[1] ಎರಡು ಪೂರ್ಣ ವರ್ಷಗಳು ಕಳೆದ ಮೇಲೆ ಫರೋಹನು ಒಂದು ಕನಸನ್ನು ಕಂಡನು. ಆ ಕನಸಿನಲ್ಲಿ ಅವನು ನೈಲ್ ನದಿಯ ಬಳಿಯಲ್ಲಿ ನಿಂತಿದ್ದನು.
[2] ಲಕ್ಷಣವಾದ ಮತ್ತು ಕೊಬ್ಬಿದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
[3] ಅವಲಕ್ಷಣವಾದ ಬೇರೆ ಏಳು ಬಡಹಸುಗಳು ಅವುಗಳ ಹಿಂದೆ ನದಿಯೊಳಗಿಂದ ಏರಿಬಂದು, ಆ ಹಸುಗಳ ಹತ್ತಿರ ನೈಲ್ ನದಿ ತೀರದಲ್ಲಿ ನಿಂತಿದ್ದವು.
[4] ಆ ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಮತ್ತು ಲಕ್ಷಣವಾದ ಏಳು ಹಸುಗಳನ್ನು ತಿಂದುಬಿಟ್ಟವು. ಆಗ ಫರೋಹನು ಎಚ್ಚೆತ್ತನು.
[5] ಅವನು ತಿರುಗಿ ನಿದ್ರೆ ಮಾಡಿದಾಗ, ಎರಡನೆಯ ಸಾರಿ ಕನಸನ್ನು ಕಂಡನು. ಒಂದೇ ದಂಟಿನಲ್ಲಿ ಏಳು ಒಳ್ಳೆಯ ಪುಷ್ಟಿಯಾದ ತೆನೆಗಳು ಎದ್ದವು.
[6] ಅವುಗಳ ಹಿಂದೆಯೇ ಪೂರ್ವದಿಕ್ಕಿನ ಗಾಳಿಯಿಂದ ಬತ್ತಿ, ಒಣಗಿ ಹೋದ ಏಳು ತೆನೆಗಳು ಮೊಳೆತವು.
[7] ಆ ಬತ್ತಿ ಹೋಗಿದ್ದ ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿ ಬಿಟ್ಟವು. ಫರೋಹನು ಎಚ್ಚೆತ್ತಾಗ ಅದು ಕನಸಾಗಿತ್ತು.
[8] ಬೆಳಿಗ್ಗೆ ಅವನ ಮನಸ್ಸು ಕಳವಳಗೊಂಡಿತು. ಆದ್ದರಿಂದ ಅವನು ಈಜಿಪ್ಟಿನ ಎಲ್ಲಾ ಮಂತ್ರವಾದಿಗಳನ್ನೂ ಎಲ್ಲಾ ಜ್ಞಾನಿಗಳನ್ನೂ ಕರೆಕಳುಹಿಸಿದನು. ಫರೋಹನು ಅವರಿಗೆ ತನ್ನ ಕನಸನ್ನು ತಿಳಿಸಿದಾಗ, ಅವುಗಳ ಅರ್ಥವನ್ನು ಹೇಳುವವರು ಯಾರೂ ಇರಲಿಲ್ಲ.
[9] ಆಗ ಪಾನದಾಯಕರ ಮುಖ್ಯಸ್ಥನು ಫರೋಹನಿಗೆ, “ಈ ಹೊತ್ತು ನನ್ನ ತಪ್ಪನ್ನು ಜ್ಞಾಪಕಮಾಡಿಕೊಳ್ಳುತ್ತೇನೆ.
[10] ಫರೋಹನು ತನ್ನ ಸೇವಕರ ಮೇಲೆ ಕೋಪಿಸಿಕೊಂಡಾಗ, ನನ್ನನ್ನೂ, ರೊಟ್ಟಿಗಾರರ ಮುಖ್ಯಸ್ಥನನ್ನೂ ಮೈಗಾವಲಿನ ದಳಪತಿಯ ಮನೆಯಲ್ಲಿ ಕಾವಲಲ್ಲಿ ಇಟ್ಟಿದ್ದೀರಿ.
[11] ನಾವು ಒಂದು ರಾತ್ರಿಯಲ್ಲಿ ಕನಸನ್ನು ಕಂಡೆವು. ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು.
[12] ಮೈಗಾವಲಿನ ದಳಪತಿಗೆ ಸೇವಕನಾಗಿದ್ದ ಹಿಬ್ರಿಯ ಯೌವನಸ್ಥನು ಅಲ್ಲಿ ನಮ್ಮ ಸಂಗಡ ಇದ್ದನು. ಅವನಿಗೆ ನಾವು ನಮ್ಮ ಕನಸುಗಳನ್ನು ತಿಳಿಸಿದಾಗ, ಅವನು ನಮ್ಮ ನಮ್ಮ ಕನಸಿನ ಅರ್ಥವನ್ನು ಹೇಳಿದನು.
[13] ಅವನು ಹೇಳಿದ ಅರ್ಥದಂತೆಯೇ ನಮಗಾಯಿತು. ನಾನು ನನ್ನ ಸ್ಥಾನವನ್ನು ಪುನಃ ಪಡೆದುಕೊಂಡೆನು, ಇನ್ನೊಬ್ಬನನ್ನು ಗಲ್ಲಿಗೇರಿಸಲಾಯಿತು,” ಎಂದು ಹೇಳಿದನು.
[14] ಆಗ ಫರೋಹನು ಯೋಸೇಫನನ್ನು ಕರೆತರುವಂತೆ ಸೇವಕರನ್ನು ಕಳುಹಿಸಿದನು. ಅವರು ಅವನನ್ನು ತ್ವರೆಯಾಗಿ ಕಾರಾಗೃಹದಿಂದ ಹೊರಗೆ ತಂದರು. ಅವನು ಕ್ಷೌರಮಾಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿ ಫರೋಹನ ಬಳಿಗೆ ಬಂದನು.
[15] ಆಗ ಫರೋಹನು ಯೋಸೇಫನಿಗೆ, “ನಾನು ಕನಸನ್ನು ಕಂಡಿದ್ದೇನೆ, ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ. ನೀನು ಕನಸನ್ನು ಗ್ರಹಿಸಿ, ಅರ್ಥವನ್ನು ಹೇಳುತ್ತೀ ಎಂದು ನಿನ್ನ ವಿಷಯವಾಗಿ ನಾನು ಕೇಳಿದ್ದೇನೆ,” ಎಂದನು.
[16] ಯೋಸೇಫನು ಫರೋಹನಿಗೆ ಉತ್ತರವಾಗಿ, “ಅದನ್ನು ನಾನು ಹೇಳಲಾರೆ, ಆದರೆ ದೇವರು ಫರೋಹನಿಗೆ ಮೆಚ್ಚಿಕೆಯಾದ ಉತ್ತರವನ್ನು ಕೊಡುವರು,” ಎಂದನು.
[17] ಅದಕ್ಕೆ ಫರೋಹನು ಯೋಸೇಫನಿಗೆ, “ನನ್ನ ಕನಸಿನಲ್ಲಿ, ನಾನು ನೈಲ್ ನದಿಯ ತೀರದಲ್ಲಿ ನಿಂತುಕೊಂಡಿದ್ದೆನು.
[18] ಆಗ ಕೊಬ್ಬಿದ ಮಾಂಸವಿದ್ದ ಲಕ್ಷಣವಾದ ಏಳು ಹಸುಗಳು ನೈಲ್ ನದಿಯೊಳಗಿಂದ ಏರಿಬಂದು, ಆಪುಹುಲ್ಲುಗಾವಲಲ್ಲಿ ಮೇಯುತ್ತಿದ್ದವು.
[19] ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬೇರೆ ಏಳು ಬಡಹಸುಗಳು ಏರಿ ಬಂದವು. ಅಂಥ ಬಡ ಹಸುಗಳನ್ನು, ನಾನು ಈಜಿಪ್ಟ್ ದೇಶದಲ್ಲಿ ಎಲ್ಲಿಯೂ ನೋಡಿದ್ದಿಲ್ಲ.
[20] ಅವಲಕ್ಷಣವಾದ ಬಡಹಸುಗಳು, ಕೊಬ್ಬಿದ ಆ ಏಳು ಹಸುಗಳನ್ನು ತಿಂದುಬಿಟ್ಟವು.
[21] ಇವು ಅವುಗಳನ್ನು ತಿಂದ ಮೇಲೂ ಅವು ತಿಂದ ಹಾಗೆ ತೋರಲಿಲ್ಲ. ಅವು ಮೊದಲಿನಂತೆ ಬಡಕಲಾಗಿಯೇ ಇದ್ದವು. ತರುವಾಯ ನಾನು ಎಚ್ಚೆತ್ತೆನು.
[22] “ನನಗೆ ಇನ್ನೊಂದು ಕನಸು ಬಂತು. ನಾನು ಆ ಕನಸಿನಲ್ಲಿ, ಒಂದೇ ದಂಟಿನಲ್ಲಿ ಪುಷ್ಟಿಯುಳ್ಳ ಏಳು ತೆನೆಗಳು ಇದ್ದವು.
[23] ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು ಅವುಗಳ ತರುವಾಯ ಮೊಳೆತವು.
[24] ಆ ಒಣಗಿದ್ದ ಏಳು ತೆನೆಗಳು, ಪುಷ್ಟಿಯಾದ ಏಳು ತೆನೆಗಳನ್ನು ನುಂಗಿದವು. ನಾನು ಇದನ್ನು ಮಂತ್ರವಾದಿಗಳಿಗೆ ತಿಳಿಸಿದಾಗ, ಅದರ ಅರ್ಥವನ್ನು ನನಗೆ ಯಾರೂ ಹೇಳಲಿಲ್ಲ,” ಎಂದನು.
[25] ಆಗ ಯೋಸೇಫನು ಫರೋಹನಿಗೆ, “ಫರೋಹನ ಎರಡು ಕನಸುಗಳ ವಿಷಯ ಒಂದೇ, ದೇವರು ಮಾಡಲಿರುವುದನ್ನು ಫರೋಹನಿಗೆ ತಿಳಿಸಿದ್ದಾರೆ.
[26] ಆ ಏಳು ಒಳ್ಳೆಯ ಹಸುಗಳು ಏಳು ವರ್ಷಗಳು; ಏಳು ಒಳ್ಳೆಯ ತೆನೆಗಳೂ, ಏಳು ವರ್ಷಗಳೇ. ಇವೆರಡು ಕನಸುಗಳ ಅರ್ಥ ಒಂದೇ.
[27] ಅವುಗಳ ತರುವಾಯ ಏರಿ ಬಂದ ಬಡಕಲಾದ ಕೆಟ್ಟ ಏಳು ಹಸುಗಳು ಮತ್ತು ಪೂರ್ವದಿಕ್ಕಿನ ಗಾಳಿಯಿಂದ ಒಣಗಿ ಬತ್ತಿ ಹೋಗಿದ್ದ ಏಳು ತೆನೆಗಳು, ಬರಲಿರುವ ಏಳು ವರ್ಷಗಳು.
[28] “ನಾನು ಫರೋಹನಿಗೆ ಹೇಳಿದ ಮಾತಿನಂತೆ ದೇವರು ಮಾಡಲಿರುವುದನ್ನು ಫರೋಹನಿಗೆ ತೋರಿಸಿದ್ದಾರೆ.
[29] ಈಜಿಪ್ಟ್ ದೇಶದಲ್ಲೆಲ್ಲಾ ಬಹುಸಮೃದ್ಧಿಯ ಸುಭಿಕ್ಷ ವರ್ಷಗಳು ಬರುತ್ತವೆ.
[30] ಆದರೆ ಅವುಗಳ ಹಿಂದೆ ಏಳು ವರ್ಷಗಳ ಬರಗಾಲ ಬರುತ್ತವೆ. ಆಗ ಈಜಿಪ್ಟಿನಲ್ಲಿದ್ದ ಸುಭಿಕ್ಷವು ಮರೆಯುವಂತಾಗುವುದು. ಇದಲ್ಲದೆ ಬರಗಾಲವು ದೇಶವನ್ನು ನಾಶಮಾಡುವುದು.
[31] ತರುವಾಯ ಬರಗಾಲವು ಬಹಳ ಕಠಿಣವಾಗಿರುವುದರಿಂದ, ಸುಭಿಕ್ಷ ಕಾಲದ ನೆನಪು ದೇಶದಲ್ಲಿ ಇರದೆ ಹೋಗುವುದು.
[32] ಇದಲ್ಲದೆ ಆ ಕನಸು ಫರೋಹನಿಗೆ ಎರಡು ಸಾರಿ ಬಿದ್ದುದರಿಂದ, ಆ ಕಾರ್ಯವು ದೇವರಿಂದ ಸ್ಥಿರಪಡಿಸಲಾಗಿದೆ. ಆದ್ದರಿಂದ ದೇವರು ಅದನ್ನು ಬೇಗನೆ ನೆರವೇರಿಸುವರು.
[33] “ಹೀಗಿರುವುದರಿಂದ ಈಗ ಫರೋಹನು ವಿವೇಕಿಯಾದ ಬುದ್ಧಿಯುಳ್ಳ ಒಬ್ಬನನ್ನು ನೋಡಿ, ಅವನನ್ನು ಈಜಿಪ್ಟ್ ದೇಶದ ಮೇಲೆ ನೇಮಿಸಲಿ.
[34] ಫರೋಹನು ಅಧಿಕಾರಿಗಳನ್ನು ನೇಮಿಸಿ, ದೇಶದ ಮೇಲಿಟ್ಟು, ಸುಭಿಕ್ಷದ ಏಳು ವರ್ಷಗಳಲ್ಲಿ ಈಜಿಪ್ಟ್ ದೇಶದ ಐದರಲ್ಲಿ ಒಂದು ಭಾಗ ಬೆಳೆಯನ್ನು ಕಂದಾಯವಾಗಿ ತೆಗೆದುಕೊಳ್ಳಲಿ.
[35] ಅಧಿಕಾರಿಗಳು ಮುಂಬರುವ ಈ ಒಳ್ಳೆಯ ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಫರೋಹನ ಕೈಕೆಳಗೆ ಧಾನ್ಯವನ್ನು ಪಟ್ಟಣಗಳಲ್ಲಿ ಇಟ್ಟುಕೊಂಡು ಕಾಯಲಿ.
[36] ಈಜಿಪ್ಟಿನಲ್ಲಿ ಬರುವದಕ್ಕಿರುವ ಬರಗಾಲದ ಏಳು ವರ್ಷಗಳಲ್ಲಿ ದೇಶವು ಹಾಳಾಗದಂತೆ, ಆಹಾರವು ದೇಶಕ್ಕೆ ಸಂಗ್ರಹವಾಗಿರುವುದು,” ಎಂದನು.
[37] ಈ ಮಾತುಗಳು ಫರೋಹನಿಗೂ, ಅವನ ಸೇವಕರಿಗೂ ಒಳ್ಳೆಯದೆಂದು ತೋರಿತು.
[38] ಫರೋಹನು ತನ್ನ ಸೇವಕರಿಗೆ, “ಯೋಸೇಫನಂಥ ದೇವರಾತ್ಮವುಳ್ಳ ಮನುಷ್ಯನು ಸಿಕ್ಕಾನೋ?” ಎಂದನು.
[39] ಫರೋಹನು ಯೋಸೇಫನಿಗೆ, “ದೇವರು ನಿನಗೆ ಇವುಗಳನ್ನೆಲ್ಲಾ ತೋರಿಸಿದ ಮೇಲೆ, ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ.
[40] ನೀನೇ ನನ್ನ ಅರಮನೆಯ ಅಧಿಕಾರಿಯಾಗಿರಬೇಕು. ನಿನ್ನ ಮಾತಿನ ಪ್ರಕಾರ ನನ್ನ ಜನರೆಲ್ಲಾ ಅಧೀನವಾಗಿರಲಿ. ಸಿಂಹಾಸನದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು,” ಎಂದನು.
[41] ಇದಲ್ಲದೆ ಫರೋಹನು ಯೋಸೇಫನಿಗೆ, “ನೋಡು, ನಾನು ನಿನ್ನನ್ನು ಈಜಿಪ್ಟ್ ದೇಶದ ಮೇಲೆಲ್ಲಾ ನೇಮಿಸಿದ್ದೇನೆ,” ಎಂದನು.
[42] ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು, ನಾರುಮಡಿಯ ವಸ್ತ್ರವನ್ನು ತೊಡಿಸಿ, ಚಿನ್ನದ ಸರಪಣಿಯನ್ನು ಅವನ ಕೊರಳಿಗೆ ಹಾಕಿದನು.
[43] ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂಡಿಸಿದಾಗ, “ಈತನನ್ನು ನಮಸ್ಕರಿಸಿ ದಾರಿಮಾಡಿರಿ,” ಎಂದು ಪ್ರಕಟಿಸಿದನು. ಹೀಗೆ ಅವನನ್ನು ಈಜಿಪ್ಟ್ ದೇಶವನ್ನೆಲ್ಲಾ ಆಳುವವನನ್ನಾಗಿ ನೇಮಿಸಿದನು.
[44] ಇದಲ್ಲದೆ ಫರೋಹನು ಯೋಸೇಫನಿಗೆ, “ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಈಜಿಪ್ಟ್ ದೇಶದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ, ಕಾಲನ್ನಾಗಲಿ ಎತ್ತಬಾರದು,” ಎಂದನು.
[45] ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ತರುವಾಯ ಯೋಸೇಫನು ಈಜಿಪ್ಟ್ ದೇಶದಲ್ಲೆಲ್ಲಾ ಸಂಚರಿಸಿದನು.
[46] ಯೋಸೇಫನು ಈಜಿಪ್ಟಿನ ಅರಸನಾದ ಫರೋಹನ ಮುಂದೆ ನಿಂತಾಗ, ಮೂವತ್ತು ವರ್ಷದವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು, ಈಜಿಪ್ಟ್ ದೇಶದಲ್ಲೆಲ್ಲಾ ಸಂಚಾರಮಾಡಿದನು.
[47] ಆ ದೇಶವು ಸುಭಿಕ್ಷದ ಏಳು ವರ್ಷಗಳಲ್ಲಿ ರಾಶಿರಾಶಿಯಾಗಿ ಫಲಕೊಟ್ಟಿತು.
[48] ಹೀಗಿರಲಾಗಿ ಅವನು ಈಜಿಪ್ಟ್ ದೇಶದಲ್ಲಿದ್ದ ಆ ಏಳು ವರ್ಷಗಳ ಆಹಾರವನ್ನೆಲ್ಲಾ ಕೂಡಿಸಿ, ಪಟ್ಟಣಗಳಲ್ಲಿ ಇಟ್ಟನು. ಒಂದೊಂದು ಪಟ್ಟಣದ ಸುತ್ತಲಿರುವ ಬೆಳೆಯನ್ನು ಆಯಾ ಪಟ್ಟಣದಲ್ಲಿ ಕೂಡಿಸಿಟ್ಟನು.
[49] ಈ ಮೇರೆಗೆ ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವುದನ್ನು ಬಿಟ್ಟುಬಿಟ್ಟನು. ಅದನ್ನು ಲೆಕ್ಕಮಾಡುವುದಕ್ಕೆ ಆಗದೆ ಹೋಯಿತು.
[50] ಇದಲ್ಲದೆ ಬರಗಾಲದ ವರ್ಷಗಳು ಬರುವುದಕ್ಕೆ ಮುಂಚೆ, ಯೋಸೇಫನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್, ಅವಳನ್ನು ಯೋಸೇಫನಿಗೆ ಹೆತ್ತಳು.
[51] ಜೇಷ್ಠಪುತ್ರನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಏಕೆಂದರೆ ಅವನು, “ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನು ಮರೆತುಬಿಡುವಂತೆ ಮಾಡಿದರು,” ಎಂದನು.
[52] ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯೀಮ್ ಎಂದು ಹೆಸರಿಟ್ಟನು. “ನಾನು ಬಾಧೆಯನ್ನನುಭವಿಸಿದ ದೇಶ ಫಲಭರಿತವಾಗುವಂತೆ ದೇವರು ಮಾಡಿದ್ದಾರೆ,” ಎಂದನು.
[53] ಈಜಿಪ್ಟ್ ದೇಶದಲ್ಲಿದ್ದ ಸುಭಿಕ್ಷದ ಏಳು ವರ್ಷಗಳು ಮುಗಿದ ತರುವಾಯ,
[54] ಯೋಸೇಫನು ಹೇಳಿದಂತೆ ಬರುವುದಕ್ಕಿದ್ದ ಬರಗಾಲದ ಏಳು ವರ್ಷಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರಗಾಲವಿತ್ತು. ಆದರೆ ಈಜಿಪ್ಟ್ ದೇಶದಲ್ಲೆಲ್ಲಾ ಆಹಾರವಿತ್ತು.
[55] ಈಜಿಪ್ಟ್‌ದವರೆಲ್ಲಾ ಹಸಿದು, ಜನರು ಆಹಾರಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ, ಫರೋಹನು ಎಲ್ಲಾ ಈಜಿಪ್ಟಿನವರಿಗೆ, “ಯೋಸೇಫನ ಬಳಿಗೆ ಹೋಗಿರಿ, ಅವನು ನಿಮಗೆ ಹೇಳುವುದನ್ನು ಮಾಡಿರಿ,” ಎಂದನು.
[56] ಈಜಿಪ್ಟಿನಲ್ಲೆಲ್ಲಾ ಬರವಿತ್ತು. ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಈಜಿಪ್ಟಿನವರಿಗೆ ಮಾರಿದನು. ಆಗ ಬರವು ಈಜಿಪ್ಟ್ ದೇಶದಲ್ಲಿ ಕಠಿಣವಾಗಿತ್ತು.
[57] ಇದಲ್ಲದೆ ಭೂಮಿಯ ಮೇಲೆಲ್ಲಾ ಬರಗಾಲವು ಕಠಿಣವಾಗಿದ್ದದರಿಂದ, ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಈಜಿಪ್ಟಿಗೆ ಬರುತ್ತಿದ್ದರು.