[1] ಕೆಲವು ಸಮಯದ ನಂತರ ಈಜಿಪ್ಟಿನ ಅರಸನ ಪಾನದಾಯಕನೂ, ರೊಟ್ಟಿಗಾರನೂ ತಮ್ಮ ಅರಸನಿಗೆ ಎದುರಾಗಿ ಅಪರಾಧ ಮಾಡಿದರು.
[2] ಆಗ ಫರೋಹನು ಪಾನದಾಯಕರಲ್ಲಿ ಮುಖ್ಯಸ್ಥನೂ, ರೊಟ್ಟಿಗಾರರಲ್ಲಿ ಮುಖ್ಯಸ್ಥನೂ ಆಗಿದ್ದ ಅವನ ಇಬ್ಬರು ಉದ್ಯೋಗಸ್ಥರ ಮೇಲೆ ಕೋಪಿಸಿಕೊಂಡು,
[3] ಅವರನ್ನು ಮೈಗಾವಲಿನವರ ದಳಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸ್ಥಳವಾಗಿತ್ತು.
[4] ಮೈಗಾವಲಿನ ದಳಪತಿಯು ಅವರನ್ನೂ ನೋಡಿಕೊಳ್ಳುವದಕ್ಕೆ ಯೋಸೇಫನನ್ನು ನೇಮಿಸಿದ್ದರಿಂದ, ಅವನು ಅವರನ್ನು ನೋಡಿಕೊಳ್ಳುತ್ತಿದ್ದನು. ಅವರು ಕೆಲವು ಕಾಲ ಸೆರೆಯಲ್ಲಿದ್ದರು.
[5] ಅವರಿಬ್ಬರಿಗೂ ಅಂದರೆ, ಈಜಿಪ್ಟ್ ದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ರೊಟ್ಟಿಗಾರನಿಗೂ ಒಂದೇ ರಾತ್ರಿ ಕನಸು ಬಿತ್ತು. ಅವರವರ ಕನಸಿಗೆ ಅದರದೇ ಆದ ಅರ್ಥವಿತ್ತು.
[6] ಆಗ ಯೋಸೇಫನು ಬೆಳಿಗ್ಗೆ ಅವರ ಬಳಿಗೆ ಬಂದು ಅವರನ್ನು ನೋಡಿದಾಗ, ಅವರು ಚಿಂತೆಯುಳ್ಳವರಾಗಿದ್ದರು.
[7] ಅವನು ತನ್ನ ಸಂಗಡ ತನ್ನ ಯಜಮಾನನ ಸೆರೆಯಲ್ಲಿದ್ದ ಫರೋಹನ ಅಧಿಕಾರಿಗಳನ್ನು, “ನಿಮ್ಮ ಮುಖಗಳು ಇಂದು ಚಿಂತೆಗೊಂಡಿರುವುದು ಏಕೆ?” ಎಂದು ಕೇಳಿದನು.
[8] ಅವರು ಯೋಸೇಫನಿಗೆ, “ನಾವು ಕನಸನ್ನು ಕಂಡಿದ್ದೇವೆ, ಆದರೆ ಅದರ ಅರ್ಥವನ್ನು ನಮಗೆ ಹೇಳುವವರಿಲ್ಲ,” ಎಂದರು. ಯೋಸೇಫನು ಅವರಿಗೆ, “ಅರ್ಥ ಹೇಳುವುದು ದೇವರದಲ್ಲವೋ? ಎಂದು ಹೇಳಿ, ಅವುಗಳನ್ನು ನನಗೆ ಹೇಳಿರಿ,” ಎಂದನು.
[9] ಆಗ ಮುಖ್ಯ ಪಾನದಾಯಕನು ತನ್ನ ಕನಸನ್ನು ಯೋಸೇಫನಿಗೆ ತಿಳಿಸುತ್ತಾ, “ಕನಸಿನಲ್ಲಿ ನನ್ನ ಮುಂದೆ ದ್ರಾಕ್ಷಿಬಳ್ಳಿ ಇತ್ತು.
[10] ಆ ದ್ರಾಕ್ಷಿಬಳ್ಳಿಯಲ್ಲಿ ಮೂರು ಕೊಂಬೆಗಳಿದ್ದವು. ಅವು ಚಿಗುರಿ, ಹೂವು ಅರಳಿ, ಅದರ ಗೊಂಚಲುಗಳು ಹಣ್ಣಾದವು.
[11] ಫರೋಹನ ಪಾತ್ರೆಯು ನನ್ನ ಕೈಯಲ್ಲಿರಲಾಗಿ, ನಾನು ಆ ದ್ರಾಕ್ಷಿಹಣ್ಣುಗಳನ್ನು ತೆಗೆದು ಫರೋಹನ ಪಾತ್ರೆಯಲ್ಲಿ ಹಿಂಡಿ, ಆ ಪಾತ್ರೆಯನ್ನು ಫರೋಹನ ಕೈಯಲ್ಲಿ ಕೊಟ್ಟೆನು,” ಎಂದನು.
[12] ಅದಕ್ಕೆ ಯೋಸೇಫನು, “ಅದರ ಅರ್ಥ ಏನೆಂದರೆ, ಆ ಮೂರು ಕೊಂಬೆಗಳು ಮೂರು ದಿನಗಳಾಗಿವೆ.
[13] ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಗೌರವಿಸಿ, ತಿರುಗಿ ನಿನ್ನ ಕೆಲಸದಲ್ಲಿ ಇಡುವನು. ನೀನು ಮೊದಲು ಅವನ ಪಾನದಾಯಕನಾಗಿದ್ದ ಹಾಗೆ ಫರೋಹನ ಪಾತ್ರೆಯನ್ನು ಅವನ ಕೈಗೆ ಕೊಡುವೆ.
[14] ಆದರೆ ನೀನು ಸುಖದಿಂದಿರುವಾಗ ನನ್ನನ್ನು ನೆನಪಿಸಿಕೊಂಡು, ನನಗೆ ದಯೆತೋರಿಸಿ, ಫರೋಹನ ಮುಂದೆ ನನ್ನ ವಿಷಯ ತಿಳಿಸಿ, ಈ ಸೆರೆಯೊಳಗಿಂದ ನನ್ನನ್ನು ಹೊರಗೆ ಬರುವಂತೆ ಮಾಡಬೇಕು.
[15] ಏಕೆಂದರೆ ನನ್ನನ್ನು ಹಿಬ್ರಿಯರ ದೇಶದೊಳಗಿಂದ ಹಿಡಿದು ತಂದಿದ್ದಾರೆ. ಇಲ್ಲಿಯೂ ಸಹ ನಾನು ಏನೂ ತಪ್ಪುಮಾಡದೆ ಇದ್ದರೂ ನನ್ನನ್ನು ಸೆರೆಯಲ್ಲಿ ಹಾಕಿದರು,” ಎಂದನು.
[16] ಯೋಸೇಫನು ಒಳ್ಳೆಯ ಅರ್ಥವನ್ನು ಹೇಳಿದನೆಂದು ಮುಖ್ಯ ರೊಟ್ಟಿಗಾರನು ತಿಳಿದಾಗ, ಅವನು ಯೋಸೇಫನಿಗೆ, “ನನ್ನ ಕನಸಿನಲ್ಲಿಯೂ ಮೂರು ರೊಟ್ಟಿಯ ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.
[17] ಮೇಲಿದ್ದ ಪುಟ್ಟಿಯಲ್ಲಿ ಫರೋಹನಿಗೋಸ್ಕರ ರೊಟ್ಟಿಗಾರರು ಮಾಡುವ ಎಲ್ಲಾ ವಿಧವಾದ ಆಹಾರವಿತ್ತು. ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿದ್ದ ಅದನ್ನು ಪಕ್ಷಿಗಳು ತಿಂದವು,” ಎಂದನು.
[18] ಅದಕ್ಕೆ ಯೋಸೇಫನು ಉತ್ತರವಾಗಿ, “ಅದರ ಅರ್ಥವು ಇದೇ: ಆ ಮೂರು ಪುಟ್ಟಿಗಳು, ಮೂರು ದಿನಗಳು.
[19] ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನ ತಲೆಯನ್ನು ತೆಗೆಸಿ, ನಿನ್ನನ್ನು ಮರದ ಮೇಲೆ ತೂಗು ಹಾಕಿಸುವನು. ಪಕ್ಷಿಗಳು ನಿನ್ನ ಮಾಂಸವನ್ನು ತಿಂದುಬಿಡುವುವು,” ಎಂದನು.
[20] ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾಗಿದ್ದರಿಂದ ಅವನು ತನ್ನ ಸೇವಕರೆಲ್ಲರಿಗೂ ಔತಣವನ್ನು ಮಾಡಿಸಿ, ಮುಖ್ಯ ಪಾನದಾಯಕನನ್ನು ಮತ್ತು ಮುಖ್ಯ ರೊಟ್ಟಿಗಾರನನ್ನು ತನ್ನ ಅಧಿಕಾರಿಗಳ ಮುಂದೆ ನಿಲ್ಲಿಸಿದನು.
[21] ಮುಖ್ಯ ಪಾನದಾಯಕನನ್ನು ತಿರುಗಿ ಉದ್ಯೋಗದಲ್ಲಿ ಇರಿಸಿದ್ದರಿಂದ, ಮತ್ತೆ ಅವನು ಫರೋಹನ ಕೈಗೆ ಪಾನಪಾತ್ರೆಯನ್ನು ಕೊಟ್ಟನು.
[22] ಆದರೆ ಮುಖ್ಯ ರೊಟ್ಟಿಗಾರನನ್ನು ಗಲ್ಲಿಗೇರಿಸಿದನು. ಹೀಗೆ ಯೋಸೇಫನು ಹೇಳಿದ ಹೇಳಿದಂತೆಯೇ ಆಯಿತು.
[23] ಆದರೂ ಪಾನದಾಯಕರ ಮುಖ್ಯಸ್ಥನು ಯೋಸೇಫನನ್ನು ಜ್ಞಾಪಕಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.