Skip to content
Opens in a new window
Listen to this chapter • 4:29

[1] ಆ ಮೇಲೆ ಯೋಬನು ಪ್ರತ್ಯುತ್ತರವಾಗಿ ಇಂತೆಂದನು,

[2] “ನೀನು ಹೇಳಿದ್ದು ಸತ್ಯವೇ ಸರಿ. ಆದರೆ ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿರುವುದು ಹೇಗೆ?

[3] ಆತನೊಂದಿಗೆ ವ್ಯಾಜ್ಯಮಾಡಬೇಕೆಂದು ಇಷ್ಟಪಟ್ಟರೂ, ಆತನ ಸಾವಿರ ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಕೊಡಲಾರನು.

[4] ದೇವರ ಹೃದಯವು ವಿವೇಕವುಳ್ಳದ್ದು, ಆತನ ಶಕ್ತಿಯು ಪ್ರಬಲವಾದದ್ದು. ಆತನ ವಿರುದ್ಧವಾಗಿ ಮನಸ್ಸು ಕಠಿಣಮಾಡಿಕೊಂಡವನು ಸಾರ್ಥಕನಾದದ್ದುಂಟೇ?

[5] ಆತನು ಪರ್ವತಗಳನ್ನು ಅರಿಯದಂತೆ ಸರಿಸಿ ಕೋಪದಿಂದ ಅವುಗಳನ್ನು ಉರುಳಿಸುತ್ತಾನೆ.

[6] ಭೂಲೋಕವನ್ನು ಕದಲಿಸಿ ಅದರ ಸ್ತಂಭಗಳನ್ನು ನಡುಗಿಸುತ್ತಾನೆ.

[7] ಹುಟ್ಟಬೇಡವೆಂದು ಆತನು ಅಪ್ಪಣೆ ಕೊಟ್ಟರೆ ಸೂರ್ಯನು ಹುಟ್ಟುವುದಿಲ್ಲ; ನಕ್ಷತ್ರಗಳನ್ನು ಮುಚ್ಚಿಟ್ಟು ಮುದ್ರೆಹಾಕುತ್ತಾನೆ.

[8] ಆಕಾಶಮಂಡಲವನ್ನು ವಿಶಾಲಪಡಿಸಿದವನು ಆತನೊಬ್ಬನೇ. ಅಲ್ಲಕಲ್ಲೋಲವಾದ ಸಮುದ್ರದ ಮೇಲೆ ನಡೆಯುತ್ತಾನೆ.

[9] ನಕ್ಷತ್ರಮಂಡಲವನ್ನೂ, ಮೃಗಶಿರವನ್ನೂ, ಕೃತ್ತಿಕೆಯನ್ನೂ, ದಕ್ಷಿಣ ದಿಕ್ಕಿನ ನಕ್ಷತ್ರಗೃಹಗಳನ್ನೂ ನಿರ್ಮಿಸಿದವನು ಆತನೇ.

[10] ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.

[11] ಆಹಾ, ಆತನು ನನ್ನ ಪಕ್ಕದಲ್ಲಿ ದಾಟಿಹೋದರೂ ನಾನು ಕಾಣುವುದಿಲ್ಲ; ಮುಂದಕ್ಕೆ ಹಾದುಹೋದರೂ ನನಗೆ ತಿಳಿಯುವುದಿಲ್ಲ.

[12] ಇಗೋ ಹಿಡಿದುಕೊಳ್ಳುತ್ತಾನೆ, ಆತನನ್ನು ತಳ್ಳುವವರು ಯಾರು? ‘ನೀನು ಏನು ಮಾಡುತ್ತಿ?’ ಎಂದು ಆತನನ್ನು ಕೇಳುವವರಾರು?

[13] ದೇವರು ತನ್ನ ಸಿಟ್ಟನ್ನು ತೊಲಗಿಸಿಬಿಡುವುದಿಲ್ಲ; ರಾಹಾಬನ ಸಹಾಯಕರು ಆತನಿಗೆ ಅಡ್ಡಬಿದ್ದರಲ್ಲಾ.

[14] ನಾನಾದರೋ ದೇವರೊಂದಿಗೆ ವಾದಿಸಿ, ಆತನಿಗೆ ಉತ್ತರಕೊಡುವುದಕ್ಕೆ ಮತ್ತೂ ಅಶಕ್ತನು.

[15] ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.

[16] ನಾನು ಕರೆದಾಗ ಆತನು ನನಗೆ ಕಾಣಿಸಿಕೊಂಡಿದ್ದರೂ, ನನ್ನ ವಿಜ್ಞಾಪನೆಯನ್ನು ಲಾಲಿಸುವನೆಂದು ನಂಬುತ್ತಿರಲಿಲ್ಲ.

[17] ಆತನು ಬಿರುಗಾಳಿಯಿಂದ ನನ್ನನ್ನು ಬಡಿಯುತ್ತಾ, ಸುಮ್ಮಸುಮ್ಮನೆ ಒಂದರ ಮೇಲೊಂದು ಗಾಯಮಾಡುತ್ತಾ,

[18] ಉಸಿರಾಡಗೊಡಿಸದೆ ಕಹಿಯಾದ ಪದಾರ್ಥದಿಂದ ನನ್ನ ಹೊಟ್ಟೆಯನ್ನು ತುಂಬಿಸುತ್ತಾನೆ.

[19] ನಾನು ಬಲಿಷ್ಠನ ಶಕ್ತಿಯನ್ನು ಮೊರೆಹೋಗುವೆನೆಂದರೆ ದೇವರು, ‘ಇಗೋ, ಇದ್ದೇನೆ’ ಎನ್ನುವನು. ನ್ಯಾಯವಿಚಾರಣೆಯು ಆಗಲಿ ಎಂದರೆ ಆತನು ನನಗೆ, ‘ಕಾಲ ನಿಯಾಮಕರು ಯಾರು?’ ಎನ್ನುವನು.

[20] ನಾನು ನೀತಿವಂತನಾಗಿದ್ದರೂ ನನ್ನ ಬಾಯೇ ನನ್ನನ್ನು ಅಪರಾಧಿಯೆಂದು ತೋರ್ಪಡಿಸುವುದು. ನಾನು ನಿರ್ದೋಷಿಯಾಗಿದ್ದರೂ ಆತನು ನನ್ನನ್ನು ದುರ್ಮಾರ್ಗಿಯೆಂದು ನಿರೂಪಿಸುವನು.

[21] ನಾನು ನಿರ್ದೋಷಿಯೇ ಹೌದು; ನನ್ನ ವಿಷಯದಲ್ಲಿ ನನಗೇನೂ ಚಿಂತೆಯಿಲ್ಲ; ನನ್ನ ಪ್ರಾಣವನ್ನು ತಿರಸ್ಕರಿಸುತ್ತೇನೆ.

[22] ಎಲ್ಲಾ ಒಂದೇ. ಆದಕಾರಣ ‘ನಾನು, ನಿರ್ದೋಷಿಯನ್ನೂ, ದೋಷಿಯನ್ನೂ ಆತನು ನಾಶ ಮಾಡುತ್ತೇನೆ’ ಎಂದು ಹೇಳುತ್ತಾನೆ.

[23] ವಿಪತ್ತು ಆಕಸ್ಮಾತ್ತಾಗಿ ಜನರನ್ನು ಸಂಹರಿಸಲು, ನಿರ್ಮಲಚಿತ್ತರು ಮನಗುಂದುವುದನ್ನು ಆತನು ನೋಡಿ ಹಾಸ್ಯಮಾಡುವನು.

[24] ಭೂಲೋಕವು ದುಷ್ಟರ ಕೈ ಸೇರಿದೆ; ಲೋಕದ ನ್ಯಾಯಾಧಿಪತಿಗಳ ಮುಖಗಳಿಗೆ ಮುಸುಕು ಹಾಕಿದ್ದಾನೆ. ಇದನ್ನು ಮಾಡಿದವನು ಆತನಲ್ಲದೆ ಮತ್ತೆ ಯಾರು?

[25] ನನ್ನ ದಿನಗಳು ಓಟಗಾರನಿಗಿಂತ ಶೀಘ್ರವಾಗಿರುತ್ತವೆ. ಯಾವ ಸುಖವನ್ನೂ ಕಾಣದೆ ಓಡಿ ಹೋಗುತ್ತವೆ.

[26] ಬೆಂಡಿನ ದೋಣಿಗಳು ದಾಟಿ ಹೋಗುವಂತೆಯೂ, ಹದ್ದು ತನ್ನ ಬೇಟೆಯ ಮೇಲೆ ಎರಗುವಂತೆಯೂ ವೇಗವಾಗಿ ಗತಿಸಿ ಹೋಗುತ್ತವೆ.

[27] ನಾನು ನನ್ನ ಪ್ರಲಾಪವನ್ನು ಮರೆತುಬಿಟ್ಟು, ಕಳೆಗುಂದಿದ ನನ್ನ ಮುಖವನ್ನು ಮಾರ್ಪಡಿಸಿಕೊಂಡು ಹರ್ಷಿಸುವೆನೆಂದು ಮನಸ್ಸು ಮಾಡಿದರೆ,

[28] ನನ್ನ ಎಲ್ಲಾ ಸಂಕಟಗಳಿಂದ ನನಗೆ ಭಯವುಂಟಾಗುತ್ತದೆ; ನೀನು ನನ್ನನ್ನು ನಿರ್ದೋಷಿಯೆಂದು ಎಣಿಸುವುದಿಲ್ಲವೆಂದು ತಿಳಿದುಕೊಳ್ಳುತ್ತೇನೆ.

[29] ನಾನು ಅಪರಾಧಿಯೆಂದು ನಿರ್ಣಯಿಸಲ್ಪಡಬೇಕಷ್ಟೆ. ನಾನು ವ್ಯರ್ಥವಾಗಿ ಪ್ರಯಾಸಪಡುವುದೇಕೆ?

[30] ನಾನು ಹಿಮದಿಂದ ಸ್ನಾನಮಾಡಿದರೂ, ಚೌಳಿನಿಂದ ನನ್ನ ಕೈಗಳನ್ನು ತೊಳಕೊಂಡರೂ,

[31] ನೀನು ನನ್ನನ್ನು ಗುಂಡಿಯಲ್ಲಿ ಮುಳುಗಿಸಿ, ನನ್ನ ಬಟ್ಟೆಗಳಿಗೆ ನಾನು ಅಸಹ್ಯನಾಗುವಂತೆ ಮಾಡುವಿ.

[32] ಆತನು ನನ್ನಂಥವನಲ್ಲ, ಮನುಷ್ಯನಲ್ಲ, ನಾನು ಆತನೊಂದಿಗೆ ವಾದಿಸುವುದು ಹೇಗೆ? ನಾವಿಬ್ಬರೂ ನ್ಯಾಯಾಸನದ ಮುಂದೆ ಕೂಡುವುದು ಹೇಗೆ?

[33] ನಮ್ಮಿಬ್ಬರ ಮೇಲೆ ಕೈಯಿಡುವವನಾಗಿಯೂ, ಮಧ್ಯಸ್ಥನಾಗಿಯೂ ಇರುವ ನ್ಯಾಯಾಧಿಪತಿಯು ಯಾರೂ ಇಲ್ಲ.

[34] ನನ್ನ ಮೇಲೆ ಎತ್ತಿರುವ ತನ್ನ ದಂಡವನ್ನು ಆತನು ತೆಗೆದುಹಾಕಲಿ, ಆತನಿಂದಾಗುವ ದಿಗಿಲು ನನ್ನನ್ನು ಹೆದರಿಸದಿರಲಿ.

[35] ಹೀಗಿದ್ದರೆ ನಾನು ಭಯಪಡದೆ ಮಾತನಾಡುವೆನು; ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.”

ಯೋಬನು — Chapters