[1] ಕೆಲವು ಕಾಲದ ನಂತರ, ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕಾಗಿ ಅವನಿಗೆ, “ಅಬ್ರಹಾಮನೇ,” ಎಂದು ಕರೆದರು. ಅದಕ್ಕವನು, “ಇಗೋ, ಇಲ್ಲಿದ್ದೇನೆ,” ಎಂದು ಉತ್ತರಕೊಟ್ಟನು.
[2] ಆಗ ದೇವರು, “ನೀನು ಪ್ರೀತಿ ಮಾಡುವ ನಿನ್ನ ಒಬ್ಬನೇ ಮಗ ಇಸಾಕನನ್ನು ಈಗ ತೆಗೆದುಕೊಂಡು, ಮೊರೀಯಾ ದೇಶಕ್ಕೆ ಹೋಗಿ, ಅಲ್ಲಿ ನಾನು ನಿನಗೆ ಹೇಳುವ ಒಂದು ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು,” ಎಂದರು.
[3] ಅಬ್ರಹಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಗೆ ತಡಿ ಕಟ್ಟಿ, ತನ್ನ ಸೇವಕರಲ್ಲಿ ಇಬ್ಬರನ್ನೂ, ತನ್ನ ಮಗ ಇಸಾಕನನ್ನೂ, ದಹನಬಲಿಗಳಿಗಾಗಿ ಕಟ್ಟಿಗೆಗಳನ್ನೂ ತೆಗೆದುಕೊಂಡು, ದೇವರು ತನಗೆ ಹೇಳಿದ ಸ್ಥಳಕ್ಕೆ ಹೋದನು.
[4] ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಆ ಸ್ಥಳವು ದೂರದಲ್ಲಿ ಕಾಣಿಸಿತು.
[5] ಅಬ್ರಹಾಮನು ತನ್ನ ಸೇವಕರಿಗೆ, “ಕತ್ತೆಯ ಸಂಗಡ ಇಲ್ಲಿಯೇ ಇರಿ. ನಾನೂ, ಹುಡುಗನೂ ಅಲ್ಲಿಗೆ ಹೋಗಿ, ಆರಾಧನೆ ಮಾಡಿ, ನಿಮ್ಮ ಬಳಿಗೆ ಹಿಂದಿರುಗಿ ಬರುತ್ತೇವೆ,” ಎಂದನು.
[6] ಅಬ್ರಹಾಮನು ದಹನಬಲಿಗಳ ಕಟ್ಟಿಗೆಗಳನ್ನು ತೆಗೆದುಕೊಂಡು, ತನ್ನ ಮಗ ಇಸಾಕನ ಮೇಲೆ ಹೊರಿಸಿ; ಬೆಂಕಿಯನ್ನೂ, ಕತ್ತಿಯನ್ನೂ ತನ್ನ ಕೈಯಲ್ಲಿ ತೆಗೆದುಕೊಂಡನು. ಅವರಿಬ್ಬರೂ ಹೊರಟು ಹೋದರು.
[7] ಇಸಾಕನು ತನ್ನ ತಂದೆ ಅಬ್ರಹಾಮನಿಗೆ, “ಅಪ್ಪಾ,” ಎಂದನು. ಆಗ ಅಬ್ರಹಾಮನು, “ಏನು ಮಗನೇ?” ಎಂದನು. ಅದಕ್ಕೆ ಅವನು, “ಇಗೋ, ಬೆಂಕಿಯೂ, ಕಟ್ಟಿಗೆಯೂ ಇವೆ, ಆದರೆ ದಹನಬಲಿಗೋಸ್ಕರ ಕುರಿಮರಿಯು ಎಲ್ಲಿ?” ಎಂದನು.
[8] ಅಬ್ರಹಾಮನು, “ನನ್ನ ಮಗನೇ, ದೇವರೇ ದಹನಬಲಿಗೋಸ್ಕರ ಕುರಿಮರಿಯನ್ನು ಒದಗಿಸುವರು,” ಎಂದು ಉತ್ತರಕೊಟ್ಟನು. ಹೀಗೆ ಅವರಿಬ್ಬರೂ ಜೊತೆಯಲ್ಲಿ ಹೋದರು.
[9] ದೇವರು ಅವನಿಗೆ ಹೇಳಿದ ಸ್ಥಳಕ್ಕೆ ಬಂದಾಗ, ಅಬ್ರಹಾಮನು ಅಲ್ಲಿ ಬಲಿಪೀಠವನ್ನು ಕಟ್ಟಿ, ಕಟ್ಟಿಗೆಗಳನ್ನು ಅದರ ಮೇಲೆ ಕ್ರಮವಾಗಿ ಜೋಡಿಸಿ, ತನ್ನ ಮಗ ಇಸಾಕನನ್ನು ಕಟ್ಟಿ, ಬಲಿಪೀಠದ ಮೇಲೆ ಇದ್ದ ಕಟ್ಟಿಗೆಗಳ ಮೇಲೆ ಇಟ್ಟನು.
[10] ಅಬ್ರಹಾಮನು ಕೈಚಾಚಿ ತನ್ನ ಮಗನನ್ನು ಕೊಲ್ಲುವುದಕ್ಕೆ ಕತ್ತಿ ತೆಗೆದುಕೊಂಡನು.
[11] ಆಗ ಯೆಹೋವ ದೇವರ ದೂತನು ಆಕಾಶದೊಳಗಿಂದ, “ಅಬ್ರಹಾಮನೇ, ಅಬ್ರಹಾಮನೇ,” ಎಂದು ಅವನನ್ನು ಕರೆದನು. ಅವನು, “ಇಲ್ಲಿ ಇದ್ದೇನೆ,” ಎಂದನು.
[12] ಯೆಹೋವ ದೇವರ ದೂತನು ಅಬ್ರಹಾಮನಿಗೆ, “ಹುಡುಗನ ಮೇಲೆ ಕೈ ಹಾಕಬೇಡ; ಅವನಿಗೆ ಏನೂ ಮಾಡಬೇಡ; ಏಕೆಂದರೆ ನೀನು ದೇವರಿಗೆ ಭಯಪಡುತ್ತೀ ಎಂದು ಈಗ ನಾನು ತಿಳಿದಿದ್ದೇನೆ. ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಅರ್ಪಿಸುವುದಕ್ಕೆ ಹಿಂಜರಿಯಲಿಲ್ಲ,” ಎಂದು ಹೇಳಿದನು.
[13] ಅಬ್ರಹಾಮನು ಕಣ್ಣೆತ್ತಿ ನೋಡಿದಾಗ, ಅವನ ಹಿಂದೆ ಒಂದು ಟಗರು ಕೊಂಬುಗಳಿಂದ ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮನು ಹೋಗಿ ಆ ಟಗರನ್ನು ತೆಗೆದುಕೊಂಡು, ಅದನ್ನು ತನ್ನ ಮಗನಿಗೆ ಬದಲಾಗಿ ದಹನಬಲಿಯಾಗಿ ಅರ್ಪಿಸಿದನು.
[14] ಅಬ್ರಹಾಮನು ಆ ಸ್ಥಳಕ್ಕೆ ಯೆಹೋವ ಯೀರೆ ಎಂದು ಹೆಸರಿಟ್ಟನು. “ಯೆಹೋವ ದೇವರು ಪರ್ವತದ ಮೇಲೆ ಒದಗಿಸುವರು,” ಎಂದು ಇಂದಿನವರೆಗೂ ಜನರು ಹೇಳುತ್ತಾರೆ.
[15] ಯೆಹೋವ ದೇವರ ದೂತನು ಆಕಾಶದೊಳಗಿಂದ ಎರಡನೆಯ ಸಾರಿ ಅಬ್ರಹಾಮನನ್ನು ಕರೆದು ಅವನಿಗೆ,
[16] “ನೀನು ಈ ಕಾರ್ಯವನ್ನು ಮಾಡಿ, ನಿನ್ನ ಒಬ್ಬನೇ ಮಗನನ್ನು ಸಹ ನನಗೆ ಕೊಡುವುದಕ್ಕೆ ಹಿಂಜರಿಯದೆ ಇದ್ದುದರಿಂದ, ಯೆಹೋವ ದೇವರಾದ ನಾನು ನಿನಗೆ ಪ್ರಮಾಣವಾಗಿ ಹೇಳುವುದೇನಂದರೆ,
[17] ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು. ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸುವೆನು. ನಿನ್ನ ಸಂತಾನದವರು ತಮ್ಮ ಶತ್ರುಗಳ ಪಟ್ಟಣಗಳನ್ನು ವಶಪಡಿಸಿಕೊಳ್ಳುವರು.
[18] ನೀನು ನನಗೆ ವಿಧೇಯನಾದದ್ದರಿಂದ, ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,” ಎಂದರು.
[19] ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಹಿಂದಿರುಗಿ ಬಂದನು. ಅವರೆಲ್ಲರೂ ಬೇರ್ಷೆಬಕ್ಕೆ ಹೋದರು. ಅಬ್ರಹಾಮನು ಬೇರ್ಷೆಬದಲ್ಲಿ ವಾಸಿಸಿದನು.
[20] ಕೆಲ ಸಮಯದ ನಂತರ ಕೆಲವರು ಅಬ್ರಹಾಮನಿಗೆ, “ಮಿಲ್ಕಾಳು ತಾಯಾಗಿದ್ದಾಳೆ. ನಿನ್ನ ಸಹೋದರ ನಾಹೋರನಿಗೆ ಅವಳು ಮಕ್ಕಳನ್ನು ಹೆತ್ತಿದ್ದಾಳೆ,” ಎಂದು ತಿಳಿಸಿದರು.
[21] ಅವರು ಯಾರೆಂದರೆ, ಅವನ ಚೊಚ್ಚಲು ಮಗ ಊಚ್, ಅವನ ಸಹೋದರ ಬೂಜ್, ಅರಾಮನ ತಂದೆ ಕೆಮೂಯೇಲ್,
[22] ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್, ಬೆತೂಯೇಲ್.
[23] ಬೆತೂಯೇಲನಿಂದ ರೆಬೆಕ್ಕಳು ಹುಟ್ಟಿದಳು. ಈ ಎಂಟು ಮಂದಿಯನ್ನು ಮಿಲ್ಕಾಳು ಅಬ್ರಹಾಮನ ಸಹೋದರ ನಾಹೋರನಿಗೆ ಹೆತ್ತಳು.
[24] ಅವನ ಉಪಪತ್ನಿ ರೂಮಳೆಂಬವಳು ಸಹ ಟೆಬಹ, ಗಹಮ, ತಹಷ, ಮಾಕಾ ಎಂಬುವರನ್ನು ಹೆತ್ತಳು.