[1] ಆ ಮೇಲೆ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ,
[2] ಯೋಬನು ಇಂತೆಂದನು,
[3] “ನಾನು ಹುಟ್ಟಿದ ದಿನವು ಹಾಳಾಗಿ ಹೋಗಲಿ, ‘ಗರ್ಭದಲ್ಲಿ ಪುರುಷಾಂಕುರವಾಯಿತು’ ಎಂದು ನುಡಿದ ರಾತ್ರಿಯು ನಾಶವಾಗಲಿ
[4] ಆ ದಿನವು ಕತ್ತಲೆಯಾಗಲಿ, ಮೇಲಿನಿಂದ ದೇವರು ಅದನ್ನು ಲೆಕ್ಕಿಸದಿರಲಿ, ಅದರ ಮೇಲೆ ಬೆಳಕು ಪ್ರಕಾಶಿಸದಿರಲಿ.
[5] ಕತ್ತಲೆಯೂ, ಘೋರಾಂಧಕಾರವೂ ಅದನ್ನು ವಶಮಾಡಿಕೊಳ್ಳಲಿ. ಮೋಡವು ಅದನ್ನು ಕವಿಯಲಿ, ಹಗಲನ್ನು ಮುಚ್ಚಿಕೊಳ್ಳುವ ಮೊಬ್ಬು ಅದನ್ನು ಹೆದರಿಸಲಿ.
[6] ಕಾರ್ಗತ್ತಲು ಆ ರಾತ್ರಿಯನ್ನು ಹಿಡಿದುಕೊಳ್ಳಲಿ, ಅದು ಮಾಸಗಳ ಲೆಕ್ಕದಲ್ಲಿ ಸೇರದೆ ಸಂವತ್ಸರದ ದಿನಗಳಲ್ಲಿ ಹರ್ಷಿಸದೆ ಇರಲಿ.
[7] ಆಹಾ, ರಾತ್ರಿಯು ಬಂಜೆಯಾಗಿ ಅದರಲ್ಲಿ ಉತ್ಸಾಹಧ್ವನಿಯು ಉಂಟಾಗದಿರಲಿ.
[8] ಘಟಸರ್ಪವನ್ನು ಎಬ್ಬಿಸುವುದರಲ್ಲಿಯೂ, ದಿನಗಳನ್ನು ಶಪಿಸುವುದರಲ್ಲಿಯೂ ಜಾಣರಾದ (ಮಾಂತ್ರಿಕರು) ಅದಕ್ಕೆ ಶಾಪಕೊಡಲಿ.
[9] ಆ ದಿನದಲ್ಲಿ ಮುಂಜಾನೆಯ ನಕ್ಷತ್ರಗಳೂ ಮಿಣುಕದೆ ಹೋಗಲಿ. ಅದು ಬೆಳಕನ್ನು ಎದುರುನೋಡಿದರೂ ಹೊಂದದಿರಲಿ. ಅರುಣೋದಯವೆಂಬ ರೆಪ್ಪೆ ತೆರೆಯುವುದನ್ನು ಅದು ಕಾಣದಿರಲಿ.
[10] ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ, ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲವಲ್ಲಾ.
[11] ನಾನು ಹುಟ್ಟುವಾಗಲೇ ಏಕೆ ಸಾಯಲಿಲ್ಲ. ಗರ್ಭದಿಂದ ಬಂದಾಗಲೇ ಏಕೆ ಪ್ರಾಣಬಿಡಲಿಲ್ಲ?
[12] ತಾಯಿಯ ಮಡಿಲು ನನ್ನನ್ನು ಹೊತ್ತದ್ದೇಕೆ? ತಾಯಿಯ ಮೊಲೆಗಳು ನನಗೆ ಕುಡಿಯ ಕೊಟ್ಟದ್ದೇಕೆ?
[13] ಆಗಲೇ ಸತ್ತಿದ್ದರೆ ನಾನೀಗ ಮೌನವಾಗಿ ಮಲಗಿರುತ್ತಿದ್ದೆ, ಕಣ್ಣು ಮುಚ್ಚಿ ಪ್ರಶಾಂತವಾಗಿ ನಿದ್ರಿಸುತ್ತಿದ್ದೆನು.
[14] ಭೂಲೋಕದಲ್ಲಿ ಹಾಳುಬಿದ್ದ ಪಟ್ಟಣಗಳನ್ನು ತಮ್ಮ ಸಮಾಧಿಗಾಗಿ ಕಟ್ಟಿಸಿಕೊಂಡ ಅರಸರೊಂದಿಗೂ, ಮಂತ್ರಿಗಳೊಡನೆಯೂ ನಾನಿರುತ್ತಿದ್ದೆ.
[15] ಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿದ ಅಧಿಪತಿಗಳ ಸಂಗಡಲೂ ವಿಶ್ರಮಿಸಿಕೊಳ್ಳುತ್ತಿದ್ದೆನು.
[16] ಒಂದು ವೇಳೆ ನಾನು ಗರ್ಭಸ್ರಾವವಾಗಿ ಬಿದ್ದು, ಹೂಳಿಟ್ಟ ಪಿಂಡದಂತೆ, ಬೆಳಕನ್ನೇ ಕಾಣದೆ ಸತ್ತುಹೋದ ಕೂಸುಗಳಂತೆ ಜನ್ಮವಿಲ್ಲದವನಾಗಿ ಇರುತ್ತಿದ್ದೆನು.
[17] ಅಲ್ಲಿ ದುಷ್ಟರ ಆಗ್ರಹವು ಅಣಗಿ ಹೋಗುವುದು, ದಣಿದವರು ದಣಿವಾರಿಸಿಕೊಳ್ಳುವರು.
[18] ಸೆರೆಯಾದವರು ಬಾಧಿಸುವ ಅಧಿಕಾರಿಯ ಧ್ವನಿಯನ್ನೇ ಕೇಳದೆ, ಗುಂಪುಗುಂಪಾಗಿ ವಿಶ್ರಮಿಸಿಕೊಳ್ಳುವರು.
[19] ಅಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲಾ. ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ.
[20] ಕಷ್ಟದಲ್ಲಿರುವವನಿಗೆ ಬೆಳಕನ್ನು, ಮನನೊಂದವರಿಗೆ ಜೀವವನ್ನು ಕೊಡುವುದೇಕೆ?
[21] ಅವರು ನಿಕ್ಷೇಪಕ್ಕಾಗಿ ಅಗೆಯುವ ಆಶೆಗಿಂತಲೂ ಹೆಚ್ಚಾದ ಆಶೆಯಿಂದ ಮರಣವನ್ನು ಹಾರೈಸಿ ಹುಡುಕಿದರೂ ಅದು ದೊರೆಯದು.
[22] ಸಮಾಧಿಗೆ ಸೇರುವಾಗ ಬಹಳವಾಗಿ ಹರ್ಷಿಸಿ ಉಲ್ಲಾಸಪಡುತ್ತಾರೆ.
[23] ದೇವರು ನನ್ನ ಸುತ್ತಲೂ ಬೇಲಿ ಹಾಕಿ, ದಾರಿಕಟ್ಟಿದ ಮೇಲೆ ಅವನಿಗೆ ಏಕೆ ಬೆಳಕನ್ನು ಕೊಡುತ್ತಾನೆ?
[24] ನಿಟ್ಟುಸಿರೇ ನನ್ನೆದುರಿಗೆ ಬರುವ ಆಹಾರವಾಗಿದೆ. ನನ್ನ ನರಳಾಟವು ಜಲಧಾರೆಯಂತಿದೆ.
[25] ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವುದು. ನಾನು ಯಾವುದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವುದು.
[26] ನನಗೆ ಯಾವ ಶಾಂತಿಯೂ, ವಿಶ್ರಾಂತಿಯೂ, ಉಪಶಮನವೂ ಇರುವುದಿಲ್ಲ, ಯಾವಾಗಲೂ ಕಳವಳವೇ.”