[1] “ನೀನು ಕೂಗಿದರೆ, ನಿನಗೆ ಉತ್ತರಕೊಡುವವರುಂಟೋ? ಪರಿಶುದ್ಧ ದೇವದೂತರಲ್ಲಿ ಯಾರನ್ನು ಆಶ್ರಯಿಸುವಿ?
[2] ಕೋಪದಿಂದ ಮೂರ್ಖನಿಗೆ ನಾಶವು, ರೋಷದಿಂದ ಮೂಢನಿಗೆ ಮರಣವು ಸಂಭವಿಸುವುದಲ್ಲವೇ.
[3] ಮೂರ್ಖನು ಬೇರೂರುವುದನ್ನು ನಾನು ನೋಡಿದೆನು. ಕೂಡಲೆ ಅವನ ನಿವಾಸವು ಶಾಪಗ್ರಸ್ತವೆನ್ನುವುದಕ್ಕೆ ಆಸ್ಪದವಾಯಿತು.
[4] ಅವನ ಮಕ್ಕಳು ಆಶ್ರಯವಿಲ್ಲದೆ ನ್ಯಾಯಸ್ಥಾನದಲ್ಲಿ ಸೋತುಹೋಗುವರು. ಅವರನ್ನು ಬಿಡಿಸತಕ್ಕವರು ಯಾರೂ ಇಲ್ಲ.
[5] ಹಸಿದವನು ಅವರ ಬೆಳೆಯನ್ನು ಮುಳ್ಳುಬೇಲಿಹಾಕಿದ್ದರೂ ತಿಂದುಬಿಡುವನು. ಅವರ ಸೊತ್ತನ್ನು ನುಂಗಲು ಬಾಯಿ ತೆರೆದು ಕಾದಿರುವರು.
[6] ಕೇಡು ಉದ್ಭವಿಸುವುದು ಮಣ್ಣಿನಿಂದಲ್ಲ; ದುಃಖವು ಭೂಮಿಯಿಂದ ಮೊಳೆಯುವುದಿಲ್ಲ.
[7] ಜ್ವಾಲೆಗಳು ಮೇಲಕ್ಕೆ ಹಾರುವುದು, ಮನುಷ್ಯರು ಶ್ರಮೆಯನ್ನು ಅನುಭವಿಸುವುದೂ ಸಹಜ.
[8] (ಈ ಸಂದರ್ಭದಲ್ಲಿ) ನಾನಾದರೋ ದೇವರನ್ನೇ ಆಶ್ರಯಿಸುತ್ತಿದ್ದೆನು; ನನ್ನ ಸಂಗತಿಯನ್ನು ದೇವರಿಗೇ ಅರಿಕೆಮಾಡಿಕೊಳ್ಳುತ್ತಿದ್ದೆನು.
[9] ಆತನು ಅಪ್ರಮೇಯ ಮಹಾಕಾರ್ಯಗಳನ್ನೂ, ಅಸಂಖ್ಯಾತವಾದ ಅದ್ಭುತಕೃತ್ಯಗಳನ್ನೂ ಮಾಡುತ್ತಾನೆ.
[10] ಭೂಮಿಯ ಮೇಲೆ ಮಳೆಸುರಿಸಿ, ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಾನೆ.
[11] ಹೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ಏರಿಸಿ, ದುಃಖಿಸುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರುತ್ತಾನೆ.
[12] ಯುಕ್ತಿವಂತರ ಕೈಯಿಂದ ಏನೂ ಆಗದಂತೆ, ಅವರ ಉಪಾಯಗಳನ್ನು ಭಂಗಪಡಿಸುತ್ತಾನೆ.
[13] ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡಿದುಕೊಂಡು, ವಕ್ರಬುದ್ಧಿಯುಳ್ಳವರ ಆಲೋಚನೆಯನ್ನು ನಿರರ್ಥಕ ಮಾಡುತ್ತಾನೆ.
[14] ಅವರು ಹಗಲಿನಲ್ಲೇ ಕತ್ತಲೆಯಿಂದ ಸುತ್ತುವರೆದು, ಮಧ್ಯಾಹ್ನದಲ್ಲೇ ರಾತ್ರಿಯವರಂತೆ ತಡಕಾಡುತ್ತಾರೆ.
[15] ಇಂಥವರ ಬಾಯೆಂಬ ಕತ್ತಿಯಿಂದಲೂ, ಬಲಿಷ್ಠರ ಕೈಯಿಂದಲೂ ದಿಕ್ಕಿಲ್ಲದವರನ್ನು ರಕ್ಷಿಸುತ್ತಾನೆ.
[16] ಹೀಗೆ ಬಡವನಿಗೆ ನಿರೀಕ್ಷೆಯುಂಟಾಗುವುದು, ಅನ್ಯಾಯವು ಬಾಯಿ ಮುಚ್ಚಿಕೊಳ್ಳುವುದು.
[17] ಇಗೋ, ದೇವರು ಯಾರನ್ನು ಶಿಕ್ಷಿಸುವನೋ ಅವನು ಧನ್ಯನು; ಸರ್ವಶಕ್ತನಾದ ದೇವರ ದಂಡನೆಯನ್ನು ತಾತ್ಸಾರಮಾಡಬೇಡ.
[18] ಗಾಯಮಾಡುವವನೂ ಗಾಯಕಟ್ಟುವವನೂ ಆತನೇ; ಹೊಡೆಯುವ ಕೈಯೇ ವಾಸಿಮಾಡುತ್ತದೆ.
[19] ಆರು ಇಕ್ಕಟ್ಟುಗಳಿಂದ ಆತನು ನಿನ್ನನ್ನು ಬಿಡಿಸುವನು; ಏಳನೆಯ ಇಕ್ಕಟ್ಟು ಉಂಟಾದರೂ ಯಾವ ಕೇಡೂ ನಿನ್ನನ್ನು ಮುಟ್ಟದು.
[20] ಬರಗಾಲದಲ್ಲಿ ಮರಣದಿಂದಲೂ, ಯುದ್ಧದಲ್ಲಿ ಕತ್ತಿಯಿಂದಲೂ ನಿನ್ನನ್ನು ಬಿಡಿಸುವನು.
[21] ನಾಲಿಗೆಯೆಂಬ ಕೊರಡೆಗೆ ನೀನು ಮರೆಯಾಗಿರುವಿ; ವಿನಾಶವುಂಟಾದರೂ ನೀನು ಹೆದರುವುದಿಲ್ಲ.
[22] ನೀನು ನಾಶಕ್ಕೂ, ಕ್ಷಾಮಕ್ಕೂ ನಗುವಿ; ಕಾಡುಮೃಗಗಳಿಗೆ ಅಂಜಬೇಕಾಗಿಲ್ಲ.
[23] ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವಿ; ಕಾಡುಮೃಗಗಳೂ ನಿನ್ನ ಸಂಗಡ ಸಮಾಧಾನವಾಗಿರುವವು.
[24] ನಿನ್ನ ಗುಡಾರಕ್ಕೆ ಅಪಾಯವಿಲ್ಲವೆಂದು ನಿನಗೆ ಗೊತ್ತೇ ಇರುವುದು; ನಿನ್ನ ಹಟ್ಟಿಯನ್ನು ನೀನು ಪರೀಕ್ಷಿಸುವಾಗ ಏನೂ ಕಡಿಮೆಯಾಗಿರುವುದಿಲ್ಲ.
[25] ನಿನ್ನ ಸಂತಾನವು ದೊಡ್ಡದ್ದೆಂದೂ, ನಿನ್ನ ಸಂತತಿಯವರು ಭೂಮಿಯ ಹುಲ್ಲಿನಂತೆ ಲೆಕ್ಕವಿಲ್ಲದವರು ಎಂದೂ ನಂಬಿರುವಿ.
[26] ಸುಗ್ಗೀಕಾಲದಲ್ಲಿ ತೆನೆಯ ಸಿವುಡು ಮನೆಗೆ ಸೇರುವಂತೆ, ನೀನು ವೃದ್ಧಾಪ್ಯ ಕಳೆದ ಮೇಲೆ ಸಮಾಧಿಗೆ ಸೇರುವಿ.
[27] ಇಗೋ, ಇದನ್ನು ವಿಚಾರಿಸಿದ್ದೇವೆ, ಯಥಾರ್ಥವಾಗಿಯೇ ಇದೆ; ಇದನ್ನು ಕೇಳು, ನಿನ್ನಷ್ಟಕ್ಕೆ ನೀನೇ ತಿಳಿದುಕೋ.”