Skip to content
Opens in a new window
Listen to this chapter • 2:38

[1] ಅದಕ್ಕೆ ತೇಮಾನ್ಯನಾದ ಎಲೀಫಜನು ಹೀಗೆ ಉತ್ತರಕೊಟ್ಟನು,

[2] “ಒಬ್ಬನು ನಿನ್ನ ಸಂಗಡ ಮಾತನಾಡ ತೊಡಗಿದರೆ ನಿನಗೆ ಬೇಸರಿಕೆ ಉಂಟಾಗುವುದೋ? ಮಾತನಾಡದೆ ಸುಮ್ಮನೆ ಇರುವುದಕ್ಕೆ ಯಾರಿಂದಾದೀತು?

[3] ಇಗೋ, ನೀನು ಅನೇಕರನ್ನು ಶಿಕ್ಷಿಸಿ, ಜೋಲು ಬಿದ್ದ ಕೈಗಳನ್ನು ಬಲಗೊಳಿಸಿದ್ದಿ.

[4] ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ, ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದಿ.

[5] ಈಗಲಾದರೋ ನಿನಗೆ ಶ್ರಮೆ ಬಂತು, ಆದುದರಿಂದ ನೀನು ಬೇಸರಗೊಂಡಿರುವಿ. ಅದು ನಿನ್ನನ್ನೇ ತಗಲಿರುವ ಕಾರಣ ನಿನಗೆ ಭ್ರಮೆಯುಂಟಾಗಿದೆ.

[6] ನಿನ್ನ ನಂಬಿಕೆಗೆ ನಿನ್ನ ಭಯಭಕ್ತಿಯೂ, ನಿನ್ನ ನಿರೀಕ್ಷೆಗೆ ನಿನ್ನ ಸನ್ಮಾರ್ಗವೂ ಆಧಾರವಲ್ಲವೋ?

[7] ನೀನೇ ಆಲೋಚನೆಮಾಡು, ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ? ಯಥಾರ್ಥರು ಅಳಿದು ಹೋದದ್ದೆಲ್ಲಿ?

[8] ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು, ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು.

[9] ದೇವರ ಶ್ವಾಸದಿಂದ ನಾಶವಾಗುತ್ತಾರೆ. ಆತನ ಸಿಟ್ಟೆಂಬ ಗಾಳಿಯಿಂದ ಹಾಳಾಗುತ್ತಾರೆ.

[10] ಸಿಂಹ ಗರ್ಜನೆಯೂ ಆರ್ಭಟಿಸುವ ಸಿಂಹದ ಧ್ವನಿಯೂ, ಅಡಗಿ ಪ್ರಾಯದ ಸಿಂಹಗಳ ಕೋರೆಗಳು ಮುರಿಯಲ್ಪಡುವವು.

[11] ಮೃಗೇಂದ್ರನು ಆಹಾರವಿಲ್ಲದೆ ಸಾಯುವನು. ಸಿಂಹದ ಮರಿಗಳು ಚದರಿಹೋಗುವವು.

[12] ಒಂದು ಸಂಗತಿಯು ನನಗೆ ರಹಸ್ಯವಾಗಿ ತಿಳಿದುಬಂತು. ಅದು ಪಿಸುಮಾತಿನ ಸದ್ದಾಗಿ ನನ್ನ ಕಿವಿಗೆ ಬಿತ್ತು.

[13] ಮನುಷ್ಯರಿಗೆ ಗಾಢನಿದ್ರೆ ಹತ್ತುವ ಸಮಯದಲ್ಲಿ, ರಾತ್ರಿಯ ಕನಸುಗಳಿಂದ ಯೋಚನೆಗಳಲ್ಲಿರುವಾಗ

[14] ನನಗೆ ಎಲುಬುಗಳೆಲ್ಲಾ ನಡುಗುವಷ್ಟು, ಭಯಂಕರವಾದ ದಿಗಿಲು ಉಂಟಾಯಿತು.

[15] ಆಗ ಆತ್ಮವೊಂದು ನನ್ನ ಮುಖದ ಮುಂದೆ ಸುಳಿಯಲು, ಮೈಯೆಲ್ಲಾ ರೋಮಾಂಚನವಾಯಿತು.

[16] ನನ್ನ ಕಣ್ಣ ಮುಂದೆ ಒಂದು ಆತ್ಮವು ಇತ್ತು, ನಿಂತಿದ್ದರೂ ಅದು ಏನೆಂಬುದು ಗೊತ್ತಾಗಲಿಲ್ಲ. ಒಂದು ಸೂಕ್ಷ್ಮ ಧ್ವನಿಯು ಕೇಳಬಂತು.”

[17] ಅದೇನೆಂದರೆ, “ಮನುಷ್ಯನು ದೇವರ ದೃಷ್ಟಿಯಲ್ಲಿ ನೀತಿವಂತನಾದಾನೇ? ಮಾನವನು ಸೃಷ್ಟಿಕರ್ತನ ಸನ್ನಿಧಿಯಲ್ಲಿ ಪರಿಶುದ್ಧನಾಗಿರಬಹುದೇ?

[18] ಆಹಾ, ಆತನು ತನ್ನ ಸೇವಕರಲ್ಲಿಯೂ ನಂಬಿಕೆಯನ್ನಿಡುವುದಿಲ್ಲ, ತನ್ನ ದೂತರ ಮೇಲೆ ತಪ್ಪುಹೊರಿಸುತ್ತಾನೆ.

[19] ಧೂಳಿನಲ್ಲಿರುವ ಅಸ್ತಿವಾರದ ಮೇಲೆ, ಮಣ್ಣಿನಿಂದಾದ ಶರೀರಗಳೆಂಬ ಮನೆಗಳೊಳಗೆ ವಾಸಿಸುವವರಲ್ಲಿ ಇನ್ನೆಷ್ಟೋ ಹೆಚ್ಚಾಗಿ ತಪ್ಪು ಕಂಡುಹಿಡಿಯಬಹುದು. ಅವರು ದೀಪದ ಹುಳದಂತೆ ಅಳಿದು ಹೋಗುತ್ತಾರೆ.

[20] ಉದಯಾಸ್ತಮಾನಗಳ ಮಧ್ಯದಲ್ಲಿ (ಜೀವಿಸಿ) ಜಜ್ಜಲ್ಪಡುತ್ತಾರೆ. ಹೀಗೆ ನಿತ್ಯನಾಶ ಹೊಂದುವುದನ್ನು ಯಾರೂ ಲಕ್ಷಿಸುವುದಿಲ್ಲ.

[21] ಅವರ ಗುಡಾರದ ಹಗ್ಗವು ಬಿಚ್ಚಿಹೋಗುವುದಷ್ಟೆ. ಅವರು ಜ್ಞಾನವಿಲ್ಲದವರಾಗಿ ಸಾಯುವರು” ಎಂಬುದೇ.

ಯೋಬನು — Chapters