[1] “ನನ್ನ ಉಸಿರು ಕಟ್ಟುತ್ತಿದೆ, ನನ್ನ ಆಯಷ್ಕಾಲವು ಮುಗಿದಿವೆ, ಗೋರಿಯು ನನಗಾಗಿ ಕಾದಿದೆ.
[2] ನನ್ನ ಬಳಿಯಲ್ಲಿರುವವರು ಹಾಸ್ಯಗಾರರೇ ಸರಿ, ಅವರ ಕೆಣಕಾಟವು ಯಾವಾಗಲೂ ನನ್ನ ಕಣ್ಣಿನ ಮುಂದೆ ಇದೆ.
[3] ಕೃಪೆಮಾಡಿ ಈಡನ್ನು ಕೊಡು, ನನಗಾಗಿ ನೀನೇ ನಿನ್ನ ಹತ್ತಿರ ಹೊಣೆಯಾಗು, ನನ್ನ ಕೈ ಮೇಲೆ ಕೈ ಹಾಕತಕ್ಕವರು ನನಗೆ ಇನ್ನಾರೂ ಇಲ್ಲ.
[4] ವಿವೇಕವು ಪ್ರವೇಶಿಸದಂತೆ; ಅವರ ಮನಸ್ಸನ್ನು, ಹೃದಯವನ್ನು ಮುಚ್ಚಿರುವೆ, ಹೀಗೆ ಅವರು ಜಯಶೀಲರಾಗದಂತೆ ತಡೆಯುವೆ.
[5] ಯಾರು ಸ್ವಲಾಭಕ್ಕಾಗಿ ಮಿತ್ರರ ಮೇಲೆ ದೂರು ಹೊರಿಸುವನೋ, ಅವನ ಮಕ್ಕಳು ಕಂಗೆಡುವರು.
[6] ಆತನು ನನ್ನನ್ನು ಅನ್ಯದೇಶದವರ ವ್ಯರ್ಥ ಆಪಾದನೆಗಳಿಗೆ ಗುರಿ ಮಾಡಿದ್ದಾನೆ, ಜನರ ಉಗುಳಿಗೆ ನನ್ನ ಮುಖ ಗುರಿಯಾಗಿದೆ.
[7] ದುಃಖದಿಂದ ನನ್ನ ಕಣ್ಣು ಮೊಬ್ಬಾಗಿದೆ, ನನ್ನ ಅಂಗಗಳೆಲ್ಲಾ ನೆರಳಿನಂತೆ ನಿಸ್ಸಾರವಾಗಿವೆ.
[8] ಯಥಾರ್ಥಜನರು ಇದನ್ನು ನೋಡಿ ಬೆರಗಾಗಿದ್ದಾರೆ, ಮತ್ತು ನಿರಪರಾಧಿಯು ಭ್ರಷ್ಟನ ವಿಷಯದಲ್ಲಿ ಎಚ್ಚರಗೊಳ್ಳುತ್ತಾನೆ.
[9] ಹೀಗಾದರೂ ಶಿಷ್ಟನು ತನ್ನ ಮಾರ್ಗವನ್ನೇ ಹಿಡಿದು ನಡೆಯುವನು, ಶುದ್ಧಹಸ್ತನು ಬಲಗೊಳ್ಳುತ್ತಲೇ ಇರುವನು.
[10] ಆದರೆ ನೀವೆಲ್ಲರೂ ಮತ್ತೆ ವಾದಕ್ಕೆ ಬನ್ನಿರಿ, ನಿಮ್ಮಲ್ಲಿ ಒಬ್ಬ ಜ್ಞಾನಿಯನ್ನಾದರೂ ಕಾಣೆನು.
[11] ನನ್ನ ದಿನಗಳು ಮುಗಿದುಹೋದವು. ನನ್ನ ಉದ್ದೇಶಗಳೂ, ನನ್ನ ಹೃದಯದ ಆಶೆಗಳೂ ಭಂಗವಾದವು.
[12] ಇವರು ಇರುಳನ್ನು ಹಗಲೆಂದು ಸಾಧಿಸಿ, ಕತ್ತಲಿಂದ ಬೆಳಕು ಬೇಗನೆ ಬರುವುದೆಂದು ತಿಳಿಸುತ್ತಾರೆ.
[13] ನಾನು ಪಾತಾಳವನ್ನು ನನ್ನ ಮನೆಯೆಂದು ನಿರೀಕ್ಷಿಸಿ, ನನ್ನ ಹಾಸಿಗೆಯನ್ನು ಕತ್ತಲಲ್ಲಿ ಹಾಸಿದ್ದೇನೆ.
[14] ಸಮಾಧಿಯನ್ನು, ‘ನೀನು, ನನ್ನ ತಂದೆ’ ಎಂದೂ ಹುಳವನ್ನು, ‘ನನ್ನ ತಾಯಿ, ನನ್ನ ತಂಗಿ’ ಎಂದೂ ಕರೆಯುವುದಾದರೆ,
[15] ನನ್ನ ನಿರೀಕ್ಷೆ ಎಂಥದು? ನನ್ನ ನಿರೀಕ್ಷೆಯನ್ನು ಯಾರು ನೋಡುವರು?
[16] ಅದು ನನ್ನ ಸಂಗಡ ಪಾತಾಳಕ್ಕೆ ಇಳಿದು ಬಂದೀತೇ? ನಾವು ಜೊತೆಯಾಗಿ ಧೂಳಿಗೆ ಸೇರಲು ಸಾಧ್ಯವೇ?”