Skip to content
Opens in a new window
Listen to this chapter • 4:25

[1] ಯೆಹೋವ ದೇವರು ಅಬ್ರಾಮನಿಗೆ ಹೀಗೆ ಹೇಳಿದರು, “ನೀನು ನಿನ್ನ ಸ್ವದೇಶದಿಂದಲೂ ಬಂಧುಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರಬಂದು, ನಾನು ನಿನಗೆ ತೋರಿಸುವ ನಾಡಿಗೆ ಹೋಗು.

[2] “ನಾನು ನಿನ್ನನ್ನು ದೊಡ್ಡ ಜನಾಂಗದವನನ್ನಾಗಿ ಮಾಡಿ, ನಿನ್ನನ್ನು ಆಶೀರ್ವದಿಸಿ, ನಿನ್ನ ಹೆಸರನ್ನು ಪ್ರಸಿದ್ಧ ಮಾಡುವೆನು. ನೀನು ಆಶೀರ್ವಾದವಾಗಿ ಇರುವಿ.

[3] ನಿನ್ನನ್ನು ಆಶೀರ್ವದಿಸುವವರನ್ನು ನಾನು ಆಶೀರ್ವದಿಸುವೆನು. ನಿನ್ನನ್ನು ಶಪಿಸುವವರನ್ನು ನಾನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು.”

[4] ಆದ್ದರಿಂದ ಯೆಹೋವ ದೇವರು ತನಗೆ ಹೇಳಿದ ಪ್ರಕಾರ, ಅಬ್ರಾಮನು ಹೊರಟುಹೋದನು. ಲೋಟನು ಅವನೊಂದಿಗೆ ಹೋದನು. ಅಬ್ರಾಮನು ಹಾರಾನಿನಿಂದ ಹೊರಟಾಗ ಎಪ್ಪತ್ತೈದು ವರ್ಷದವನಾಗಿದ್ದನು.

[5] ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ, ತನ್ನ ಸಹೋದರನ ಮಗ ಲೋಟನನ್ನೂ, ತಾವು ಕೂಡಿಸಿಕೊಂಡಿದ್ದ ಎಲ್ಲಾ ಆಸ್ತಿಯನ್ನೂ, ಹಾರಾನಿನಲ್ಲಿ ಸಂಪಾದಿಸಿಕೊಂಡಿದ್ದ ಎಲ್ಲಾ ಜನರನ್ನೂ ತಮ್ಮ ಸಂಗಡ ಕರೆದುಕೊಂಡು ಕಾನಾನ್ ದೇಶಕ್ಕೆ ಸೇರಿದನು.

[6] ಅಬ್ರಾಮನು ಆ ದೇಶದಲ್ಲಿ ಶೆಕೆಮ್ ಎಂಬ ಸ್ಥಳದ ಮೋರೆ ಎಂಬ ಮಹಾವೃಕ್ಷದವರೆಗೆ ಪ್ರಯಾಣಮಾಡಿದನು. ಆಗ ಕಾನಾನ್ಯರು ಆ ದೇಶದಲ್ಲಿ ಇದ್ದರು.

[7] ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನು ನಿನ್ನ ಸಂತತಿಗೆ ಈ ದೇಶವನ್ನು ಕೊಡುವೆನು,” ಎಂದರು. ಆದ್ದರಿಂದ ಅವನು ಅಲ್ಲಿ ತನಗೆ ಕಾಣಿಸಿಕೊಂಡ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿದನು.

[8] ಅಲ್ಲಿಂದ ಅವರು ಬೇತೇಲಿನ ಪೂರ್ವದ ಬೆಟ್ಟಕ್ಕೆ ಹೋಗಿ, ಪಶ್ಚಿಮಕ್ಕೆ ಬೇತೇಲ್, ಪೂರ್ವಕ್ಕೆ ಆಯಿ ಎಂಬ ಊರೂ ಇರುವ ಹಾಗೆ ತನ್ನ ಗುಡಾರವನ್ನು ಹಾಕಿಕೊಂಡನು. ಅಲ್ಲಿ ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಯೆಹೋವ ದೇವರ ಹೆಸರನ್ನು ಆರಾಧಿಸಿದನು.

[9] ಅಬ್ರಾಮನು ಪ್ರಯಾಣಮಾಡಿ, ನೆಗೆವ ಕಡೆಗೆ ಹೊರಟನು.

[10] ಆಗ ಆ ದೇಶದಲ್ಲಿ ಬರ ಉಂಟಾದದ್ದರಿಂದ, ಅಬ್ರಾಮನು ಈಜಿಪ್ಟಿನಲ್ಲಿ ಕೆಲವು ಸಮಯ ಇರಲು ಇಳಿದು ಹೋದನು. ಏಕೆಂದರೆ ಬರವು ಆ ದೇಶದಲ್ಲಿ ಘೋರವಾಗಿತ್ತು.

[11] ಅವನು ಈಜಿಪ್ಟನ್ನು ಸಮೀಪಿಸುತ್ತಿದ್ದಾಗ, ತನ್ನ ಹೆಂಡತಿ ಸಾರಯಳಿಗೆ, “ನೀನು ನೋಡುವುದಕ್ಕೆ ರೂಪವತಿಯೆಂದು ನನಗೆ ತಿಳಿದಿದೆ.

[12] ಹೀಗಿರುವುದರಿಂದ ಈಜಿಪ್ಟಿನವರು ನಿನ್ನನ್ನು ಕಂಡು, ‘ಈಕೆಯು ಅವನ ಹೆಂಡತಿ’ ಎಂದು ಹೇಳಿ, ನನ್ನನ್ನು ಕೊಂದುಹಾಕಿ, ನಿನ್ನನ್ನು ಉಳಿಸುವರು.

[13] ನಿನ್ನ ದೆಸೆಯಿಂದ ನನಗೆ ಒಳ್ಳೆಯದಾಗಿ, ನನ್ನ ಪ್ರಾಣವು ಉಳಿಯುವಂತೆ ನೀನು ನನ್ನ ಸಹೋದರಿ ಎಂದು ದಯಮಾಡಿ ಹೇಳಬೇಕು,” ಎಂದು ಹೇಳಿದನು.

[14] ಅಬ್ರಾಮನು ಈಜಿಪ್ಟಿಗೆ ಬಂದಾಗ, ಈಜಿಪ್ಟಿನವರು, ಆ ಸಾರಯಳು ಬಹಳ ಸುಂದರಿ ಎಂದುಕೊಂಡರು.

[15] ಫರೋಹನ ಅಧಿಕಾರಿಗಳು ಆಕೆಯನ್ನು ನೋಡಿ, ಫರೋಹನ ಮುಂದೆ ಆಕೆಯನ್ನು ಹೊಗಳಿ, ಆ ಸ್ತ್ರೀಯನ್ನು ಅವನ ಅರಮನೆಗೆ ಕರೆದುಕೊಂಡು ಹೋದರು.

[16] ಅವನು ಆಕೆಗೋಸ್ಕರ ಅಬ್ರಾಮನಿಗೆ ಒಳ್ಳೆಯದನ್ನು ಮಾಡಿದನು. ಅವನಿಗೆ ಕುರಿ, ಎತ್ತು, ಕತ್ತೆಗಳೂ ದಾಸದಾಸಿಯರೂ ಹೆಣ್ಣು ಕತ್ತೆಗಳೂ ಒಂಟೆಗಳೂ ದೊರೆತವು.

[17] ಆದರೆ ಯೆಹೋವ ದೇವರು ಫರೋಹನನ್ನೂ, ಅವನ ಮನೆಯನ್ನೂ ಅಬ್ರಾಮನ ಹೆಂಡತಿ ಸಾರಯಳಿಗಾಗಿ ಭಯಂಕರವಾದ ರೋಗಗಳಿಂದ ಬಾಧಿಸಿದರು.

[18] ಅನಂತರ ಫರೋಹನು ಅಬ್ರಾಮನನ್ನು ಕರೆಯಿಸಿ, “ನೀನು ನನಗೆ ಮಾಡಿದ್ದೇನು? ಈಕೆಯು ನಿನ್ನ ಹೆಂಡತಿ ಎಂದು ಯಾಕೆ ನನಗೆ ತಿಳಿಸಲಿಲ್ಲ?

[19] ‘ಆಕೆಯು ನನ್ನ ಸಹೋದರಿ,’ ಎಂದು ಯಾಕೆ ಹೇಳಿದೆ? ನೀನು ಹಾಗೆ ಹೇಳಿದ್ದರಿಂದ ಆಕೆಯನ್ನು ನನಗೆ ಹೆಂಡತಿಯಾಗಿ ಇಟ್ಟುಕೊಳ್ಳುವುದರಲ್ಲಿದ್ದೆನು. ಆದರೆ ಈಗ, ನಿನ್ನ ಹೆಂಡತಿ, ಈಕೆಯನ್ನು ನೀನು ಕರೆದುಕೊಂಡು ಹೋಗು,” ಎಂದನು.

[20] ಫರೋಹನು ತನ್ನ ಜನರಿಗೆ ಅವನ ವಿಷಯದಲ್ಲಿ ಆಜ್ಞಾಪಿಸಲು, ಅವರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳುಹಿಸಿಬಿಟ್ಟನು.

ಆದಿಕಾಂಡ — Chapters