Skip to content
Opens in a new window
Listen to this chapter • 4:14

[1] ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಕಾಡುಮೃಗಗಳನ್ನೂ ಪಶುಗಳನ್ನೂ ನೆನಪಿಗೆ ತಂದುಕೊಂಡು, ಭೂಲೋಕದ ಮೇಲೆ ಗಾಳಿಬೀಸುವಂತೆ ಮಾಡಲಾಗಿ, ನೀರು ತಗ್ಗಿತು.

[2] ಮಾತ್ರವಲ್ಲದೆ ಸಾಗರದ ಸೆಲೆಗಳೂ, ಆಕಾಶದ ದ್ವಾರಗಳೂ ಮುಚ್ಚಿಹೋದವು. ಆಕಾಶದಿಂದ ಬೀಳುವ ಮಳೆ ನಿಂತುಹೋಯಿತು.

[3] ಹೀಗೆ ನೀರು ಭೂಮಿಯ ಮೇಲಿನಿಂದ ಕ್ರಮವಾಗಿ ಇಳಿಯಿತು. ನೀರು ನೂರೈವತ್ತು ದಿನಗಳ ಅಂತ್ಯದಲ್ಲಿ ಕಡಿಮೆಯಾಯಿತು.

[4] ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನಿಂತಿತು.

[5] ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂತು, ಹತ್ತನೆಯ ತಿಂಗಳಿನ ಮೊದಲಿನ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.

[6] ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದನು.

[7] ಅವನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು, ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು.

[8] ಭೂಮುಖದ ಮೇಲೆ ಜಲವು ಕಡಿಮೆಯಾಯಿತೋ ಇಲ್ಲವೋ ಎಂದು ನೋಡುವಂತೆ, ಒಂದು ಪಾರಿವಾಳವನ್ನೂ ಹೊರಕ್ಕೆ ಕಳುಹಿಸಿದನು.

[9] ಆದರೆ ನೀರು ಭೂಮಿಯ ಮೇಲೆಲ್ಲಾ ಇರುವುದರಿಂದ ಪಾರಿವಾಳವು ಕಾಲಿಡುವುದಕ್ಕೂ ಸ್ಥಳವನ್ನು ಕಾಣದೆ, ಅವನ ಬಳಿಗೆ ನಾವೆಗೆ ಹಿಂದಿರುಗಿತು. ಅವನು ಕೈಚಾಚಿ ಅದನ್ನು ಹಿಡಿದು, ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು.

[10] ಅವನು ಇನ್ನೂ ಏಳು ದಿವಸ ತಡೆದು, ಪಾರಿವಾಳವನ್ನು ಪುನಃ ನಾವೆಯೊಳಗಿಂದ ಹೊರಕ್ಕೆ ಬಿಟ್ಟನು.

[11] ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ತಿರುಗಿ ಬರಲು, ಅದರ ಬಾಯಿಯಲ್ಲಿ ಓಲಿವ್ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದಿದೆಯೆಂದು ತಿಳಿದುಕೊಂಡನು.

[12] ಇನ್ನೂ ಏಳು ದಿನಗಳು ತಡೆದು, ಆ ಪಾರಿವಾಳವನ್ನು ಬಿಟ್ಟಾಗ, ಅದು ತಿರುಗಿ ಅವನ ಬಳಿಗೆ ಬರಲೇ ಇಲ್ಲ.

[13] ಆರುನೂರ ಒಂದನೆಯ ವರ್ಷದ, ಮೊದಲನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಮೇಲಿನ ಮುಚ್ಚಳವನ್ನು ತೆಗೆದು ನೋಡಲಾಗಿ, ನೆಲವು ಒಣಗಿತ್ತು.

[14] ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು.

[15] ಆಗ ದೇವರು ನೋಹನಿಗೆ,

[16] “ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ.

[17] ನಿನ್ನ ಬಳಿಯಲ್ಲಿರುವ ಪಕ್ಷಿ, ಪಶು, ಕ್ರಿಮಿ, ಮುಂತಾದ ಎಲ್ಲಾ ಜೀವಿಗಳನ್ನು ಹೊರಗೆ ತೆಗೆದುಕೊಂಡು ಬಾ. ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ, ಅವು ಅಭಿವೃದ್ಧಿಯಾಗಿ ಹೆಚ್ಚಲಿ,” ಎಂದು ಹೇಳಿದರು.

[18] ಹೀಗೆ ನೋಹನು, ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ಹೊರಗೆ ಬಂದನು.

[19] ಎಲ್ಲಾ ಮೃಗಗಳೂ ಎಲ್ಲಾ ಕ್ರಿಮಿಗಳೂ ಎಲ್ಲಾ ಪಕ್ಷಿಗಳೂ ಭೂಮಿಯಲ್ಲಿ ಹರಿದಾಡುವ ಎಲ್ಲವೂ ತಮ್ಮ ತಮ್ಮ ಜಾತಿಗನುಸಾರವಾಗಿ ನಾವೆಯೊಳಗಿಂದ ಹೊರಗೆ ಬಂದವು.

[20] ನೋಹನು ಯೆಹೋವ ದೇವರಿಗೆ ಬಲಿಪೀಠವನ್ನು ಕಟ್ಟಿ, ಶುದ್ಧವಾದ ಪ್ರತಿ ಪಶುಗಳಿಂದಲೂ ಶುದ್ಧವಾದ ಪ್ರತಿ ಪಕ್ಷಿಗಳಿಂದಲೂ ಕೆಲವೊಂದನ್ನು ಆಯ್ದುಕೊಂಡು, ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.

[21] ಅದರ ಸುವಾಸನೆಯು ಯೆಹೋವ ದೇವರಿಗೆ ಗಮಗಮಿಸಲು, ಅವರು ಹೃದಯದೊಳಗೆ, “ಮನುಷ್ಯನ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಮನುಷ್ಯರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಸಂಹರಿಸಿದಂತೆ ಇನ್ನು ಮೇಲೆ ಸಂಹರಿಸುವುದಿಲ್ಲ.

[22] “ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ; ತಂಪೂ ಸೆಕೆಯೂ; ಬೇಸಿಗೆಯೂ ಹಿಮಕಾಲವೂ; ಹಗಲೂ ರಾತ್ರಿಯೂ ನಿಂತುಹೋಗುವುದಿಲ್ಲ.”

ಆದಿಕಾಂಡ — Chapters