Skip to content
Opens in a new window
Listen to this chapter • 4:03

[1] ಆಮೇಲೆ ಎಲೀಹು ಮತ್ತೆ ಹೀಗೆಂದನು,

[2] “ಸ್ವಲ್ಪ ತಾಳು, ನಾನು ತಿಳಿಸುತ್ತೇನೆ, ದೇವರ ಪರವಾಗಿ ಹೇಳತಕ್ಕ ಮಾತುಗಳು ಇನ್ನೂ ಕೆಲವು ಉಂಟು.

[3] ದೂರದಿಂದ ಸಂಪಾದಿಸಿದ ನನ್ನ ತಿಳಿವಳಿಕೆಯ ಪ್ರಕಾರ, ನನ್ನ ಸೃಷ್ಟಿಕರ್ತನನ್ನು ಧರ್ಮಸ್ವರೂಪನೆಂದು ಹೊಗಳುವೆನು.

[4] ನನ್ನ ಮಾತುಗಳು ಸುಳ್ಳಲ್ಲವೆಂಬುದು ನಿಶ್ಚಯ, ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.

[5] ಇಗೋ, ದೇವರು ಮಹಾಶಕ್ತನಾಗಿದ್ದರೂ ಯಾರನ್ನೂ ತಿರಸ್ಕರಿಸುವುದಿಲ್ಲ, ಆತನ ಬುದ್ಧಿ ಸಾಮರ್ಥ್ಯವು ಅಪಾರವಾಗಿದೆ.

[6] ಆತನು ದುಷ್ಟರ ಪ್ರಾಣವನ್ನು ಉಳಿಸುವುದಿಲ್ಲ, ಗತಿಹೀನರ ನ್ಯಾಯವನ್ನು ಸ್ಥಾಪಿಸುವನು.

[7] ನೀತಿವಂತರಿಂದ ತನ್ನ ಕಟಾಕ್ಷವನ್ನು ತಿರುಗಿಸದೆ, ಅರಸರೊಂದಿಗೆ ಸಿಂಹಾಸನದ ಮೇಲೆ ಶಾಶ್ವತವಾಗಿ ಕುಳಿತುಕೊಳ್ಳುವ, ಉನ್ನತಪದವಿಗೆ ಅವರನ್ನು ತರುವನು.

[8] ಅವರು ಒಂದು ವೇಳೆ ಬಂಧನಕ್ಕೆ ಸಿಕ್ಕಿಕೊಂಡು, ಬಾಧೆಗಳೆಂಬ ಹಗ್ಗಗಳಿಂದ ಕಟ್ಟಲ್ಪಟ್ಟಿದ್ದರೆ,

[9] ಆತನು ಅವರ ದುಷ್ಕೃತ್ಯವನ್ನೂ, ಸೊಕ್ಕಿನ ದ್ರೋಹಗಳನ್ನೂ ಅವರಿಗೆ ತೋರಿಸುವನು.

[10] ಇದಲ್ಲದೆ ಶಿಕ್ಷಣವನ್ನು ಕೇಳುವಂತೆ ಅವರ ಕಿವಿಗಳನ್ನು ತೆರೆದು, ಅಧರ್ಮವನ್ನು ಬಿಟ್ಟುಬಿಡಬೇಕೆಂದು ಅವರಿಗೆ ಆಜ್ಞಾಪಿಸುವನು.

[11] ಅವರು ಅದನ್ನು ಕೇಳಿ ಆತನನ್ನು ಸೇವಿಸಿದರೆ, ತಮ್ಮ ದಿನಗಳನ್ನು ಸುಖದಲ್ಲಿಯೂ, ವರ್ಷಗಳನ್ನು ಸಂತೋಷದಲ್ಲಿಯೂ ಕಳೆಯುವರು.

[12] ಕೇಳದಿದ್ದರೆ ದೈವಾಸ್ತ್ರದಿಂದ ಅಳಿದುಹೋಗುವರು, ಜ್ಞಾನಹೀನರಾಗಿಯೇ ಪ್ರಾಣಬಿಡುವರು.

[13] ದೇವರನ್ನು ಹೃದಯದಲ್ಲಿ ನಂಬದಿರುವವರು ಸಿಟ್ಟುಗೊಂಡಿರುವರು, ಆತನು ಅವರನ್ನು ಬಂಧಿಸುವಾಗಲೂ ಆತನಿಗೆ ಮೊರೆಯಿಡುವುದಿಲ್ಲ.

[14] ಯೌವನದಲ್ಲೇ ಸಾಯುವರು. ಅವರ ಜೀವವು ಪುರಷಗಾಮಿಗಳ ಜೀವದಂತೆ ಕ್ಷಯಿಸುವುದು.

[15] ಬಾಧೆಪಡುವವರನ್ನು ಅವರ ಬಾಧೆಗಳ ಮೂಲಕವೇ ರಕ್ಷಿಸುವನು, ಅವರು ಅನುಭವಿಸುವ ಹಿಂಸೆಯಿಂದಲೇ ಅವರ ಕಿವಿಯನ್ನು ತೆರೆಯುವನು.

[16] ಇದೇ ಮೇರೆಗೆ ನಿನ್ನನ್ನೂ ಕಷ್ಟದೊಳಗಿಂದ ತಪ್ಪಿಸಿ, ಇಕ್ಕಟ್ಟಿಲ್ಲದ ವಿಶಾಲ ಸ್ಥಳಕ್ಕೆ ಬರಮಾಡಬೇಕೆಂದೂ, ನಿನ್ನ ಮೇಜಿನ ಆಹಾರಗಳು ತುಪ್ಪದಿಂದ ತುಂಬಿರಬೇಕೆಂಬುದು ಆತನ ಉದ್ದೇಶವಾಗಿದೆ.

[17] ನೀನಾದರೋ ದುಷ್ಟನಿರ್ಣಯಗಳಿಂದ ತುಂಬಿದವನಾಗಿ, ನ್ಯಾಯವಿಚಾರಣೆಗೂ, ನ್ಯಾಯತೀರ್ಪಿಗೂ ಒಳಗಾಗಿದ್ದಿ.

[18] ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕದಂತೆ ನೋಡಿಕೋ! ಕೊಡಬೇಕಾದ ಈಡು ದೊಡ್ಡದೆಂದು ಹಿಂದೆಗೆಯಬೇಡ!

[19] ಕಷ್ಟಾನುಭವವಿಲ್ಲದೆ ನಿನ್ನ ಐಶ್ವರ್ಯವೂ, ಧನಸಾಮರ್ಥ್ಯವೂ ನಿನಗೆ ಈಡಾಗುವುದೇ?

[20] ಜನಾಂಗಗಳು ತಟ್ಟನೆ ನಿರ್ಮೂಲವಾಗುವಾಗ ಅವರ ವಿರುದ್ಧ ಪಾಪಮಾಡದಂತೆ, ರಾತ್ರಿಯನ್ನು ಬಯಸಬೇಡ.

[21] ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಡಬೇಡ. ಕಷ್ಟವನ್ನು ಅನುಭವಿಸಲೊಲ್ಲದೆ ಅಧರ್ಮವನ್ನೇ ಆರಿಸಿಕೊಂಡಿದ್ದಿ.

[22] ಇಗೋ, ದೇವರು ತನ್ನ ಶಕ್ತಿಯಿಂದ ಉನ್ನತ ಕಾರ್ಯಗಳನ್ನು ನಡೆಸುವನು, ಆತನಂತಹ ಉಪದೇಶಕನು ಯಾರು?

[23] ಆತನ ಮಾರ್ಗವನ್ನು ಆತನಿಗೆ ಯಾರು ನೇಮಿಸಿದರು? ‘ನೀನು ಅನ್ಯಾಯವನ್ನು ನಡೆಸಿದಿ’ ಎಂದು ಯಾರು ಹೇಳಬಲ್ಲರು?

[24] ಮನುಷ್ಯರು ಕೀರ್ತಿಸುವ, ಆತನ ಕೆಲಸವನ್ನು ಹೊಗಳಲು ಮರೆಯಬೇಡ.

[25] ಎಲ್ಲಾ ಮನುಷ್ಯರೂ ಅದನ್ನು ಕಂಡಿದ್ದಾರೆ; ಆದರೆ ನರನು ದೂರದಿಂದ ನೋಡುತ್ತಾನಷ್ಟೆ.

[26] ಆಹಾ, ದೇವರು ಮಹೋನ್ನತನಾಗಿದ್ದಾನೆ, ನಾವು ಆತನನ್ನು ಅರಿಯಲಾರೆವು; ಆತನ ವರ್ಷಗಳು ಅಸಂಖ್ಯಾತವಾಗಿವೆ.

[27] ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಆತನ ಮಂಜಿನಿಂದ ಉದುರುವವು.

[28] ಮೋಡಗಳು ಅದನ್ನು ಸುರಿಸಿ ಸಮೃದ್ಧಿಯಾಗಿ ಜನರ ಮೇಲೆ ಚಿಮುಕಿಸುವುದು.

[29] ಆಹಾ, ಮೇಘಗಳ ಹರಡುವಿಕೆಯನ್ನೂ, ಆತನ ಗುಡಾರದಲ್ಲಿನ ಗರ್ಜನೆಗಳನ್ನೂ ಯಾರು ಗ್ರಹಿಸಬಲ್ಲರು?

[30] ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು, ಅದನ್ನು ಜಲಸಮೂಹಗಳಿಂದ ಮುಚ್ಚಿಕೊಳ್ಳುವನು.

[31] ಮೋಡಗಳ ಮುಖಾಂತರವಾಗಿಯೇ ಜನಾಂಗಗಳಿಗೆ ನ್ಯಾಯವನ್ನು ವಿಧಿಸಿ, ಆಹಾರವನ್ನು ಧಾರಾಳವಾಗಿ ದಯಪಾಲಿಸುವನಷ್ಟೆ.

[32] ಕೈತುಂಬಾ ಸಿಡಿಲನ್ನು ಹಿಡಿದು ನೀನು ವೈರಿಯನ್ನು ಹೊಡೆದು ಗುರಿಮುಟ್ಟುಲು ಬಿಡುವನು.

[33] ಅದರ ಆರ್ಭಟವು ಆತನ ವಿಷಯವಾಗಿ ಪ್ರಕಟಿಸುವುದು, ದನಕರುಗಳೂ ಸಹ ಆತನ ಆಗಮನವನ್ನು ತಿಳಿಯುವವು.”

ಯೋಬನು — Chapters