[1] ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?
[2] ಅದರ ಮೂಗಿಗೆ ಗಾಳವನ್ನು ಇಡುವೆಯೋ? ಅದರ ದವಡೆಗೆ ಮುಳ್ಳನ್ನು ಚುಚ್ಚುವಿಯೋ?
[3] ಅದು ನಿನ್ನ ಬಳಿ ವಿಜ್ಞಾಪಿಸುವುದೋ? ನಿನ್ನ ಸಂಗಡ ಸವಿಮಾತನಾಡೀತೇ?
[4] ಅದನ್ನು ನೀನು ಸದಾ ಆಳಾಗಿ ಸೇರಿಸಿಕೊಳ್ಳುವಂತೆ, ನಿನ್ನೊಂದಿಗೆ ಒಪ್ಪಂದ ಮಾಡಿಕೊಳ್ಳುವುದೋ?
[5] ಅದನ್ನು ಪಕ್ಷಿಯಂತೆ ಆಡಿಸುವೆಯಾ? ನಿನ್ನ ಹುಡುಗಿಯರ ವಿನೋದಕ್ಕಾಗಿ ಅದನ್ನು ಕಟ್ಟುವೆಯಾ?
[6] ಪಾಲುಗಾರರಾದ ಬೆಸ್ತರು ಅದನ್ನು ವ್ಯಾಪಾರಕ್ಕೆ ಇಡುವರೋ? ವರ್ತಕರಿಗೆ ಹಂಚಿ ಮಾರುವರೋ?
[7] ಅದರ ಚರ್ಮವನ್ನೆಲ್ಲ ಕೊಂಡಿಗಳಿಂದಲೂ ಅಥವಾ ತಲೆಯನ್ನೆಲ್ಲ ಮೀನಿನ ಈಟಿಗಳಿಂದಲೂ ಚುಚ್ಚಬಲ್ಲೆಯಾ?
[8] ಅದರ ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವುದೇ ಇಲ್ಲ.
[9] ಆಹಾ, ಅದನ್ನು ಹಿಡಿಯಬೇಕೆಂಬ ನಿರೀಕ್ಷೆಯು ವ್ಯರ್ಥ! ಹಿಡಿಯಲು ಬಂದವನು ನೋಡಿದ ಮಾತ್ರಕ್ಕೆ ಬಿದ್ದು ಹೋಗುವನು.
[10] ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆ ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?
[11] ನಾನು ಸಾಲ ತೀರಿಸಬೇಕಾದರೆ ಮೊದಲು ಅದನ್ನು ನನಗೆ ಕೊಟ್ಟವರು ಯಾರು? ಆಕಾಶಮಂಡಲದ ಕೆಳಗಿರುವ ಸರ್ವಸ್ವವೂ ನನ್ನದೇ.
[12] ನಾನು ಅದರ ಅಂಗಗಳನ್ನೂ ಶಕ್ತಿವಿಧಾನವನ್ನೂ ಸೊಗಸಾದ ಜೋಡಣೆಯನ್ನೂ ವರ್ಣಿಸದೆ ಸುಮ್ಮನಿರಲಾರೆನು.
[13] ಅದರ ಹೊರಕವಚವನ್ನು ಯಾರು ತೆಗೆಯುವರು? ಜೋಡು ದವಡೆಗಳೊಳಗೆ ಪ್ರವೇಶಿಸುವವರು ಯಾರು?
[14] ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ.
[15] ಗುರಾಣಿಗಳ ಸಾಲುಗಳು ಅದರ ಹೆಚ್ಚಳಕ್ಕೆ ಆಸ್ಪದವಾಗಿದೆ. ಅವು ಬಿಗಿದು ಮುದ್ರಿಸಲ್ಪಟ್ಟಿವೆ.
[16] ಗಾಳಿಯು ಕೂಡ ನುಗ್ಗದಂತೆ ಅವು ಒಂದಕ್ಕೊಂದು ಹೊಂದಿಕೊಂಡಿವೆ.
[17] ಪರಸ್ಪರ ಅಂಟಿಕೊಂಡು ವಿಂಗಡಿಸದ ಹಾಗೆ ಹಿಡಿದುಕೊಂಡಿವೆ.
[18] ಅದರ ಸೀನಿನ ತುಂತುರುಗಳು ತಳತಳಿಸುವವು, ಕಣ್ಣು ಅರುಣನೇತ್ರಕ್ಕೆ ಸಮಾನವಾಗಿದೆ.
[19] ಬಾಯೊಳಗಿಂದ ಕೊಳ್ಳಿಗಳು ಹೊರಡುವವು, ಬೆಂಕಿಕಿಡಿಗಳು ಹಾರುವವು.
[20] ಆಪುಹುಲ್ಲಿಗೆ ಬೆಂಕಿಯಿಟ್ಟು ಊದಿ ಕಾಯಿಸಿದ ಕೊಪ್ಪರಿಗೆಯಿಂದಲೋ ಎಂಬಂತೆ ಮೂಗಿನೊಳಗಿಂದ ಹೊಗೆ ಹಾಯುವುದು.
[21] ಅದರ ಉಸಿರೇ ಇದ್ದಲನ್ನು ಹೊತ್ತಿಸುವುದು, ಜ್ವಾಲೆಯು ಬಾಯಿಂದೇಳುವುದು.
[22] ಬಲವು ಕುತ್ತಿಗೆಯಲ್ಲಿ ನೆಲೆಗೊಂಡಿದೆ, ಅದರ ಮುಂದೆ ಭಯವು ಕುಣಿದಾಡುವುದು.
[23] ಅದರ ಮಾಂಸದ ಖಂಡಗಳು ಸಡಿಲವಿಲ್ಲದೆ ಅದಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ.
[24] ಅದರ ಹೃದಯವು ಬಂಡೆಯ ಹಾಗೂ ಬೀಸುವ ಕೆಳಗಲ್ಲಿನಂತೆಯೂ ಗಟ್ಟಿಯಾಗಿದೆ.
[25] ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.
[26] ಒಬ್ಬನು ಕತ್ತಿಯೊಡನೆ ಮೇಲೆ ಬಿದ್ದರೂ ಅದಕ್ಕೇನೂ ಆಗಲಾರದು; ಬಾಣ ಭರ್ಜಿ ಈಟಿ ಇವುಗಳೂ ವ್ಯರ್ಥವೇ.
[27] ಅದು ಕಬ್ಬಿಣವನ್ನು ಒಣಹುಲ್ಲನ್ನಾಗಿಯೂ ತಾಮ್ರವನ್ನು ಕೊಳೆತ ಮರವನ್ನಾಗಿಯೂ ಭಾವಿಸುವುದು.
[28] ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಅದಕ್ಕೆ ಹೊಟ್ಟಿನಂತಿರುವವು.
[29] ಅದು ದೊಣ್ಣೆಗಳನ್ನು ಹುಲ್ಲುಕಡ್ಡಿಯಾಗಿ ಎಣಿಸುವುದು; ಬಿರ್ರನೆ ಬರುವ ಈಟಿಗೆ ನಗುವುದು.
[30] ಅದರ ಕೆಳಭಾಗವು ಚೂಪಾದ ಬೋಕಿಗಳಾಗಿದೆ, ಅದು ಕೆಸರಿನ ಮೇಲೆ ಹಲಗೆಯ ಹಾಗೆ ನೀಡಿಕೊಂಡಿರುವುದು.
[31] ಜಲನಿಧಿಯನ್ನು ಹಂಡೆಯ ನೀರಿನ ಹಾಗೆ ಕುದಿಸುವುದು; ಸಮುದ್ರವನ್ನು ಕಲಕಿದ ತೈಲಪಾತ್ರೆಯಂತೆ ಮಾಡುವುದು.
[32] ಸಾಗರಕ್ಕೆ ನರೆ ಬಂತೋ ಎಂಬಂತೆ ತಾನು ಬಂದ ದಾರಿಯನ್ನು ಶುಭ್ರಗೊಳಿಸುವುದು.
[33] ಇದಕ್ಕೆ ಸಮಾನವಾದದ್ದು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ, ಭಯವಿಲ್ಲದೆ ಇರುವುದಕ್ಕಾಗಿ ಸೃಷ್ಟಿಸಲ್ಪಟ್ಟಿದೆ.
[34] ಇದು ಪ್ರತಿಯೊಂದು ದೊಡ್ಡ ಪ್ರಾಣಿಯನ್ನೂ ದಿಟ್ಟಿಸಿ ನೋಡುವುದು, ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವುದು.