Skip to content
Opens in a new window
Listen to this chapter • 2:44

[1] ಇದಲ್ಲದೆ ಯೆಹೋವನು ಯೋಬನಿಗೆ,

[2] “ತರ್ಕಮಾಡುವವನು ಸರ್ವಶಕ್ತನಾದ ದೇವರ ಸಂಗಡಲೂ ವ್ಯಾಜ್ಯವಾಡುವನೋ? ದೇವರೊಂದಿಗೆ ವಿವಾದಮಾಡುವವನು ಇದಕ್ಕೆಲ್ಲಾ ಉತ್ತರಕೊಡಲಿ” ಎಂದು ಹೇಳಿದನು.

[3] ಆಗ ಯೋಬನು ಯೆಹೋವನಿಗೆ ಉತ್ತರವಾಗಿ,

[4] “ಅಯ್ಯೋ, ನಾನು ಅಲ್ಪನೇ ಸರಿ, ನಿನಗೆ ಪ್ರತ್ಯುತ್ತರವಾಗಿ ಏನು ಹೇಳಲಿ? ಬಾಯಿಯ ಮೇಲೆ ಕೈಯಿಟ್ಟುಕೊಳ್ಳುವೆನು.

[5] ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು; ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು” ಎಂದು ಹೇಳಿದನು.

[6] ಆ ಮೇಲೆ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,

[7] “ಶೂರನಂತೆ ನಡುಕಟ್ಟಿಕೋ! ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.

[8] ನನ್ನ ನೀತಿಯನ್ನು ಖಂಡಿಸಿಬಿಡುವಿಯಾ? ನಿನ್ನ ನ್ಯಾಯವನ್ನು ಸ್ಥಾಪಿಸಿಕೊಳ್ಳಲಿಕ್ಕೆ ನನ್ನನ್ನು ಕೆಟ್ಟವನೆಂದು ನಿರ್ಣಯಿಸುವೆಯೋ?

[9] ನಿನ್ನ ಕೈಯೂ, ದೇವರ ಕೈಯೂ ಸಮವೋ? ದೇವರ ಧ್ವನಿಯಂತೆ ಗುಡುಗಬಲ್ಲಿಯಾ?

[10] ನಿನ್ನನ್ನು ನೀನೇ ಮಹಿಮೆ ಘನತೆಗಳಿಂದ ಭೂಷಿಸಿಕೊಂಡು ಪ್ರಭಾವ ಮಹತ್ವಗಳನ್ನು ಧರಿಸಿಕೋ.

[11] ತುಂಬಿ ತುಳುಕುವ ನಿನ್ನ ಕೋಪವನ್ನು ಎರಚಿ, ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಅವನನ್ನು ತಗ್ಗಿಸು.

[12] ಪ್ರತಿಯೊಬ್ಬ ಗರ್ವಿಷ್ಠನ ಮೇಲೆ ಕಣ್ಣಿಟ್ಟು ಕುಗ್ಗಿಸಿ, ದುಷ್ಟರನ್ನು ತಟ್ಟನೆ ಕೆಡವಿಬಿಡು.

[13] ಅವರನ್ನು ಒಟ್ಟಿಗೆ ಧೂಳಿನಲ್ಲಿ ಅಡಗಿಸಿ, ಅಂಧಕಾರ ಲೋಕದಲ್ಲಿ ಅವರ ಮುಖಕ್ಕೆ ಮುಸುಕು ಹಾಕು.

[14] ಹೀಗಾದರೆ ನಿನ್ನ ಬಲಭುಜವು ನಿನ್ನನ್ನು ರಕ್ಷಿಸಬಲ್ಲದೆಂದು ನಾನೇ ನಿನ್ನನ್ನು ಹೊಗಳುವೆನು.

[15] ನಿನ್ನಂತೆ ನನ್ನ ಸೃಷ್ಟಿಯಾಗಿರುವ ನೀರಾನೆಯನ್ನು ನೋಡು; ಎತ್ತಿನ ಹಾಗೆ ಹುಲ್ಲನ್ನು ಮೇಯುವುದು.

[16] ಇಗೋ, ಅದರ ಬಲವು ಸೊಂಟದಲ್ಲಿಯೂ, ಅದರ ಶಕ್ತಿಯು ಹೊಟ್ಟೆಯ ನರಗಳಲ್ಲಿಯೂ ಸೇರಿಕೊಂಡಿವೆ.

[17] ತನ್ನ ಬಾಲವನ್ನು ದೇವದಾರುವಿನ ಮರದಂತೆ ಬಾಗಿಸುವುದು; ಅದರ ತೊಡೆಯ ನರಗಳು ಹೆಣೆದುಕೊಂಡಿವೆ.

[18] ಅದರ ಮೂಳೆಗಳು ತಾಮ್ರದ ನಳಗಳಂತೆಯೂ, ಅದರ ಎಲುಬುಗಳು ಕಬ್ಬಿಣದ ಹಾರೆಗಳಂತೆಯೂ ಇರುವವು.

[19] ಅದು ದೇವರ ಸೃಷ್ಟಿಗಳಲ್ಲಿ ಮುಖ್ಯವಾದದ್ದು. ಅದನ್ನು ನಿರ್ಮಿಸಿದವನು ಅದಕ್ಕೆ ಕೋರೆ ಹಲ್ಲೆಂಬ ಶಸ್ತ್ರವನ್ನೂ ಒದಗಿಸಿದ್ದಾನೆ.

[20] ಗುಡ್ಡಗಳು ಅದಕ್ಕೆ ಮೇವನ್ನು ಕೊಡುವವು; ಕಾಡುಮೃಗಗಳೆಲ್ಲಾ ಅಲ್ಲಿ ಆಡುತ್ತಿರುವವು;

[21] ತಾವರೆಯ ಗಿಡಗಳ ಕೆಳಗೂ, ಆಪಿನ ಮರೆಯಲ್ಲಿಯೂ, ಜವುಗು ಭೂಮಿಯಲ್ಲಿಯೂ ಮಲಗಿಕೊಳ್ಳುವುದು.

[22] ತಾವರೆ ಗಿಡಗಳು ತಮ್ಮ ನೆರಳನ್ನು ಅದರ ಮೇಲೆ ಹರಡುವವು, ನದಿಯ ನೀರವಂಜಿಗಳು ಅದನ್ನು ಸುತ್ತಿಕೊಂಡಿರುವವು.

[23] ಓಹೋ, ಹೊಳೆಯು ಉಕ್ಕಿ ಬಂದರೂ ಅದು ಹೆದರುವುದಿಲ್ಲ. ಪ್ರವಾಹವು ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು.

[24] ಯಾರಾದರೂ ಕಣ್ಣೆದುರಿಗೆ ಬಂದು ಅದನ್ನು ಹಿಡಿದಾನೇ? ಗಾಳದಿಂದ ಅದರ ಮೂಗನ್ನು ಚುಚ್ಚಬಲ್ಲನೇ?” ಎಂದನು.

ಯೋಬನು — Chapters