Skip to content
Opens in a new window
Listen to this chapter • 3:00

[1] “ಇದಲ್ಲದೆ ನನ್ನ ಎದೆಯು ಅದಕ್ಕೆ ತತ್ತರಗೊಂಡು, ಮಿಡಿಯುತ್ತ ತನ್ನ ಸ್ಥಳದಿಂದ ಕದಲುವುದು.

[2] ಗುಡುಗುಟ್ಟುವ ದೇವರ ಧ್ವನಿಗೆ ಕಿವಿಗೊಡಿರಿ, ಆತನ ಬಾಯಿಂದ ಹೊರಡುವ ಧ್ವನಿಯನ್ನು ಕೇಳಿರಿ!

[3] ಆತನು ಅದನ್ನು ಆಕಾಶಮಂಡಲದಲ್ಲೆಲ್ಲಾ ಹಬ್ಬಿಸಿ, ತನ್ನ ಸಿಡಿಲನ್ನು ಭೂಮಿಯ ಅಂಚುಗಳವರೆಗೂ ಬಿಡುವನು.

[4] ಸಿಡಿಲಿನ ತರುವಾಯ ಗರ್ಜನೆಯುಂಟಾಗುವುದು, ಆತನು ತನ್ನ ಮಹಿಮೆಯ ಶಬ್ದದಿಂದ ಗುಡುಗುವನು. ಆ ಶಬ್ದವು ಕೇಳಿಸಿದ ಮೇಲೆಯೂ ಆತನು ಸಿಡಿಲುಗಳನ್ನು ತಡೆಯುವುದಿಲ್ಲ.

[5] ದೇವರು ತನ್ನ ಧ್ವನಿಯಿಂದ ಅದ್ಭುತವಾಗಿ ಗುಡುಗುವನು; ನಾವು ಗ್ರಹಿಸಲಾಗದ ಮಹಾಕಾರ್ಯಗಳನ್ನು ನಡೆಸುವನು.

[6] ಆತನು ಹಿಮಕ್ಕೆ, ‘ಭೂಮಿಯ ಮೇಲೆ ಬೀಳು’ ಎಂದು, ತನ್ನ ಶಕ್ತಿಯ ದೊಡ್ಡ ಮಳೆಗೆ, ‘ರಭಸದಿಂದ ಸುರಿ’ ಎಂದು ಅಪ್ಪಣೆಮಾಡುವನು.

[7] ಆತನು ತನ್ನ ಕೆಲಸವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು, ಪ್ರತಿಯೊಬ್ಬನ ಕೈಗಳನ್ನು ಬಲಪಡಿಸುತ್ತಾನೆ.

[8] ಆಗ ಮೃಗಗಳು ಗುಹೆಗಳನ್ನು ಸೇರಿ, ತಮ್ಮ ಗುಹೆಗಳಲ್ಲಿ ವಾಸಿಸುವವು.

[9] ಆತನ ಭಂಡಾರದ ದಕ್ಷಿಣದಿಕ್ಕಿನಿಂದ ಬಿರುಗಾಳಿಯೂ, ಉತ್ತರದಿಕ್ಕಿನಿಂದ ಚಳಿಗಾಳಿಯೂ ಬರುವವು.

[10] ದೇವರ ಶ್ವಾಸದಿಂದ ನೀರು ಮಂಜುಗಡ್ಡೆಯಾಗುವುದು, ವಿಶಾಲವಾದ ನೀರು ಗಟ್ಟಿಯಾಗುವುದು.

[11] ಇದಲ್ಲದೆ ಮೋಡಗಳ ಮೇಲೆ ಮಂಜಿನ ಭಾರವನ್ನು ಹೇರಿ, ತನ್ನ ಮಿಂಚಿನ ಮೇಘಮಂಡಲವನ್ನು ಹರಡುವನು.

[12] ಸಿಡಿಲುಗಳು ಭೂಮಂಡಲದಲ್ಲೆಲ್ಲಾ ತಾನು ವಿಧಿಸುವುದನ್ನೇ ಮಾಡಲಿ ಎಂದು, ಅವುಗಳನ್ನು ನಡಿಸಿ ಸುತ್ತಮುತ್ತಲು ತಿರುಗಿಸುವನು.

[13] ಆತನು ದಂಡನೆಗಾಗಲಿ, ತನ್ನ ಭೂಮಿಯ ಹಿತಕ್ಕಾಗಲಿ, ಕೃಪೆತೋರುವುದಕ್ಕಾಗಲಿ ಹಾಗೂ ಒಡಂಬಡಿಕೆಯ ನಂಬಿಗಸ್ತಿಕೆಯಿಂದ ಆ ಮೇಘಗಳನ್ನು ಬರಮಾಡುವನು.

[14] ಯೋಬನೇ, ಇದನ್ನು ಕೇಳು! ಸುಮ್ಮನೆ ನಿಂತು ದೇವರ ಅದ್ಭುತಕಾರ್ಯಗಳನ್ನು ಧ್ಯಾನಿಸು.

[15] ದೇವರು ಇವುಗಳನ್ನು ನಿಯಂತ್ರಿಸಿ, ತನ್ನ ಮೇಘದ ಸಿಡಿಲು ಹೊಳೆಯ ಮಾಡುವ ರೀತಿ ನಿನಗೆ ಗೊತ್ತಿದೆಯೋ?

[16] ಮೋಡಗಳ ತೂಗಾಟವನ್ನೂ, ಜ್ಞಾನಪೂರ್ಣನ ಅದ್ಭುತಕಾರ್ಯಗಳನ್ನೂ ತಿಳಿದುಕೊಂಡಿದ್ದಿಯಾ?

[17] ಭೂಮಿಯು ದಕ್ಷಿಣ ಗಾಳಿಯ ದೆಸೆಯಿಂದ ಸ್ತಬ್ಧವಾಗಿರುವ ಸಮಯದಲ್ಲಿ, ಉಡುಪಿನ ಬಿಸಿಯನ್ನು ಅನುಭವಿಸುವ ಅರಿವು ನಿನಗಿರುತ್ತದೆಯೇ?

[18] ತಗಡು ಬಡಿದ ಎರಕದ ದರ್ಪಣದಷ್ಟು ಗಟ್ಟಿಯಾಗಿರುವ ಆಕಾಶಮಂಡಲವನ್ನು ಆತನ ಹಾಗೆ ನಿರ್ಮಿಸಬಹುದೇ?

[19] ಆತನಿಗೆ ಹೇಳತಕ್ಕದ್ದನ್ನು ನಮಗೆ ನೀನೇ ತಿಳಿಸು, ಅಂಧಕಾರವು ನಮ್ಮನ್ನು ಕವಿದಿರುವುದರಿಂದ ಏನೂ ಮಾತನಾಡಲು ಸಾಧ್ಯವಿಲ್ಲ.

[20] ನಾನು ಮಾತನಾಡಬೇಕೆಂದು ಆತನಿಗೆ ಹೇಳಿ ಕಳುಹಿಸಲು ಸಾಧ್ಯವೇ? ಹಾಗೆ ಮಾಡುವವನು ತನ್ನನ್ನೇ ನಿರ್ಮೂಲ ಮಾಡಿಕೊಂಡಂತೆ.

[21] ಇಗೋ, ಗಾಳಿಯು ಬೀಸಿ ಗಗನವನ್ನು ಶುಭ್ರಪಡಿಸಲು, ಅಲ್ಲಿ ಪ್ರಜ್ವಲಿಸುವ ಪ್ರಕಾಶವನ್ನು ಯಾರೂ ದಿಟ್ಟಿಸಿ ನೋಡಲಾರರು.

[22] ಉತ್ತರದಿಕ್ಕಿನಿಂದ ಹೊನ್ನಿನ ಹೊಳಪು ಹೊರಡುವುದು, ದೇವರು ಭಯಂಕರ ತೇಜಸ್ಸನ್ನು ಧರಿಸಿಕೊಂಡಿದ್ದಾನೆ.

[23] ಇಂಥ ಸರ್ವಶಕ್ತನಾದ ದೇವರನ್ನು ನಾವು ಕಂಡುಹಿಡಿಯಲಾರೆವು; ಆತನ ಪರಾಕ್ರಮವು ಬಹಳ; ಆತನು ನ್ಯಾಯವನ್ನಾಗಲಿ, ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವುದಿಲ್ಲ.

[24] ಆದಕಾರಣ ಮನುಷ್ಯರು ಆತನಿಗೆ ಭಯಪಡುವರು, ಜ್ಞಾನಿಗಳೆಂದು ಎಣಿಸಿಕೊಳ್ಳುವವರನ್ನು ಆತನು ಲಕ್ಷಿಸುವುದೇ ಇಲ್ಲ.”

ಯೋಬನು — Chapters