[1] ಅಬ್ರಹಾಮನು ಅಲ್ಲಿಂದ ನೆಗೆವ ಕಡೆಗೆ ಕಾದೇಶಿಗೆ ಪ್ರಯಾಣಮಾಡಿ, ಕಾದೇಶ್ ಹಾಗೂ ಶೂರಿನ ಮಧ್ಯದ ಗೆರಾರಿನಲ್ಲಿ ಸ್ವಲ್ಪಕಾಲ ಪ್ರವಾಸಿಯಾಗಿದ್ದನು.
[2] ಗೆರಾರಿನಲ್ಲಿ ಅಬ್ರಹಾಮನು ತನ್ನ ಹೆಂಡತಿ ಸಾರಳ ವಿಷಯವಾಗಿ, “ಅವಳು ನನ್ನ ತಂಗಿ,” ಎಂದು ಹೇಳಿದ್ದನು. ಆದ್ದರಿಂದ ಗೆರಾರಿನ ಅರಸ ಅಬೀಮೆಲೆಕನು ಸಾರಳನ್ನು ಕರೆಯಿಸಿ ತನ್ನ ಅರಮನೆಗೆ ತೆಗೆದುಕೊಂಡನು.
[3] ಆದರೆ ದೇವರು ಅಬೀಮೆಲೆಕನಿಗೆ ರಾತ್ರಿಯ ಕನಸಿನಲ್ಲಿ ಬಂದು, “ನೀನು ಆ ಸ್ರೀಯನ್ನು ತೆಗೆದುಕೊಂಡ ಕಾರಣ ಸಾಯತಕ್ಕವನಾಗಿದ್ದಿ, ಏಕೆಂದರೆ ಆಕೆಯು ಆ ಮನುಷ್ಯನ ಹೆಂಡತಿ,” ಎಂದು ಅವನಿಗೆ ಹೇಳಿದರು.
[4] ಆದರೆ ಅಬೀಮೆಲೆಕನು ಆಕೆಯ ಸಮೀಪಕ್ಕೆ ಬಂದಿರಲಿಲ್ಲ. ಆದ್ದರಿಂದ ಅವನು, “ಪ್ರಭುವೇ, ನಿರಪರಾಧಿಯಾದ ಪ್ರಜೆಯನ್ನು ನೀವು ನಾಶಮಾಡುವಿರೋ?
[5] ಅವನು ನನಗೆ, ‘ಅವಳು ನನ್ನ ತಂಗಿ,’ ಎಂದು ಹೇಳಲಿಲ್ಲವೋ? ಅವಳೇ, ‘ಅವನು ನನ್ನ ಅಣ್ಣ,’ ಎಂದು ಹೇಳಿದ್ದಾಳೆ. ಆದ್ದರಿಂದ ನಾನು ಯಥಾರ್ಥವಾದ ಹೃದಯದಿಂದಲೂ ನಿರಪರಾಧದ ಹಸ್ತದಿಂದಲೂ ಇದನ್ನು ಮಾಡಿದ್ದೇನೆ,” ಎಂದನು.
[6] ಅದಕ್ಕೆ ದೇವರು ಕನಸಿನಲ್ಲಿ ಅವನಿಗೆ, “ಹೌದು, ನೀನು ಇದನ್ನು ಯಥಾರ್ಥವಾದ ಹೃದಯದಿಂದಲೇ ಮಾಡಿದ್ದೀಯೆ ಎಂದು ನನಗೂ ತಿಳಿದಿದೆ. ಆದ್ದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು, ಆಕೆಯನ್ನು ಮುಟ್ಟಗೊಡಿಸಲಿಲ್ಲ.
[7] ಈಗ ಆ ಮನುಷ್ಯನ ಹೆಂಡತಿಯನ್ನು ನೀನು ಹಿಂದಕ್ಕೆ ಕಳುಹಿಸಿಬಿಡು. ಏಕೆಂದರೆ ಅವನು ಪ್ರವಾದಿಯಾಗಿದ್ದಾನೆ. ನೀನು ಬದುಕುವಂತೆ ಅವನು ನಿನಗೋಸ್ಕರ ಪ್ರಾರ್ಥಿಸುವನು. ನೀನು ಆಕೆಯನ್ನು ಹಿಂದಕ್ಕೆ ಕಳುಹಿಸದಿದ್ದರೆ, ನೀನೂ ನಿನ್ನವರೆಲ್ಲರೂ ಖಂಡಿತವಾಗಿ ಸಾಯುವಿರಿ ಎಂದು ತಿಳಿದುಕೋ,” ಎಂದರು.
[8] ಅಬೀಮೆಲೆಕನು ಬೆಳಿಗ್ಗೆ ಎದ್ದು, ತನ್ನ ಸೇವಕರೆಲ್ಲರನ್ನೂ ಕರೆದು, ಇವುಗಳನ್ನೆಲ್ಲಾ ಅವರಿಗೆ ಹೇಳಿದನು. ಅದಕ್ಕೆ ಆ ಮನುಷ್ಯರು ಬಹಳವಾಗಿ ಹೆದರಿದರು.
[9] ಅಬೀಮೆಲೆಕನು ಅಬ್ರಹಾಮನನ್ನು ಕರೆದು ಅವನಿಗೆ, “ನೀನು ನಮಗೆ ಮಾಡಿದ್ದೇನು? ನೀನು ನನ್ನ ಮೇಲೆಯೂ ನನ್ನ ರಾಜ್ಯದ ಮೇಲೆಯೂ ದೊಡ್ಡ ಪಾಪವನ್ನು ಬರಮಾಡುವಂತೆ ನಿನಗೆ ನಾನು ಏನು ಅಪರಾಧ ಮಾಡಿದ್ದೇನೆ? ನೀನು ನನಗೆ ಮಾಡಬಾರದ ಕೆಲಸಗಳನ್ನು ಮಾಡಿದ್ದೀಯೆ,” ಎಂದನು.
[10] ಇದಲ್ಲದೆ ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಹೀಗೆ ಮಾಡಿದ ಕಾರಣವೇನು?” ಎಂದು ವಿಚಾರಿಸಿದನು.
[11] ಅದಕ್ಕೆ ಅಬ್ರಹಾಮನು, “ಈ ಸ್ಥಳದಲ್ಲಿ ಖಂಡಿತವಾಗಿ ದೇವರ ಭಯವು ಇಲ್ಲವೆಂದೂ ನನ್ನ ಹೆಂಡತಿಗಾಗಿ ಅವರು ನನ್ನನ್ನು ಕೊಲ್ಲುವರೆಂದೂ ನಾನು ನೆನಸಿದೆನು.
[12] ಇದಲ್ಲದೆ ನಿಜವಾಗಿಯೂ ಅವಳು ನನ್ನ ತಂಗಿ, ಆದರೆ ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ, ನನಗೆ ಹೆಂಡತಿಯಾದಳು.
[13] ದೇವರು ನನ್ನ ತಂದೆಯ ಮನೆಯೊಳಗಿಂದ ನನ್ನನ್ನು ದೇಶಾಂತರಕ್ಕೆ ಕರೆದಾಗ, ನಾನು ಅವಳಿಗೆ, ನೀನು ನನಗೆ ತೋರಿಸತಕ್ಕ ದಯೆಯು ಯಾವುದೆಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ, ‘ಇವನು ನನ್ನ ಅಣ್ಣ,’ ಎಂದು ಹೇಳು ಎಂದು ತಿಳಿಸಿದೆನು,” ಎಂದನು.
[14] ಆಗ ಅಬೀಮೆಲೆಕನು ಕುರಿಗಳನ್ನೂ ಎತ್ತುಗಳನ್ನೂ ದಾಸರನ್ನೂ ದಾಸಿಯರನ್ನೂ ತೆಗೆದುಕೊಂಡು ಅಬ್ರಹಾಮನಿಗೆ ಕೊಟ್ಟು, ಅವನ ಹೆಂಡತಿ ಸಾರಳನ್ನು ಅವನಿಗೆ ಒಪ್ಪಿಸಿಕೊಟ್ಟನು.
[15] ಅಬೀಮೆಲೆಕನು, “ನನ್ನ ದೇಶವು ನಿನ್ನ ಮುಂದೆ ಇದೆ, ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು,” ಎಂದನು.
[16] ಸಾರಳಿಗೆ, “ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣವನ್ನು ಕೊಟ್ಟಿದ್ದೇನೆ. ನೋಡು, ನಡೆದ ಘಟನೆಗೆ ಇದು ಪ್ರಾಯಶ್ಚಿತ್ತವಾಗಿದೆ. ನಿನ್ನ ಸಂಗಡ ಇರುವವರೆಲ್ಲರಿಗೂ ಉಳಿದವರೆಲ್ಲರಿಗೂ ನೀನು ನಿರ್ದೋಷಿಯೆಂದು ಇದು ಸಾಕ್ಷಿಯಾಗಿರಲಿ,” ಎಂದನು.
[17] ಆಗ ಅಬ್ರಹಾಮನು ದೇವರಿಗೆ ಪ್ರಾರ್ಥನೆಮಾಡಿದನು. ದೇವರು ಅಬೀಮೆಲೆಕನನ್ನೂ, ಅವನ ಹೆಂಡತಿಯನ್ನೂ ದಾಸಿಯರನ್ನೂ ವಾಸಿಮಾಡಿದರು. ಆದ್ದರಿಂದ ಅವರಿಗೆ ಮಕ್ಕಳಾದರು.
[18] ಏಕೆಂದರೆ ಯೆಹೋವ ದೇವರು ಅಬ್ರಹಾಮನ ಹೆಂಡತಿ ಸಾರಳ ನಿಮಿತ್ತ ಅಬೀಮೆಲೆಕನ ಮನೆಯಲ್ಲಿದ್ದ ಮಹಿಳೆಯರನ್ನು ಬಂಜೆಯರನ್ನಾಗಿ ಮಾಡಿದ್ದರು.