[1] ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
[2] “ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು?
[3] ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.
[4] ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.
[5] ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು?
[6] ಭೂಲೋಕದ ಅಸ್ತಿವಾರವು ಯಾವುದರ ಮೇಲೆ ನೆಲೆಗೊಂಡವು? ಅದರ ಮೂಲೆಗಲ್ಲನ್ನು ಹಾಕಿದವರು ಯಾರು?
[7] ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ ಇರಲು,
[8] ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು, ಅದರ ದ್ವಾರಗಳನ್ನು ಮುಚ್ಚಿದವರು ಯಾರು?
[9] ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ, ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ?
[10] ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ, ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು
[11] ‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು.
[12] ನಿನ್ನ ಜೀವಮಾನದಲ್ಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯೋ? ಮುಂಜಾನೆಯ ಬೆಳಗಿಗೆ ಇರತಕ್ಕ ಸ್ಥಳವನ್ನು ಗೊತ್ತುಮಾಡಿದೆಯಾ?
[13] ಭೂಮಿಯ ಅಂಚುಗಳನ್ನು ಹಿಡಿದು ದುಷ್ಟರನ್ನು ಅದರೊಳಗಿಂದ ಒದರಿಬಿಡು ಎಂದು ಉದಯಕ್ಕೆ ಅಪ್ಪಣೆಕೊಟ್ಟೆಯಾ?
[14] ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಬೆಳಗಾಗುವಾಗ ಭೂಮಿಯು ರೂಪ ತಾಳುತ್ತದೆ. ಎಲ್ಲಾ ವಸ್ತುಗಳು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುವವು.
[15] ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವುದು, ಎತ್ತಿದ ಕೈ ಮುರಿಯುವುದು.
[16] ಎಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಭೂಮಿಯ ಕೆಳಗಣ ಸಾಗರದ ಗುಪ್ತ ಪ್ರದೇಶಗಳಲ್ಲಿ ತಿರುಗಾಡಿದ್ದೀಯೋ?
[17] ಮರಣದ ಬಾಗಿಲುಗಳು ನಿನಗೆ ಗೋಚರವಾದವೋ? ಘೋರಾಂಧಕಾರದ ಕದಗಳನ್ನು ಕಂಡೆಯಾ?
[18] ಭೂಮಿಯ ವಿಸ್ತಾರವನ್ನು ಗ್ರಹಿಸಿದ್ದೀಯೋ? ಇದೆಲ್ಲಾ ನಿನಗೆ ಗೊತ್ತಿದ್ದರೆ ತಿಳಿಸು.
[19] ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ? ಕತ್ತಲಿನ ಸ್ವಸ್ಥಳವು ಎಲ್ಲಿ?
[20] ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗಿ, ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ?
[21] ನಿನಗೆ ತಿಳಿದಿರಬೇಕು; ಆಗಲೂ ಹುಟ್ಟಿದ್ದಿಯಲ್ಲವೆ; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು!
[22] ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ, ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ,
[23] ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೀಯಾ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೀಯಾ?
[24] ಬೆಳಕನ್ನು ಭಾಗಿಸುವುದಕ್ಕೆ, ಬಿಸಿಗಾಳಿಯನ್ನು ಭೂಮಿಯ ಮೇಲೆ ವಿಸ್ತರಿಸುವುದಕ್ಕೂ ಮಾರ್ಗವೆಲ್ಲಿ?
[25] ನಿರ್ಜನ ಪ್ರದೇಶದಲ್ಲಿಯೂ, ಮನುಷ್ಯರೇ ಇಲ್ಲದ ಕಾಡಿನಲ್ಲಿಯೂ ಮಳೆಯನ್ನು ಸುರಿಸಿ,
[26] ಹಾಳುಬೀಳಾದ ಭೂಮಿಯನ್ನು ತೃಪ್ತಿಪಡಿಸಿ, ಹಸಿ ಹುಲ್ಲನ್ನು ಬೆಳೆಯಿಸಬೇಕೆಂದು,
[27] ಅತಿವೃಷ್ಟಿಯ ಪ್ರವಾಹಕ್ಕೆ ಕಾಲುವೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಯಾರು ಕಡಿದರು?
[28] ಮಳೆಗೆ ತಂದೆಯುಂಟೋ? ಮಂಜಿನ ಹನಿಗಳನ್ನು ಪಡೆದವನು ಯಾರು?
[29] ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು? ಆಕಾಶದ ಇಬ್ಬನಿಯನ್ನು ಯಾರು ಹೆತ್ತರು?
[30] ನೀರು ಕಲ್ಲಿನಂತೆ ಗಟ್ಟಿಯಾಗುವುದು; ಸಾಗರದ ಮೇಲ್ಭಾಗವೂ ಹೆಪ್ಪುಗೊಳ್ಳುವುದು.
[31] ನೀನು ಕೃತ್ತಿಕೆಯ ಸರಪಣಿಯನ್ನು ಬಿಗಿದು, ಮೃಗಶಿರದ ಸಂಕೋಲೆಯನ್ನು ಬಿಚ್ಚುವೆಯಾ?
[32] ಆಯಾ ಸಮಯದಲ್ಲಿ ನಕ್ಷತ್ರ ರಾಶಿಗಳನ್ನು ಬರಮಾಡುವೆಯೋ? ನಕ್ಷತ್ರ ಮಂಡಲ ಪರಿವಾರದೊಡನೆ ನಡೆಸುವೆಯಾ?
[33] ಖಗೋಳದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ? ಅದರ ಆಳ್ವಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿದ್ದೀಯಾ?
[34] ಮೋಡಗಳನ್ನು ಮುಟ್ಟುವಂತೆ ನೀನು ಧ್ವನಿಯೆತ್ತಿದ ಮಾತ್ರಕ್ಕೆ, ಹೇರಳವಾದ ನೀರು ನಿನ್ನನ್ನು ಆವರಿಸುವುದೋ?
[35] ಸಿಡಿಲುಗಳು ನಿನ್ನ ಅಪ್ಪಣೆಯಂತೆ ಹೋಗಿ ಬಂದು, ‘ಇಗೋ, ಬಂದಿದ್ದೇವೆ’ ಎನ್ನುವವೋ?
[36] ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು? ಉತ್ಪಾತಗಳಿಗೆ ವಿವೇಕವನ್ನು ಅನುಗ್ರಹಿಸಿದವರು ಯಾರು?
[37] ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು? ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕಿ,
[38] ಧೂಳು ಹರಿದು ಒತ್ತಟ್ಟಿಗೆ ಸೇರುವಂತೆಯೂ, ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ ಯಾರು ಮಾಡುವರು?
[39] ಗವಿಯಲ್ಲಿ ಮಲಗಿರುವ ಸಿಂಹಕ್ಕೆ ಆಹಾರ ಒದಗಿಸಲು ಬೇಟೆಯಾಡುವೆಯಾ?
[40] ಅವುಗಳು ಗುಹೆಯಲ್ಲಿ ಕುಳಿತುಕೊಳ್ಳುವಾಗ, ಪೊದೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹಗಳ ಆಶೆಯನ್ನು ತೀರಿಸುವೆಯೋ?
[41] ತಮ್ಮ ಮರಿಗಳು, ಗುಟುಕಿಲ್ಲದೆ ಅಲೆಯುತ್ತಾ ದೇವರಿಗೆ ಮೊರೆಯಿಡುವಾಗ, ಕಾಗೆಗಳಿಗೆ ಆಹಾರವನ್ನು ಯಾರು ಒದಗಿಸುವರು?”