ಏಕೆಂದರೆ ನೀನು ನಮಗಿಂತ ಬಲಿಷ್ಠನಾಗಿಬಿಟ್ಟೆ,” ಎಂದನು.
[17] ಆಗ ಇಸಾಕನು ಅಲ್ಲಿಂದ ಹೋಗಿ ಗೆರಾರಿನ ತಗ್ಗಿನಲ್ಲಿ ಗುಡಾರ ಹಾಕಿ, ಅಲ್ಲಿ ವಾಸಮಾಡಿದನು.
[18] ಇದಲ್ಲದೆ ಇಸಾಕನು ತನ್ನ ತಂದೆ ಅಬ್ರಹಾಮನ ದಿನಗಳಲ್ಲಿ ಅಗೆದಂಥ ಬಾವಿಗಳನ್ನು ತಿರುಗಿ ಅಗೆದನು. ಏಕೆಂದರೆ ಅಬ್ರಹಾಮನು ಮರಣದ ನಂತರ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರುಕೊಟ್ಟನು.
[19] ಇಸಾಕನ ಸೇವಕರು ತಗ್ಗಿನಲ್ಲಿ ಅಗೆದಾಗ, ಅಲ್ಲಿ ಅವರಿಗೆ ಉಕ್ಕುವ ಒರತೆಯ ಬಾವಿಯು ಸಿಕ್ಕಿತು.
[20] ಗೆರಾರಿನ ಮಂದೆಯನ್ನು ಮೇಯಿಸುವವರು, “ಈ ನೀರು ನಮ್ಮದು,” ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ, ಏಸೆಕ್, ಎಂದು ಹೆಸರಿಟ್ಟನು.
[21] ತರುವಾಯ ಅವರು ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿಯೂ ಅವರು ಜಗಳವಾಡಿದಾಗ, ಅವನು ಅದಕ್ಕೆ, ಸಿಟ್ನಾ, ಎಂದು ಹೆಸರಿಟ್ಟನು.
[22] ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗೆದಾಗ, ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು, “ಈಗ ಯೆಹೋವ ದೇವರು ನಮಗೆ ಸ್ಥಳವನ್ನು ಮಾಡಿದ್ದಾರೆ. ನಾವು ಈ ದೇಶದಲ್ಲಿ ಅಭಿವೃದ್ಧಿ ಹೊಂದುವೆವು,” ಎಂದು ಹೇಳಿ ಅದಕ್ಕೆ, ರೆಹೋಬೋತ್, ಎಂದು ಹೆಸರಿಟ್ಟನು.
[23] ಅಲ್ಲಿಂದ ಅವನು ಬೇರ್ಷೆಬಕ್ಕೆ ಹೋದನು.
[24] ಅದೇ ರಾತ್ರಿಯಲ್ಲಿ ಯೆಹೋವ ದೇವರು ಅವನಿಗೆ ಕಾಣಿಸಿಕೊಂಡು, “ನಿನ್ನ ತಂದೆ ಅಬ್ರಹಾಮನ ದೇವರು ನಾನೇ, ಭಯಪಡಬೇಡ. ಏಕೆಂದರೆ ನಾನು ನಿನ್ನ ಸಂಗಡ ಇದ್ದೇನೆ, ನನ್ನ ದಾಸನಾದ ಅಬ್ರಹಾಮನಿಗೋಸ್ಕರ ನಿನ್ನನ್ನು ಆಶೀರ್ವದಿಸಿ, ನಿನ್ನ ಸಂತತಿಯನ್ನು ಹೆಚ್ಚಿಸುವೆನು,” ಎಂದರು.
[25] ಆಗ ಇಸಾಕನು ಅಲ್ಲಿ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಹೇಳಿಕೊಂಡು, ತನ್ನ ಗುಡಾರವನ್ನು ಹಾಕಿದನು. ಆಗ ಇಸಾಕನ ಸೇವಕರು ಅಲ್ಲಿ ಒಂದು ಬಾವಿಯನ್ನು ಅಗೆದರು.
[26] ತರುವಾಯ ಅಬೀಮೆಲೆಕನೂ, ಅವನ ಸ್ನೇಹಿತರಲ್ಲಿ ಒಬ್ಬನಾದ ಅಹುಜ್ಜತನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಗೆರಾರಿನಿಂದ ಅವನ ಬಳಿಗೆ ಬಂದರು.
[27] ಇಸಾಕನು ಅವರಿಗೆ, “ನನ್ನ ಬಳಿಗೆ ನೀವು ಏಕೆ ಬಂದಿದ್ದೀರಿ? ನೀವು ನನ್ನನ್ನು ಹಗೆಮಾಡಿ, ನಿಮ್ಮ ಬಳಿಯಿಂದ ನನ್ನನ್ನು ಕಳುಹಿಸಿಬಿಟ್ಟಿರಲ್ಲಾ?” ಎಂದನು.
[28] ಅದಕ್ಕೆ ಅವರು, “ನಿಶ್ಚಯವಾಗಿ ಯೆಹೋವ ದೇವರು ನಿನ್ನ ಸಂಗಡ ಇದ್ದಾರೆ ಎಂದು ತಿಳಿದು, ನಮಗೂ, ನಿನಗೂ ಮಧ್ಯದಲ್ಲಿ ಒಂದು ಪ್ರಮಾಣವಿರುವ ಹಾಗೆ, ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳೋಣವೆಂದು ನಾವು ತೀರ್ಮಾನಿಸಿದ್ದೇವೆ.
[29] ಅದೇನೆಂದರೆ, ನಾವು ನಿನ್ನನ್ನು ಮುಟ್ಟದೆ, ನಿನಗೆ ಒಳ್ಳೆಯದನ್ನೇ ಮಾಡಿ, ನಿನ್ನನ್ನು ಸಮಾಧಾನದಿಂದ ಕಳುಹಿಸಿದ ಹಾಗೆ ನೀನು ನಮಗೂ ಕೇಡು ಮಾಡಬಾರದು. ಏಕೆಂದರೆ ನೀನು ಈಗ ಯೆಹೋವ ದೇವರಿಂದ ಆಶೀರ್ವಾದ ಹೊಂದಿರುವೆ,” ಎಂದರು.
[30] ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ತಿಂದು ಕುಡಿದರು.
[31] ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಅನಂತರ ಇಸಾಕನು ಅವರನ್ನು ಸಾಗಕಳುಹಿಸಿದನು. ಅವರು ಸಮಾಧಾನದಿಂದ ಹೊರಟು ಹೋದರು.
[32] ಅದೇ ದಿನದಲ್ಲಿ ಇಸಾಕನ ಸೇವಕರು ಬಂದು ತಾವು ಅಗೆದ ಬಾವಿಯಲ್ಲಿ, “ನೀರು ಸಿಕ್ಕಿತ್ತು,” ಎಂದು ಅವನಿಗೆ ಹೇಳಿದರು.
[33] ಅದಕ್ಕೆ ಅವನು, ಷಿಬಾ, ಎಂದು ಹೆಸರಿಟ್ಟನು. ಆದ್ದರಿಂದ ಇಂದಿನವರೆಗೂ ಬೇರ್ಷೆಬ ಎಂದು ಆ ಪಟ್ಟಣಕ್ಕೆ ಹೆಸರಾಯಿತು.
[34] ಏಸಾವನು ನಲವತ್ತು ವರ್ಷದವನಾಗಿದ್ದಾಗ, ಹಿತ್ತಿಯನಾದ ಬೇರಿಯನ ಮಗಳಾದ ಯೆಹೂದೀತಳನ್ನೂ, ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆಯಾದನು.
[35] ಇವರ ದೆಸೆಯಿಂದ ಇಸಾಕನಿಗೂ, ರೆಬೆಕ್ಕಳಿಗೂ ಮನೋವ್ಯಥೆಯಾಯಿತು.